"ಮಲೆನಾಡಿನ ಅಭ್ಯಂಜನ"

"ಮಲೆನಾಡಿನ ಅಭ್ಯಂಜನ"

"ಅಭ್ಯಂಜನ" ಎಂದರೆ ಏನೆಂದು ಇಂದಿನವರಿಗೆ ತಿಳಿದಿರುವುದು ಬಹಳ ಅಪರೂಪ ಆಗಿರಲೂಬಹುದು. ನಾನೂ ಕೂಡಾ ಅಭ್ಯಂಜನ ಎಂದರೆ ಎಣ್ಣೆ ಹಚ್ಚಿ ಸೀಗೇಪುಡಿಯಲ್ಲಿ ಸ್ನಾನ ಮಾಡುವುದು ಎಂದೇ ತಿಳಿದಿದ್ದೆ. ಅದೂ ಕನ್ನಡದ ಒಂದು ಹಾಡನ್ನು ಕೇಳಿದ ನಂತರ ಗೊತ್ತಾಗಿದ್ದು. ನಾಗಮಂಡಲ ಚಿತ್ರದಲ್ಲಿನ " ಕಂಬದಾ ಮ್ಯಾಲಿನಾ ಗೊಂಬೆಯೇ..ನಂಬಲೇ ನಾ ನಿನ್ನಾ ನಗೆಯನ್ನ.., ಭಿತ್ತಿಯಾ ಮ್ಯಾಲಿನಾ ಚಿತ್ತಾರವೇ..ಚಿತ್ತ ಗೊಟ್ಟ ಹೇಳು ಉತ್ತಾರವಾ.. ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆ..ಮಬ್ಬು ಹರಿಯುವುದೇನಾ..ಹಬ್ಬವಾಗುವುದೇನಾ.." ಮೊದಲೆಲ್ಲಾ ಕೇಳಿದ್ದೆನಾದರೂ ಅಭ್ಯಂಜನ ಎಂದರೇನೆಂದು ಸಂಪೂರ್ಣವಾಗಿ ತಿಳಿದಿರಲಿಲ್ಲ. ಮಲೆನಾಡಿನ ಚಿತ್ರಗಳಲ್ಲಿ ಕುವೆಂಪುರವರು ಅವರ ಅಜ್ಜಯ್ಯನ ಅಭ್ಯಂಜನದ ಕಥೆಯನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ಅಜ್ಜಯ್ಯನ ಅಭ್ಯಂಜನ ಓದಿದ ನಂತರ ಹಾಗಂದರೆ ಏನು? ಅದರ ವಿಶೇಷತೆ ಏನು? ಹಿರಿಯರು ಯಾಕಾಗಿ ಅದನ್ನು ಮಾಡುತ್ತಿದ್ದರು ಮತ್ತು ಕಿರಿಯರಿಗೆ ಮಾಡಿಸುತ್ತಿದ್ದರು ಎಂಬುದನ್ನೆಲ್ಲಾ ಸವಿವರವಾಗಿ ಚಿತ್ರಿಸಿದ್ದಾರೆ. ಇಂತಹ ಒಂದು ಸಂಪ್ರದಾಯಸ್ಥ ಅಭ್ಯಂಜನದ ವಿವರವನ್ನು ನಿಮ್ಮೊಂದಿಗೂ ಹಂಚಿಕೊಳ್ಳೋಣವೆನಿಸಿತು...

ಹಿಂದೆ ಶಾಂತಿಯ ಮಲೆನಾಡಿನಲ್ಲಿಯೂ ಕ್ರಾಂತಿಕಾಲವಿತ್ತು. ಅದೆಂದರೆ ಅಭ್ಯಂಜನದ ಕಾಲ! ಬೆರಗಾಗಬೇಡಿ. ನಿಮಗೆ ಗೊತ್ತಿಲ್ಲ. ಮಲೆನಾಡಿನಲ್ಲಿ ಅಭ್ಯಂಜನವೆಂದರೆ ಮಹಾಕಾರ್ಯ. ಅಭ್ಯಂಜನದ ದಿನ ಯಾರು ಸಾಯುತ್ತಾರೆ? ಯಾರು ಉಳಿಯುತ್ತಾರೆ? ಯಾರು ಮೂರ್ಛೆ ಬೀಳುತ್ತಾರೆ? ಹೇಳುವುದೇ ಕಷ್ಟ. ಆ ದಿನ ಮನೆಯಲ್ಲಿ ಗಲಭೇಯೋ ಗಲಭೆ! ಹೀಗನ್ನುತ್ತಾರೆ ಕುವೆಂಪು. ಅವರ ಮಾತುಗಳಲ್ಲಿಯೇ ಕೇಳಿ ಅಭ್ಯಂಜನದ ವರ್ಣನೆ... ನಾನು ಚಿಕ್ಕವನನಾಗಿದ್ದಾಗ ನಮ್ಮ ಮನೆಯಲ್ಲಿ ಅಭ್ಯಂಗ ಎಂದರೆ ನಮಗೆಲ್ಲ ಜನನ, ಮರಣ, ವಿವಾಹ, ಪೋಲೀಸರ ಕಾಟ, ಜಮಾಬಂದಿ ಎಲ್ಲವೂ ಒಟ್ಟಿಗೆ ಬಂದ ಹಾಗೆ ಅನುಭವವಾಗುತ್ತಿತ್ತು. ವಿದ್ಯಾರ್ಥಿಗಳಾಗಿದ್ದ ನಮಗೆ ಅಂದು ಭಾನುವಾರ ರಜಾ; ಜೊತೆಗೆ ಅಭ್ಯಂಜನದ ಸಜಾ. ಆ ದಿನ ಎಲ್ಲಿಯಾದರೂ ತಿರುಗಾಡಿ, ಹಣ್ಣು ಗಿಣ್ಣು ಕಿತ್ತು, ಮರ ಗಿರ ಹತ್ತಿ, ಕಲ್ಲು ಗಿಲ್ಲು ಹೊಡೆದು, ತಲೆಗಿಲೆ ಒಡೆದು, ಏನಾದರೂ ಸಾಹಸ ಗೀಹಸ ಮಾಡಿ ಬೇಜಾರು ಕಳೆದುಕೊಳ್ಳೋಣ ಎಂದರೆ, ಹಾಳು ಅಭ್ಯಂಜನ ಬಂದು ನಮಗೆಲ್ಲ ಬಹಳ ತೊಂದರೆಯಾಗುತ್ತಿತ್ತು. ಬೆಳಗಿನ ಆರು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೂ ಎಣ್ಣೆ ಸ್ನಾನದ ತೀರ್ಥಯಾತ್ರೆ! ಅದೇನು ಒಬ್ಬರೇ? ಇಬ್ಬರೇ? ಮನೆಯ ಮಂದಿಗೆಲ್ಲ ಅಭ್ಯಂಗ!

ಅದರಲ್ಲೂ ನಮ್ಮ ಅಜ್ಜಯ್ಯನ ಅಭ್ಯಂಗವೇ ಅರ್ಧದಿನವನ್ನು ಅಪೋಶನ ಮಾಡುತ್ತಿತ್ತು. ಅವರು ವಯಸ್ಸಾದವರು, ದೇವರಲ್ಲಿ ಬಹಳ ಭಕ್ತಿ, ಕಳ್ಳನ್ನು ಬಹಳ ಮಿತವರಿತು ತೀರ್ಥದಂತೆ ಪಾನಮಾಡುತ್ತಿದ್ದರು. ಅನ್ನಕ್ಕಿಂತಲೂ ಅಭ್ಯಂಜನವೇ ಶ್ರೇಷ್ಠ ಎನ್ನುವುದು ಅವರ ಧ್ಯೇಯೋಶಕ್ತಿಯಾಗಿತ್ತು. ವಾರಕ್ಕೊಂದು ಅಭ್ಯಂಜನ ಮಾಡುತ್ತಿದ್ದರೆ ಅಮೃತತ್ವ ಲಭಿಸುವುದೆಂದು ಅವರು ತಿಳಿದಿದ್ದಂತೆ ತೋರುತ್ತದೆ. ನಮ್ಮ ಮನೆಯ ಬಚ್ಚಲಿನಲ್ಲಿ ಒಂದು ದೊಡ್ಡ ಒಲೆ. ಕಬ್ಬಿಣವನ್ನು ಬೇಕಾದರೂ ಕರಗಿಸಬಹುದು ಅದರಲ್ಲಿ. ಆ ಒಲೆಯ ಬಾಯಿ ಮಾತ್ರ ಮೂರು ಅಡಿ ಎತ್ತರ, ಮೂರು ಅಡಿ ಅಗಲ. ಒಲೆಯ ಮೇಲೆ ಎರಡು ದೊಡ್ಡ ಹಂಡೆಗಳನ್ನು ಹೂಳಿರುತ್ತಾರೆ. ಅವುಗಳನ್ನು ತೂತು ಬೀಳುವವರೆಗೂ ತೆಗೆಯುವಂತಿಲ್ಲ. ಹೊರಗೆ ತಗೆಯಬೇಕಾದರೆ ಅರ್ಧ ಒಲೆಯನ್ನೇ ಕೀಳಬೇಕು. ಆ ಹಂಡೆಗಳ ತುಂಬಾ ನೀರು ಹಾಕಿ ಕಾಯಿಸುತ್ತಾರೆ ನೋಡಿ, ತಕಪಕ ತಕಪಕ ಕುದಿಯುವವರೆಗೆ! ಅಕ್ಕಿ ಹಾಕಿದರೆ ತಕ್ಷಣ ಅನ್ನ ಆಗಿಹೋಗುತ್ತದೆ. ಆ ಒಲೆಯ ಬೆಂಕಿಯೇ ಮೂರು ನಾಲ್ಕು ಹೆಣಗಳನ್ನು ಆರೇಳು ನಿಮಿಷಗಳಲ್ಲಿ ಸುಟ್ಟು ಬೂದಿ ಮಾಡಿಬಿಡಬಹುದು! ಕಟ್ಟಿಗಗೇನು ಬರವೆ? ಮಲೆನಾಡಿನಲ್ಲಿ. ನಮ್ಮ ಬಚ್ಚಲು ಮನೆಯ ಬೆಂಕಿ ಎಂದರೆ ಸಾಕ್ಷಾತ್ ಬಡಬಾಗ್ನಿಯ ಮರಿ!

ಭಾನುವಾರದ ಅಭ್ಯಂಜನ ಎಂದರೆ ಅರ್ಧಡಬ್ಬ ಹರಳೆಣ್ಣೆ , ಎರಡು ಬುತ್ತಿ ಸೀಗೆ ಪುಡಿ ಮನೆಲೆಕ್ಕಕ್ಕೆ ಖರ್ಚು. ಏಳೆಂಟು ಜನ ಹುಡುಗರು,ಅದಕ್ಕಿಂತಲೂ ಹೆಚ್ಚು ಹಿರಿಯರು, ಎರಡು ಆಳುಗಳಿಗೆ ಎಣ್ಣೆ ತಿಕ್ಕಿ ತಿಕ್ಕಿ ಸಾಕಾಗಿ ಹೋಗಬೇಕು. ಎಷ್ಟೋ ಸಾರಿ ಅವರು ಮರುದಿನವೇ ಜ್ವರ ಬಂದು ಹಾಸಿಗೆ ಹಿಡಿದಿದ್ದಾರೆ ಅಂದರೆ ! ಇನ್ನೆರಡು ಆಳುಗಳು ನೀರು ಸರಿ ಮಾಡುವುದು. ಅಭ್ಯಂಜನದಲ್ಲಿ ಬಿಸಿನೀರನ್ನು ಉಪಯೋಗಿಸುವುದೇ ಇಲ್ಲ. ಎಲ್ಲ ಸುಡು ನೀರೇ. ಎಷ್ಟೋ ಸಾರಿ ಹುಡುಗರನ್ನು ಬಲಾತ್ಕಾರದಿಂದ ಎಳೆದುಕೊಂಡು ಹೋಗಿ ಅದರಲ್ಲಿ ಅದ್ದಿದಾಗ ಅವರು ಕಿಟ್ಟನೆ ಕಿರಿಚಿಕೊಂಡು ಕೆಳಗೆ ಹಾರಿ ಕಲ್ಲಿನ ಮೇಲೆ ಬಿದ್ದು ಗಾಯವಾಗಿದೆ ಎಂದರೆ! ಇಷ್ಟೊಂದು ವಿಧವಿಧವಾದ ಪಾತ್ರೆಗಳಿಗೆ ನೀರು ಹಾಕುವುದು ಇಬ್ಬರಾಳುಗಳಿಗೆ ಸಾಕು ಸಾಕಾಗಿ ಹೋಗುತ್ತದೆ.

ಅತ್ತ ಆಳುಗಳು ಅಭ್ಯಂಜನದ ನಾಟಕಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ದ ಮಾಡುತ್ತಿರಲು, ಇತ್ತ ಪಾತ್ರದಾರರು ಎಣ್ಣೆ ಹಚ್ಚಿಕೊಳ್ಳುವುದೊಂದು ಸುಮನೋಹರ ದೃಶ್ಯ. ಹುಡುಗರ ಗುಂಪಿನಲ್ಲಿ ಘಟನೆಗಳು ಪ್ರಾಪ್ತವಾಗುತ್ತಿರಲಾಗಿ ದೊಡ್ಡವರ ಮೈಗೆ ಆಳುಗಳು ಎಣ್ಣೆ ಉಜ್ಜುತ್ತಿದ್ದಾರೆ. ಕೆಲವರು ಗರಡಿಯಲ್ಲಿ ಕಸರತ್ತು ಮಾಡುವವರಂತೆ ಹುಂ ಉಸ್ ಹುಂ ಉಸ್ ಎನ್ನುತ್ತಿದ್ದಾರೆ. ಅಜ್ಜಯ್ಯ ದೂರದಲ್ಲಿ ಕುಳಿತು ಎಣ್ಣೆ ಉಜ್ಜಿಸಿಕೊಳ್ಲುತ್ತಿದ್ದಾರೆ. ಅವರ ಮೈಯೆಲ್ಲ ತೈಲಮಯ. ಆಳು ತಲೆಗೆ ಎಣ್ಣೆ ಹಾಕಿ ಪಟ್ ಪಟ್ ಎಂದು ಮದ್ದಲೆ  ಬಡಿಯುವಂತೆ ಬಿಡುವಿಲ್ಲದೆ ಬಡಿಯುತ್ತಿದ್ದಾನೆ. ಆದರೆ ಅಜ್ಜಯ್ಯ ಅಚಲದಂತೆ ಧೀರವಾಗಿ ಕುಳಿತಿದ್ದಾರೆ. ಈ ಮಧ್ಯೆ ಅವರು ಎಣ್ಣೆ ಹಚ್ಚಿಕೊಳ್ಳುವುದನ್ನು ನಾವು ಭಯ ಭಕ್ತಿಯಿಂದ ನೋಡುತ್ತಿದ್ದೆವು. ನೆಲದ ಮೇಲೆ ಕೂತು ಅವರ ಮುಂದೆ ನೆಲದ ಮೇಲೆ ಬೆರಳಿನಿಂದಿಟ್ಟ ಏಳು ಎಣ್ಣೆಯ ಚುಕ್ಕಿಗಳು. ಅವು ಅಶ್ವತ್ಥಾಮ ಹನುಮಂತ ಮೊದಲಾದ ಪುರಾಣ ಪ್ರಸಿದ್ಧರಾದ ಸಪ್ತ ಚಿರಂಜೀವಿಗಳ ಸ್ಮಾರಕತೈಲಬಿಂದುಗಳು. ಅದಾದ ಮೇಲೆ ಅವರು ಏನೇನೋ ಬಾಯಲ್ಲಿ ಮಟಗುಟ್ಟುತ್ತ ಬಂಗಾಳದ ವೈಷ್ಣವರು ನಾಮಗಳನ್ನು ಬಳಿದುಕೊಳ್ಳುವಂತೆ ಎದೆ, ಹೊಟ್ಟೆ, ತೋಳು, ಬೆನ್ನು ಮೊದಲಾದ ಕಡೆ ಎಣ್ಣೆಯ ಬಟ್ಟುಗಳನ್ನು ಇಟ್ಟುಕೊಂಡು ಆಳಿಗೆ  ಎಣ್ಣೆ ಉಜ್ಜಲು ಅಪ್ಪಣೆ ಕೊಡುವರು. ಈ ಪ್ರಾರಂಭೋತ್ಸವವು ನಮಗೆ ದೇವರಿಗೆ ಮಾಡುವ ಮಂಗಳಾರತಿಯಂತೆ ಕಾಣುತ್ತಿತ್ತು. ಇಷ್ಟು ಹೊತ್ತಿಗೆ ದೊಡ್ಡ ಬೋಗುಣಿಯಲ್ಲಿ ಪಾನಕ ಸಿದ್ದವಾಗುವುದು.ಎಣ್ಣೆ ಹಚ್ಚಿ ಆಯಾಸಪಟ್ಟವರಿಗಲ್ಲ, ಹಚ್ಚಿಸಿಕೊಂಡು ಆಯಾಸಪಟ್ಟವರಿಗೆ. ಅಲ್ಲದೆ ಅಭ್ಯಂಜನದ ನಡುವೆ ಬಿಸಿನೀರು ಮಿಂದು ಶಕ್ತಿಕುಂದಿದವರಿಗೂ ಪಾನಕ ಕೊಟ್ಟು ಪುನಃ ಸಶೇಷವಾದ ಸ್ನಾನವನ್ನು ಪೂರ್ತಿಯಾಗಿ ಪೂರೈಸಲು ಶಕ್ತಿ ಬರುವಂತೆ ಮಾಡುವುದು ರೂಢಿಯಾಗಿತ್ತು. ಎಣ್ಣೆ ಹಚ್ಚಿ ಬಿಸಿನೀರಿನ ದೋಣಿಯಲ್ಲಿ ಅರ್ಧಗಂಟೆ ಮಲಗಬೇಕು. ಅಲ್ಲಿಂದ ಕೆಳಗಿಳಿಯಲು ಶಕ್ತಿ ಸಾಲದೆ ಇತರರ ಸಹಾಯದಿಂದ ಕೆಳಗಿಳಿದರೆ, ಕೂಡಲೆ ಕಡಾಯಿಯಲ್ಲಿ ಸಿದ್ಧವಾಗಿದ್ದ ಸುಡುನೀರನ್ನು ತಲೆಯ ಮೇಲೆ ರಫ್ ರಫ್ ಎಂದು ಹಾಕುವರು.  ಶಿಥಿಲವಾಗಿದ್ದ ಜೀವ ಮತ್ತೂ ಶಿಥಿಲವಾಗಿ ನಿಲ್ಲಲಾರದೆ ಕೊಣದ ಕಲ್ಲಿನ ಮೇಲೆ ಕುಳಿತರೆ, ಒಬ್ಬರಲ್ಲ ಇಬ್ಬರು ಸೀಗೆಯಿಂದ ಮೈಯುಜ್ಜಲು ತೊಡಗುವರು. ಅವರ ತಿಕ್ಕಾಟ ಎಳೆದಾಟದಲ್ಲಿ ಮೂರ್ಛೆ ಬರುವಷ್ಟಾಗುವುದು. ಆಮೇಲೆ ತಲೆಯಲ್ಲಿದ್ದ ಹರಳೆಣ್ಣೆ ಸಂಪೂರ್ಣವಾಗಿ ಹೋಗುವಂತೆ ತಲೆಯುಜ್ಜುವರು. ಆ ಸಮಯದಲ್ಲಿ ಅಳದೆ ಇರುವ ಹುಡುಗರೇ ಇಲ್ಲ. ಕಣ್ಣನ್ನು ಎಷ್ಟು ಬಲವಾಗಿ ಮುಚ್ಚಿಕೊಂಡರೂ ಸೀಗೆಯ ನೀರು ಹೇಗಾದರೂ ಮಾಡಿ ಒಳಗೆ ನುಗ್ಗಿಯೇ ನುಗ್ಗವುದು. ಸ್ನಾನ ಮುಗಿಯುವಷ್ಟರಲ್ಲಿ  ಮೈಯೆಲ್ಲ ಹಣ್ಣಾಗಿ ಹುಣ್ಣಾಗಿ ಕಣ್ಣಿನಂತೆಯೇ ಕೆಂಪಾಗಿ ನಿಲ್ಲಲಾರದಷ್ಟು ಶಕ್ತಿಗುಂದದೆ ಇದ್ದರೆ ಅದು ನಿಜವಾದ ಅಭ್ಯಂಜನ ಅಲ್ಲವೇ ಅಲ್ಲ ಎಂದು ಹಿರಿಯರ ನಂಬುಗೆ. ಸ್ನಾನ ಮುಗಿಯಿತು. ಹುಡುಗನನ್ನು ಮೆಲ್ಲನೆ ಕೈ ಹಿಡಿದುಕೊಂಡು ಹೋಗಿ ಸಿದ್ಧವಾಗಿದ್ದ ಹಾಸಿಗೆಯ ಮೇಲೆ ಮಲಗಿಸುವರು. ಚೆನ್ನಾಗಿ ಬೆವರಲಿ ಎಂದು ಶಾಲು ಕಂಬಳಿ, ರಗ್ಗು, ಎಲ್ಲವನ್ನೂ ಮುಖ ಮುಚ್ಚಿ ಹೊದಿಸುವರು.ಒಳಗೆ ಪ್ರಾಣಿ ಬೆವತೂ ಬೆವತೂ ಹಾಸಿಗೆ ತೊಯ್ದು ಹೋಗುತ್ತದೆ. ಹೀಗೆ ಹುಡುಗರನ್ನು ಹಣ್ಣು ಹಣ್ನು ಮಾಡಿ ಹಾಸಿಗೆಗೆ ತಳ್ಲಿದ ನಂತರ ಅಜ್ಜಯ್ಯನವರ ಅಭ್ಯಂಜನ. ಎಲ್ಲರಿಗೂ ಹೆದರಿಕೆ!

ಅಜ್ಜಯ್ಯ ಮೀಯುವ ನೀರಿಗೆ ನಾವು ಕೈಯಿಟ್ಟರೆ ಫಕ್ಕನೆ ಹೊರಗೆ ಎಳೆದುಕೊಳ್ಳುವಂತಾಗುತ್ತಿತ್ತು. ಅಭ್ಯಂಜನ ಕಾಲದಲ್ಲಿ ಅವರು ಎರಡು ಮೂರು ಬಾರಿಯಾದರೂ ಮೂರ್ಛೆ ಹೋಗದೆ ಇರುತ್ತಿರಲಿಲ್ಲ. ಅಷ್ಟು ಬಿಸಿ ನೀರಿನಲ್ಲಿ ಮಿಂದರೆ ಮೂರ್ಛೆ ಹೋಗದಿರಬಹುದೆ? ಸುಡುಬಿಸಿನೀರಿನ ದೋಣಿಯಲ್ಲಿ ದೀರ್ಘ ಕಾಲ  ಮಲಗುವರು. ಏಳುವಾಗ ಒಂದು ಲೋಟ ಪಾನಕ ಕುಡಿಯುವರು. ಆಮೇಲೆ ಕೊಣದಲ್ಲಿ ಕೂತು ತಲೆಯ ಮೇಲೆ ಸುಡುನೀರು ಹಾಕಿಸಿಕೊಳ್ಳುವರು. ಒಬ್ಬರಲ್ಲ ಇಬ್ಬರು , ಚೊಂಬುಗಳಲ್ಲಿ ಕಡಾಯಿಯಿಂದ ಮೊಗೆಮೊಗೆದು ಎಡೆಬಿಡದೆ ನೀರನ್ನು ಎತ್ತರದಿಂದಲೇ ರಫ್ ರಫ್ ಎಂದು ನೆತ್ತಿಗೆ ಹೊಡೆಯುವರು. ಇದಾದ ಮೆಲೆ ಒಂದು ಲೋಟ ಪಾನಕ ಖರ್ಚಾಗುತ್ತಿತ್ತು. ಆಮೇಲೆ ಆಳುಗಳು ಮೈಕೈಗಳನ್ನೂ ತಲೆಯನ್ನೂ ಸೀಗೆಯಿಂದ ಗಸಗಸ ಉಜ್ಜುವರು. ಪುನಃ ಸುಡುನೀರು  ಜಲಪಾತದಂತೆ ತಲೆಯ ಮೇಲೆ ಬೀಳುತ್ತಿತ್ತು. ಇಷ್ಟು ಹೊತ್ತಿಗೆ ಮೂರ್ಛೆ ಹೋಗಿ ಕೊಣದ ಕಲ್ಲಿನ ಮೇಲೆ ಮಲಗಿ ಬಿಡುತ್ತಿದ್ದರು. ಆಗ ಹಾಹಾಕಾರವೆದ್ದು ಜನಗಳು ಹಿಂದುಮುಂದು ಓಡಾಡುತ್ತಿದ್ದರು. ಒಳಗಿನಿಂದ ಅಜ್ಜಮ್ಮ ಬರುವರು. ಕೆಲವರು ಪಾನಕ ಕುಡಿಸುವರು, ಕೆಲವರು ತಣ್ಣಿರನ್ನು ತಲೆಗೆ ತಟ್ಟುವರು. ಕೆಲವರು ಗಾಳಿ ಬೀಸುವರು, ಕೆಲವರು ತೋಟದಾಚೆಯ ಭೂತರಾಯನಿಗೆ ಅಡ್ಡಬಿದ್ದು ಅಜ್ಜಯ್ಯನನ್ನು ಸಂರಕ್ಷಿಸುವಂತೆ ಅಂಗಲಾಚಿ ಬೇಡುವರು. ಅಂತೂ ಸ್ವಲ್ಪ ಹೊತ್ತಿಗೆ ಅಜ್ಜಯ್ಯನ ಮೂರ್ಚೆ ಕೊನೆಗೊಂಡು 'ಅಮ್ಮಯ್ಯ' 'ನಾರಾಯಣ' ಮೊದಲಾದ ಶಬ್ದಗಳು ಅವರ ಬಾಯಿಂದ ಹೊರಬಿದ್ದು ಎಲ್ಲರಿಗೂ ಧೈರ್ಯವನ್ನುಂಟುಮಾಡುತ್ತಿದ್ದವು. ಸರಿ; ಮತ್ತೆ ಜಳಕ, ಮತ್ತೆ ಮೂರ್ಛೆ ಹೀಗಾಗಿ ಸ್ನಾನ ಕೊನೆಗಾಣುವುದು. ಅವರಿಗೆ ನೀರೆರೆವವರು ಕೈಗಳನ್ನು ಆಗಾಗ ತಣ್ಣೀರಿನಲ್ಲಿ ಅದ್ದಿ ತಂಪುಮಾಡಿಕೊಂಡರೂ ಆ ಬಿಸಿನೀರಿನ ತಾಪ ಶಮನವಾಗುತ್ತಿರಲಿಲ್ಲ, ಅಜ್ಜಯ್ಯನ ಸ್ನಾನ ಕೊನೆಗಾಣುವಾಗ ಅವರು ಗಂಗೆ ಯಮುನೆ ಮೊದಲಾದ ಪುಣ್ಯ ನದಿಗಳ ಹೆಸರಿನ ಪಟ್ಟಿಯೊಂದನ್ನು ಗಟ್ಟಿಯಾಗಿ ಉಚ್ಚರಿಸಿ ನಾಲ್ಕು ದಿಕ್ಕುಗಳಿಗೂ ಕೈಮುಗಿಯುತ್ತಿದ್ದರು.ಇಬ್ಬರು ಎರಡೂ ಕೈಗಳನ್ನು ಹಿಡಿದು ಹಾಸಿಗೆಗೆ ಕರೆದೊಯ್ಯುತ್ತಿದ್ದರು. ಹೋಗುವಾಗ ಅವರ ಮೈ ಹೊಗೆಯಾಡುವಂತೆ ಕಾಣುತ್ತಿತ್ತು. ಅಲ್ಲಿ ಸಿದ್ಧವಾಗಿದ್ದ ಕಂಬಳಿ ಮೊದಲಾದುವುಗಳನ್ನು ಮೈತುಂಬಾ ಹೊದೆದುಕೊಂಡು ಮಲಗಿ ಬೆವರಿಸಿಕೊಳ್ಳುತ್ತಿದ್ದರು. ಅವರು ಆದಿನ ರಾತ್ರಿ ಊಟ ಮಾಡುತ್ತಿರಲಿಲ್ಲ. ಬರಿಯ ಹಾಲನ್ನೆ ಕುಡಿದು ಮಲಗಿ ಬಿಡುವರು.
ಇದು ಅಜ್ಜಯ್ಯನ ಅಭ್ಯಂಜನ !  ಅವರ ಕಾಲ ಮುಗಿದಾಗ ಅವರೊಡನೆ ಅಭ್ಯಂಜನದ ಮಹೋತ್ಸವವೂ ಮರೆತು ಹೋಯಿತು. ಇಂದು ಐದು ನಿಮಿಷದಲ್ಲಿ ಸ್ನಾನ ಮಾಡಿ, ನಿಂತುಕೊಂಡೇ ಎರಡು ನಿಮಿಷದಲ್ಲಿ ತಿಂಡಿ ಮುಗಿಸಿ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಓಡುವ ಇಂದಿನ ಯಾಂತ್ರಿಕ ಜೀವನದಲ್ಲಿ ಅಭ್ಯಂಜನವೆಲ್ಲಿ? 

Comments

Submitted by makara Fri, 02/15/2013 - 19:02

ಮಮತಾ ಅವರೆ, ಅಭ್ಯಂಜವನ್ನು ಕಣ್ಣಿಗೆ ಕಟ್ಟುವಂತೆ ಮತ್ತು ಮೈ ಝುಮ್ಮೆನ್ನುವಂತೆ ವರ್ಣಿಸಿದ್ದೀರ. ಲೇಖನವನ್ನು ಓದುತ್ತಿರುವಾಗ ನಮಗೇ ನಿಮ್ಮ ಅಜ್ಜನವರ ಅಭ್ಯಂಜನದ ಅನುಭವವಾಯಿತು.
Submitted by ಮಮತಾ ಕಾಪು Sat, 02/16/2013 - 09:40

In reply to by makara

ಶ್ರೀಧರ್ ಅವರೆ, ಮೆಚ್ಚುಗೆಗಾಗಿ ಧನ್ಯವಾದಗಳು. ಕ್ಷಮಿಸಿ ಇದು ನನ್ನ ಅಜ್ಜಯ್ಯನವರ ಅಭ್ಯಂಜನವಲ್ಲ. ಲೇಖನದಲ್ಲಿಯೇ ಬರೆದಿದ್ದೇನೆ, ಕುವೆಂಪು ಅವರ ಮಲೆನಾಡಿನ ಚಿತ್ರಗಳಲ್ಲಿರುವ (ಪುಸ್ತಕ) ಅವರ ಅಜ್ಜಯ್ಯನ ಅಭ್ಯಂಜನದ ಗಮ್ಮತ್ತು. ನಾನು ಇತ್ತೀಚೆಗೆ ಓದಿದಾಗ ತುಂಬಾ ಉತ್ತಮವಾಗಿದೆ ಅನ್ನಿಸಿತು. ಅದಲ್ಲದೆ ಇಂದಿನ ಕಾಲದಲ್ಲಿ ಅಭ್ಯಂಜನವೆಲ್ಲಿದೆ? ಹೇಳಿ. ಉತ್ತಮ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣವೆನಿಸಿತು. ನಮ್ಮಲ್ಲೂ ಈ ಅಭ್ಯಂಜನದ ಪದ್ದತಿ ಇಲ್ಲ. ದೀಪಾವಳಿಯಂದು ಬೆಂಗಳೂರಲ್ಲಿ ಇದ್ದ ಕಾರಣ ಎಣ್ಣೆ ಸ್ನಾನದ ಅನುಭವವಾದದ್ದು ಬಿಟ್ಟರೆ, ಈ ಅಭ್ಯಂಜನದ ಬಗ್ಗೆ ಗೊತ್ತೇ ಇರಲಿಲ್ಲ. ಕುವೆಂಪು ಅವರ ವಿವರಣೆಯನ್ನು ನೋಡುವಾಗ ಒಂದು ಒಳ್ಳೆಯ ಆಚರಣೆಯನ್ನು ಕಳೆದುಕೊಂಡಿದ್ದೇವೆ ಅನಿಸಿತು. ಅಲ್ವಾ? ಧನ್ಯವಾದಗಳು.