ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಬರಹ

ನಾನೊಮ್ಮೆ ಮದುರೈಯ ನಮ್ಮೊಂದು ಕಂಪನಿಗೆ ಹೋದಾಗ ಅಲ್ಲೊಬ್ಬ ಹಿರಿಯ ಅಧಿಕಾರಿಗಳು ಬಲು ಒಲವಿನಿಂದ ತಾವಿದ್ದ ಹಾಸನದ ದಿನಗಳನ್ನು ನೆನೆಸಿಕೊಂಡರು. ಆಹಾ ಎಂಥಾ ಸವಿನೆನಪುಗಳು ಅವು, ಆ ದೇಶದ ನೆನಪುಗಳು ಎಂದು. ಆ ಗದ್ದೆ ಬಯಲು ಸೀಮೆಯ ಕಾಳು ಕಡ್ಡಿ ಪೈರು ಪಚ್ಚೆ ಕಾಯಿ ಪಲ್ಲೆಗಳನ್ನು, ಜನರನ್ನು. ಹಾಸನದ ಸೌತೇಕಾಯಿ, ಸೀಮೇ ಬದನೇಕಾಯಿ, ಅವರೇಕಾಯಿ, ಆ ಮಣ್ಣಿನ ವಾಸನೆ, ಮಲೆನಾಡ ಕಾಫಿ.

ಸೀತಾಫಲ, ಕಿತ್ತಳೆ, ಕಡಲೆ ಗಿಡ ತಿಂತಾ ಹೋಗುವ ಜನಸಮೂಹ. ನಮ್ಮೂರು ಬೇಲೂರಿನಲ್ಲಿ ಮನೆ ಮನೆ ತಿರುಗುವ ಬೆಣ್ಣೆ, ಮಜ್ಜಿಗೆಯ ಅಜ್ಜಿಯರು. ಆ ಮಜ್ಜಿಗೆಯ ತಂಪು ಸುವಾಸನೆ. ಆ ಚಳಿಯ ಮುಂಜಾವಿನ ಸೌದೆ ಒಲೆಯ ಬಚ್ಚಲ ಬಿಸಿ ನೀರಿನ ಹಬೆಯಲ್ಲಿ ಮೀಯುವ ಮುನ್ನ ಕಡ್ಡಿಗೆ ಪೋಣಿಸಿ ಸುಟ್ಟು ತಿನ್ನುವ ಅವರೇಕಾಯಿಯ ಪರಿಮಳಕ್ಕಿಲ್ಲ ಮಿಗಿಲು. ಹೆಂಚಿನ ಮಣ್ಣಿನ ಮನೆಯೊಳಗೆ ರಾತ್ರಿ ದಟ್ಟ ಹೊದ್ದು ಮಲಗುವ ಸೊಬಗಿನ ಬಾಲ್ಯ. ಕಣ್ ಮುಚ್ಚಿದೊಡನೆ ಬರುವ ಗಾಢ ನಿದ್ದೆಯಿಂದೆಚ್ಚರ ಬೆಳಿಗ್ಗೆಯೇ. ಚಳಿಯಿಂದಾಗುವ ಆ ಕಾಲೊಡೆತದ ನಡುವೆಯೂ ಚಿಮ್ಮುವ ಉಲ್ಲಾಸದ ಪ್ರತೀಕವಾಗಿದ್ದ ಕಾಫಿ ಲೋಟ. ಹೊರಗೆ ಹುಡುಗರು ಆಡುವ ಬುಗುರಿ, ಗೋಲಿಯಾಟ – ಅವರ ದೊಗಲೆ ಚಡ್ಡಿ, ಆಲ್ಟರೇಶನ್ ಪ್ಯಾಂಟುಗಳು. ಹೊಯ್ಸಳನಾಡಿನ ಸೌಂದರ್ಯ ಅದು, ಲೆಕ್ಕವಿಲ್ಲದಷ್ಟು ಪುರಾತನ ದೇವಾಲಯಗಳು. ಸಾಧಕರ ಕೇರಿಯದು.

ಬೇಲೂರಿನ ದುಃಖಕ್ಕೆಲ್ಲಾ ಸಾಂತ್ವನದಂತೆ ಬೆಳಂಜಾಮ, ಹೊಯ್ಸಳ ಅರಸ ವಿಷ್ಣುವರ್ಧನನ ಒಲವಿನ ಚೆನ್ನಕೇಶವ ದೇವಸ್ಥಾನದಿಂದ ಹೊಮ್ಮುವ ವೆಂಕಟೇಶ ಸುಪ್ರಭಾತ. ಅಲ್ಲಿನ ಕಲ್ಲ ಮಂಟಪದೊಳ ಹೊರಗೆ ಬಂದು ಹೋಗಿಯಾಡುವ ಆಟದಾಸೆಯೊಂದಿಗೆ ಮುಗಿವ ರುಚಿ ದೋಸೆ ಬೆಣ್ಣೆಯ ತಿಂಡಿ ತೀರ್ಥ.

ಹಣ ಕಾಣದ ಅಜ್ಜನ ಮನೆಯ ಚಿಕ್ಕಪ್ಪನ ಕನಸಿನ ಬೇಲೂರಿನ ದಸರಾ ಎಕ್ಸಿಬಿಶನ್ ನಲ್ಲಿಟ್ಟ ಅಂಗಡಿಯ ದೀವಾಳಿ ದುಃಖ ತಿಳಿಯದ ಆ ದಿನಗಳಲ್ಲಿ ಅವರಂಗಡಿಯಲ್ಲಿ ಪಡಕೊಂಡ ಹನುಮಂತನ ಲಾಕೆಟ್ ಗಳ ಕುರಿತ ಹಿಗ್ಗು. ಗೆಳೆಯನೊಡನೆ ಮನೆ ಮನೆಯ ದಸರಾ ಬೊಂಬೆ ಹಬ್ಬ ನೋಡಿ ನಮಸ್ಕರಿಸಿ ತಂಬಿಟ್ಟು ತಿಂದ ಕ್ಷಣಗಳು.

ಹಾಸನದ ಪುಟ್ಟ ರೂಮ್ ನಲ್ಲಿ ಮನೆಮನೆಗೆ ಪೇಪರ್ ಹಾಕಿ ಓದುತ್ತಿದ್ದ ಅಣ್ಣನೊಂದಿಗೆ ಜೀವಿಸುತ್ತಾ ಬಿ. ಎ ಮಾರ್ಕ್ಸಿಗೆ ಅಪ್ಪನ ಹತ್ತಿರ ಬೈಸಿಕೊಳ್ಳುತ್ತಿದ್ದ ಅತ್ತೆ (ಅವರ್ ತಂಗಿ). ಆ ಕಷ್ಟದ ದಿನಗಳಲ್ಲೂ ಸೀಮೆ ಎಣ್ಣೆ ಸ್ಟವ್ ನಲ್ಲಿ ಅಮ್ಮ ಅಡಿಗೆ ಮಾಡಿ ನಾವು ತಿಂದಂದಿನಿಂದ ಸೀಮೆ ಎಣ್ಣೆ ವಾಸನೆಯಲ್ಲೂ ಬರುವ ಮಧುರ ನೆನಪು. ಆ ಚಾಳಿಗೊಂದು ಚಿಕ್ಕ ಭಜನಾ ಕೋಣೆ – ಅದರಲ್ಲಿ ಸೀತಾಫಲದೆಸಳು ತಿನ್ನುತ್ತಾ ದೂರದ ಉಡುಪಿಯ ಸ್ಕೂಲ್ ಪರೀಕ್ಷೆಗೆ ಓದುವ ನಮ್ಮ ಅರ್ಧ ದುಗುಡ ಧಾವಂತ.

ಹಾಸನಾಂಬ ದರ್ಶನ ಮಾಡಿಕೊಂಡು ಬಂದು ಸಹ್ಯಾದ್ರಿ ಟಾಕೀಸಿನ ಒಂದು ಸಿನಿಮಾ ನೋಡಿ ನಂತರ ಕೆಂಪು ಬಸ್ಸಿನಲ್ಲಿ ಅಪ್ಪನ ಕೆಲ್ಸದೂರಿಗೆ ಮರಳುವಾಗ ಚಿಕ್ಕಪ್ಪನ ಟಾ ಟಾ ನೋಡುವಾಗಿನ ನೋವು. ಓ ಹಾಸನ ಬೇಲೂರುಗಳೇ ಎಂದಿಗೆ ಸಿಗೋಣ ಮತ್ತೆ ಎಂಬ ದುಃಖ.