ಮಲೆನಾಡಿನ ಮರೆಯದ ನೆನಪುಗಳು

ಮಲೆನಾಡಿನ ಮರೆಯದ ನೆನಪುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ. ೧೬೦.೦೦ ಮುದ್ರಣ : ೨೦೧೮

ಮಲೆನಾಡಿನ ರೋಚಕ ಕಥೆಗಳು ಸರಣಿಯ ೮ ನೇ ಭಾಗವಾದ ‘ಮಲೆನಾಡಿನ ಮರೆಯದ ನೆನಪುಗಳು’ ಎಂಬ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಎಂದಿನಂತೆ ಮಲೆನಾಡಿನ ಸುಂದರ ಪರಿಸರದ ವರ್ಣನೆ, ಕಾಡು ಪ್ರಾಣಿಗಳ ಒಡನಾಟ, ಬಾಲ್ಯದ ರಸನಿಮಿಷಗಳು ಈ ಪುಸ್ತಕದಲ್ಲೂ ಮುಂದುವರೆದಿದೆ. ಈ ಸರಣಿ ಪುಸ್ತಕಗಳನ್ನು ಓದುತ್ತಾ ಓದುತ್ತಾ ಮಲೆನಾಡು ಇನ್ನಷ್ಟು ಆಪ್ತವಾಗುತ್ತಾ ಹೋಗುತ್ತದೆ. ರೋಚಕತೆ ಪ್ರತಿಯೊಂದು ಘಟ್ಟದಲ್ಲೂ ಕಂಡು ಬರುತ್ತದೆ. ಮಲೆನಾಡಿನ ಮರೆಯದ ನೆನಪುಗಳು ಪುಸ್ತಕವನ್ನು ಲೇಖಕರು ಕಥನ ಸಂಗ್ರಹ ಎಂದು ಕರೆದಿದ್ದಾರೆ. 

ಲೇಖಕರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ. ‘ಕರೆದಾಗ ಮೆದುಳಿನಿಂದ ಎದ್ದು ಬರುವ ನೆನಪುಗಳೇ ಸೃಷ್ಟಿಯ ಅದ್ಭುತ. ಅದರಲ್ಲೂ ವೈವಿಧ್ಯಮಯವಾದ ಮಲೆನಾಡಿನ ರೋಚಕ ಘಟನೆಗಳ ನೆನಪುಗಳು ಎಂದರೆ ಮೊಗೆದಷ್ಟೂ ಮುಗಿಯದೆ ಉಕ್ಕುವ ನೀರಿನ ಚಿಲುಮೆಯ ಹಾಗೆ! ಐದಾರು ದಶಕಗಳು ಕಳೆದರೂ ಮಲೆನಾಡಿನ ಬಾಲ್ಯದ ನೆನಪು ಮಾಸಿಲ್ಲ. ಮಾಸುವುದೂ ಇಲ್ಲ. ನಂತರ ಅದರ ಪಕ್ಕದ ಹೇಮಾವತಿ ನದಿಯಲ್ಲಿ ಅದೆಷ್ಟೋ ಲಕ್ಷ ಟಿ.ಎಮ್.ಸಿ. ನೀರು ಹರಿದು ಹೋಗಿದೆ. ಹೊಸ ನೀರು ಬಂದು ಹಳೆ ನೀರನ್ನು ಕೊಚ್ಚಿ ಕೊಂಡು ಹೋಗುತ್ತಿದ್ದಂತೆ ನೀರಿನ ಹರಿವಿನ ಜೊತೆಗೇ ಬದುಕೂ ಬದಲಾಗಿದೆ. ಏನೇ ಬದಲಾದರೂ ಮನುಷ್ಯರ ಗುಣ ಸ್ವಭಾವಗಳೇನೂ ಬದಲಾಗುವುದಿಲ್ಲವಲ್ಲ!’

‘ಕಷ್ಟ- ಸುಖಗಳ ಮಿಶ್ರಣದ ಬದುಕು ನಮ್ಮದು. ಹಾಗೆ ಕಳೆದ ಮಲೆನಾಡಿನ ಬಾಲ್ಯದ ಒಂದೊಂದು ಅನುಭವವೂ ನನಗೆ ಗಟ್ಟಿತನ ಕಲಿಸಿದ್ದು ಸುಳ್ಳಲ್ಲ. ಅಲ್ಲಿ ಆಗ ನಡೆದ ಘಟನೆಗಳನ್ನೇ ಯಥಾವತ್ತಾಗಿ ಮಲೆನಾಡಿನ ರೋಚಕ ಕತೆಗಳ ಸರಣಿಯ ಎಂಟನೇ ಭಾಗದ ರೂಪದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.’

ಪುಸ್ತಕದ ಒಳಗೆ.. ೨೩ ಅಧ್ಯಾಯಗಳಿವೆ. ಅಂತಿಮ ಪುಟಗಳಲ್ಲಿ ಕೊನೆ ಮಾತು.. ಎಂದು ಲೇಖಕರು ಬಹಳಷ್ಟು ಒಳ್ಳೆಯ ಸಂಗತಿಗಳನ್ನು ಬರೆದಿದ್ದಾರೆ. ಈ ಪುಸ್ತಕದ ಕೆಲವು ಕಥೆಗಳಂತೂ ಬಹಳ ರೋಚಕವಾಗಿ ಪತ್ತೇದಾರಿ ಕಥೆಗಳನ್ನು ಹೋಲುತ್ತಿವೆ. ಭೂತದ ಕತೆಗಳೂ ಇವೆ. ಭಯಾನಕ ರಾತ್ರಿ, ಸಾವಿನ ಸಾಮೀಪ್ಯ, ಗುಡ್ಡದ ಭೂತ ಮೊದಲಾದ ಕಥೆಗಳು ಬಹಳಷ್ಟು ರೋಮಾಂಚನವನ್ನುಂಟು ಮಾಡುತ್ತವೆ. 

ಲೇಖಕರ ಬಾಲ್ಯದ ತುಂಟಾಟದ ಒಂದು ಉತ್ತಮ ಉದಾಹರಣೆ ಎಂದರೆ ಅನಂತ ಮಾಮನ ಫೋಟೋ ಪ್ರಕರಣ. ಲೇಖನದ ಸಲುವಾಗಿ ಬೆಂಗಳೂರಿನಿಂದ ಮಲೆನಾಡಿಗೆ (ಸಕಲೇಶಪುರ) ಬರುವ ಅನಂತರಾಮರು ಫೋಟೋ ತೆಗೆಯಲು ಕ್ಯಾಮರಾ ತೆಗೆದುಕೊಂಡು ಬಂದಿದ್ದರು. ಆ ಸಮಯದಲ್ಲಿ ಕ್ಯಾಮರಾ ಎಂಬುವುದು ಒಂದು ಅಪರೂಪದ ವಸ್ತು. ಅದರಲ್ಲಿ ರೀಲ್ ಹಾಕುವುದು, ಫ್ಲ್ಯಾಷ್ ಬೆಳಗುವ ಪರಿ ಎಲ್ಲವೂ ಆ ಸಮಯ ಬಾಲಕನಾಗಿದ್ದ ಲೇಖಕರಲ್ಲಿ ಅಚ್ಚರಿಯನ್ನು ಮೂಡಿಸುತ್ತಿತ್ತು. ಅನಂತರಾಮರನ್ನು ಊರು, ತೋಟ ತಿರುಗಾಡಿಸುವ ಜವಾಬ್ದಾರಿ ಹೊತ್ತ ಬಾಲಕ. ಆ ಬಾಲಕನಿಗೆ ಉತ್ಸಾಹ ಮೂಡಿಸಲು ಅನಂತರಾಮರು ಅವನ ಫೋಟೋವನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತೇನೆ ಎಂದು ಮಾತು ಕೊಟ್ಟು, ಅವನು ಕಿತ್ತಳೆ ಕೊಯ್ಯುವ ಫೋಟೋ ಎಲ್ಲಾ ತೆಗೆಸಿದರು. ಆ ಫೋಟೋಗಳು ಹೇಗೆ ಬಂದಿವೆ ಎಂದು ನೋಡುವ ಕುತೂಹಲ ಬಾಲಕನಿಗೆ. ಕೇಳಿದಾಗ ಬೆಂಗಳೂರು ಹೋದ ಮೇಲೆ ಕಳಿಸುತ್ತೇನೆ ಎಂಬ ಉತ್ತರ ದೊರೆತು ನಿರಾಶೆಯಾಗಿತ್ತು ಅವನಿಗೆ. ಆದರೂ ಅನಂತ ಮಾಮ ಹೊರಡುವ ದಿನ ಗುಟ್ಟಾಗಿ ರೀಲ್ ಹೊರ ತೆಗೆದು ನೋಡಿದರೆ ಅದರಲ್ಲಿ ಏನಿದೆ? ಎಲ್ಲವೂ ಕಪ್ಪು ಕಪ್ಪಾಗಿತ್ತು. ಅದನ್ನು ಡೆವಲಪ್ ಮಾಡಿಸಬೇಕೆಂಬ ಸಾಮಾನ್ಯ ಜ್ಞಾನ ಆ ಸಣ್ಣ ಪ್ರಾಯದಲ್ಲಿ ಲೇಖಕರಿಗೆ ಇರಲಿಲ್ಲ. ಬಹುತೇಕ ಇದು ಆ ಸಮಯದ ಎಲ್ಲರ ಅನುಭವವೂ ಆಗಿರುತ್ತದೆ. ಬೆಂಗಳೂರಿಗೆ ಅನಂತ ಮಾಮ ಹೋದ ಬಳಿಕ ಪತ್ರಿಕೆಯಲ್ಲಿ ಫೋಟೋ ಬರುತ್ತದೆ ಎಂದು ಲೇಖಕರು ಕಾದದ್ದೇ ಬಂತು. ನಂತರ ಅವರಿಗೆ ಗೊತ್ತಾಯ್ತು, ಆ ಫೊಟೋಗಳನ್ನು ಡೆವಲಪ್ ಆಗುವ ಮೊದಲೇ ರೀಲ್ ನಿಂದ ತೆಗೆದುದರಿಂದ ಎಲ್ಲಾ ಹಾಳಾಗಿ ಹೋಗಿವೆ ಎಂದು. ಆಗ ಲೇಖಕರಿಗೆ ಮನಸ್ಸಲ್ಲಿ ತುಂಬಾನೇ ಬೇಜಾರಾಯಿತು. ಆದರೇನು ಮಾಡುವುದು? ಸಮಯ ಮಿಂಚಿಹೋಗಿತ್ತು. ಹೀಗೆ ಹತ್ತು ಹಲವಾರು ಅನುಭವಗಳು ಈ ಪುಸ್ತಕದಲ್ಲಿವೆ. ಸಣ್ಣ ಸಣ್ಣ ಅಧ್ಯಾಯಗಳಲ್ಲಿ ಲೇಖಕರು ತಮ್ಮ ಬಾಲ್ಯದ ಜೀವನವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಅವರ ಬರಹಗಳ ಜೊತೆ ನಾವೂ ಮಲೆನಾಡಿನಲ್ಲಿ ಸುತ್ತಾಡಿದ ಅನುಭವ ಆಗುತ್ತದೆ. ಆನೆಗಳ ಉಪಟಳ, ಸಲೀನ ಎಂಬ ಹೆಂಗಸು, ಕರಿದೆವ್ವ ಪ್ರಸಂಗ ಎಲ್ಲವೂ ನಮ್ಮಲ್ಲಿ ಇನ್ನಷ್ಟು ಓದುವ ಕುತೂಹಲವನ್ನು ಮೂಡಿಸುತ್ತದೆ. 

ಸುಮಾರು ೧೭೫ ಪುಟಗಳ ಈ ಪುಸ್ತಕಕ್ಕೆ ಸುಂದರವಾದ ಮುಖಪುಟದ ಹೊದಿಕೆಯನ್ನು ಶಂಭುರಿತ್ತಿಯವರು ವಿನ್ಯಾಸ ಮಾಡಿದ್ದಾರೆ.