ಮಲೆನಾಡಿನಲ್ಲಿ ಸುತ್ತಾಡಿದಾಗ
*ಆರ್. ರಂಗಸ್ವಾಮಿಯವರ "ಮಲೆನಾಡಿನಲ್ಲಿ ಸುತ್ತಾಡಿದಾಗ"*
"ಮಲೆನಾಡಿನಲ್ಲಿ ಸುತ್ತಾಡಿದಾಗ", ಮೈಸೂರಿನ ಆರ್. ರಂಗಸ್ವಾಮಿ (" ರವಿ - ಕಿರಣ್") ಇವರ ಪ್ರವಾಸನುಭವದ ಕೃತಿ. ಇದು ಲೇಖಕರ ಮೊದಲ ಕೃತಿಯೂ ಹೌದು. 2013ರಲ್ಲಿ ಲೇಖಕರ ಪತ್ರಮಿತ್ರ ಮಂಗಳೂರು ಪದವಿನಂಗಡಿಯ ಕೆ. ಪಿ. ಅಶ್ವಿನ್ ರಾವ್ ಅವರು ಹಾಗೂ ಲೇಖಕರು ಜೊತೆಯಾಗಿ ಪ್ರಕಾಶಿಸಿದ, 80 + 4 ಪುಟಗಳ ಕೃತಿಗೆ ಸಾಂಕೇತಿಕವಾಗಿ ಹತ್ತು ರೂಪಾಯಿ ಬೆಲೆ. ಕೃತಿಯಲ್ಲಿ ಲೇಖಕರ "ಸ್ನೇಹದ ನುಡಿಗಳು" ಇವೆ. ಅಶ್ವಿನ್ ರಾವ್ ಅವರ ಬೆನ್ನುಡಿ ಇವೆ. ಇವೆರಡನ್ನೂ ಓದಿದರೆ ಮಾತ್ರ ಕೃತಿ ಮತ್ತು ಕೃತಿಗಾರರು ಹೆಚ್ಚು ಅರ್ಥವಾಗಲು ಸಾಧ್ಯ.
ಕೃತಿಯಲ್ಲಿ ಒಟ್ಟು ಒಂಭತ್ತು ಸರಣಿ ಲೇಖನಗಳಿವೆ. ವಿಶೇಷವೆಂದರೆ, ಇಲ್ಲಿರುವ ಯಾವುದೇ ಲೇಖನವನ್ನು ಲೇಖಕರು ಕೃತಿ ಪ್ರಕಟಣೆಗಾಗಿ ಸಿದ್ದಪಡಿಸಿದ ಲೇಖನವಲ್ಲ. ಪ್ರವಾಸಿಯಾಗಿರುವ ಆರ್. ರಂಗಸ್ವಾಮಿಯವರು ತಮ್ಮ ಮಿತ್ರರ ಜೊತೆಗೆ ಮಲೆನಾಡಿನ ಊರಾದ ಬೈಂದೂರಿನಲ್ಲಿದ್ದ ಪತ್ರಮಿತ್ರರ ಮನೆಗೆ ಹೋಗಿ ಅಲ್ಲಿದ್ದುಕೊಂಡು ಅಲ್ಲಿನ ಮಿತ್ರರೊಂದಿಗೆ ಬೈಂದೂರು ಬೀಚ್, ಜೋಗ ಮತ್ತು ಮುರ್ಡೇಶ್ವರ ಮುಂತಾದ ಪ್ರವಾಸೀ ತಾಣಗಳನ್ನು ಸಂದರ್ಶಿಸಿದ ಸಹಜ ಸುಂದರವಾದ ಅನುಭವ ಕಥನವಿದು.
ಇಲ್ಲಿರುವ ಲೇಖನಗಳು ಕೃತಿಯಾಗಿ ಪ್ರಕಟವಾಗಿದ್ದು 2013ರಲ್ಲಿ. ಲೇಖಕರು ಮಿತ್ರರೊಂದಿಗೆ ಪ್ರವಾಸ ಮಾಡಿದ್ದು ಇದಕ್ಕಿಂತ ಹತ್ತು - ಹನ್ನೆರಡು ವರ್ಷಗಳ ಹಿಂದೆ. ಪ್ರವಾಸದಿಂದ ಊರಿಗೆ ಮರಳಿದ ಬಳಿಕ ಪ್ರವಾಸದ ನೆನಪುಗಳು ಅತಿಯಾಗಿ ಮನಸ್ಸನ್ನು ಕಾಡತೊಡಗಿದ್ದರಿಂದ ಆ ಎಲ್ಲಾ ಸಹಜ ನೆನಪುಗಳನ್ನು ಅದೇನೇನು ನಡೆಯಿತೋ ಹಾಗೆಯೇ ಸ್ವಲ್ಪವೂ ಬದಲಾವಣೆ ಮಾಡದೆ ಬರೆದಿಟ್ಟುಕೊಂಡಿದ್ದರು. ಹೀಗೆ ಬರೆದಿಟ್ಟುಕೊಂಡ ಬರಹವನ್ನೇ ಲೇಖಕರು ತಮ್ಮ ಆತ್ಮೀಯ ಪತ್ರಮಿತ್ರ ಅಶ್ವಿನ್ ರಾವ್ ಅವರಿಗೆ ಪ್ರತೀ ದಿನ ಅಂಚೆ ಕಾರ್ಡ್ ನಲ್ಲಿ ಬರೆದು ಕಳಿಸುತ್ತಿದ್ದರು. ಪತ್ರಮಿತ್ರ ರಂಗಸ್ವಾಮಿ ಅಂಚೆ ಕಾರ್ಡ್ ನಲ್ಲಿ ಸರಣಿಯೋಪಾದಿಯಾಗಿ ಬರೆದು ಕಳಿಸಿದ ಪ್ರವಾಸನುಭವ ಕಥನವನ್ನೇ ಅಶ್ವಿನ್ ರಾವ್ ಅವರು ಪ್ರಕಟಣೆಗೆ ನೀಡಿ ಈ ಸುಂದರವಾದ ಕೃತಿಯನ್ನು ಹೊರತಂದಿದ್ದಾರೆ.
ಸಹಜ ಮತ್ತು ಸರಳತೆಯೇ ನಿಜವಾದ ಸೌಂದರ್ಯ. ಯಾವುದೇ ರೀತಿಯ ಮೇಕಪ್, ಎಡಿಟಿಂಗ್ ಇಲ್ಲದ ಕಾರಣಕ್ಕಾಗಿಯೇ ಈ ಕೃತಿ ಅಪೂರ್ವ ಕೃತಿಯಾಗಿ ದಾಖಲಾಗುತ್ತದೆ. ಓದುತ್ತಾ ಹೋದಂತೆ ರಂಗಸ್ವಾಮಿಯವರ ಜೊತೆ ನಾವೂ ಇದ್ದೇವೆ ಎಂಬಂತೆ ಅನಿಸಿಬಿಡುತ್ತದೆ. ಅಷ್ಟೂ ಈ ಕೃತಿ ಸ್ನೇಹ ಜೀವನದ ಮನಸ್ಸುಗಳಿಗೆ ಆಪ್ತವಾಗುತ್ತದೆ. ಮೈ ಮನಗಳನ್ನು ಪುಳಕಗೊಳಿಸುತ್ತದೆ. ನಾವೂ ಅವರ ಜೊತೆಗೆ ಇರಬೇಕಾಗಿತ್ತು ಎನಿಸುತ್ತದೆ. ಓದುಗರ ಮನಸ್ಸೂ ಒಂದು ಪ್ರವಾಸಕ್ಕೆ ತುಡಿಯುತ್ತದೆ.
ಮೈಸೂರಿನ ತಮ್ಮ ಒಡನಾಡಿ ಗೆಳೆಯ ಸತೀಶ್ ಎಂಬವರ ಪತ್ರಮಿತ್ರ ಬೈಂದೂರಿನ ಹಳ್ಳಿಮೂಲೆಯ ಕೃಷ್ಣ ಹಾಗೂ ಚಂದು ಎಂಬವರ ಮನೆಗೆ, ಊರಿಗೆ ಲೇಖಕರು ಸತೀಶ್, ಮನು ಹಾಗೂ ಲೋಕಿ ಎಂಬ ಗೆಳೆಯರೊಂದಿಗೆ ಮಾಡಿದ ಪ್ರವಾಸದಲ್ಲಿ ಇಲ್ಲದೇ ಇರುವುದೇ ಇಲ್ಲ. ಸ್ನೇಹ, ಕುಟುಂಬ ಪ್ರೀತಿ, ತುಂಟಾಟ, ಆಹಾರ ಸಂಸ್ಕೃತಿ, ಭಾಷಾ ಅಧ್ಯಯನ, ವೈಚಾರಿಕತೆ, ಧಾರ್ಮಿಕ ಚಿಂತನೆ, ಪರಿಸರ ಪ್ರೇಮ, ವೈವಿಧ್ಯಮಯ ಜನಜೀವನದ ಪರಿಚಯ ಹೀಗೆ ಎಲ್ಲವೂ ಇದೆ. ಅಕ್ಷರಕ್ಷರಗಳೂ ಅಪ್ಯಾಯಮಾನವಾಗಿದೆ.
ಲೇಖಕರು ಮಿತ್ರರೊಂದಿಗೆ ಜಾಲಿಯಾಗಿ ಸುತ್ತಾಡಿ ಬಂದ ಬಳಿಕ, ಜಾಲಿ ಮೂಡಿನಲ್ಲಿಯೇ ಬರೆದ ಬರಹಗಳು ಇವುಗಳಾದರೂ, ಲೇಖಕರ ಮನದಲ್ಲಿ ಮೂಡುವ, ಚಿಂತಿಸುವ, ಪ್ರಶ್ನಿಸುವ ಕೆಲವು ವಿಷಯಗಳು ಗಂಭೀರವೂ, ಚಿಂತನಾರ್ಹವೂ, ಅಧ್ಯಯನ ಯೋಗ್ಯವೂ ಆಗಿರುವುದು ಪ್ರವಾಸನುಭವ ಕೃತಿಯ ಮೌಲಿಕತೆಯನ್ನು ಹೆಚ್ಚಿಸದೇ ಇರುವುದಿಲ್ಲ. ಒಂದೆರಡು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸುವುದಾದರೆ...
"ಅಂದು ಶುಕ್ರವಾರ. ಉದಯವಾಣಿಯ ಚಲನಚಿತ್ರ ಪುರವಣಿ ನನ್ನ ಕೈಯಲ್ಲಿತ್ತು. ತಿರುವುತ್ತಿದ್ದೆ. ಕನ್ನಡ ಚಿತ್ರದ ನಿವೇದಿತಾ ಜೈನ್ ಬಗ್ಗೆ ಚಿತ್ರ ಲೇಖನ ಇತ್ತು. ಓದುತ್ತಿದ್ದೆ. " ಈಕೆ ಸತ್ತೋದ್ಲಲೆ"ಎಂಬ ಮಾತು ನನ್ನ ಪಕ್ಕದಿಂದ ಬಂತು. ಒಬ್ಬ ಹುಡುಗ ನಿಂತಿದ್ದ. ಅವನೇ ಹಾಗೆ ಮಾತಾಡಿದ್ದು ನೋಡಿ ಬೆರಗಾಯ್ತು. ಪುನಃ ಅವನೇ ಅಂದ "ಈಕೆ ನೃತ್ಯ ಮಾಡೊಪ್ಪತ್ತಿಲೆ, ಮ್ಯಾಲಿಂದ ಬಿದ್ ಕಂಡ್ ಸತ್ತೋದ್ಲಲೆ" ನಾನು 'ಹೂಂ' ಎಂದೆ. ಒಂದೆರಡು ನಿಮಿಷವಾದ ಮೇಲೆ ಪುನಃ ಮಾತಾಡಿದ 'ಈವತ್ ಭಾರತ - ಶ್ರೀಲಂಕ ಮ್ಯಾಚ್ ಇತ್ತ್' ಎಂದ. ನಂತರ ಮಧ್ಯಾಹ್ನ 1. 10 ಕ್ ಅಂಬ್ರ್, 1. 10 ಕ್ಕೆ ಮ್ಯಾಚ್ ಇತ್ತ್ ಎಂದ. ಇಲ್ಕಿನವರ ವ್ಯಾಕರಣವೇ ಬೇರೆ. ಅದು ತಪ್ಪು ಕೂಡ ಎನಿಸುತ್ತದೆ. ಇತ್ತು ಎಂಬುದು ಭೂತಕಾಲಕ್ಕಲ್ಲದೇ ಭವಿಷ್ಯತ್ತಿಗೆ ಹೇಗೆ ಹೊಂದಿಸಬಹುದು. ಆದರೆಇವರು ಹಾಗೆಯೇ ಬಳಸುತ್ತಾರಲ್ಲ ! ಸತೀಶ ಅವನ ಜೊತೆ ಮಾತಾಡುತ್ತಿದ್ದ. ಹುಡುಗರಿಗೆ ಚ್ಯೂಯಿಂಗ್ ಗಂ ಕೊಟ್ಟ. ನಾಚಿಕೆಯಿಂದಲೇ ಸ್ವೀಕರಿಸಿದರು. ಒಂದೆರಡು ಸ್ಟಾಪ್ ಆದ ಮೇಲೆ ಇಳಿದು ಹೋದರು. bus ಸ್ವಲ್ಪ ಖಾಲಿಯಾದ ಹಾಗಾಯ್ತು"
ಒಂದೊಂದು ಊರಲ್ಲೂ ಒಂದೊಂದು ರೀತಿಯ ಭಾಷೆ. ಒಂದೊಂದು ಜಾತಿಯವರದೂ ಒಂದೊಂದು ಭಾಷೆ. ಭಾಷೆಗಳ ಮಾತಿನ ಮೋಡಿಯಲ್ಲೂ, ಸ್ವರಗಳಲ್ಲೂ ವೈವಿಧ್ಯಮಯ ರಾಗಾಲಾಪಗಳ ಆಕರ್ಷಣೆ. ಹವೀಕ (ಹವ್ಯಕ) ಭಾಷೆಯಲ್ಲಿ ನಿತ್ಯ ಬಳಕೆಯಲ್ಲಿರುವ "ಅದು" , "ಇದು" ಶಬ್ದಗಳ ಸಹಿತ ವಿವಿಧ ಭಾಷೆಗಳಲ್ಲಿಯೂ ಕೆಲವು ಶಬ್ದಗಳಿಗೆ ಭಾಷೆಯೇ ಇಲ್ಲದ ಪದಗಳಿವೆ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ಆರ್. ರಂಗಸ್ವಾಮಿಯವರು "ಇತ್ತ್" ಶಬ್ದದ ಬಗ್ಗೆ ಎತ್ತಿದ ಚರ್ಚೆಯ ಮುಂದುವರಿಕೆಯ ಭಾಗವಾಗಿ ಭಾಷೆಗಳು ಮತ್ತು ಚರ್ಚಾಸ್ಪದ ಶಬ್ದಗಳ ಮೇಲೆ ವಿಸ್ತ್ರತ ಚರ್ಚೆಯೊಂದಿಗೆ ಅಧ್ಯಯನ, ಸಂಶೋಧನಾ ಕಾರ್ಯ ಮುಂದುವರಿದರೆ ಒಳ್ಳೆಯದಾದೀತು ಎನಿಸುತ್ತದೆ.
ಲೇಖಕರು ಮಿತ್ರರೊಂದಿಗೆ ಕೊಲ್ಲೂರು ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಅವರ ಮನದಲ್ಲಿ ಮೂಡಿದ ಭಾವನೆಗಳು, ಒಳ್ಳೆಯತನವನ್ನು ನೋಡುವ ರೀತಿ ಇಷ್ಟವಾಗುತ್ತದೆ. ಆ ಮಾತುಗಳು ಹೀಗಿವೆ...
"ದೇವಸ್ಥಾನದ ಮುಂದೆ ಚಪ್ಪಲಿ ಶೂ ಬಿಟ್ಟಾಯಿತು. ನಾನು ಶೂ ಧರಿಸಿದ್ದರಿಂದ ಹಾಗೆಯೇ ಬಿಟ್ಟು ಹೋಗಲು ಭಯವಾಯ್ತು. ನಿನ್ನೆಯಂತೇ ಎಲ್ಲರೂ ಒಳನಡೆದರು. ನಾನು ಹೊರಗೇ ನಿಂತೆ. ಒಂಟಿಯಾದರೆ ಇದ್ದೇ ಇದೆಯಲ್ಲ psychologyಯ ಸ್ನೇಹ. ಅವರಿವರನ್ನು ಗಮನಿಸುತ್ತಾ ನಿಂತೆ. ನಿಜವಾಗಲೂ ಪ್ರಪಂಚ ಹೇಗಿದೆಯೆಂದು ತಿಳಿಯಲು ದೇವಸ್ಥಾನದ ಮುಂದೆ ಒಂದರ್ಧ ಗಂಟೆ ನಿಂತರೆ ಸಾಕು ಎನ್ನುವುದು ನನಗೆ ವರ್ಷಗಳಿಂದಲೂ ಇರುವ ಅಭಿಪ್ರಾಯ. ನೂರಾರು ಥರದ ಭಕ್ತರು ಬರುತ್ತಾರೆ. ಎರಡು ಕೈಗಳನ್ನು ಎತ್ತಿ ಮುಗಿಯುತ್ತಾರೆ, ಕೆಲವರು ಸಾಷ್ಟಾಂಗ ಹಾಕುತ್ತಾರೆ. ಇನ್ನು ಕೆಲವರು ಪಿಟಿ ಪಿಟಿ ತುಟಿ ಅಲ್ಲಾಡಿಸುತ್ತಾರೆ. ತಮಗಿಂತ ಒಳ್ಳೆಯವರೇ ಇಲ್ಲವೆನ್ನುವಂತೆ ತೋರುತ್ತಾರೆ. ಆದರೆ ಯಾವ ಸ್ಥಳಗಳಲ್ಲೂ ಯಾವ ಸಂದರ್ಭದಲ್ಲೂ ಹೀಗೆಯೇ ಯಾಕೆ ಇರಬಾರದಿವರು ಒಳ್ಳೆಯವರಾಗಿ. ಆಗ ಇವೆಲ್ಲ ಬರೀ ಕೆಲವು ನಿಮಿಷದ ಹುಚ್ಚು ಎನಿಸುತ್ತೆ".
~ ಶ್ರೀರಾಮ ದಿವಾಣ, ಉಡುಪಿ.