ಮರ್ಮಗೋವಾ ಸಮರ ನೌಕೆ ಸೇವೆಗೆ ಸಮರ್ಪಣೆ

ಮರ್ಮಗೋವಾ ಸಮರ ನೌಕೆ ಸೇವೆಗೆ ಸಮರ್ಪಣೆ

ಗೋವಾ ವಿಮೋಚನಾ ದಿನದ ವಿಶೇಷ ಸಂದರ್ಭದಲ್ಲಿ ಅಧಿಕೃತವಾಗಿ ಐ ಎನ್ ಎಸ್ ಮರ್ಮಗೋವಾ ಕ್ಷಿಪಣಿ ವಿದ್ವಂಸಕ ಯುದ್ಧನೌಕೆ ದೇಶಸೇವೆಗೆ ಸಮರ್ಪಣೆಗೊಳ್ಳುವ ಮೂಲಕ ಭಾರತೀಯ ನೌಕಾಪಡೆಗೆ ಮತ್ತು ಭಾರತದ ಯುದ್ದ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಿದೆ. ಸ್ವದೇಶಿ ನಿರ್ಮಿತ ಈ ನೌಕೆಯು ರಕ್ಷಣಾ ರಂಗದಲ್ಲಿ ದೇಶವು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇಟ್ಟ ಪ್ರಮುಖ ಹೆಜ್ಜೆ ಎಂದೇ ಗುರುತಿಸಬಹುದಾಗಿದೆ. ಭವಿಷ್ಯದಲ್ಲಿ ಭಾರತವು ವಿಶ್ವದ ಬೇರೆ ರಾಷ್ಟ್ರಗಳಿಗೆ ಹಡಗುಗಳನ್ನು ನಿರ್ಮಿಸಿ ಕೊಡಲಿದೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿರುವುದು ರಕ್ಷಣಾ ತಂತ್ರಜ್ಞಾನ ಮತ್ತು ಉತ್ಪಾದನೆಯಲ್ಲಿ ಭಾರತದ ವಿಶ್ವಾಸ ವೃದ್ಧಿಸುತ್ತಿರುವುದರ ಪ್ರತೀಕವಾಗಿ ಗೋಚರಿಸುತ್ತದೆ. ಈಶಾನ್ಯದಲ್ಲಿ ವಾಸ್ತವ ನಿಯಂತ್ರಣ ರೇಖೆಯ ಗುಂಟ ಚೀನಾ ಆಗಾಗ್ಗೆ ಕ್ಯಾತೆ ತೆಗೆಯುತ್ತಿದೆ. ಕಾಶ್ಮೀರ ವಿಚಾರದಲ್ಲಿ ತಕರಾರು ಮಾಡುವ ಪಾಕಿಸ್ತಾನವು ಭಾರತದ ವಿರುದ್ಧ ನಿರಂತರವಾಗಿ ಭಯೋತ್ಪಾದನೆ ಪ್ರಾಯೋಜಿಸಿಕೊಂಡು ಬಂದಿದೆ. ಗಡಿಯಲ್ಲಿ ನುಗ್ಗಲು ಯತ್ನಿಸುವ ಚೀನಾ ಸೈನಿಕರನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ರಕ್ಷಣಾ ಸಚಿವರು ಈಗಾಗಲೇ ಬಹಿರಂಗವಾಗಿ ಸಾರಿದ್ದಾರೆ. ಗಡಿಯಲ್ಲಿ ಉದ್ವಿಗ್ನತೆ ಇರುವಾಗ ನಮ್ಮ ಸೇನಾಬಲವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಬೇಕಾದ ಅಗತ್ಯ ಇರುವುದನ್ನು ಮನಗಂಡು ಕೇಂದ್ರ ಸರ್ಕಾರವು ಆಧುನಿಕ ಯುದ್ಧ ಉಪಕರಣಗಳನ್ನು ಸೇನೆಗೆ ಒದಗಿಸುತ್ತಿದೆ. ದೇಶೀಯವಾಗಿ ಉತ್ಪಾದಿಸಲು ಪ್ರೋತ್ಸಾಹ ನೀಡುವ ಮೂಲಕ ಸ್ವಾವಲಂಬನೆಗೆ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ತಯಾರಾಗಿರುವ ಸ್ವದೇಶಿ ನಿರ್ಮಿತ ಕ್ಷಿಪಣಿ ವಿನಾಶಕ ಐ ಎನ್ ಎಸ್ ಮರ್ಮಗೋವಾ ಸಮರ ನೌಕೆಯು ಇದು ಮಹಾಸಾಗರದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಹವಣಿಸುತ್ತಿರುವ ಚೀನಾಕ್ಕೆ ಪ್ರಬಲ ಸವಾಲೊಡ್ಡುವ ಭಾರತದ ಸಾಮರ್ಥ್ಯವನ್ನು ವರ್ಧಿಸಲಿದೆ.

ಭಾರತದ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಈಚಿನ ದಿನಗಳಲ್ಲಿ ಶ್ರೀಲಂಕಾ ಬಂದರುಗಳ ನಡುವೆ ಚೀನಾದ ಗೂಢಚರ್ಯೆ ನೌಕೆ ಚಲಿಸುತ್ತಿರುವ ಎಚ್ಚರಿಕೆಯ ಪರಿಸ್ಥಿತಿಯ ನಡುವೆಯೇ ರಕ್ಷಣಾ ವ್ಯವಸ್ಥೆ ಬಲವರ್ಧನೆಗೊಳಿಸುವ ಅನೇಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ಭಾರತದ ಆತ್ಮವಿಶ್ವಾಸದ ಪ್ರತೀಕವಾಗಿದೆ. ೭ ಸಾವಿರ ಕಿಲೋಮೀಟರ್ ದೂರ ಕ್ರಮಿಸಬಲ್ಲ ಹಾಗೂ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಅಗ್ನಿ-೫ ಕ್ಷಿಪಣಿ ಪರೀಕ್ಷೆಯನ್ನು ಭಾರತವು ಈಗಷ್ಟೇ ಯಶಸ್ವಿಯಾಗಿ ನೆರವೇರಿಸಿದೆ. ತವಾಂಗ್ ಗಡಿಯಲ್ಲಿ ಚೀನಾ ಸೈನಿಕರು ನುಸುಳಲು ಯತ್ನಿಸಿರುವ ಸಂದರ್ಭದಲ್ಲೇ ಕೈಗೊಳ್ಳಲಾದ ಈ ಕ್ಷಿಪಣಿ ಪರೀಕ್ಷೆಯು ಆದೇಶಕ್ಕೆ ನೀಡಿರುವ ಎಚ್ಚರಿಕೆ ಎಂಬಂತಿದೆ. ಈ ನಡುವೆ., ಫ್ರಾನ್ಸ್ ನಿಂದ ಖರೀದಿಸಲಾದ ಎಲ್ಲಾ ೩೬ ರಫೆಲ್ ಯುದ್ಧ ವಿಮಾನಗಳು ಸೇವೆಗೆ ನಿಯೋಜನೆಗೊಂಡಿರುವುದು ಭಾರತೀಯ ವಾಯುಪಡೆಗೆ ಭೀಮ ಬಲ ತಂದುಕೊಟ್ಟಿದೆ. ಭಾರತದ ರಕ್ಷಣಾ ಬಜೆಟ್ ಇತ್ತೀಚಿನ ವರ್ಷಗಳಲ್ಲಿ ಅಗಾಧವಾಗಿ ಹೆಚ್ಚಿದೆ. ಕಳೆದ ವರ್ಷ ಬಜೆಟ್ ಮೊತ್ತ ೪.೭೮ ಲಕ್ಷ ಕೋಟಿ ರೂಪಾಯಿ ಇತ್ತು. ಪ್ರಸ್ತುತ ಹಣಕಾಸು ವರ್ಷದಲ್ಲಿ ರಕ್ಷಣಾ ಬಜೆಟ್. ೫.೨೫ ಲಕ್ಷ ಕೋಟಿ ರೂಪಾಯಿಗೆ ಏರಿದೆ. ಇದು ಒಟ್ಟಾರೆ ಬಜೆಟ್ ನ ಶೇಕಡ. ೧೩.೩೧ ರಷ್ಟು ಇದ್ದು, ದೇಶದ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡುತ್ತಿರುವ ಆದ್ಯತೆಯ ದ್ಯೋತಕವಾಗಿದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೯-೧೨-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ