ಮರ ಹತ್ತದ ಮೀನು

ಮರ ಹತ್ತದ ಮೀನು

ಪುಸ್ತಕದ ಲೇಖಕ/ಕವಿಯ ಹೆಸರು
ವಿನಾಯಕ ಅರಳಸುರಳಿ
ಪ್ರಕಾಶಕರು
ಸಾಹಿತ್ಯ ಲೋಕ ಪಬ್ಲಿಕೇಷನ್ಸ್, ರಾಜಾಜಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. 165.00, ಮುದ್ರಣ: 2022

ಕೆಲ ದಿನಗಳ ಹಿಂದಷ್ಟೇ ಬಂದು ನನ್ನ ಕೈ ಸೇರಿದ 2023 ನೇ ಸಾಲಿನ 'ಈ ಹೊತ್ತಿಗೆ' ಪ್ರಶಸ್ತಿ ಪಡೆದ ಕೃತಿ ವಿನಾಯಕ ಅರಳಸುರಳಿ ಅವರ "ಮರ ಹತ್ತದ ಮೀನು" ಕಥಾ ಸಂಕಲನವನ್ನು ಇಂದು ಓದಿ ಮುಗಿಸಿದೆ. ಅದರ ಕುರಿತಾಗಿ ನನ್ನ ಒಂದಿಷ್ಟು ಅನಿಸಿಕೆಗಳು ಹೀಗಿದೆ...

ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾದ ಎ.ಆರ್ ಮಣಿಕಾಂತ್ ಸರ್ ಅವರ ಮುನ್ನುಡಿ, ಈ ಹೊತ್ತಿಗೆಯ ಪರಿಚಯ ಮತ್ತು ಅದು ನಡೆಸಿಕೊಂಡು ಬರುತ್ತಿರುವ ಸಾರ್ಥಕ ಕಾರ್ಯಗಳು, ಈ ಕಥಾ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ತೀರ್ಪುಗಾರರ ನುಡಿಗಳು, ನಂತರ ಕಥೆ ಹುಟ್ಟಿದ ಬಗ್ಗೆ ಲೇಖಕರು ವಿವರಿಸಿದ ಕಥೆಯನ್ನು ಓದಿ ಮುಗಿಸಿದೆ. ಅಷ್ಟರಲ್ಲಿ ಈ ಪುಸ್ತಕದ ಬಗ್ಗೆ ಒಂದಷ್ಟು ಕುತೂಹಲ ಹುಟ್ಟಿ, ಈ ಪುಸ್ತಕದ ಒಳಗಿರುವ 10 ಕಥೆಗಳಲ್ಲಿ ಯಾವುದು ಚೆನ್ನಾಗಿ ಇರಬಹುದು, ಆ ಕಥೆಗಳಲ್ಲಿಯ ಪಾತ್ರಗಳು ಯಾವುವು, ಎಂದೆಲ್ಲ ತಲೆಯಲ್ಲಿ ಯೋಚನೆ ಶುರುವಾಗಿ ಕಥೆ ಓದಲು ಪ್ರಾರಂಭಿಸಿದೆ.

ಗೋಪಿಯ ಅಜ್ಜಿ: ಕಥೆ ಓದುತ್ತಿದ್ದಂತೆ ಎಲ್ಲಿಯೂ ಬೇಸರವಾಗದಂತೆ ಮುಂದೆ ಮುಂದೆ ಓದಿಸಿಕೊಂಡು ಹೋಯಿತು. ಕಥೆ ಓದಿ ಮುಗಿಸಿದಾಗ ಮುನ್ನುಡಿಯಲ್ಲಿ ಎ.ಆರ್. ಮಣಿಕಾಂತ್ ಸರ್ ಅವರು ಹೇಳಿದಂತೆ ಕಥೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿದರೆ ಇದು ನಮ್ಮದೇ ಮನೆಯ, ನಮ್ಮ ಅಕ್ಕ ಪಕ್ಕದ ಮನೆಯ ಅಜ್ಜಿಯ ಕಥೆಯಂತೆಯೇ ಇದೆ ಅಲ್ಲವಾ ಎನಿಸಿದ್ದಂತೂ ಸುಳ್ಳಲ್ಲ. ಅತ್ತೆ-ಮಾವಂದಿರಿಗೆ ಸೊಸೆ ಜೊತೆ ಎಷ್ಟೇ ಮನಸ್ತಾಪವಿದ್ದರೂ, ಮೊಮ್ಮಕ್ಕಳ ಮೇಲೆ ಅಪಾರ ಪ್ರೀತಿ ಇರುವುದಂತೂ ನಿಜ. ಕಥೆ ಓದಿ ನಾನು ನನ್ನ ಅಜ್ಜಿಯ ಜೊತೆ ಕಳೆದ ನನ್ನ ಬಾಲ್ಯದ ದಿನಗಳು ಕಣ್ಮುಂದೆ ಬಂದವು. ಕಥೆ ಅತ್ಯುತ್ತಮವಾಗಿದೆ.

ಮರ ಹತ್ತದ ಮೀನು: ಈ ಕಥೆಯಲ್ಲಿ ಬರುವ ಗೌತಮನು ಅನುಭವಿಸುವ ಕೀಳರಿಮೆ ಜೊತೆಯಲ್ಲಿರುವ ಜನಗಳಿಂದ ಅನುಭವಿಸುವ ಉದಾಸಿನತೆ, ಕೆಲಸದ ಒತ್ತಡ, ನಮ್ಮ ಕ್ಷೇತ್ರದಲ್ಲಿ ನಾವು ಸಾಧಿಸಬೇಕಾದ ಸಾಧನೆಯಲ್ಲಿ ನಮ್ಮ ಹಿಂದುಳಿಯುವಿಕೆ, ಬಹುಶ: ನಾವೆಲ್ಲರೂ ಒಂದಲ್ಲ ಒಂದು ಸನ್ನಿವೇಶದಲ್ಲಿ ಅನುಭವಿಸಿದ್ದೇವೆ. ಒಬ್ಬ ಇನ್ಶುರೆನ್ಸ್ ಅಡ್ವೈಸರ್ ಆಗಿ ಜನರಿಗೆ ಪಾಲಿಸಿಗಳನ್ನು ಮಾಡಲು ಒಪ್ಪಿಸುವುದು ಎಷ್ಟು ಕಷ್ಟದ ಕೆಲಸವೆಂದು ನನಗೆ ಚೆನ್ನಾಗಿ ಗೊತ್ತು. ಯಾಕೆಂದರೆ ಈ ಜನಗಳಿಗೆ ವಾಹನಗಳಿಗೆ ಇನ್ಶೂರೆನ್ಸ್ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಮನುಷ್ಯನಿಗೂ ಕೂಡ ಇನ್ಶೂರೆನ್ಸ್ ಅವಶ್ಯಕತೆ ಇದೆ ಎಂಬ ಜ್ಞಾನ ಇಲ್ಲ. ಕೆಲವೊಮ್ಮೆ ನಮ್ಮ ಆಸಕ್ತಿಯ ಕ್ಷೇತ್ರವೇ ಬೇರೆ ಇರುತ್ತೆ, ನಾವು ಮಾಡುವ ಉದ್ಯೋಗವೇ ಬೇರೆ ಇರುತ್ತೆ ಹೀಗಾದಾಗ ನಾವು ಎರಡರಲ್ಲೂ ಸೋಲುತ್ತೇವೆ. ಗೌತಮನ ಮನಸ್ಸಿನ ತಳಮಳವನ್ನು ನಮ್ಮದೇ ಪಾತ್ರವೇನೋ ಎಂದು ಓದುಗರಿಗೆ ಅನಿಸುವಂತೆ ಕಥೆ ಬರೆದಿದ್ದಾರೆ ಲೇಖಕರು.

ಕೆಂಪು ಕುಂಕುಮ ಕಪ್ಪು ಕುಂಕುಮ: ಈ ಕತೆಯಲ್ಲಿ ಬರುವ ನಾಗರಯ್ಯನ ಪಾತ್ರದ ಬಗ್ಗೆ ಓದಿ ನಾನು ಚಿಕ್ಕವನಿದ್ದಾಗ ನಮ್ಮ ಹಳ್ಳಿಗಳಲ್ಲಿ ಬರುತ್ತಿದ್ದ ಮುತ್ತು ಮಾರುವವರು, ಸುಡುಗಾಡು ಸಿದ್ದರು, ಹೇಳವರು, ಸಾರಯ್ಯನವರು, ಇವರುಗಳೆಲ್ಲರ ದೃಶ್ಯಗಳು ಕಣ್ಮುಂದೆ ಬಂದವು. ಈಗ ಅವರ್ಯಾರು ಬರುತ್ತಿಲ್ಲ, ಬರ ಬರುತ್ತಾ ಎಲ್ಲರೂ ಬರುವುದನ್ನು ನಿಲ್ಲಿಸಿದರು, ಈಗ ಅವರ ವಂಶಸ್ಥರು ಬೇರೆ ಬೇರೆ ವ್ಯಾಪಾರಗಳನ್ನು ಮಾಡುತ್ತಿದ್ದಾರೆ. ನಾಗರಯ್ಯನು ತನ್ನ ಜೀವನ ಪರ್ಯಂತ ಯಾರಿಗೂ ಕೇಡು ಬಯಸದೆ, ಯಾರಿಂದಲೂ ಯಾವ ಅಪೇಕ್ಷೆಯನ್ನೂ ಇಡದೇ ಬದುಕಿದ ಜೀವ ವಿನಾಕಾರಣ ನಿಷ್ಕಾಋಣವಾಗಿ ಪರರಿಗೋಸ್ಕರ ಜೀವ ಕಳೆದುಕೊಂಡಿತು. ಕಥೆಯಲ್ಲಿನ ಸಂಭಾಷಣೆ, ಪಾತ್ರದ ಉಡುಗೆ ತೊಡುಗೆಗೆಳ ಕುರಿತ ವಿವರಣೆ, ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಚಿಕಿತ್ಸೆ: ಹೆಣ್ಣು, ಹೊನ್ನು, ಮಣ್ಣು ಇವುಗಳ ಜೊತೆ ಇದ್ದು ಕೂಡ ಇವುಗಳ ನಶೆಯನ್ನು ತಲೆಗೇರಿಸಿಕೊಳ್ಳದೆ ಬದುಕಿದವರು ತುಂಬಾ ವಿರಳ ಎನ್ನಬಹುದು. ಒಂದು ಕಾಲದಲ್ಲಿ ಬಡವನಾಗಿ ಕಷ್ಟದ ಜೀವನ ನಡೆಸಿದ್ದರೂ ಕೂಡಾ ಒಂದಿಷ್ಟು ದುಡ್ಡು,‌ ಆಸ್ತಿ ಬಂದಮೇಲೆ ಮನುಷ್ಯ ಹೀಗೆಲ್ಲ ಬದಲಾಗುತ್ತಾನೆ ಎಂಬುದು ಕಥೆಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ ಲೇಖಕರು. ಸುಧಾಕರನಿಗೆ ಶ್ರೀಮಂತಿಕೆ ಇದ್ದರೂ, ಬೇಕೆನಿಸಿದ್ದೆಲ್ಲವನ್ನು ಕೊಂಡುಕೊಳ್ಳುವಷ್ಟು ಹಣವಿದ್ದರೂ, ಅವನಿಂದ ಏನು ಮಾಡಲಾಗದಂತಹ, ವಾಸಿ ಮಾಡಿಕೊಳ್ಳಲಾಗದಂತಹ ಕಾಯಿಲೆ ದೇವರು ಅವನಿಗೆ ಕೊಟ್ಟನು. ಒಂದು ರೀತಿಯಲ್ಲಿ ಅವನ ತಲೆಗೇರಿದ ಸಿರಿವಂತಿಕೆಯ ಮದ ಇಳಿಸಲು ದೇವರೇ ರೂಪಿಸಿದ ಯೋಜನೆ ಅದು ಆಗಿರಬಹುದು. ಕೊನೆಗಾಲದಲ್ಲಿ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಮನುಷ್ಯ ತಾನು ಎಂತಹ ವೈಭೋಗದ ಜೀವನ ನಡೆಸುತ್ತಿದ್ದರೂ ತಾನು ಸಾಯುತ್ತೇನೆ ಎಂದು ಗೊತ್ತಾದಾಗ ಎಂತಹ ಪರಿಸ್ಥಿತಿಗೂ ಕೂಡ ಒಗ್ಗಿಕೊಳ್ಳುತ್ತಾನೆ ಎಂಬುದು ಕಥೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.

ಭೂಮಿ: ಭೂಮಿಯ ಕಥೆಯಂತೂ ತುಂಬಾ ಚೆನ್ನಾಗಿದೆ. ಹುಟ್ಟುವಾಗಲೇ 'ಅಯ್ಯೋ ಹೆಣ್ಣು' ಎಂದು ಅನ್ನಿಸಿಕೊಂಡು ಹುಟ್ಟುವ ಹೆಣ್ಣು, ಜೀವನದ ಪ್ರತಿ ಹಂತದಲ್ಲೂ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಭೂಮಿ ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡು ದೊಡ್ಡಪ್ಪನ ಬಂಧನದೊಳಗೆ ಬೆಳೆದು, ಒಂದು ಸಣ್ಣ ಆಟಿಕೆಗಾಗಿ, ತಿಂಡಿಗಾಗಿ ಆಸೆಗಣ್ಣಿನಿಂದ ನೋಡುವ ಪರಿಸ್ಥಿತಿ ಓದುಗರ ಮನಸ್ಸು ಮರುಗಿಸುವಂತಿದೆ. ಮುಂದೆ ದೊಡ್ಡವಳಾದ ಮೇಲೆ ಸ್ವತಂತ್ರವಾಗಿ ಜೀವನ ನಡೆಸಲು ಮತ್ತು ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಎಷ್ಟೆಲ್ಲಾ ಕಷ್ಟ ಅನುಭವಿಸಬೇಕಾಯಿತು ಎಂಬುದನ್ನು ಹಾಗೂ ಜೀವನದ ಪ್ರತಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಎಷ್ಟೆಲ್ಲ ಯೋಚಿಸಬೇಕಾಯಿತು ಎಂಬುದು ಕಥೆಯಲ್ಲಿ ಚೆನ್ನಾಗಿ ಮೂಡಿ ಬಂದಿದೆ.

ನೆಲೆ: ಬಾಲ್ಯದಿಂದ ಯೌವ್ವನಕ್ಕೆ ಕಾಲಿಟ್ಟು ಒಂದು ಹಂತದ ವಿದ್ಯಾಭ್ಯಾಸ ಮುಗಿಸಿದ ಮೇಲೆ ಮತ್ತಷ್ಟು ಉನ್ನತ ವ್ಯಾಸಂಗ ಮಾಡಿ ಯಾವುದಾದರೂಂದು ಸರಕಾರಿ ನೌಕರಿ ಪಡೆದುಕೊಂಡರೆ ಮುಂದಿನ ಜೀವನ ಪರವಾಗಿಲ್ಲ ಎನಿಸುತ್ತದೆ, ಆದರೆ ಅಲ್ಪಸ್ವಲ್ಪ ಓದಿ ಸ್ವಂತ ವ್ಯಾಪಾರವೋ ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ತೊಡಗಿಸಿಕೊಂಡರೆ ಮಾತ್ರ ಜೀವನದಲ್ಲಿ ನೆಲೆ ಕಂಡುಕೊಳ್ಳುವುದು ತುಂಬಾ ಕಷ್ಟ. ಯಾಕೆಂದರೆ ಆ ಖಾಸಗಿ ದುಡಿಮೆಯಿಂದ ಬರುವ ಅಲ್ಪ ಆದಾಯದಿಂದ ಜೀವನದ ಯಾವ ಆಶೆಗಳನ್ನೂ ಈಡೇರಿಸಿಕೊಳ್ಳಲು ಸಾಧ್ಯವಾಗದು. ಇತ್ತ ಹಳ್ಳಿಯ ಕಡೆ ಹೋಗಿ, ತೋಟದ ಕೆಲಸಗಳನ್ನು ಮಾಡಬೇಕೆಂದರೆ ಅದೂ ಆಗುವುದಿಲ್ಲ ಯಾಕೆಂದರೆ ಸಮಯಕ್ಕೆ ಸರಿಯಾಗಿ ಮಳೆ ಬಾರದೆ, ಮಳೆ ಬಂದರೂ ದಿನಕ್ಕೊಂದು ಹೊಸ ಹೊಸ ರೋಗಗಳ ಬಾಧೆಯಿಂದ ಒಳ್ಳೆ ಬೆಳೆ ಬಾರದೆ ಇಂದು ಹಳ್ಳಿಯ ಜೀವನವೂ ತುಂಬಾ ಕಷ್ಟಕರವಾಗಿದೆ. ಹೀಗಾಗಿ ನಾವು ಪಟ್ಟಣದಲ್ಲಿ ವಾಸಿಸಬೇಕು ಹಳ್ಳಿಯಲ್ಲಿ ಜೀವನ ಕಟ್ಟಿಕೊಳ್ಳಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಶಶಿರರು ತನ್ನ ಬದುಕನ್ನು ಕಟ್ಟಿಕೊಳ್ಳಲು ಪರದಾಡುವಂಥ ಪರಿಸ್ಥಿತಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಾಗದ ಚಂಚಲತೆ ಇದೆಲ್ಲವನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಲೇಖಕರು. ಅದಲ್ಲದೇ ಮಲೆನಾಡಿನ ಹಳ್ಳಿಯ ಬದುಕು, ತೋಟ, ಮಳೆಗಾಲದಲ್ಲಿ ಅಲ್ಲಿ ಎಡೆಬಿಡದೆ ಸುರಿಯುವ ಮಳೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಲೇಖಕರು. ನಾನು ಬಯಲು ಸೀಮೆಯವನಾದರೂ ನನ್ನ ಮಡದಿ ಮಲೆನಾಡಿನವಳು ಹೀಗಾಗಿ ಅಲ್ಲಿಯ ವಾತಾವರಣವನ್ನು ನಾನು ಬಲ್ಲೆ

ಸ್ವಯಂ: ಇಂದಿನ ದಿನಮಾನಗಳಲ್ಲಿ ಯಾರಿಗೆ ಯಾವಾಗ ಯಾವ ರೋಗ ಬರುತ್ತದೆಂದು ಹೇಳಲು ಸಾಧ್ಯವೇ ಇಲ್ಲ. ಹಿಂದೆಲ್ಲಾ ಹಾರ್ಟ್ ಅಟ್ಯಾಕ್, ಬಿಪಿ ಮುಂತಾದುವೆಲ್ಲ ಜಾಸ್ತಿ ದಪ್ಪ ಇರುವವರಿಗೆ, ವಯಸ್ಸಾದವರಿಗೆ ಬರುವ ಕಾಯಿಲೆಗಳಾಗಿದ್ದವು. ಆದರೆ ಇಂದು ಹುಟ್ಟಿರುವ ಕೂಸಿಗೂ ಸಹ ಹಾರ್ಟ್ ನಲ್ಲಿ ತೊಂದರೆ ಇದೆ ಸರ್ಜರಿ ಮಾಡಬೇಕು ಎನ್ನುವ ವಿಷಯ ಕೇಳಿದ್ದೇವೆ. ಹೀಗಾಗಿ ನಾವು ನಮ್ಮ ಆರೋಗ್ಯದ ಕುರಿತಾಗಿ ಎಷ್ಟೇ ಮುತುವರ್ಜಿ ವಹಿಸಿದರೂ ಕಡಿಮೆಯೇ. ನಾರಾಯಣನಿಗೆ ಹಠಾತ್ತಾಗಿ ಬ್ರೇನ್ ಹ್ಯಾಮರೇಜ್ ಆಗಿ ಸ್ಟ್ರೋಕ್ ಆಗುವುದು, ಅದರಿಂದಾಗಿ ಮಂದಾರ ಮತ್ತು ಶರತ್ ಗಲಿಬಿಲಿಗೊಂಡು, ಒಮ್ಮೇಲೆ ಹೀಗೇಕಾಯಿತು ಎಂದು ಚಿಂತೆಗೊಳಗಾಗಿರುವುದು ಆ ಕ್ಷಣದ ಪರಿಸ್ಥಿತಿಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ಲೇಖಕರು ಕಥೆ ಹೆಣೆದಿದ್ದಾರೆ. ನಮ್ಮ ಕೆಲವು ರೋಗಗಳಿಗೆ ಅನುವಂಶಿಕತೆ ಕಾರಣವಿದ್ದರೂ ಹೆಚ್ಚಿನ ರೋಗಗಳಿಗೆ ನಾವೇ ಸ್ವಯಂ ಹೊಣೆಗಾರರಾಗಿದ್ದೇವೆ ಎಂಬುದನ್ನು ಲೇಖಕರು ಕಥೆಯಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ.

ಸಕಲಕಲಾವಲ್ಲಭ: ಅನಿಲ ಕಾಕಾ ಜೀವನ ನಿರ್ವಹಣೆಗಾಗಿ ಊರಿಂದ ಊರಿಗೆ ಅಲೆದಾಡುವುದು, ಪ್ರತಿ ಊರಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡುವುದು, ಮಾಡಿದ ಪ್ರತಿ ಕೆಲಸದಲ್ಲಿಯೂ ಸೋಲಿನ ಅನುಭವ ಕಾಣುವುದು, ಮನುಷ್ಯ ಮೂರು ದಿನದ ಈ ಬಾಳಿನಲ್ಲಿ ಬದುಕು ನಡೆಸಲು ಎಷ್ಟೆಲ್ಲ ಕಷ್ಟ ಪಡಬೇಕಾಗುತ್ತದೆ ಎಂಬುದನ್ನು ಮನಸ್ಸಿಗೆ ನಾಟುವಂತೆ ಲೇಖಕರು ಕಥೆ ಬರೆದಿದ್ದಾರೆ. ಅನಿಲ ಕಾಕ ಹೇಳುವಂತೆ ದುಡ್ಡಿರುವವರಿಗೆ, ಸಿರಿವಂತರಿಗೆ ಯಾರೂ ಯಾವ ಪ್ರಶ್ನೆಯನ್ನು ಕೇಳುವುದಿಲ್ಲ, ಅವರು ಹೇಗಿದ್ದರೂ ಸರಿಯೇ. ಆದರೆ ಬಡವರಿಗೆ ಮಾತ್ರ ಅವರು ಹೇಗಿದ್ದರೂ, ಎಷ್ಟೇ ನ್ಯಾಯಯುತವಾಗಿ ಜೀವನ ನಡೆಸಿದರು ಜನರಿಂದ ಕಟು ಮಾತುಗಳು ತಪ್ಪದು. ಅದರಂತೆ ಅನಿಲ ಕಾಕಾ ಎಲ್ಲಾ ಕಡೆಯೂ ನಿಷ್ಠೆಯಿಂದ ಕೆಲಸ ಮಾಡಿಯೂ ಸೋಲು ಅನುಭವಿಸಬೇಕಾಯಿತು, ಎಲ್ಲರಿಂದ ಮೋಸಕ್ಕೊಳಗಾಗಬೇಕಾಯಿತು. ಇಷ್ಟೆಲ್ಲಾ ಸೋಲಾದರೂ ಸಕಲಕಲಾವಲ್ಲಭನಾದ ಅನೀಲ ಕಾಕಾ ಅವರ ಗಟ್ಟಿತನ, ಬದುಕಿರುವವರೆಗೂ ಸೋಲೊಪ್ಪಿಕೊಳ್ಳಲಾರೆ ಎಂಬ ಅವರ ಮನಸ್ಥಿತಿ ತುಂಬಾ ಇಷ್ಟ ಆಯಿತು. ಕಥೆಯ ಕೊನೆಯಲ್ಲಿ "ನೀ ತಪ್ಪು ತಿಳ್ಕೊಳ್ಳಲ್ಲ ಅಂದ್ರೆ ಒಂದಿನ್ನೂರು ರೂಪಾಯಿ ಕೊಡ್ತಿ ಏನು ಸಣ್ಣದೊಂದು ಖರ್ಚಿಗೆ ಬೇಕಿತ್ತು, ನಾ ನಿನಗ ನಾಳಿನೇ ವಾಪಸ್ ಕೊಡ್ತೀನಿ" ಎಂದು ಅನಿಲ ಕಾಕಾ ಕೇಳುವುದು ಕಥೆ ಓದುತ್ತಿದ್ದ ನನ್ನ ಕಣ್ಣಲ್ಲಿ ನನಗೆ ಗೊತ್ತಿಲ್ಲದೇ ಕಣ್ಣೀರು ತರಿಸಿತು. ಬದುಕು ಎಂಥವರನ್ನು ಕೂಡ ಒಮ್ಮೊಮ್ಮೆ ಎಂತ ಸ್ಥಿತಿಗೆ ತಂದುಬಿಡುತ್ತದಲ್ಲವಾ..? ಕಥೆ ನೈಜವಾಗಿ, ಅದ್ಭುತವಾಗಿ ಬರೆದಿದ್ದಾರೆ ಲೇಖಕರು.

ಒಣ ಮರದ ಹಸಿರೆಲೆ: ಈ ಕಥೆಯಲ್ಲಿ ಬರುವ ಪರಮನ ಮುಗ್ಧತೆ, ಪರಮನು ಪಟ್ಟಣ ಬಿಟ್ಟು ಹಳ್ಳಿಗೆ ಬಂದು ತನ್ನ ಅನಾರೋಗ್ಯ ಪೀಡಿತ ತಂದೆಯ ಕೊನೆಗಾಲದವರೆಗೂ ಪ್ರೀತಿಯಿಂದ ಅವರ ಸೇವೆಯನ್ನು ಮಾಡುವುದು, ಇಷ್ಟವಾಯಿತು. ಪರಮನ ಎದುರು ಅವನಂತೆ ಇದ್ದು, ಬೆನ್ನ ಹಿಂದೆ ಆಡಿಕೊಂಡು ನಗುವ ಜನರು, ಅವನೆಡೆಗಿನ ಅವರ ತಾತ್ಸಾರ ನೋಡಿ ಈಗಿನ ಜನಗಳೇ ಹೀಗೇ ಅಲ್ಲವಾ ಅನಿಸಿತು‌‌. ಮನಷ್ಯ ಎಷ್ಟೇ ಮುಗ್ಧನಾಗಿದ್ದರೂ ವಾಸ್ತವವನ್ನು ಅರಿತು ಬಾಳಬೇಕು ಇಲ್ಲದಿದ್ದರೇ ನಮ್ಮ ಮನಸಿಗೆ ನಾವೇ ನೋವುಂಟುಮಾಡಿಕೊಳ್ಳಬೇಕಾಗುತ್ತದೆಂಬುದನ್ನು ಕಥೆ ಓದಿ ತಿಳಿಯಬಹುದು. ಈ ಕಥೆಗೆ 'ಒಣ ಮರದ ಹಸಿರೆಲೆ' ಎಂಬುದಕ್ಕಿಂತ, 'ತಾತ್ಸಾರ' ಅಥವಾ 'ನಿರಾಸೆ' ಎಂಬ ಶೀರ್ಷಿಕೆ ಕೊಡಬಹುದಾಗಿತ್ತೇನೋ ಎಂದು ನನ್ನ ಅಭಿಪ್ರಾಯ. ಕಥೆ ಚೆನ್ನಾಗಿದೆ‌.

ಗೋಡೆ: 'ಹುಟ್ತಾ ಹುಟ್ತಾ ಅಣ್ತಮ್ಮಂದಿರು, ಬೆಳೀತಾ ಬೆಳೀತಾ ದಾಯಾದಿಗಳು' ಎಂತ ಗಾದೆ ಮಾತು ಸುಮ್ನೇ ಹೇಳಿದ್ದಾರಾ ನಮ್ಮ ಹಿರಿಯರು? ಚಿಕ್ಕವರಿದ್ದಾಗ ಎಷ್ಟೇ ಅನ್ಯೋನ್ಯತೆಯಿಂದ ಕೂಡಿ ಆಡಿ ಬೆಳೆದರೂ ಮದುವೆಯ ನಂತರ, ಮಕ್ಕಳು ಹುಟ್ಟಿದ ಮೇಲೆ ಅಣ್ಣ-ತಮ್ಮಂದಿರ ಮಧ್ಯೆ ಸಣ್ಣ ಸಣ್ಣ ಕಾರಣಕ್ಕೂ ಮನಸ್ತಾಪ, ಕಿರಿಕಿರಿ ಶುರುವಾಗುತ್ತದೆ. ಅದಕ್ಕೆ ಹೊರಗಿನಿಂದ ಬಂದ ಹೆಣ್ಣು ಮಕ್ಕಳೇ ಕಾರಣವೆಂಬುದು ಎಷ್ಟು ನಿಜವೋ ಗೊತ್ತಿಲ್ಲ. ಅದರೆ ಇದು ಎಲ್ಲರ ಮನೆಗಳ ಸಮಸ್ಯೆ ಎನ್ನುವುದಂತೂ ಸತ್ಯ. ಹೀಗೆ ಒಂದಾಗಿದ್ದ ಮನೆಗಳ ನಡುವೆ, ಮನಗಳ ನಡುವೆ ಗೋಡೆ ಎದ್ದು ನಿಲ್ಲುತ್ತದೆ.

ವಿನಾಯಕ ಅರಳಸುರಳಿ ಯವರ "ಮರ ಹತ್ತದ ಮೀನು" ಕಥಾ ಸಂಕಲನದ 10 ಕಥೆಗಳನ್ನು ಓದಿ ಮುಗಿಸಿದೆ. ತುಂಬಾ ಚೆನ್ನಾಗಿದೆ. ಮತ್ತೆ ಮತ್ತೆ ಓದಬೇಕೆನಿಸುವ ಪುಸ್ತಕ ಇದಾಗಿದೆ. ಇಂಥ ಕಥಾಸಂಕಲನವನ್ನು ಓದುಗರಿಗೆ ಕೊಟ್ಟ ಲೇಖಕರಿಗೆ ಧನ್ಯವಾದಗಳು. ಅವರ ಇನ್ನಷ್ಟು ಕಥಾ ಸಂಕಲನಗಳನ್ನು ಓದಲು ಕಾತುರನಾಗಿದ್ದೇನೆ.

-ಶಾಂತಕುಮಾರ್ ರಾಚೋಟಿ