ಮರ ಉಳಿಕೆಯೆಂಬ ಪವಾಡ !

ಮರ ಉಳಿಕೆಯೆಂಬ ಪವಾಡ !

ನೀವು ನನ್ನೂರು ಆತ್ರಾಡಿಗೆ ಬರಬೇಕಾದರೆ ಉಡುಪಿಯಿಂದ ಹೊರಟು ಆಗುಂಬೆ ಮಾರ್ಗವಾಗಿ ಬರಬೇಕು. ಉಡುಪಿಯಿಂದ‌ ಆಗುಂಬೆ ಕಡೆಗೆ ಪ್ರಯಾಣಿಸುವಾಗ ಮಣಿಪಾಲ, ಪರ್ಕಳ ಆನಂತರ ಆತ್ರಾಡಿ ಸಿಗುತ್ತದೆ. ಉಡುಪಿಯಿಂದ ಆತ್ರಾಡಿಗೆ‌ ಬರೇ ಆರು ಮೈಲಿ ಅಂತರ.‌ ಪರ್ಕಳ ಹಾಗೂ ಆತ್ರಾಡಿಯ ನಡುವೆ ರಾಷ್ಟ್ರೀಯ ಹೆದ್ದಾರಿಯ ಬಲಬದಿಯಲ್ಲಿ ಎತ್ತರದಲ್ಲಿರುವ ನಾನು‌ ಕಲಿತ ಪರ್ಕಳ ಹೈಸ್ಕೂಲು ನಿಮ್ಮನ್ನು‌ ಸದಾ ಸ್ವಾಗತಿಸುತ್ತಿರುತ್ತದೆ!  ಅದರ ಮುಂಭಾಗದಲ್ಲಿ ಎಡಕ್ಕೊಂದು ರಸ್ತೆ ಧರ್ಮಸ್ಥಳದವರ ಪ್ರಕೃತಿ ಚಿಕಿತ್ಸಾ‌‌ ಕೇಂದ್ರಕ್ಕೆ ತೆರೆದುಕೊಂಡಿದೆ. ಆ ರಸ್ತೆ ಆರಂಭವಾಗುವ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಒಂದೇ ವಯೋಮಾನದ ಎರಡು ಸುಂದರ ಅರಳೀ (ಅಶ್ವತ್ಥ)ಮರಗಳಿವೆ. ಈ ಎರಡು ಮರಗಳಿಗೂ ಸುಂದರವಾದ ಕಟ್ಟೆ ಕಟ್ಟಲಾಗಿದೆ. ಈ ಮರಗಳು ಸುಮಾರು ನಲುವತ್ತು ವರ್ಷ ಹಳೆಯದಿದ್ದಿರಬಹುದು!

ಮೊನ್ನೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ನಡೆದಾಗ ಪವಾಡವೆಂಬಂತೆ ಅದೃಷ್ಟವಶಾತ್ ಈ‌ ಎರಡೂ ಮರಗಳು ಯಾವುದೇ ಆಘಾತಕ್ಕೆ ಒಳಗಾಗದೆ ಉಳಿದುಕೊಂಡಿವೆ. ಹೆದ್ದಾರಿ ಅಗಲೀಕರಣದ ಸಮಯ ಎಷ್ಟೋ ಮರಗಳು ಉರುಳಿಸಲ್ಪಟ್ಟಿದ್ದರೂ ಈ ಅವಳಿ ಮರಗಳು ಉಳಿದುಕೊಂಡದ್ದು ನನಗೆ ಆಶ್ಚರ್ಯಕ್ಕಿಂತಲೂ ಅತೀವ ಆನಂದವನ್ನು‌ ನೀಡಿದೆ! ನಾನು ಮುಂಜಾನೆದ್ದು ವಾಕಿಂಗ್ ಹೋಗುವಾಗ, ಬೆಳಗ್ಗೆ ಕಚೇರಿಗೆ ಹೋಗುವಾಗ, ನಂತರ ಮನೆಗೆ ವಾಪಾಸಾಗುವಾಗಲೆಲ್ಲಾ ನಿತ್ಯ‌ ನೋಡಿ ಸಂತಸಪಡುವ ಮರಗಳವು!

ಒಂದು ಗಿಡ ಮರವಾಗಿ ನೆರಳು‌ಕೊಡುವಾಗ ನಮ್ಮ‌ಅರ್ಧ ಜೀವಮಾನದಷ್ಟು ಸಮಯ ಕಳೆದಿರುತ್ತದೆ. ಅಂತಹ ಇನ್ನೊಂದು ಮರ ತಯಾರಾಗಿ ನೆರಳು ಕೊಡಬೇಕಾದರೆ ಮತ್ತೆ ನಲವತ್ತು ವರ್ಷ ಕಾಯಬೇಕು! ಅಂತದ್ದರಲ್ಲಿ ಈ ಅವಳಿ ಮರಗಳು ದೇವರ ದಯೆಯಿಂದ ಉಳಿದು‌ಕೊಂಡದ್ದು ನಮ್ಮ ಭಾಗ್ಯವೇ ಅಲ್ಲವೇ?! ಆ ಸಂತಸವನ್ನು ನಿಮ್ಮಲ್ಲಿಯೂ ಹಂಚಿಕೊಳ್ಳುವ ಮನಸ್ಸಾಯ್ತು! ಬರೆದುಕೊಂಡೆ! ಆ ಮರಗಳೆರಡೂ ಇನ್ನೂ ಸಾವಿರ ವರ್ಷಗಳ‌ ಕಾಲ‌ ಸಂತೋಷದಿಂದ ನೆರಳಿತ್ತು ಉಸಿರಾಡುತ್ತಿರಲಿ ಎಂಬ‌ ಆಶಯ ನನ್ನದು!

-ಮೌನಮುಖಿ-

(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)