ಮಲೆನಾಡಿನ ಚಿತ್ರಗಳು

ಮಲೆನಾಡಿನ ಚಿತ್ರಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಕುವೆಂಪು
ಪ್ರಕಾಶಕರು
ಉದಯರವಿ ಪ್ರಕಾಶನ, ಮೈಸೂರು
ಪುಸ್ತಕದ ಬೆಲೆ
ರೂ. ೯೨/-

ಕುವೆಂಪು ಅವರ “ಮಲೆನಾಡಿನ ಚಿತ್ರಗಳು" ಹಲವು ಬಾರಿ ಮರುಮುದ್ರಣವಾಗಿರುವ ಕನ್ನಡದ ಜನಜನಿತ ಪುಸ್ತಕ. “ಮಲೆನಾಡಿಗೆ ಬಾ" ಎಂಬ ಕವಿತೆ ಮತ್ತು ಹನ್ನೆರಡು ಅಕ್ಷರಚಿತ್ರಗಳ ಮೂಲಕ ಮಲೆನಾಡಿನ ಪ್ರಕೃತಿ ಮತ್ತು ಬದುಕನ್ನು ಅಮರವಾಗಿಸಿರುವ ಪುಸ್ತಕ. (ಮೊದಲ ಮುದ್ರಣ ೧೯೩೩)

“ಮಲೆನಾಡಿನ ಚಿತ್ರಗಳು" ಮೂಡಿ ಬಂದ ಬಗೆಯನ್ನು ಮುನ್ನುಡಿಯಲ್ಲಿ ಕುವೆಂಪು ಅವರ ಆಪ್ತವಾಗಿ ಹೀಗೆ ತಿಳಿಸಿದ್ದಾರೆ: “ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರುನಾಡಿನ ಚೆಲುವು ಗೆಲುವುಗಳನ್ನೂ ದೃಶ್ಯಗಳನ್ನೂ ಸನ್ನಿವೇಶಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು.” ಒಂದು ದಿನ ಸಾಯಂಕಾಲ ನಾನು ಶ್ರೀಮಾನ್ ವೆಂಕಣ್ಣಯ್ಯನವರೊಡನೆ (ಮೈಸೂರಿನ) ಕುಕ್ಕನಹಳ್ಳಿಯ ಕೆರೆಯ ಮೇಲೆ ವಾಯು ವಿಹಾರಕ್ಕಾಗಿ ಹೋಗಿದ್ದಾಗ ಯಾವುದೋ ಮಾತು ಬಂದು ಮಲೆನಾಡಿನ ಕೆಲವು ಅನುಭವಗಳನ್ನು ಹೇಳತೊಡಗಿದೆ. ಜೊತೆಯಲ್ಲಿ ತೀ.ನಂ.ಶ್ರೀ., ಡಿ.ಎಲ್.ನ. ಮೊದಲಾದ ಮಿತ್ರರೂ ಇದ್ದರು. ನಾವೆಲ್ಲರೂ ಹುಲುಸಾಗಿ ಹಸುರು ಹೊಮ್ಮಿ ಬೈಗುಗೆಂಪಿನ ಬಿಸಿಲಿನಲ್ಲಿ ಸುಮನೋಹರವಾಗಿದ್ದ ಕೆರೆಯಂಚಿನ ಬಯಲಿನಲ್ಲಿ ಕುಳಿತಿದ್ದೆವು. ಮೆಲ್ಲೆಲರು ಸುಖದಾಯಕವಾಗಿ ತೀಡುತ್ತಿತ್ತು. ಬಹಳ ಹೊತ್ತು ಕತೆ ಹೇಳಿದೆ. ಅವರೂ ಸಾವಧಾನದಿಂದ, ಅದಕ್ಕಿಂತಲೂ ಹೆಚ್ಚಾಗಿ ವಿಶ್ವಾಸದಿಂದ ಆಲಿಸಿದರು. ಎಲ್ಲ ಮುಗಿದ ಮೇಲೆ ವೆಂಕಣ್ಣಯ್ಯನವರು ಆ ಅನುಭವಗಳನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ಸೂಚನೆ ಕೊಟ್ಟರು. ….."

ನಮ್ಮ ನೆನಪಿನ ಖಜಾನೆಯಲ್ಲಿ ದಾಖಲಾಗುವ ಜೀವನದ ಅನುಭವಗಳ ಬಗ್ಗೆ, ಕುವೆಂಪು ಅವರು “ಮುನ್ನುಡಿ"ಯಲ್ಲಿ ಹೀಗೆ ಬರೆದಿದ್ದಾರೆ: "ಮನಸ್ಸಿಗೆ ಜೀವನದ ಅನುಭವಗಳನ್ನು ಆಯ್ದಿಟ್ಟುಕೊಳ್ಳುವ ಶಕ್ತಿಯಿದೆ. ತನಗೆ ಬೇಕಾದುದನ್ನು - ಅದು ಹಿತವಾಗಿರಲಿ ಅಹಿತವಾಗಿರಲಿ - ಉಳಿಸಿಕೊಂಡು ಉಳಿದುದನ್ನು ಮರೆತುಬಿಡುತ್ತದೆ. ಏಕೆಂದರೆ ಎಲ್ಲ ಸಣ್ಣಪುಟ್ಟ ಸಾಮಾನ್ಯ ನೀರಸ ಅನುಭವಗಳನ್ನು ನೆನಪಿನಲ್ಲಿ ಇಡುವುದೆಂದರೆ ಅದಕ್ಕೆ ಹೊರಲಾರದ ಭಾರವಾಗುತ್ತದೆ. ಈ ಆಯ್ಕೆಯ ವಿಚಾರದಲ್ಲಿ ಮನಸ್ಸು ನಿರಂಕುಶ ಪ್ರಭು; ಅದು ಯಾವ ಕಟ್ಟುಕಟ್ಟಳೆಗಳಿಗೂ ತಲೆಬಾಗಿ ನಡೆಯುವಂತೆ ತೋರುವುದಿಲ್ಲ. ವಿಚಾರದೃಷ್ಟಿಗೆ ದೊಡ್ಡದಾಗಿ ತೋರುವುದನ್ನು ಮನಸ್ಸು ಸಂಪೂರ್ಣವಾಗಿ ಮರೆತುಬಿಡಬಹುದು; ಕೆಲಸಕ್ಕೆ ಬಾರದಂತೆ ತೋರುವುದನ್ನು ಅದು ಪ್ರೀತಿಯಿಂದ ಕಾಪಾಡಬಹುದು. ….."

ಬೇಟೆಗಾಗಿ ಕುವೆಂಪು ಇನ್ನಿಬ್ಬರೊಂದಿಗೆ ಹೋದಾಗಿನ ಅನುಭವಗಳ ಬರಹ "ಕಾಡಿನಲ್ಲಿ ಕಳೆದ ಒಂದಿರುಳು.” ಇದರ ಕೊನೆಯ ಭಾಗದಲ್ಲಿ “ಕವಿಶೈಲ"ದಿಂದ ಅರುಣೋದಯ ಸಮಯದಲ್ಲಿ ನಿಂತು ನೋಡಿದ ಸ್ವರ್ಗೀಯ ದೃಶ್ಯದ ವರ್ಣನೆಯಿದೆ. "ಹಾಸ್ಯ ಚಟಾಕಿ”, “ಬಂದನಾ ಹುಲಿರಾಯನು” ಮತ್ತು “ಪುಟ್ಟಾಚಾರಿಯ ಕಾಡುಕೋಳಿ" - ಇವೂ ಮಲೆನಾಡಿನ ಕಾಡಿನಲ್ಲಿ ಬೇಟೆಗೆ ಹೋದ ಅನುಭವಗಳನ್ನೇ ಚಿತ್ರಿಸಿವೆ.

“ಮನೆಯ ಶಾಲೆಯ ಐಗಳ ಮಾಲೆ” - ಕುವೆಂಪು ಮತ್ತು ಇತರ ನಾಲ್ವರಿಗೆ ಮನೆಯ ಮಾಳಿಗೆಯಲ್ಲಿಯೇ ವಿದ್ಯಾಭ್ಯಾಸ ಮಾಡಿಸಲಿಕ್ಕಾಗಿ ಮಲೆನಾಡಿನ ವಿಶಾಲ ಮನೆಗೆ ಬಂದಿದ್ದ ಐದಾರು ಮೇಸ್ಟ್ರುಗಳ ವ್ಯಕ್ತಿತ್ವವನ್ನು ಕಟ್ಟಿಕೊಡುವ ಬರಹ. ಅಜ್ಜಯ್ಯನ ಅಭ್ಯಂಜನ, ತೋಟದಾಚೆಯ ಭೂತ, ಅಣ್ಣಪ್ಪನ ರೇಷ್ಮೆ ಕಾಯಿಲೆ, ಮಲೆನಾಡಿನ ಗೋಪಾಲಕರು, ಜೇನು ಬೇಟೆ - ಇವೆಲ್ಲವೂ ಶೀರ್ಷಿಕೆ ಸೂಚಿಸುವ ವಿಷಯಗಳನ್ನು ಕುವೆಂಪು ಅವರ ಅನನ್ಯ ಭಾಷೆಯಲ್ಲಿ ವರ್ಣಿಸುವ ಚಿತ್ರಗಳು.

“ಕತೆಗಾರ ಮಂಜಣ್ಣ” ಹೀಗೆ ಶುರುವಾಗುತ್ತದೆ: “ಮಂಜಣ್ಣ ನಮ್ಮ ಮನೆಯ ಆಳು; ಬಹಳ ಹಳೆಯ ಮನುಷ್ಯ; ಅಂದರೆ ಸುಮಾರು ಅರವತ್ತು ವರ್ಷ. ಅವನ ಮುಖದ ತುಂಬ ಬಿಳಿಯ ಗಡ್ಡ ಮೀಸೆ. ತಲೆಯ ತುಂಬ ಹಣ್ಣು ಹಣ್ಣು ಕೂದಲು. ಅವನ ಗಡ್ಡವೇನು ಮಲೆನಾಡಿನ ಗಿರಿಗಳ ಮೇಲೆ ನಿಬಿಡವಾಗಿ ಬೆಳೆದ ತರುನಿಕದರಂತೆ ಉದ್ದವಾಗಿ ನೀಳವಾಗಿರಲಿಲ್ಲ. ಬಯಲು ಸೀಮೆಯ ಗುಡ್ಡಗಳಲ್ಲಿ ಬೆಳೆಯುವ ವಿರಳವಾದ ಪೊದೆಗಳಂತೆ ಇತ್ತು. ಸುಲಭವಾಗಿ ಹೇಳುವುದಾದರೆ ಇಲಿ ತರಿದಂತೆ ಇತ್ತು.”
ಮುಂದುವರಿದು ಕುವೆಂಪು ಬರೆದಿದ್ದಾರೆ, “ಮಂಜಣ್ಣನೆಂದರೆ ನಮಗೆಲ್ಲ ಪ್ರಾಣ; ಏಕೆಂದರೆ ನಮಗೆಲ್ಲ ಅವನೇ ಕತೆಗಾರ! ಆ ವೃದ್ಧಮೂರ್ತಿಯನ್ನು ನೋಡಿದ ಕೂಡಲೆ ಹುಡುಗರಾದ ನಮಗೆ ಅವನು ಆಳು ಎಂಬುದು ಮರೆತು ಹೋಗಿ, ಅವನಲ್ಲಿ ಗುರುಭಾವ ಉಂಟಾಗುತ್ತಿತ್ತು." ಮಂಜಣ್ಣ ಹೇಳಿದ್ದ ಕೆಲವು ಪುಟ್ಟ ಪುಟ್ಟ ಕತೆಗಳನ್ನೂ ಇದರಲ್ಲಿ ಹಂಚಿಕೊಂಡಿದ್ದಾರೆ.

ಕೊನೆಯ ಚಿತ್ರ “ರಾಮರಾವಣರ ಯುದ್ಧ"ದಲ್ಲಿ, ರಾತ್ರಿಯಿಡೀ ಪೆರಡೂರು ಯಕ್ಷಗಾನ ಮೇಳದ ಭಾಗವತರ ಆಟ ನೋಡಿ ಬಂದ,  ಹುಡುಗಹುಡುಗಿಯರು ಅದೇ ಆಟವನ್ನು ನಟಿಸಲು ಹೋದ ಪ್ರಸಂಗವನ್ನು ರಸವತ್ತಾಗಿ ವರ್ಣಿಸುತ್ತದೆ. ಕೊನೆಗೆ ಒಬ್ಬ ಪಾತ್ರಧಾರಿಗೆ ಗಾಯವಾದಾಗ ಆಟ ನಿಲ್ಲಿಸಬೇಕಾಗುತ್ತದೆ.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಬಾಳುತ್ತಿದ್ದ ಜನರ ಬದುಕು ಹೇಗಿತ್ತು? ಎಂಬುದನ್ನು ಈ ಚಿತ್ರಗಳು ದಟ್ಟ ವಿವರಗಳೊಂದಿಗೆ ಕಟ್ಟಿ ಕೊಡುತ್ತವೆ. ಈಗ ಅಂತಹ ಬದುಕನ್ನು ಕಲ್ಪಿಸಲಿಕ್ಕೂ ಸಾಧ್ಯವಿಲ್ಲ ಅನಿಸುತ್ತದೆ.