ಮರ ಬರೆದ ರಂಗೋಲಿ

ಮರ ಬರೆದ ರಂಗೋಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಎಚ್ ಎಸ್ ಸತ್ಯನಾರಾಯಣ
ಪ್ರಕಾಶಕರು
ಅಲಂಪು ಪ್ರಕಾಶನ, ಮಾಲೂರು
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ ೨೦೨೩

ಪರಿಶುದ್ಧ ಬಾಳೂ

ಕವಿತೆಯೇ ಬರೀ

ಪದಗಳಲ್ಲ

ಕನ್ನಡದ ಪ್ರಮುಖ ವಿಮರ್ಶಕರೆಂದು ಹೆಸರಾದ ಡಾ. ಎಚ್ .ಎಸ್. ಸತ್ಯನಾರಾಯಣ ಅವರು ಈವರೆಗೆ ಬರೀ ಗದ್ಯ ಸಾಹಿತ್ಯ ಪ್ರಕಾರದಲ್ಲಿ ಒಡನಾಡುತ್ತಿದ್ದರು. ಅವರ ಮೊದಲ ಕವನ ಸಂಕಲನ (ಹಾಯ್ಕುಗಳ ಸಂಕಲನ) ಪ್ರಕಟಿಸುವ ಮೂಲಕ ಕವಿಯಾಗ ಬೇಕೆಂಬ ಅವರ ಅಸೆಯನ್ನೂ ಅವರು ಪೂರೈಸಿಕೊಂಡರು. ‘ಮರ  ಬರೆದ ರಂಗೋಲಿ’ ಎಂಬ ಹಾಯ್ಕು ಸಂಕಲನ ಮಾಲೂರಿನ ‘ಅಲಂಪು ಪ್ರಕಾಶನ’ದಿಂದ ೨೦೨೩ ರಲ್ಲಿ ಪ್ರಕಟವಾಗಿದೆ, ಅವರೇ ಹೇಳಿದಂತೆ ಹಲವಾರು ಹೈಕು ಬರಹಗಾರರಿಗೆ ಮುನ್ನುಡಿ ಬರೆಯುವ ಕಾರಣಕ್ಕಾಗಿ, ಸಂಕಲನಗಳನ್ನು ಬಿಡುಗಡೆ ಮಾಡಲು ಹೋದ ಸಂದರ್ಭದಲ್ಲಿ ಬಂದ ಹಾಯ್ಕು ಕಾವ್ಯದ ಸಂಪರ್ಕ ಅವರಿಂದ ಒಂದು ಸಂಕಲನ ರಚಿಸುವ ಪ್ರೇರಣೆ ನೀಡಿತು. ಇದರೊಂದಿಗೆ ಕವಿ ಮನಸ್ಸಿನ ಇವರು ಕವಿತಾ ಸಂಕಲನವನ್ನು ಪ್ರಕಟಿಸಿದ ತೃಪ್ತಿ ಪಡೆದರು. ಈ ಸಂಕಲನದ ಮೊದಲ ಮಾತಿನಲ್ಲಿ “ ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲಿ  ಆಯ್ದುಕೊಂಡ ವಿಚಾರಗಳು ಮಸಕಾಗುವುದೇ ಹೆಚ್ಚು .ಸಾಂದ್ರತೆ ಹಾಯ್ಕುಗಳು ಬಯಸುವ ಮುಖ್ಯವಾದ ಗುಣ. ಅಲ್ಲದೇ ಹದಿನೇಳು ಅಕ್ಷರಗಳನ್ನು ಐದು ಏಳು, ಐದು ಅಕ್ಷರಗಳ ಮೂರು ಸಾಲಾಗಿಸುವ ಕ್ರಮವೊಂದು ಈಗಾಗಲೇ ರೂಡಿಯಾಗಿದೆ. ಇದರ ಚೌಕಟ್ಟಿಗೆ ಗಮನ ಕೊಡದ ನಾನು ಮನಸ್ಸಿಗೆ ತೋಚಿದಂತೆ ಬರೆಯುವ ಮೂಲಕ ರೂಢಿಗತ ಕ್ರಮವನ್ನು ಉಲ್ಲಂಘಿಸುವ ಪ್ರಯತ್ನ ಮಾಡಿದ್ದೇನೆ.” ಎನ್ನುವ ಮಾತುಗಳಲ್ಲಿ ತಮ್ಮ ಹಾಯ್ಕುಗಳು ೫/೭/೫ ಅಕ್ಷರಗಳಲ್ಲಿ ಇಲ್ಲ ಎನ್ನುವದನ್ನು ಸಾರುತ್ತಾರೆ. ಅದರೆ ಹದಿನೇಳು ಅಕ್ಷರಗಳಲ್ಲಿ ಅ ಪದ್ಯ ಮುಗಿಯಬೇಕೆಂಬ ನಿಯಮವನ್ನು ಮಾತ್ರ ಉಳಿಸಿಕೊಂಡಿದ್ದಾರೆ. ೧೦೧ ಹೈಕುಗಳ ಸಂಕಲನವಿದು . 

ಪ್ರೀತಿಯ ಗೆಳತಿಗೆ ಕವಿ

ಕಾಯುವಿಕೆಯೆಂಬುದು 

ತಪವಲ್ಲ ಗೆಳತಿ 

ಆತ್ಮದ ಸುಖ

ಎನ್ನುವ ಮಾತಿನಲ್ಲಿ ಪ್ರೀತಿಗಿರುವ ಆಧ್ಯಾತ್ಮಿಕ ಪರಿವೇಷವನ್ನು ಹರಿದು ಅದನ್ನು ಆತ್ಮಸಾತ್ ಮಾಡಿಕೊಳ್ಳ ಬೇಕಾದ ಅನಿವಾರ್ಯತೆಯನ್ನು ಕವಿ ಗುರುತಿಸುತ್ತಾರೆ. ಪ್ರೀತಿಯೆಂದರೆ ಎರಡು ಎದೆಗಳೆಂಬ ನದಿಗಳು ಹರಿಯುವ ಸಂಗತಿ ಅವು ಎರಡೂ ಸಂಗಮವಾಗಬೇಕೆಂದು ಅವರ ಒಂದು ಹೈಕು ಹೇಳುತ್ತದೆ. ಇನ್ನೊಂದೆ ಅದು ಜಂಗಮವೂ ಅಲ್ಲ ಸ್ಥಾವರವೂ ಅಲ್ಲ ಎನ್ನುವ ಕವಿ ಈ ಪದಗಳ ಬಿಡೆಯಾದರೂ ಪ್ರೀತಿಗೇಕೆ ಎನ್ನುತ್ತ 

ಜಂಗಮ ಸ್ಥಾವರಗಳ 

ಗೊಡವೆ 

ಬಾಳೋಲುಮೆಗೇಕೆ

ಎಂದು ಪ್ರಶ್ನಿಸುವ ಮೂಲ ಪ್ರೀತಿ ಅದರಾಚೆಗೆ ಸೇರಿದ್ದು ಎನ್ನುವ ನಿಲುವಿಗೆ ಬಂದು ನಿಲ್ಲುತ್ತಾರೆ ,ಇಂಥ 

ಹಾಯ್ಕುಗಳು ಪ್ರೀತಿಗೆ ಆಧ್ಯಾತ್ಮಿಕ ಅರ್ಥವನ್ನೂ ಮೀರಿದ ಹೆಚ್ಚಿನ ಗೌರವವಿರುವದನ್ನು ಕವಿ ದರ್ಶಿಸುತ್ತಾರೆ. 

ಪ್ರೇಮ ದೇವರಿಗೂ ಇಷ್ಟವಾದುದು ಎಂದು ಕವಿಯ ನಂಬಿಕೆ ಅಂತೆಯೆ ಅವರು 

ದೇವರೂ 

ದ್ವೇಷವನೊಲ್ಲ 

ಅವನು ಸದಾ ಪ್ರೇಮದ ಪರ 

ಎನ್ನುವ ಮೂಲಕ ಪ್ರೇಮಿಗಳು ದೇವರಿಗೂ ಇಷ್ಟವಾದವರು ಎನ್ನುವ ಅರ್ಥದೊಂದಿಗೆ  ಇನ್ನೂ ವಿಸ್ತೃತವಾದ ಅರ್ಥವನ್ನು ಹೈಕಿನಲ್ಲಿ ತುಂಬುತ್ತಾರೆ. ಅದೆಂದರೆ ಭಕ್ತಿ ಎಂಬ ಪದಕ್ಕೆ ಪ್ರೇಮ ಎಂಬ ಅರ್ಥವೂ ಇರುವದನ್ನು ನವು ಇಲ್ಲಿ ನೆನದರೆ ಹಾಯ್ಕಿಗೆ ಇನ್ನೂ ವಿಸ್ತಾರವಾದ ಅರ್ಥ ಪ್ರಾಪ್ತವಾಗುತ್ತದೆ. ಆದರೆ ಪ್ರೇಮ ಲೆಕ್ಕಾಚಾರಕ್ಕೆ ಸಿಗುವಂಥದಲ್ಲ ಎನ್ನುವದನ್ನು 

ಲೆಕ್ಕಾಚಾರದಿ 

ದೊರಕುವುದೇ ಒಲವ 

ಸಾಕ್ಷಾತ್ಕಾರ

ಎಂಬ ಚುಟುಕಿನಲ್ಲಿ ಹೇಳುತ್ತಾರೆ. ಅದೇಷ್ಟು ಸೂಕ್ಷ್ಮವಾಗಿ ಕಳೆದು ಹೋಗಿರುವ ಸ್ನೇಹ ಅಥವ ಪ್ರೇಮವನ್ನು ಕವಿ ದೃಶ್ಯೀಕರಿಸುತ್ತಾರೆ ಎನ್ನುವದಕ್ಕೆ 

ಊರ ತೊರೆದರೂ

ಮನದಲ್ಲಿ  ಉಳಿದೆ 

ಹಸಿರಾಗಿ 

ಎಂಬ ಹಾಯ್ಕು ಸಾಕ್ಷಿಯಾಗಿದೆ. 

ಕವಿ ವಾಸ್ತವವಾದಿ. ದಾಂಪತ್ಯದ ಸಂಭಂಧವನ್ನು ತುಂಬ ಸೂಕ್ಷ್ಮವಾಗಿ ಚಿತ್ರಿಸುವ ಕವಿ ಅದು ಹಾಲು ಜೇನು ಎನ್ನುವ ವೈಭವೀಕರಣಕ್ಕಿಂತ ವಾಸ್ತವದತ್ತ ಹೊಗುತ್ತಾರೆ .ಅದು ಕೇವಲ ಹೊಂದಾಣಿಕೆ ಎನ್ನುವ ಕವಿ

ಹಾಲು ಜೇನಲ್ಲ

ಹೊಂದಾಣಿಕೆಯಷ್ಟೇ

ನಿತ್ಯ ದಾಂಪತ್ಯ 

ಎಂಬ ಸರಳ ನಿಲುವಿಗೆ ಬಂದು ನಿಂತಿರುವದು ಅರ್ಥಪೂರ್ಣವಾಗಿದೆ. ಪ್ರೀತಿಯನ್ನು ವ್ಯಾಖ್ಯಾನಿಸುವಾಗ ಅದು ಲೋಕ ಹೊಲೆಗೆಡಿಸಿದ ಒಂದು ಮಾತು ‘ ಎಂಬುದನ್ನು ಓದುವಾಗ ಎಲ್ಲೊ ಹಲೆಯ ಕಾವ್ಯದಲ್ಲಿ ಈ ಸಾಲು ಓದಿದ ನೆನಪು ಬರುತ್ತದೆ. 

ತಾಯಿಯನ್ನು ಕುರಿತು ಕವಿ ಬರೆದ ಹಾಯ್ಕುಗಳ ವೈಶಿಷ್ಟö್ಯ ಬೇರೆ ತೆರನಾಗಿದೆ. ಅವಳ ಪ್ರೇಮಕ್ಕೆ ಎಂದೂ ಬರ ಬರದು ಎನ್ನುವದನ್ನು ಹೇಳುತ್ತ ‘ಅವಳ ಎದೆ ಹಾಲು ಬರಿದಾಗಬಹುದು ಆದರೆ ಅವಳ ಒಲವಿಗೆಂದು ಬರ ಬರದು’ ಎನ್ನುವದನ್ನು ಸಾರುತ್ತಾರೆ. ಅವ್ವ ಎಂದೂ ಮುಗಿಯದ ತವನಿಧಿ ಎಂದು ಈ ಹಾಯ್ಕು ವಿವರಿಸಿದೆ.

ಕವಿತೆಯೊಂದೇ ಮುಖ್ಯವಲ್ಲ, ಬದುಕೂ ಅಷ್ಟೇ  ಮುಖ್ಯ ಎನ್ನುವ ಕವಿ ‘ಪರಿಶುದ್ಧ ಬಾಳೂ ಕೂಡಾ ಕವಿತೆಯೇ’ ಎನ್ನುವ ಮೂಲಕ ಬಾಳಿಗಿರುವ ಮಹತ್ವವನ್ನು ಸೂಚಿಸುತ್ತಾರೆ. ಬದುಕು ತನ್ನ ಯಶಸ್ಸನ್ನು ಸಾಧಿಸಬೇಕಾದರೆ ಅದಕ್ಕೆ ಯೌವನದ ದುಡಿಮೆ ಅಗತ್ಯ ಎನ್ನುವದಕ್ಕೆ 

ಬಾಳ್ವೆಗೆ ಅಡಿಪಾಯ

ಯೌವನದ

ಬೆವರ ಹನಿ

ಎಂಬ ಹಾಯ್ಕು ಸಾಕ್ಷಿಯಾಗಿದೆ. 

ಜಾತಿ , ಕುಲ ಇವುಗಳ ಅಂತರವನ್ನು ಮೀರಿ ಮನುಷ್ಯ ಬದುಕಬೇಕು ಎನ್ನುವದು ಪ್ರತಿ ಕಾವ್ಯದ ಆಶಯ. ಡಾ.ಎಚ್. ಎಸ್ ಸತ್ಯನಾರಾಯಣ ಅವರೂ ಇದನ್ನು ತಮ್ಮ ಹಾಯ್ಕುಗಳಲ್ಲಿ ತುಂಬಿದ್ದಾರೆ. ಒಂದು ಹಾಯ್ಕಿನಲ್ಲಿ

ಗಡಿಗಳಿರುವದು 

ಹೊರಗಲ್ಲ

ನಮ್ಮೀ ಎದೆಯಲ್ಲಿ

ಎನ್ನುವಲ್ಲಿ ಗಡಿಗಳನ್ನು ಮನುಷ್ಯ ಮೀರಬೆಕು ಎಂಬ ಆಶಯವಿದೆ. ಹಾಗೆಯೇ ಮನುಷ್ಯನ ಮೊದಲ ಶತ್ರು ಅವನ ಅಹಂಕಾರ ಎನ್ನುವದನ್ನು ಅವರು ಸಾರುತ್ತಾರೆ. ದೈವವನ್ನು  ಕವಿ ಕೇಳಿಕೊಳ್ಳುವದು ತನಗೆ ಅಹಂಕಾರ ಬರದಿರುವಂತೆ ಕಾಪಡು ಎನ್ನುತ್ತಾರೆ. ಮನುಷ್ಯ ಹೃದಯದ ಮೂಲಕ ಕಣ್ಣಾಗಬೇಕು. ಮೆದುಳಿನ ಮೂಲಕ ಯೋಚಿಸಬೇಕು  ಎನ್ನುವ ಕವಿ ಹೃದಯದ ಪ್ರೀತಿ ನಾವು ಜಗತ್ತಿಗೆ ಕೊಡಬೇಕಾದದ್ದು ಎನ್ನುತ್ತಾರೆ. ಕ್ಷಮೆ ದೊಡ್ಡ ಶÀಕ್ತಿ ಎನ್ನುವದನ್ನು ಸಾರಲು

ಸೇಡು ತೀರಿಸಲು 

ಕತ್ತಿ ತಗೆಯದೆ 

ಕ್ಷಮಿಸು ಸಾಕು  

ಎನ್ನುವ ಕವಿ ಈ ಬಾಳಿನ ಎರಡು ದೊಡ್ಡ ಶಕ್ತಿ ದುಡಿಮೆ ಮತ್ತು ತಾಳ್ಮೆ ಎಂದು ಇನ್ನೊಂದು ಹಾÀಯ್ಕಿನಲ್ಲಿ ಸೂಚಿಸುತ್ತಾರೆ.   

ಲೇಖನಿ ಕತ್ತಿಗಿಂತ ಹರಿತ ಎನ್ನುವ ಮಾತನ್ನು ಬಹಳ ಸಲ ಬಳಸುತ್ತೇವೆ. ಅಂದರೆ ಆ ಲೇಖನಿಗೂ ಕೊಲ್ಲು ಶಕ್ತಿ ಇದೆ ಎನ್ನುವದನ್ನು ಕವಿ

ಖಡ್ಗಕ್ಕಿಂತ ಹರಿತ

ನಿಜ, ಲೇಖನಿಯೂ 

ಕೊಲ್ಲುತ್ತದೆ

ಹೇಳಿದ ರೀತಿ ವಿಸ್ಮಯಕಾರಿಯಾದದ್ದು ಮೂರೇ ಸಾಲಿನಲ್ಲಿ ಅನೇಕ ಅರ್ಥಗಳನ್ನು ಬಿಚ್ಚಿಡುವ ಈ ಹಾಯ್ಕು ಬರಹ ಜಗತ್ತಿನ ನಾನ ಅಯಮಗಳಿಗೆ ಸೂಚಕವಾಗಿದೆ. 

ಮಹಾತ್ಮಾ ಗಾಂಧಿಯ ಬದುಕನ್ನು ಕನ್ನಡ ಕಾವ್ಯ ಕಟ್ಟಿ ಕೊಟ್ಟ ರೀತಿ ಅಪರೂಪದ್ದು . ಇದಕ್ಕೆ ಹಾಯ್ಕು ಕವ್ಯವೇನೂ ಹಿಂದೆ ಬಿದ್ದಿಲ್ಲ ಡಾ ಎಚ್.ಎಸ್. ಸತ್ಯನಾರಾಯಣ ಅವರು ಗಾಂಧೀಜಿ

ನೂತ ನೂಲಿನಿಂದ

ದೇಶವನ್ನೇ 

ಕಟ್ಟಿದ ಮಹಾತ್ಮ 

ಎಂದು  ಬಣ್ಣಿಸುತ್ತಾರೆ. ದಾರ ಮತ್ತು ಹೃದಯಗಳನ್ನು ಹೊಲಿಯುವ ರೂಪಕವಾಗಿಸಿಕೊಂಡು ಕನ್ನಡದಲ್ಲಿ ಹಲವು ಪದ್ಯಗಳು ಬಂದಿವೆ. ಅದು ಇಲ್ಲಿಯೂ ಅಭಿವ್ಯಕ್ತವಾಗಿದೆ. ಕೆಲವು ಮಾತಿನಲ್ಲಿ ವಿವರಿಸಲಾಗದ ಸಂಗತಿಗಳನ್ನು ಕವಿ ಎಷ್ಟು ಸುಂದರವಾಗಿ ಹಾಯ್ಕಾಗಿಸುತ್ತಾರೆ ಎಂದರೆ ತುಂಬ ವಿಸ್ಮಯ ಮೂಡುತ್ತದೆ.  ದುಂಬಿ ಸ್ಪರ್ಶವಾದ ಹೂವಿನ ಸಂತಸವನ್ನು 

ತುಟಿ ಬಿರಿದ ಹೂ

ದುಂಬಿಯು ಸಿಹಿ

ಮುತ್ತಿಗೆ ಸೋತಿತು

ಇದಲ್ಲವೇ ಕಾವ್ಯದ ವಿಸ್ಮಯ? ಎಷ್ಟೊಂದು ಸೂಕ್ಷ್ಮವಾದ ದರ್ಶನ ಕವಿಯದು ಎಂಬ ಅಚ್ಚರಿ ಮೂಡುತ್ತದೆ. ಕವಿ ಜೀವಂತ ಮಾಗಿದ ಅನುಭವಕೆ ಸಾಕ್ಷಿಯಾಗಿ

ನಿಲಯದಿಂದ

ಬಯಲಿಗೆ ಸಾಗಿ

ಮಾಗಲಿ ಈ ಜೀವ

ಶರಣರ ಬಯಲು, ಕುವೆಂಪು ಅವರ ಅನಿಕೇತನ ಎರಡರ ಭಾವವನ್ನು ಸಮೀಕರಿಸಿಕೊಂಡ ಹಾಯ್ಕು ಇದು. ಅನುಭವ, ಅನುಭಾವ ಎರಡೂ ಸಮಾಹಿತವಾದಾಗ ಇಂತಹ ರಚನೆ ಮೂಡಲು ಸಾಧ್ಯ.  

ಅಮಾನವೀಯತೆಯನ್ನು ಕಂಡಾಗ ಕವಿ ಅಷ್ಟೇ ಕಠೋರರಾಗುತ್ತರೆ. ಕುಲ ಜಾತಿಗಳನ್ನು ಒಪ್ಪ ದ ಕವಿ ಧರ್ಮಾಂಧತೆಯನ್ನು ಅಲ್ಲಗಳೆಯುತ್ತ ಅದೊಂದು 

ಕಿಟಕಿಗಳಿಲ್ಲದ ಕೂಪ

ಧರ್ಮಂಧತೆಯ 

ಪಂಜರ 

ಎಂದು ಕಟಕಿಯಾಡುತ್ತಾರೆ. ಧರ್ಮ ಬೇರೆ, ಧರ್ಮಾಂಧತೆ ಬೇರೆ ,ಅದು ಎಂದಿಗೂ ಒಪ್ಪಿತವಿಲ್ಲ. ಧರ್ಮಾಂಧತೆಯಿದ್ದಲ್ಲಿ ಸ್ವಾತಂತ್ರ್ಯ ಇರಲು ಸಾಧ್ಯವಿಲ್ಲ ಎನ್ನುವದನ್ನು ಹಾಯ್ಕು ಹೇಳುತ್ತದೆ. 

ಕವಿ ಹಾಯ್ಕುಗಳ ಮೀಮಾಂಸೆ ಮಡಿರುವದು ಅರ್ಥಪೂರ್ಣವಾಗಿದೆ. ಅವರೇ ಹೇಳಿಕೊಂಡAತೆ ಅವರ ಈ ಹಾಯ್ಕು ಸಂಕಲನ 

ಹದಿನೇಳರಾಟ

ಅಕ್ಕರದ 

ಸರಮಾಲೆ ಕವಿತೆ

ಯಾಗಿರುವದನ್ನು ಕಾಣುತ್ತೇವೆ .ಕವಿ ಹಾಯ್ಕು ಕಾವ್ಯವನ್ನು ಸೂತ್ರಿಕರಿಸುವ ರೀತಿಯಂತು ವಿಶಿಷ್ಟವಾದುದು 

ಈ ಹಾಯ್ಕು 

ಹದಿನೇಳರಲ್ಲಿ 

ಇಪ್ಪತೆಂಟನಾಡುವದು 

ಎಂದು  ವ್ಯಾಖ್ಯಾನಿಸಿದ್ದಾರೆ. ಡಾ ಎಚ್ ಎಸ್ ಸತ್ಯನಾರಾಯಣ ಅವರ ಈ ಹಾಯ್ಕು ಸಂಕಲನ ದ ಎಲ್ಲ ಹಾಯ್ಕುಗಳು ಅವರ ಅನುಭವ ,ಅಪಾರ ಓದು ಮತ್ತು ಜೀವನ ಶೃದ್ದೆಯ ಪರಿಪಾಕವಾಗಿ ಕಾಣಿಸುತ್ತವೆ. ಸಂಕ್ಷಿಪ್ತವಾದ ವ್ಯಾಪ್ತಿಯಲ್ಲಿ ಹಿರಿದಾದ ಅರ್ಥವನ್ನು ನೀಡುವ, ಹೊಳೆಯಿಸುವ ಕಾರ್ಯವನ್ನು ಹಾಯ್ಕು ಮಾಡುತ್ತ ಬಂದಿದೆ ಎಂದು ವಿಮರ್ಶಕರು ಸೂಚಿಸುತ್ತಾರೆ. ಅದಕ್ಕೆ ಡಾ. ಎಚ್, ಎಸ್,ಸತ್ಯನಾರಾಯಣ ಅವರ ಹೈಕುಗಳೂ ಹೊರತಾಗಿಲ್ಲ. ಅವರ ಅನುಭವ ಮತ್ತು ಓದು ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಲು ಅನುವು ಮಾಡಿಕೊಡಲಿ ಎಂದು ಹಾರೈಸುವದು ಎಲ್ಲ  ಓದುಗರ ಅಭೀಪ್ಸೆಯಾಗಿದೆ.

ಡಾ.ವೈ.ಎಂ.ಯಾಕೊಳ್ಳಿ, ಸವದತ್ತಿ