ಮಲೇರಿಯಾ ಸೊಳ್ಳೆಗಳಿಗೆ ಬಿಯರ್ 'ಸೇವಕರು' ಇಷ್ಟವಂತೆ!
ಅಪರೂಪಕ್ಕೆ ಬೆಳಿಗ್ಗೆ ಬೇಗ ಎದ್ದು, ಅಂತರ್ಜಾಲದಲ್ಲಿ ಏನನ್ನೋ ಓದಬೇಕೆಂದು ಹುಡುಕುತ್ತಿದ್ದಾಗ, ಅದು ಹೇಗೋ ಬಿಯರ್ ಸೇವನೆ ಮತ್ತು ಮಲೇರಿಯಾ ಸೊಳ್ಳೆಗಳ ಕುರಿತು ಈ ಸಂಶೋಧನಾ ಲೇಖನ ಕಣ್ಣಿಗೆ ಬಿತ್ತು.
(ಅಂದ ಹಾಗೇ, 'ಕಣ್ಣಿಗೆ ಬಿತ್ತು' ಎನ್ನುತ್ತಲೇ, ಜೋಕೊಂದು ನೆನಪಾಯಿತು. ಹೇಳಿಬಿಡುತ್ತೇನೆ.
ಒಬ್ಬ: ನಿನ್ನೆ, ನನ್ನ ಹೆಂಡತಿ ಕಣ್ಣಿಗೆ ಕಸ ಬಿದ್ದಿತ್ತು. ವೈದ್ಯರ ಶುಲ್ಕಕ್ಕೆ ನೂರು ರೂಪಾಯಿ ಖರ್ಚಾಯಿತು.
ಇನ್ನೊಬ್ಬ: ಅದಾದರೂ ಪರವಾಗಿಲ್ಲ. ನಿನ್ನೆ, ನನ್ನ ಹೆಂಡತಿ ಕಣ್ಣಿಗೆ ಒಂದು ರೇಷ್ಮೆ ಸೀರೆ ಬಿತ್ತು. ಖರೀದಿಸಲು ನಾಲ್ಕೂವರೆ ಸಾವಿರ ರೂಪಾಯಿ ಖರ್ಚಾಯಿತು.)
ಹೋಗಲಿ ಬಿಡಿ. ಮಲೇರಿಯಾ ಅಂದರೆ ನಗುವ ವಿಷಯ ಏನಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ ಅರ್ಧದಷ್ಟು ಜನರು ಮಲೇರಿಯಾ ರೋಗದ ಅಪಾಯದಲ್ಲಿದ್ದಾರೆ. ೨೦೦೮ರಲ್ಲಿ ಸರಿ ಸುಮಾರು ೨೪೩,೦೦,೦೦,೦೦೦ ಮಲೇರಿಯಾ ರೋಗಿಗಳ ಪತ್ತೆಯಾಗಿತ್ತು. ಅವರಲ್ಲಿ ಅಂದಾಜು ೮,೬೩,೦೦೦ ಜನರು ಈ ರೋಗಕ್ಕೆ ಬಲಿಯಾಗಿದ್ದರು.
ಈ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಪ್ಲಾಸ್ಮೋಡಿಯಂ ಪರೋಪಜೀವಿ ಮತ್ತು ಅದನ್ನು ಹರಡುವ ಅನಾಫಿಲಿಸ್ ಸೊಳ್ಳೆ ೩೦,೦೦,೦೦,೦೦೦ ವರ್ಷಗಳಿಂದ ಈ ಭೂಮಿಯ ಮೇಲಿವೆ ಎನ್ನಲಾಗಿದೆ. ಇಂದಿಗೂ ಜಗತ್ತಿನ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹರಡಿರುವ ಮಲೇರಿಯಾದಿಂದಾಗಿ ಹೆಚ್ಹು ಕಡಿಮೆ ಪ್ರತಿ ೩೦ ಸೆಕೆಂಡುಗಳಿಗೆ ಒಬ್ಬ ಬಾಲಕನ ಸಾವು ಸಂಭವಿಸುತ್ತದೆ. ಈ ಸಾವುಗಳನ್ನು ನಾವು ತಡೆಗಟ್ಟಬಹುದಾಗಿದ್ದೂ, ತಡೆಗಟ್ಟಲಾರದವರಾಗಿದ್ದೇವೆ.
ಇರಲಿ; ನಾನೀಗ ಹೇಳ ಹೊರಟ ಸುದ್ದಿ ಬೇರೆ. ಈ ಸಂಶೋಧನಾ ಲೇಖನದ ಪ್ರಕಾರ ಅನಾಫಿಲಿಸ್ ಗಾಂಬಿಯೇ (Anopheles gambiae) ಸೊಳ್ಳೆಗಳು ಬಿಯರ್ ಕುಡಿದಿರುವ ಜನರತ್ತ ಆಕರ್ಷಿತವಾಗುತ್ತವೆ. Y tube-olfactometer ಎಂಬ ಸಾಧನವನ್ನು ಹಾಗೂ ೪೩೦೦ ಸೊಳ್ಳೆಗಳನ್ನು ಬಳಸಿ ನಾಲ್ವತ್ಮೂರು ಸ್ವಯಂ ಸೇವಕರ ಮೇಲೆ ಮಾಡಲಾದ ಈ ಸಂಶೋಧನೆಯಲ್ಲಿ ಸೊಳ್ಳೆಗಳು ಬಿಯರ್ ಕುಡಿದಿದ್ದ ಇಪ್ಪತ್ತೈದು ಜನ ಸ್ವಯಂ ಸೇವಕರ ಕಡೆ ಆಕರ್ಷಿತವಾದವು; ಹದಿನೆಂಟು ಜನ ನೀರು ಕುಡಿದ ಸ್ವಯಂ ಸೇವಕರತ್ತಲ್ಲ. ಸ್ವಯಂ ಸೇವಕರ ದೇಹದ ಉಷ್ಣತೆ ಮತ್ತು ಅವರು ಉಸಿರಿನಲ್ಲಿ ಹೊರಬಿಟ್ಟ ಕಾರ್ಬನ್ ಡಯೋಕ್ಸೈಡ್ ಪ್ರಮಾಣ ಸೊಳ್ಳೆಗಳ ಆಕರ್ಷಣೆಗೆ ಮುಖ್ಯವಾಗಿರಲಿಲ್ಲ.
ಸಂಶೋಧನಾಕಾರರು ಬಿಯರ್ ಸೇವನೆ ಮಲೇರಿಯಾ ರೋಗಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಈ ಕುರಿತು ಜನ ಜಾಗ್ರತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಾನಂತೂ ನಿಮ್ಮ ಗಮನಕ್ಕೆ ತಂದಿದ್ದೇನೆ!