ಮರ ನುಂಗಿದ ಮರ

ಮರ ನುಂಗಿದ ಮರ

ಬರಹ

ಕೆರೆ ಕೆಲಸದ ಮೇಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿಗೆ ಭೇಟಿ ನೀಡಿದ ಸಂಧರ್ಭ.ಕಿಬ್ಬನಹಳ್ಳಿ ಕ್ರಾಸ್ ನಿಂದ ಸಿ.ಎನ್.ಹಳ್ಲಿ ಮಾರ್ಗದಲ್ಲಿ ಜೆ.ಸಿ ಪುರದ ಬಳಿ ಈ ಮರವನ್ನು ಕಂಡು ವಿಸ್ಮಯವಾಯಿತು.ದಾರಿಯಲ್ಲಿಯೇ ಜೀಪ್ ನಿಲ್ಲಿಸಲು ಹೇಳಿ ಮರದ ಬಳಿ ಹೋದೆ.ಆಲದ ಮರವೊಂದು ಈಚಲ ಮರವನ್ನು ಬಿಗಿದಪ್ಪಿ ಸಾಯಿಸಿದ್ದನ್ನು ಕಂಡು ಅಚ್ಚರಿಯಾಯಿತು.

ಸಾಮಾನ್ಯವಾಗಿ ಈಚಲ ಮರ ತುಂಬಾ ಒರಟು ಮೈಯನ್ನು ಹೊಂದಿರುತ್ತದೆ.ಅದರ ಕಾಂಡ ಮುಳ್ಳು ಹಂದಿಯ ತರಹ ಒರಟಾಗಿರುತ್ತದೆ.ಒಂದು ಗರಿ ಉದುರಿದ ಮೇಲೆ ಅದರ ಕುರುಹಾಗಿ ಗರಿಯ ಅವಶೇಷವೊಂದು ಅಲ್ಲಿ ಉಳಿದಿರುತ್ತದೆ.ಆ ಜಾಗದಲ್ಲಿ ಮಣ್ಣು,ಧೂಳು ಸೇರಿಕೊಳ್ಳಲು ಅವಕಾಶವಿರುತ್ತದೆ.ಯಾವುದೋ ಪಕ್ಷಿ ಆಲದ ಹಣ್ನನ್ನು ತಿಂದು ಅಲ್ಲಿ ಹಿಕ್ಕೆಯಿಟ್ಟಿತೋ,ಅಥವಾ ಬೀಜವನ್ನೇ ಉದುರಿಸಿತೋ ತಿಳಿಯದು.ಆದರೆ ಅಲ್ಲಿ ಗಿಡವಾಗಿ ಮೊಳೆತ ಆಲವಂತೂ ಈಚಲನ್ನು ಕಬಳಿಸಿದೆ.

ಆಲದ ಕಬಂದ ಬಾಹುಗಳಿಗೆ ಸಿಕ್ಕಿದ ಈಚಲ ಮರ ಉಸಿರುಗಟ್ಟ್ಟಿ ಸತ್ತಿರುವಂತೆ ಕಾಣುತ್ತದೆ.ಆಲದ ಬೇರುಗಳ ಹಿಡಿತಕ್ಕೆ ಸಿಕ್ಕಿದ ಈಚಲ ಗಿಡ ನೆಲದಿಂದ ಮೇಲೆದ್ದು,ಅಸುನೀಗಿದೆ.ಇನ್ನು ಕೆಲವೇ ದಿನಗಳಲ್ಲಿ ಗೆದ್ದಲಿಗೆ ಆಹಾರವಾಗಿ ಈಚಲಮರದ ಕುರುಹೂ ಇಲ್ಲವಾಗುವ ಕಾಲ ಹತ್ತಿರವಾಗಿದೆ.

ಇಂತಹುದೇ ಮರವೊಂದನ್ನು ಮಧುಗಿರಿ-ತರೂರು-ಶಿರಾ ರಸ್ತೆಯಲ್ಲೊಮ್ಮೆ ಕಂಡು ಚಿತ್ರ ತೆಗೆದು ಸುಧಾ ವಾರಪತ್ರಿಕೆಯ ವಂಡರ್ ಪುಟದಲ್ಲಿ ಪ್ರಕಟಿಸಿದ್ದೆ.ಸುಧಾ ಪತ್ರಿಕೆಯಲ್ಲಿ ಪ್ರಕಟಿಸಲಾದ ಮರ ಈಗ ಇಲ್ಲ.ಆದರೆ ಅದರ ಚಿತ್ರ ಮಾತ್ರ ನನ್ನ ಸಂಗ್ರಹದಲ್ಲಿದೆ.
.