ಮರ ಅರಳುವ ಸಮಯ

ಮರ ಅರಳುವ ಸಮಯ

ಚುಮು ಚುಮು ಚಳಿಯು ಮರೆಯಾಗುವ ಸಮಯದಲ್ಲಿ, ಸರಿಸುಮಾರು ಸಂಕ್ರಾಂತಿಯ ಕಾಲದಲ್ಲಿ ನಮ್ಮೂರಿನಲ್ಲಿ ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಹದವಾದ ಮಂದಾನಿಲ ಬೀಸುತೊಡಗುತ್ತದೆ. ಮನೆ ಎದುರಿನ ಬಯಲಿನುದ್ದಕ್ಕೂ ಬೆಳೆದಿರುವ ಹಸಿರು ಪಯಿರು ಮಂದವಾಗಿ ನಲುಗಾಡುವಂತೆ, ಅಲ್ಲಿ ಬೆಳೆದ ಬತ್ತದ ಕೆಯ್ ಮೇಲೆ ಬೀಸಿ ಬರುವ ಆ ಗಾಳಿಯಲ್ಲಿ ಅದೇನೋ ಒಂದು ಅನೂಹ್ಯ ಪರಿಮಳ! ಅಂತಹ ಗಾಳಿ ಬೀಸಿದ ದಿನವೆಲ್ಲಾ ಚಳಿಯು ಮರೆಯಾಗಿ, ಹದವಾದ ಬೆಚ್ಚನೆಯ ಅನುಭೂತಿ. “ಹಾಂ, ಫಲಗಾಳಿ ಬೀಸುತ್ತಿದೆ ಕಾಣಿ” ಎನ್ನುತ್ತಿದ್ದರು ಅಮ್ಮಮ್ಮ, ತಮ್ಮ ದಶಕಗಳ ಅನುಭವದ ಹಿನ್ನೆಲೆಯಲ್ಲಿ. ಚಳಿಯು ಮರೆಯಾಗುವ ತಿಂಗಳಿನಲ್ಲಿ ಬೀಸುವ ಆ ಗಾಳಿಯಿಂದಾಗಿಯೇ, ಮಾವು, ಹಲಸು, ಗೋಡಂಬಿ ಮತ್ತು ಇತರ ನೂರಾರು ಕಾಡುಗಿಡ ಮತ್ತು ನಾಡುಗಿಡಗಳಲ್ಲಿ ಹೂ ಬಿಡುವ ಪ್ರಕ್ರಿಯೆ ಆರಂಭವಾಗುತ್ತದೆ ಎಂಬುದು ಅವರ ಅಭಿಮತ. ಬೆಳಗಿನ ಗಂಜಿ ಊಟ ಮುಗಿಸಿ, ನಾವೆಲ್ಲಾ ಮಕ್ಕಳು ಶಾಲೆಗೆ ಹೋಗುವಾಗ, ಬೈಲಿನುದ್ದಕ್ಕೂ ಬೀಸುತ್ತಿದ್ದ ಆ ಗಾಳಿಯು, ನಮ್ಮಲ್ಲೂ ಅದೇನೋ ಉತ್ಸಾಹವನ್ನು ತುಂಬುತ್ತಿದ್ದುದಂತೂ ದಿಟ.
    ಫಲಗಾಳಿ ಬೀಸಿ ಕೆಲವೇ ವಾರಗಳಲ್ಲಿ, ಹಾಡಿ ಗುಡ್ಡಗಳಲ್ಲಿ ಬೆಳೆದ ಅಸಂಖ್ಯ ಮರಗಳ ತುಂಬಾ ಹೂವುಗಳ ಸುಗ್ಗಿ. ಕಾಡಿನ ಕಿಬ್ಬದಿಯಲ್ಲಿ ಸೊಂಪಾಗಿ ಬೆಳೆದಿರುವ ಕಾಟುಮಾವಿನ ಮರಗಳಲ್ಲಂತೂ, ಎಲೆಯೇ ಕಾಣದಂತೆ ಹೂವುಗಳ ರಾಶಿ ಜೊಂಪೆ ಜೊಂಪೆಯಾಗಿ ತೂಗಾಡಿಕೊಂಡು, ಅದೆಷ್ಟೊ ಸಾವಿರ ದುಂಬಿಗಳು ಆ ಮರದ ಸುತ್ತ ಹಾರಾಡುತ್ತಾ, ಮಕರಂದ ಹೀರಲು ಅಣಿಯಾಗುತ್ತದ್ದವು. ಗುಡ್ಡಗಳ ಇಳಿಜಾರಿನಲ್ಲಿ ಬೆಳೆದಿರುವ ಹಾಡಿ, ಹಕ್ಕಲುಗಳಲ್ಲಿರುವ ಹಲವಾರು ಮರಗಳಲ್ಲಿ ಹೂವುಗಳ ಚಿತ್ತಾರ. ತಾರಿ ಮರದಲ್ಲಿ ಅರಳಿದ ಹೂವುಗಳ ಸುಗಂಧ ಅಥವಾ ಘಾಟು ವಾಸನೆ ಎಷ್ಟು ಪರಿಣಾಮ ಕಾರಿ ಎಂದರೆ,  ಅದರ ಪ್ರಬಲವಾಸನೆಗೆ ಆಕರ್ಷಿತವಾದ ದುಂಬಿ,ಕೀಟಗಳ ಸಂಖ್ಯೆಯೂ ಅಗಾಧವಾಗಿದ್ದು, ಹೂಬಿಟ್ಟ ತಾರಿಮರದ ಸುತ್ತಲೂ ಹಾರಾಡುತ್ತಿರುವ ದುಂಬಿಗಳ ಸದ್ದು ಆ ಮರದಿಂದ ಹತ್ತಾರು ಮಾರು ದೂರದತನಕವೂ ಕೇಳಿಸುತ್ತಿತ್ತು. ಧೂಪದ ಮರದ ದಟ್ಟವಾದ ಎಲೆಗಳ ಹಂದರದ ಮಧ್ಯೆ ಬಿಳಿ ಹೂವುಗಳು ಎದ್ದು ಕಾಣುತ್ತಿದ್ದವು. ಮಧ್ಯಮ ಗಾತ್ರ ಎತ್ತರವಿರುವ ಹೊನ್ನೆ ಮರಗಳ ಬಿಳಿಯ ಹೂವುಗಳ ಕೈಗೇ ಎಟಕುವಂತಿದ್ದು, ಅದರ ಬಿಳಿ ಹೂವುಗಳು ಮತ್ತು ಮಧ್ಯ ಅರಳಿರುವ ಪರಾಗ ಹೊತ್ತ ಕೇಸರಗಳು ಚಂದದ ವಿನ್ಯಾಸ ಬಿಡಿಸಿಡುತ್ತಿದ್ದವು. ಹೊನ್ನೆ ಮರದ ಕೊಂಬೆ, ರೆಂಬೆ,ಕಾಂಡಗಳ ತುಂಬಾ ತುಂಬಿದ ಬಿಳಿ ಹೂವುಗಳ ಚಂದ ಎಷ್ಟೆಂದರೆ, ಇದು ಮರ ಅರಳುವ ಸಮಯವೇ ಎಂಬ ವಿಸ್ಮಯವನ್ನು ಮೂಡಿಸುತ್ತದೆ, ನಮ್ಮಲ್ಲಿ! ಹಾಡಿಗಳಲ್ಲಿ, ಇಷ್ಟುದಿನ ಅವುಗಳ ಪಾಡಿಗೆ ಬೆಳೆದುಕೊಂಡು, ಎದ್ದುಕಾಣದ ಸ್ವರೂಪವನ್ನು ಹೊಂದಿದ್ದ ಹಲವಾರು ಮರಗಿಡಗಳಲ್ಲಿ, ಹೂವುಗಳ ಪರಿಷೆಯಿಂದಾಗಿ, ಇಷ್ಟು ದಿನ ಎಲೆಯ ಮರೆಯ ಕಾಯಿಯಂತಿದ್ದ ಅವುಗಳೆಲ್ಲಾ, ಈಗ ದೂರದಿಂದಲೇ ಗಮನಸೆಳೆಯಲಾರಂಭಿಸಿದವು. ಪತಂಗ, ಚಿಟ್ಟೆ, ದುಂಬಿ, ಕೀಟಗಳ ಭೇಟಿಯಿಂದಾಗಿ, ಆ ಅನಾಮಿಕ ಗಿಡಮರಗಳು, ಒಮ್ಮೆಗೇ ತಮ್ಮ ಅಸ್ತಿತ್ವವನ್ನು ಸುತ್ತಲಿನ ಜಗತ್ತಿಗೆ ಸಾರಲಾರಂಬಿಸಿದಂತಿತ್ತು.
     ಕಾಡು ಮೇಡುಗಳಲ್ಲಿ ಬೆಳೆಯುವ ಮರಗಿಡಗಳಲ್ಲಿ, ನಾಡಿನ ಜನರೂ ಮೆಚ್ಚುವಂತಹ ಹೂವುಗಳನ್ನು ಬಿಡುವ ಕೆಲವು ಮರಗಳಿವೆ, ಅವುಗಳಲ್ಲಿ ಸುರಗಿ, ಬಾಗಾಳು (ಬಕುಳ) ನೆನಪಾಗುತ್ತದೆ. ನಮ್ಮ ಮನೆಯಿಂದ ದೇವಸ್ಥಾನದ ಗುಡ್ಡಕ್ಕೆ ಹೋಗುವ ದಾರಿಯಲ್ಲಿ, ಗರಡಿಜಡ್ಡಿನ ಹತ್ತಿರ ಒಂದು ಮಧ್ಯಮಗಾತ್ರದ ಮರ. ದಾರಿಯಿಂದ, ಅನತಿ ದೂರದಲ್ಲಿ ಇದ್ದುದರಿಂದಾಗಿ, ಬೇರೆ ದಿನಗಳಲ್ಲಿ ಆ ಮರದ ಹಸಿರು ಸಿರಿಯು ನಮ್ಮ ಗಮನಕ್ಕೂ ಬರುವುದಿಲ್ಲ. ಫೆಬ್ರವರಿಯ “ಫಲಗಾಳಿಯು” ಆ ಮರದ ಮೇಲೆ ಅದೇನೋ ಮೋಡಿ ಮಾಡುತ್ತದೆ – ಮರದು ಕೊಂಬೆ, ರೆಂಬೆ, ಕಾಂಡಗಳ ಸಂದಿಗೊಂಡಿಗಳಲ್ಲಿ ಪುಟ್ಟ ಪುಟ್ಟ ನೂರಾರು ಹೂವುಗಳನ್ನು ಬಿಡುತ್ತದೆ. ಸುರಗಿ ಹೂವಿನ ಸುಗ್ಗಿಯು ಒಂದು ತಿಂಗಳಿನ ತನಕವೂ ಮುಂದುವರಿದೀತು!  ಅದರ ಪರಿಮಳ ಎಷ್ಟಿದೆಯೆಂದರೆ, ಒಂದು ಫರ್ಲಾಂಗು ದೂರದಿಂದಲೇ ಸುರಗಿ ಹೂವಿನ ಸುಗಂಧ ಮೂಗಿಗೆ ಬಡಿಯುತ್ತದೆ.  ಆ ಹೂವುಗಳನ್ನು ಒಣಗಿಸಿದರೂ ಅದರ ಸುಗಂಧ ಮಾಸುವುದಿಲ್ಲವಾದ್ದರಿಂದ, ಸುರಗಿ ಹೂವುಗಳನ್ನು ಸಂಗ್ರಹಿಸಿ, ಮಾಲೆ ಮಾಡಿ, ಒಣಗಿಸಿಟ್ಟುಕೊಂಡು ವರ್ಷದುದ್ದಕ್ಕೂ ಹೆಮ್ಮೆಯಿಂದ ತಮ್ಮ ಮುಡಿಗೇರಿಸುತ್ತಿದ್ದರು, ಅಂದಿನ ಮಹಿಳೆಯರು. ಸುರಗಿಯ ಮಾಲೆ ಮಾಡಬೇಕಾದರೆ, ಅದು ಅರಳುವ ಮುಂಚೆ, ಬೆಳಿಗ್ಗೆ ಬೇಗನೆ ಮೊಗ್ಗಿನ ರೂಪದಲ್ಲೇ ಅದನ್ನು ಸಂಗ್ರಹಿಸಬೇಕಾಗುತ್ತದೆ. ಸುರಗಿ ಹೂವುಗಳಾಗುವ ತಿಂಗಳಿನಲ್ಲಿ, ಪ್ರತಿದಿನ ಬೆಳಿಗ್ಗೆ ನನಗೆ ಒಂದು ಕೆಲಸವಿತ್ತು – ಅದೇನೆಂದರೆ, ಶಾಲೆ- ಪರೀಕ್ಷೆಯ ತಯಾರಿಯ ಮಧ್ಯೆ, ನನ್ನ ತಂಗಿಯರಿಗಾಗಿ, ಸುರಗಿ ಮೊಗ್ಗುಗಳನ್ನು ಸಂಗ್ರಹಿಸುವ ಕೆಲಸ. ನಸುಕಿನಲ್ಲೇ, ಗರಡಿಜಡ್ಡಿನ ಬಳಿ ಇದ್ದ ಸುರಗಿ ಮರದತ್ತ ನಾನು ಮತ್ತು ನನ್ನ ತಂಗಿಯರು ಸಾಗುತ್ತಿದ್ದೆವು. ಮರದ ಮೇಲೇರಿ, ಕೈಗೆ ಸಿಗುವ ಮೊಗ್ಗುಗಳನ್ನು ಜಾಗ್ರತೆಯಿಂದ ಕೊಯ್ದು, ಸಂಗ್ರಹಿಸಿ, ಮರದ ಕೆಳಗೆ ನಿಂತಿದ್ದ ತಂಗಿಯರ ಕೈಗೆ ಕೊಡುತ್ತಿದ್ದೆ. ಪ್ರತಿ ದಿನವೂ ಸುರಗಿ ಮೊಗ್ಗುಗಳನ್ನು ಸಂಗ್ರಹಿಸಿವುದೆಂದರೆ, ನಮಗೆಲ್ಲಾ ತುಂಬಾ ಇಷ್ಟ. ಆರಿಸಿ ತಂದು ಮೊಗ್ಗುಗಳನ್ನು, ಸೂಜಿ ಮತ್ತು ದಾರ ಬಳಸಿ , ಪೋಣಿಸಿ, ಮಾಲೆ ಮಾಡುತ್ತಿದ್ದೆವು. ಮೊಗ್ಗಿನ ಮೇಲ್ಭಾಗದ ಎರಡು ಪಕಳೆಗಳನ್ನು, ಮಡಚಿ, ಅಂದರೆ “ಕಿವಿ” ಮಾಡಿ, ನಂತರ ಪೋಣಿಸುವಿಕೆ. ಮಾಲೆ ಮಾಡುವ ದಾರದಲ್ಲೂ ಒಂದು ವಿಶೇಷತೆ - ಬಾಳೆ ನಾರಿನ ತೆಳುವಾದ ದಾರವನ್ನು ಬಳಸಿದರೆ ಉತ್ತಮ ಎಂಬ ಭಾವನೆ. ಆ ಮಾಲೆಗಳನ್ನು ನಾಲ್ಕಾರು ದಿನ ಬಿಸಿಲಿಗೆ ಒಣಗಿಸಿದರೆ, ನಾಲ್ಕಾರು ತಿಂಗಳು ಬಾಳಿಕೆ ಬರುವ ಸುಗಂಧ ಭರಿತ ಪುಷ್ಪಮಾಲೆಗಳು ದೊರಕುತ್ತವೆ.  ವಸಂತ ಕಾಲ ಮುಗಿದು, ಬೇಸಿಗೆಯಲ್ಲೂ, ಮಳೆಗಾಲದಲ್ಲೂ ಅವುಗಳನ್ನು ತಲೆಗೇರಿಸಲು ಸಾಧ್ಯ, ದೇವರಿಗೆ ಅರ್ಪಿಸಲು ಸಾಧ್ಯ.
     ಮನೆ ಮುಂದಿನ ಅಗೇಡಿಯ ಅಂಚಿನಲ್ಲಿದ್ದ ಬಾಗಳು ಅಥವಾ ಬಕುಳದ ಹೂವುಗಳ ಪರಿ ಇನ್ನೊಂದೇ ತೆರ. ಸಂಜೆ ಮತ್ತು ಬೆಳಿಗ್ಗೆ ಆ ಅಗಾಧ ಗಾತ್ರದ ಮರದಿಂದ, ಹೂವುಗಳು ತೇಲಿ ಬಂದು ಅಗೇಡಿಯ ತುಂಬಾ ಹರಡಿಕೊಂಡು ಬೀಳುತ್ತಿದ್ದವು. ಅಂಬರದಂಚಿನಲ್ಲಿದ್ದಂತಿದ್ದ ಆ ಮರದ ತುದಿಯಲ್ಲಿದ್ದ ತೊಟ್ಟಿನಿಂದ ಬಿಡುಗಡೆ ಹೊಂದಿ, ನಿಧಾನಕ್ಕೆ ತೇಲಿಬರುತ್ತಿದ್ದ ಬಕುಳದ ಹೂವುಗಳ ಒಯ್ಯಾರವೇ ಅಪರೂಪದ್ದು. ಒಂದು ಪುಟ್ಟ ಬಟ್ಟಿಯ ತುಂಬಾ ಆ ಹೂಗಳನ್ನು ಸಂಗ್ರಹಿಸಿ, ಬಾಳೆಯ ನಾರಿನಲ್ಲಿ ಪೋಣಿಸಿದರೆ, ಬಕುಳದ ಮಾಲೆ ದೊರೆಯುತ್ತಿತ್ತು. ಪೂಜೆಗೂ, ಮದುವೆಗೂ ಈ ಹೂವುಗಳ ಮಾಲೆ ಶ್ರೇಷ್ಟ ಎಂಬ ನಂಬಿಕೆ ಇದೆ.
     ನಮ್ಮ ಹಳ್ಳಿಯಲ್ಲಿ, ಬಿರು ಬೇಸಗೆ ತಳಊರುವ ಮುನ್ನ ಬರುವ ಜನವರಿ- ಫೆಬ್ರವರಿ ತಿಂಗಳುಗಳಲ್ಲಿ ಸುತ್ತಲಿನ ಮರಗಿಡಗಳಲ್ಲಿ ಹೂಬಿಡುವ ಪರಿಯು, ಆ ಎರಡು ತಿಂಗಳುಗಳನ್ನು ಸದಾ ಸುಗಂಧಭರಿತವನ್ನಾಗಿಸುವ ಪ್ರಕ್ರಿಯೆ ಈ ಪ್ರಕೃತಿಯ ಅದ್ಭುತವೆನ್ನಬಹುದು. ಕವಿಗಳು ಈ ಸಂಭ್ರಮವನ್ನೇ ವಸಂತನ ಆಗಮನ ಎಂದು ಪರಿ ಪರಿಯಾಗಿ ಬಣ್ಣಿಸಿರುವರು. ಹೂವುಗಳ ಲೋಕವೇ ತೆರೆದುಕೊಳ್ಳುವ ಆ ದಿನಗಳಲ್ಲಿ, ಹಕ್ಕಿಗಳ ಗಾನವೂ ಆರಂಭ – ತಮ್ಮ ಇನಿಯರನ್ನು ಕರೆಯುವ ಸಂಭ್ರಮ. ನಂತರ ಗೂಡು ಕಟ್ಟಿ, ಮರಿ ಮಾಡಿ ಸಾಕುವ ಉತ್ಸಾಹ. 
 
     ವರ್ಷದ ಈ ಮಾಸಗಳಲ್ಲಿ, ಅದೆಷ್ಟೋ ಸಹಸ್ರಮಾನಗಳಿಂದಲೂ ಪ್ರಕೃತಿಯು ಮುಂದುವರಿಸಿಕೊಂಡು ಬಂದಿರುವ ಈ ಪರಿಪಾಠಕ್ಕೆ, ಈಚೆಗೆ ತಳುಕು ಹಾಕಿಕೊಂಡಿರುವ ಫೆಬ್ರವರಿ ತಿಂಗಳ ಪ್ರೀತಿಪೂರ್ಣ ನಂಟು, ನಮ್ಮ ಹೊಸ ತಲೆಮಾರಿನಲ್ಲೂ ನವಚೇತನವನ್ನು ತುಂಬುತ್ತಿದ್ದು, ಬದಲಾಗುತ್ತಿರುವ ಯುಗಯಾತ್ರೆಯಲ್ಲೂ, ಅಚ್ಚರಿಯನ್ನು ತರುತ್ತಿದೆ.             
                                                                                                                                         

Comments

Submitted by Manjunatha D G Sun, 02/17/2013 - 21:25

ಲೇಖನ‌ ಚನ್ನಾಗಿದೆ. ನಮ್ಮ‌ ಪಶ್ಚಿಮ‌ ಘಟ್ಟ‌ ಪ್ರದೇಶದಲ್ಲಿ ಮಾರ್ಚ್, ಎಪ್ರಿಲ್ ಹೊತ್ತಿಗೆ ದೊಡ್ಡ‌ ಬೆಟ್ಟಗಳೇ ಬಣ್ಣ‌ ಬಣ್ಣದ‌ ತಳಿರುಗಳಿ0ದ‌ ಅಲ0ಕಾರಗೊಳ್ಳುತ್ತವೆ. ಒ0ದೊ0ದು ಮರ‌ ಚಿಗುರೊಡೆದಾಗ‌ ಒ0ದೊ0ದು ಬಣ್ಣ‌. ಇದು ವಸ0ತನ‌ ಮಹಿಮೆ ! ಇದು ನಿಜಕ್ಕೂ ಮರ‌ ಅರಳುವ‌ ಸಮಯವೇ ಸರಿ.
Submitted by sasi.hebbar Mon, 02/18/2013 - 10:21

In reply to by Manjunatha D G

ನೀವಂದಂತೆ, ಪರ್ವತ ಭಿತ್ತಿಯ ಮೇಲೆ ಬೆಳೆದಿರುವ ಮರಗಳೆಲ್ಲಾ ವಿವಿಧ ರೀತಿಯ ಹೂವುಗಳಿಂದ ತುಂಬಿಕೊಂಡು, ಪಚ್ಚೆ ಬಣ್ಣದ ಬೃಹತ್ ಚಿತ್ತಾರವನ್ನು ಬರೆದಂತೆ ಕಾಣುತ್ತವೆ ಈ ತಿಂಗಳುಗಳಲ್ಲಿ! ಧನ್ಯವಾದ.