ಮರ ಹತ್ತದ ಮೀನು

ಮರ ಹತ್ತದ ಮೀನು

ಪುಸ್ತಕದ ಲೇಖಕ/ಕವಿಯ ಹೆಸರು
ವಿನಾಯಕ ಅರಳಸುರಳಿ
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಷನ್ಸ್, ರಾಜಾಜಿ ನಗರ, ಬೆಂಗಳೂರು-೫೬೦೦೧೦, ಮೊ: ೯೯೪೫೯೩೯೪೩೬
ಪುಸ್ತಕದ ಬೆಲೆ
ರೂ. ೧೬೫.೦೦, ಮುದ್ರಣ: ೨೦೨೨

ಉತ್ತಮ ಕಥೆಗಾರ ಎಂದು ಹೆಸರುವಾಸಿಯಾಗಿರುವ ವಿನಾಯಕ ಅರಳಸುರಳಿಯವರು ಬರೆದ ಕಥೆಗಳ ಸಂಕಲನ ‘ಮರ ಹತ್ತದ ಮೀನು’. ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗಬೇಕಾಗುತ್ತದೆ, ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ, ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ ಅರಳಸುರಳಿ ಅವರು ಅನುಭವಿಸಿದ್ದಾರೆ ಅದರ ಪರಿಣಾಮ ಈ ಸಂಕಲನದ ಕಥೆಗಳಲ್ಲಿ ಡಾಳಾಗಿ ಕಾಣಿಸುತ್ತದೆ. ಒಂದೊಂದು ಕಥೆಯನ್ನು ಓದಿ ಮುಗಿಸಿದಾಗಲೂ, ಇಂಥದೇ ಪ್ರಸಂಗ ಅಲ್ಲೆಲ್ಲೋ ನಡೆದಿತ್ತಲ್ಲವಾ ಎಂದು ಯೋಚಿಸುವಂತಾಗುತ್ತದೆ. ಹತ್ತು ಕಥೆಗಳ ಈ ಸಂಕಲನದಲ್ಲಿ ಮನುಷ್ಯನ ಅಹಮಿಕೆ, ಅನುಮಾನ, ದರ್ಪ, ಅಸಹಾಯಕತೆ, ತಣ್ಣಗಿನ ಕ್ರೌರ್ಯ, ತಲೆಮಾರು ಕಳೆದರೂ ತಣಿಯದ ದ್ವೇಷ, ಮತ್ತೊಬ್ಬರ ಏಳಿಗೆಯನ್ನು ಕಂಡಾಗ ಇದ್ದಕ್ಕಿದ್ದಂತೆ ಉಂಟಾಗುವ ಅಸಹನೆ, ಪದೇ ಪದೇ ಸುಳ್ಳಾಗಿ ಹೋಗುವ ನಿರೀಕ್ಷೆಗಳು, ಯಾರಿಗೂ ಕಾಯದೆ ಹೋಗಿ ಬಿಡುವ ಪ್ರಾಣ.. ಹೀಗೆ ಮನುಷ್ಯನ ಮಿತಿಗಳಿಗೆ ಪುರಾವೆ ಒದಗಿಸುವ ಪ್ರಸಂಗಗಳು ಎಲ್ಲಾ ಕಡೆಗಳಲ್ಲೂ ಬರುತ್ತವೆ. ಪ್ರತಿಯೊಂದು ಕಥೆಯೂ ತನ್ನದೇ ರೀತಿಯಲ್ಲಿ ಮುಗಿದು ಲೈಫು ಇಷ್ಟೇನೇ! ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ ಎಂದು ಮಣಿಕಾಂತ್‌ ಎ.ಆರ್. ಬೆನ್ನುಡಿಯಲ್ಲಿ ಬರೆದಿದ್ದಾರೆ.

ವಿನಾಯಕ ಅರಳಸುರಳಿಯವರ ‘ಮರ ಹತ್ತದ ಮೀನು’ ಕಥಾಸಂಕಲನವು ಹತ್ತು ಕಥೆಗಳು ಓದುಗರ ಮನದಾಳಕ್ಕಿಳಿಯುವ, ಭಾವನೆಗಳನ್ನು ಕೆದಕಿ, ಕಣ್ಣಂಚಿನಲ್ಲಿ ತೇವವನ್ನು ತಂದಿಡುವ ಕೃತಿ. ಈ ಕಥೆಗಳು ಬದುಕಿನ ಕಠಿಣ ಸತ್ಯಗಳನ್ನು ಒಡ್ಡುವ ಕನ್ನಡಿಯಾಗಿವೆ; ಒಮ್ಮೆ ಓದಿದರೆ ಮನಸ್ಸಿನಿಂದ ಮಾಸದಂತಿಲ್ಲ. ಹಿಂದೆ ‘ನವಿಲುಗರಿ ಮರಿಹಾಕಿತು’ ಓದಿದಾಗ ಉಂಟಾದ ಭಾವತೀವ್ರತೆ, ಈ ಪುಸ್ತಕದಲ್ಲಿಯೂ ಮತ್ತೆ ಕಾಣಿಸಿತು. ಈ ಕಥೆಗಳು ನಮ್ಮ ಸುತ್ತಮುತ್ತಲಿನ ಜೀವನದ ಕ್ಷಣಗಳನ್ನೇ ತೋರಿಸುತ್ತವೆ. ಒಂದಿನಿತೂ ಉತ್ಪ್ರೇಕ್ಷೆಯಿಲ್ಲದ, ಬೇಡವೆನಿಸುವ ವಿವರಣೆಯಿಲ್ಲದ ಕಥೆಗಳಿವು; ಎಲ್ಲವೂ ಜೀವನದ ನೇರ ಚಿತ್ರಣ.

‘ಗೋಪಿಯ ಅಜ್ಜಿ’ ಕಥೆಯಲ್ಲಿ ಇಳಿವಯಸ್ಸಿನವರಿಗೆ ಮಕ್ಕಳಿಂದ ದೊರಕದ ಆಸರೆಯ ಕೊರತೆಯನ್ನು, ಅಜ್ಜಿ-ಮೊಮ್ಮಗನ ಸೂಕ್ಷ್ಮ ಬಾಂಧವ್ಯದೊಂದಿಗೆ ಚಿತ್ರಿಸಲಾಗಿದೆ. ‘ಮರ ಹತ್ತದ ಮೀನು’ ಶೀರ್ಷಿಕೆಯ ಕಥೆಯಲ್ಲಿ ಸಾಮರ್ಥ್ಯವಿದ್ದರೂ ಕೆಲಸದ ಜಾಗದಲ್ಲಿ ಕಡೆಗಣನೆಗೊಳಗಾಗುವ ವ್ಯಕ್ತಿಯೊಬ್ಬನ ಒಳಗಿನ ಹೋರಾಟವನ್ನು ಗಾಢವಾಗಿ ಬಿಡಿಸಲಾಗಿದೆ. ‘ಕೆಂಪು ಕುಂಕುಮ - ಕಪ್ಪು ಕುಂಕುಮ’ ಕಥೆಯ ಅಲೆಮಾರಿಯೊಬ್ಬನ ಜೀವನದ ಏಕಾಂಗಿತನ, “ನಾನು ಮನೇಲಿದ್ರೂ ಒಂದೇ, ಸಮಾಧಿಯಲ್ಲಿದ್ರೂ ಒಂದೇ” ಎಂಬ ಮಾತಿನೊಂದಿಗೆ ಹೃದಯಕ್ಕೆ ಚುಚ್ಚುವಂತೆ ಮೂಡಿಬಂದಿದೆ.

‘ಚಿಕಿತ್ಸೆ’ ಕಥೆಯು ಅಹಂಕಾರದಿಂದ ಕೂಡಿದ ಮನುಷ್ಯನೊಬ್ಬನ ಮನಸ್ಸಿನ ಪರಿವರ್ತನೆಯನ್ನು ತೋರಿಸುತ್ತದೆ. ‘ಭೂಮಿ’ಯಲ್ಲಿ ತಾಯಿಯ ಬದುಕಿಗಾಗಿ ತನ್ನ ಮನಸ್ಥಿತಿಗೆ ವಿರುದ್ಧವಾದ ವ್ಯಕ್ತಿಯನ್ನು ವರಿಸಲು ಹೊರಟ ಹುಡುಗಿಯ ಕಥೆಯಿದೆ. ‘ನೆಲೆ’ ಊರಿನ ಮತ್ತು ಪೇಟೆಯ ಒಡಲಾಟದಲ್ಲಿ ಸಿಕ್ಕಿಕೊಂಡವನ ಕತೆಯಾದರೆ, ‘ಸ್ವಯಂ’ ಕಥೆಯು ಒಂದೇ ಒಂದು ಋಣಾತ್ಮಕ ಭಾವನೆಯಿಂದ ಬದುಕು ಹಾಳಾಗುವುದನ್ನು ಚಿತ್ರಿಸುತ್ತದೆ. ‘ಸಕಲ ಕಲಾ ವಲ್ಲಭ’ ಕನಕದಾಸರ “ಎಲ್ಲರೂ ಮಾಡುವುದು ಹೊಟ್ಟೆಗಾಗಿ” ಎಂಬ ಸಾಲಿನಂತೆ ಬದುಕಿನ ಸತ್ಯವನ್ನು ಎತ್ತಿಹೇಳುತ್ತದೆ. ‘ಒಣ ಮರದ ಹಸಿರೆಲೆ’ಯಲ್ಲಿ ತಂದೆಗೆ ಮಗನೇ ತಾಯಿಯಾಗುವ ಭಾವುಕ ಕಥನವಿದೆ; ಈ ಕಥೆ ಓದುವಾಗ ಕಣ್ಣೀರು ತಡೆಯಲಾಗದು. ಕೊನೆಯ ಕಥೆ ‘ಗೋಡೆ’ ತಲೆಮಾರುಗಳಿಗೂ ಮೀರಿದ ದ್ವೇಷದ ಕಾಯಿಲೆಯನ್ನು ತೆರೆದಿಡುತ್ತದೆ.

ವಿನಾಯಕರ ಭಾಷೆಯ ಬಳಕೆಯ ಸೂಕ್ಷ್ಮತೆ, ಸನ್ನಿವೇಶಕ್ಕೆ ತಕ್ಕಂತೆ ಶಬ್ದಗಳನ್ನು ಜೋಡಿಸುವ ಕೌಶಲ, ಕಥಾಪಾತ್ರಗಳ ಜೀವಂತಿಕೆ—ಇವೆಲ್ಲವೂ ಓದುಗರನ್ನು ಕಥೆಯೊಳಗೆ ಎಳೆದುಕೊಂಡು ಬಿಡುತ್ತವೆ. ಈ ಕಥೆಗಳು ಲೇಖಕರ ಸ್ವಂತ ಅನುಭವದಿಂದ ರೂಪಗೊಂಡಿರಬೇಕು ಎನಿಸುತ್ತದೆ; ಇಲ್ಲವಾದರೆ ಇಂತಹ ಭಾವತೀವ್ರತೆಯ ಕಥನ ಸಾಧ್ಯವೇ? ವೈವಿಧ್ಯಮಯ ಕಥಾವಸ್ತು, ಗಾಢವಾದ ಚಿತ್ರಣ, ಮನಕಾಡುವ ಪಾತ್ರಗಳು—‘ಮರ ಹತ್ತದ ಮೀನು’ ಓದುಗರಿಗೆ ಒಂದು ಭಾವನಾತ್ಮಕ ಪಯಣವನ್ನೇ ಉಣಬಡಿಸುತ್ತದೆ. ೧೫೦ ಪುಟಗಳ ಈ ಪುಟ್ಟ ಸಂಕಲನವು ಉತ್ತಮ ಕಥೆಗಳನ್ನು ಓದಲು ಬಯಸುವವರಿಗೆ ಇಷ್ಟವಾದೀತು.