ಮಲೆನಾಡಿನ "ಮಾಳ" ಕಾವಲು, ಕೊನೆಗೆ ಕಂಬಳ. (ಭಾಗ 1)

Submitted by nvanalli on Thu, 02/02/2017 - 11:07

ಅದು ಬೆಳಗಿನ ನಾಲ್ಕನೇ ಜಾವ. ಭತ್ತದ ಗದ್ದೆಗೆ ಮಂಜಿನ ಮುಸುಕು ಮುಸುಕು. ಮೇಲ್ಗಡೆ ಆಕಾಶ ಮಸುಕು. ಸುತ್ತೆಲ್ಲ ಕಗ್ಗತ್ತಲು. ಎದುರಿಗೆ ಕಪ್ಪಗೆ ಕಾಣುವುದೆಲ್ಲ ಕಾಡು. ಗದ್ದೆಯ ಪಕ್ಕದಲ್ಲೇ ಹರಿವ ಹೊಳೆಯ ಜುಳು ಜುಳು ನಾದ. ಅದು ಬಿಟ್ಟರೆ ಬೇರೆ ಶಬ್ದವೇ ಇಲ್ಲ. ಜಗತ್ತೇ ಮಲಗಿದ ಹಾಗೆ ನೀರವ ವಾತಾವರಣ. 
 
'ಸದ್ದು ಮಾಡದೆ ಒಬ್ಬೊಬ್ಬರಾಗಿ ಬೇಲಿ ದಾಟಿದ್ದಾಯ್ತು. ಬೆಳೆದು ನಿಂತಿದೆ ಭತ್ತದ ಗದ್ದೆ. ಇನ್ನೂ ಹಾಲುತೆನೆ! ಏನು ರುಚಿ! ಬೇಗ ಬೇಗ ತಿಂದಷ್ಟೇ ಬಂತು. ಬೇಗ ಬೇಗ ಬಾಯಿಗಿಳಿಸುತ್ತಿದ್ದರೆ ... ಅಬ್ಬಬ್ಬ! ಏನದು ಡಬಡಬ ಸದ್ದು? ಮೇಲೆ ಬಿದ್ದಂತೆ ಗುದ್ದು. ಅದೋ ಕಾಯುವವರು ಬಂದೇಬಿಟ್ಟರು. ಇಲ್ಲೇ ಇದ್ದರೆ ಇನ್ನು ಉಳಿಗಾಲವೇ ಇಲ್ಲ. ಓಡಿರೋ. ಹಾರಿರೋ ಬೇಲಿ. ಜೀವ ಉಳಿದರೆ ಸಾಕು. ಮತ್ತೆ ನೋಡೋಣ'. 
 
ಕಾಡು ಹಂದಿಯ ಮಂದೆ ಮಲೆನಾಡ ಗದ್ದೆಗಳಿಗೆ ನುಗ್ಗುವುದು ಹೀಗೆ. ಕಾವಲುಗಾರ ಬರುವಷ್ಟರಲ್ಲಿ ಎಲ್ಲಾ ಖಾಲಿ. ಸೊಂಟ ಮುರಿದು ಬಿದ್ದ ತೆನೆಗಳೇ ಸಾಕ್ಷಿ, ಹಂದಿ ಬಂದಿದ್ದಕ್ಕೆ. ಬಿತ್ತಿದ ಬೀಜ ಕದಿರು ಉಗಿದ ಮೇಲೆ ಭತ್ತವಾಗಿ ಮನೆ ಸೇರುವವರೆಗೆ ಮಲೆನಾಡ ಗದ್ದೆಗಳಲ್ಲಿ ಇಂಥವೇ ನಾಟಕಗಳು - ದಿನರಾತ್ರಿ ಗದ್ದೆ ಕಾಯುವವರು ಹಾಗೂ ಗದ್ದೆ ಕದಿಯುವವರ ನಡುವೆ ಕತ್ತಲಲ್ಲೇ ಕದನ, ಅದಕ್ಕೆ ಕೊನೆಯೇ ಇಲ್ಲ. 
 
ಬೇರೆಡೆಗಿಂತ ಮಲೆನಾಡ ಕೃಷಿ ನಿಜಕ್ಕೂ ಕಷ್ಟ. ಬಯಲುಸೀಮೆ ಬೆಳವಲನಾಡುಗಳ ಸಮಸ್ಯೆ ಬೇರೆ. ಅಲ್ಲಿಯ ಜನಕ್ಕೆ ಮಲೆನಾಡ ಕಷ್ಟಗಳು ಕಲ್ಪನೆಗೆ ಸಿಗುವುದಿಲ್ಲ. ಈಗಲಂತೂ ಮಳೆಯನ್ನು ನಂಬಲಾಗುವುದಿಲ್ಲ. ಬೀಜ ಬಿತ್ತಿದ ವೇಳೆ 15 ದಿವಸ ಮಳೆಯೇ ಇಲ್ಲ. ಹೀಗಾಗಿ ಬೀಜ ಹುಟ್ಟುವುದೇ ಇಲ್ಲ. ಆಗಷ್ಟೇ ಮೊಳೆತು ಸಸಿಯಾದಾಗ ಮಳೆ ನಿಲ್ಲುವುದೇ ಇಲ್ಲ. ಸಸಿ ಕೊಳೆತು ಹೋಗಬೇಕು. ಇಂಥ ಅನಿಶ್ಚಿತ ಸ್ಥಿತಿಯಲ್ಲಿ ಮಲೆನಾಡ ಕೃಷಿ.
 
ಹುಟ್ಟುವಾಗ ಸಂಕಷ್ಟಗಳನ್ನು ಜಯಿಸಿ ಸಸಿ ಬೆಳೆಯಿತೆನ್ನೊಣ. ಆಗ ಕಾಡುಪ್ರಾಣಿಗಳ ತೀವ್ರ ಉಪಟಳ. ಅವು ತಿಂದು, ಹಾಳುಮಾಡಿ ಉಳಿಸಿದ್ದು ರೈತನಿಗೆ. ಈಗ ಮೊದಲಿನಂತೆ, ತೋಟ ಕಾಯಲು ಹೋದವರ ಜೀವಕ್ಕೆ ಮುಳುವಾಗುವ ದೊಡ್ಡ ಪ್ರಾಣಿಗಳಿಲ್ಲ, ನಿಜ. ಚಿಕ್ಕನಿರುವಾಗ 'ಹುಲಿ ಹೊಡೆದರಂತೆ' ಎಂಬ ಸುದ್ದಿ ಕೇಳಿ ಒಳಗೊಳಗೇ ನಡುಕ. ಅಂಥ ಸುದ್ದಿ ಈಗ ಕೇಳುವುದಿಲ್ಲ. ಬದಲಾಗಿ ಚಿಕ್ಕ-ಪುಟ್ಟ ಪ್ರಾಣಿಗಳ ತಂಟೆಯನ್ನೇ ತಡೆಯಲಾಗುವುದಿಲ್ಲ. ಮೊಲ, ಕಬ್ಬೆಕ್ಕು, ಕಡ, ಗಮಯ, ಕಾಡೆಮ್ಮೆ, ಕಾಡು ಹಂದಿ, ಕಾನುಕುರಿ ಮುಂತಾದವುಗಳ ದಾಂಧಲೆ, ಏನು ಮಾಡಿದರೂ ಕಡಿಮೆಯಾಗುತ್ತಿಲ್ಲ. 
 
ಇವುಗಳಲ್ಲೆಲ್ಲ ಅತ್ಯಂತ ಉಪದ್ರವದ್ದು ಕಾಡು ಹಂದಿ. ದಪ್ಪ ಹೊಟ್ಟೆಯ ಈ ಕಬ್ಬ ಪ್ರಾಣಿ ಒಂಟಿ ಬರುವುದೇ ಅಪರೂಪ. ಹಿಂಡು ಹಿಂಡಾಗಿ ಬಂದು ಗದ್ದೆಯಲ್ಲಿ ಬಿದ್ದು ಹೊರಳಾಡುವುದೆಂದರೆ ಅವಕ್ಕೆ ಬಹಳ ಪ್ರೀತಿ. ಹಂದಿ ತಿನ್ನುವುದು ಕಮ್ಮಿ. ಹಾಳುಮಾಡುವುದು ಹೆಚ್ಚು. ಹಿಂಡಿನಲ್ಲಿ ಒಮ್ಮೊಮ್ಮೆ 50-60 ಹಂದಿಗಳೂ ಇರಬಹುದು. ಒಮ್ಮೆ ಗದ್ದೆಗೆ ಇಳಿದರೆ ಕನಿಷ್ಟ ಮೂರು ಗದ್ದೆಗಳು ಸಂಪೂರ್ಣ ನಾಶ.
 
ಕಾಡು ಕಡಿಮೆಯಾದ ಹಾಗೆ ಮಲೆನಾಡಿನಲ್ಲಿ ಈ ಪ್ರಾಣಿಗಳ ಉಪಟಳ ಕಡಿಮೆಯಾಗಲಿಲ್ಲ. ಹೆಚ್ಚೇ ಆಯಿತೆಂದು ಕಂಡವರು ಹೇಳುತ್ತಾರೆ. ಕಾಡಲ್ಲಿ ತಿನ್ನಲು ಏನೂ ಸಿಕ್ಕುವುದಿಲ್ಲ.    ಹೀಗಾಗಿ ನೇರವಾಗಿ ನುಗ್ಗುವುದೇ ಭತ್ತದ ಗದ್ದೆಗಳಿಗೆ. ಹಿಂದೆಲ್ಲ ಜನ ಬೆಳೆ ರಕ್ಷಣೆಗಾಗಿ ಬಂದೂಕು ಹೊಂದಿರುತ್ತಿದ್ದರು. ಒಂದೆರಡು ಬಾರಿ ಗುಂಡು ಹೊಡೆದರೆ ಪ್ರಾಣಿಗಳು ಬರಲು ಹೆದರುತ್ತಿದ್ದವು. ಆದರೆ ಈಗ ಹಂದಿ ಹೊಡೆದರೂ ಹಿಡಿದುಕೊಂಡು ಹೋಗುತ್ತಾರೆ. 
 
ಇದೊಂದು ಮಲೆನಾಡಿನ ವಿಶಿಷ್ಟ ಸಮಸ್ಯೆ. ಪ್ರಕೃತಿ ವಿಕೋಪ, ಕಾಡು ಪ್ರಾಣಿಗಳಿಂದಾಗಿ ಇಲ್ಲಿಯ ಭತ್ತ, ಕಬ್ಬು ಮುಂತಾದ ಬೆಳೆಗಳು ಲಾಭದಾಯಕವಲ್ಲ. ತನ್ನದೇ ಭೂಮಿಯಲ್ಲಿ ಬೆಳೆದ ಅನ್ನ ಉಣ್ಣಬಹುದು ಎಂಬ ಭಾವನಾತ್ಮಕ ಸಂಬಂಧ ಬಿಟ್ಟರೆ ಮಲೆನಾಡಲ್ಲಿ ಭತ್ತ ಬೆಳೆಯುವುದರಲ್ಲಿ ಏನೂ ಅರ್ಥವಿಲ್ಲ. ಇದು ಎಲ್ಲರ ಅನುಭವ. ಹಗಲೆಲ್ಲ ದುಡಿದು   ಮನೆಗೆ ಹೋಗಿ ಸುಸ್ತಾಗಿ ಮಲಗಿದ ರೈತ ಮರುದಿನ ಎದ್ದು ಬಂದರೆ... ನಿನ್ನೆ ಮಾಡಿದ್ದೆಲ್ಲ ವ್ಯರ್ಥ. ರಾತ್ರಿ ಯಾವಾಗಲೋ ನುಗ್ಗಿದ ಪ್ರಾಣಿಗಳ ಕೆಲಸ. 
 
ಏನು ಮಾಡೋಣ? ರಾತ್ರಿ ಕಾವಲಿದ್ದರೂ ಬೆಳೆಯನ್ನು ಉಳಿಸಬೇಕಲ್ಲ? ರೈತನ ಈ ಹಠದಲ್ಲಿ ಹುಟ್ಟದ್ದು "ಮಾಳ". ಮಾಳವೆಂದರೆ ಭತ್ತ ಅಥವಾ ಕಬ್ಬಿನ ಗದ್ದೆಯ ಕಾಯಲಿಕ್ಕಾಗಿ ಗದ್ದೆಗಳಲ್ಲೇ ತಾತ್ಪೂರ್ತಿಕ ಕಟ್ಟಿಕೊಂಡ ಮನೆ. ಮನೆಯೆಂದರೆ ಮನೆಯಲ್ಲ! ಮಳೆ ಬಂದಾಗ, ಮಂಜು ಬೀಳುವಾಗ ಆಶ್ರಯ ಪಡೆಯಲು ಇರುವ ಕುಟೀರ. ನಾಲ್ಕೇ ನಾಲ್ಕು ತಾಳೆಗರಿಯ ಗೂಡು ಅಥವಾ ಸೋಗೆಯ ಮಾಡು. ಸುಖಪಡಲು ಅದು ಅಲ್ಲವೇ ಅಲ್ಲ. 
 
ಮಾಳಕಟ್ಟುವುದು ಹೇಗೆ? ಎತ್ತರದ ಜಾಗ ನೋಡಿ ಗದ್ದೆಯ ಬದಿಗೆ ನಾಲ್ಕು ಕಂಬ ನೆಡುತ್ತಾರೆ. ಅದಕ್ಕೆ ದಬ್ಬೆಗಳನ್ನು ಕಟ್ಟಿ ನೆಲದಿಂದ ನಾಕಾರು ಅಡಿಗಳ ಎತ್ತರಕ್ಕೆ ಒಂದು ಮಂಚ ಮಾಡುತ್ತಾರೆ. ಮಂಚದಲ್ಲಿ ಆರಾಮ ಮಲಗಲಾಗುವುದಿಲ್ಲ. ಚುಚ್ಚುವ, ಅಡಿಕೆ ದಬ್ಬೆಗಳ ಹಾಸು ಅದು. ಮಲಗಿದರೆ ನಿದ್ದೆಯೇ ಬಾರದು. ನಿಜ. ಮಾಳದ ಉದ್ದೇಶವೇ ನಿದ್ದೆ ಬಾರದಂತೆ, ರಾತ್ರಿ ಗದ್ದೆ ಕಾಯಲು ಹೋದಾಗ ಕುಳಿತುಕೊಳ್ಳಲು ಒಂದು ಜಾಗಬೇಕು ಅಷ್ಟೇ. ಅದಕ್ಕಾಗಿ ಮಾಳ. ಅದರ ಉದ್ದ ಒಂದೆರಡು ಮೊಳ! ನಿದ್ದೆ ಬಂದರೆ ಅಲ್ಲೇ ಮುರುಟಿಕೊಳ್ಳಬೇಕು. ನಡುನಡುವೆ ಏಳಲೇಬೇಕು. ಯಾಕೆಂದರೆ ನಿದ್ದೆಯ ಫಲವಾಗಿ "ಬೆಳೆ" ಕಾಡುಪ್ರಾಣಿಗಳ ಪಾಲಾದರೆ ಮಾಳ ಕಾದಿದ್ದು ವ್ಯರ್ಥವಾದೀತು!
 
ಮಾಳ ಕಾವಲಿನಲ್ಲಿ ಕಷ್ಟ-ಸುಖ ಎರಡೂ ಉಂಟು. ಮಾಳದ ಲೋಕ ಬಹಳ ವಿಶಿಷ್ಟ. ಅದು ಅರ್ಥವಾಗಬೇಕಾದರೆ. ಡಿಸೆಂಬರ್ ತಿಂಗಳು ರೈತನ ಗದ್ದೆಯಲ್ಲಿ ಭತ್ತ ಬೆಳೆದು ನಿಂತಾಗ ಅಥವಾ ಕಬ್ಬು ಆಡಲು ಸಿದ್ಧವಾಗಿರುವಾಗ ಮಾಳದಲ್ಲೇ ರಾತ್ರಿ ಬೆಳಗುಮಾಡುವ ರೈತನ ಚಟುವಟಿಕೆ ಗಮನಿಸಬೇಕು. 
 
'ರಾತ್ರಿ ಎಂಟರ ಸಮಯ. ಊಟವಾಗಿ ಕವಳ ಹಾಕಿ ಆಯ್ತು. ಹೆಂಡತಿ, ಮಕ್ಕಳು ಹಾಸಿಗೆ ಸಿದ್ಧ ಮಾಡುತ್ತಿದ್ದಾರೆ. ಮನೆಯ ಗಂಡಸು ಮಾಳಕ್ಕೆ ಹೊರಡುವ ಸಿದ್ಧತೆ ಮಾಡುತ್ತಾನೆ.  ಮನೆಯೊಳಗೆ ಮೆತ್ತನೆ ಹಾಸಿಗೆಯನ್ನು ಬಿಟ್ಟುಹೋಗಲು ಮನಸ್ಸೇ ಇಲ್ಲ. ಆದರೂ ಅನಿವಾರ್ಯ. ಕತ್ತಿ, ಕಂದೀಲು, ಬ್ಯಾಟರಿ ಹಿಡಿದು ಹೊರಡಬೇಕು. ಹೊರಗೆ ಕಡುಚಳಿ. ಕಂಬಳಿ ಬೇಕು. ಕಗ್ಗತ್ತಲು ಬೇರೆ. ದೇವರಾಣೆಗೂ ಮಲೆನಾಡಿನಲ್ಲಿ ರೈತನಾಗಿ ಹುಟ್ಟಬಾರದು ಎನ್ನಿಸುತ್ತದೆ!
 
ಅದು ಅವನ ಗದ್ದೆ. ಆಚೆ ಬದಿಯ ಗದ್ದೆಗಳಿಂದ ಆಗಲೇ ಕೂಗು ಕೇಳುತ್ತಿದೆ. "ಹೋ... ಹೋ..." ತಾನು ಬಂದಿದ್ದನ್ನೂ ಕೂಗಿ ಹೇಳಯತ್ತಾನೆ. "ಕೂ... ಹೋ..." ನಾಕು       ದಿಕ್ಕುಗಳಿಂಲೂ ಉತ್ತರ ಹೊರಡುತ್ತದೆ. ಶಾಂತ ವಾತಾವರಣದಲ್ಲಿ ಎದ್ದ ಮಾಳದ ಬಾವಂದಿರ ಕೇಕೆ ಪಕ್ಕದ ಕಾಡುಗಳಲ್ಲಿ ಎಂಟಾಗಿ ಹತ್ತಾಗಿ ಪ್ರತಿಧ್ವನಿತವಾಗುತ್ತವೆ.