ಮಲ್ಲಿಗೆ ಸಿಂಚನ (ಗಜಲ್ ಹೂದೋಟ)
ಕಲಬುರ್ಗಿ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮಲ್ಲಿನಾಥ ಶಿ. ತಳವಾರರದು ಮೇರು ವ್ಯಕ್ತಿತ್ವ. ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು ಡಾ.ತಳವಾರರು. ಇವರೊಬ್ಬ ಮಹಾನ್ ಸಾಹಿತಿ ಮಾತ್ರವಲ್ಲ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿರುವ ಮಹಾನ್ ಕವಿ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದವರು ಡಾ.ಮಲ್ಲಿನಾಥರು. ಗಜಲ್ ಕಾವ್ಯಕನ್ನಿಕೆಯನ್ನು ಕೈವಶ ಮಾಡಿಕೊಂಡು ಗಜಲ್ ಕಲಿಕಾರ್ಥಿಗಳಿಗೆ ಮಾರ್ಗದರ್ಶಕರಾಗಿ ನಿಂತಿದ್ದಾರೆ. ಗಜಲ್ ನ ವಿವಿಧ ಮಜಲುಗಳನ್ನು ತನ್ನೊಳಗೆ ಬಂಧಿಸಿದವರೆಂದರೆ ತಪ್ಪಾಗಲಾರದು. ಅತಿ ಮೃದುತ್ವವೇ ಇವರಿಗೆ ಭೂಷಣ. ಗಜಲ್ ನ ಧ್ಯಾನವು ಇವರ ವಿಶೇಷಣ.. ಇವರ ಮೊದಲ ಗಜಲ್ ಸಂಕಲನ "ಗಾಲಿಬ್ ಸ್ಮೃತಿ" ಅದೆಷ್ಟೋ ಗಜಲ್ ಕಲಿಕಾರ್ಥಿಗಳಿಗೆ ಗುರುವಾಗಿ ನಿಂತಿದೆ. ಸರಳ ಸುಂದರ ಮನಮೋಹಕ ಗಜಲ್ ಗಳ ಹೂಗುಚ್ಛ ಗಾಲಿಬ್ ಸ್ಮೃತಿ ಎಂಬುದು ಅತಿಶಯೋಕ್ತಿಯಲ್ಲ...
ಗಜಲ್ ಹೂದೋಟ ಎಂಬ ಹೆಸರಿಗೆ ಅನ್ವರ್ಥವಾಗಿದೆ ಇವರ ಮತ್ತೊಂದು ಗಜಲ್ ಸಂಕಲನ "ಮಲ್ಲಿಗೆ ಸಿಂಚನ". ಇದರಲ್ಲಿ ಈಗ ತಾನೇ ಅರಳಿ ನಗುತಿರುವ ಮಲ್ಲೆ ಹೂಗಳು ಕಂಪನ್ನು ಪಸರಿಸುವಂತೆ ಗಜಲ್ ಗಳು ಘಮಘಮಿಸುತ್ತಿವೆ. ಪ್ರತಿ ಗಜಲ್ ಗಳು ಒಂದಕ್ಕಿಂತ ಒಂದು ಸುಂದರ, ಭಾವನೆಗಳ ಆಗರ. ಇವರ ಗಜಲ್ ಗಳು ಪ್ರೀತಿ ಪ್ರೇಮದ ಮುನ್ನುಡಿ, ಸಮಾಜದ ಒಳಿತು ಕೆಡುಕುಗಳಿಗೆ ಕನ್ನಡಿ. ಸದಾ ಅಧ್ಯಯನ ಶೀಲರಾಗಿರುವ ಡಾ.ತಳವಾರರು ಪ್ರತಿ ಗಜಲ್ ನಲ್ಲೂ ಒಳಾರ್ಥವನ್ನು ಹುದುಗಿಸಿ ಬರೆಯುವುದರಲ್ಲಿ ಎತ್ತಿದ ಕೈ. ಗಜಲ್ ನಲ್ಲಿ ತಾಜ್ ಮಹಲ್ ಕಟ್ಟುವ ಕಲೆ ಡಾ.ಮಲ್ಲಿನಾಥರಿಗೆ ಕರಗತವಾಗಿದ್ದಂತು ಸುಳ್ಳಲ್ಲ.
"ಮಲ್ಲಿಗೆ ಸಿಂಚನ"ವು "ಗಾಲಿಬ್ ಸ್ಮೃತಿ"ಯು ಮುಂದುವರಿದ ಭಾಗವೆಂಬಂತೆ ಅನಾವರಣಗೊಂಡಿದೆ. ಗಾಲಿಬ್ ಸ್ಮೃತಿಯಲ್ಲಿ ಗಜಲ್ ಕಲಿಕಾರ್ಥಿಗಳಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಡಾ.ತಳವಾರರು ನೀಡಿರುವುದು ಸಂತಸದ ವಿಷಯ. ಮಲ್ಲಿಗೆ ಸಿಂಚನವು ಕೂಡ ಗಜಲ್ ನ ಪಾರಿಭಾಷಿಕ ಶಬ್ದಾರ್ಥವನ್ನು ಒಳಗೊಂಡಿದ್ದಲ್ಲದೆ ಅನೇಕ ಮಹಾನ್ ಗಜಲ್ ಕಾರರ ಷೇರ್ ನ ಉದಾಹರಣೆಯ ಮೂಲಕ ಗಜಲ್ ಕಲಿಕಾರ್ಥಿಗಳಿಗೆ ಬಹು ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ ಗಜಲ್ ಹೂದೋಟದಲ್ಲಿ.
"ಮಲ್ಲಿಗೆ ಸಿಂಚನ" (ಗಜಲ್ ಹೂದೋಟ) ಕೃತಿಯು ಗಜಲ್ ಪ್ರೇಮಿಗಳಿಗೆ ಗಜಲ್ ಗಳನ್ನು ಕಲಿಯಲು, ಓದಲು ಮತ್ತು ಆಸ್ವಾಧಿಸಲು ಬಹು ಉಪಯುಕ್ತ ಸಂಕಲನವೆಂಬುದರಲ್ಲಿ ಸಂಶಯವಿಲ್ಲ. ಮಲ್ಲಿಗೆ ಸಿಂಚನದಲ್ಲಿ ಗಜಲ್ ಪುಷ್ಪಗಳು ಅರಳಿ ನಗುತ್ತಾ ಓದುಗರಿಗೆ ಸುಂದರ ರಸಾನುಭೂತಿ ನೀಡಲು ಸಜ್ಜಾಗಿ ನಿಂತಿವೆ. ಡಾ.ತಳವಾರರ ಗಜಲ್ ಗಳಲ್ಲಿ ಗೇಯತೆ, ಮೃದುತ್ವ, ಸಾಮಾಜಿಕ ಕಳಕಳಿ ಎದ್ದು ಕಾಣುತ್ತಿವೆ. ವಿವಿಧ ಪ್ರಕಾರಗಳ ಗಜಲ್ ಗಳು ಮಲ್ಲಿಗೆ ಸಿಂಚನದಲ್ಲಿ ಸುವಾಸನೆ ಬೀರುತ್ತಿವೆ. ಅದರ ಘಮದ ಅಮಲನ್ನು ಮನತುಂಬಿಕೊಳ್ಳಲು ಡಾ.ತಳವಾರರು ಓದುಗರ ಮುಂದಿಟ್ಟಿದ್ದಾರೆ.
ಮಲ್ಲಿಗೆ ಸಿಂಚನದ ಕೆಲವು ಮಿಸ್ರಾಗಳು ನಾ ಕಂಡಂತೆ ಅತ್ಯದ್ಭುತ ರಸಾನುಭೂತಿ ನೀಡುವಂತವು. ಅವುಗಳಲ್ಲಿ ನನ್ನ ಮನದ ಕದ ತಟ್ಟಿದ ಕೆಲವು ಮಿಸ್ರಾಗಳು.
"ಹಣವಂತರ ಓಲೈಕೆಗೆ ಸಿದ್ಧವಾಗುತಿವೆ ಬೃಹತ್ ವೇದಿಕೆಗಳು
ಗಳಿಕೆಯ ಹಿಂದಿರುವ ಅಂಧದ ಕರಾಮತನ್ನು ಗುರುತಿಸುವುದಿಲ್ಲ"
ಗಜಲ್ ೬ ರ ಈ ಮಿಸ್ರಾವು ಅಂಧಕಾರದಲ್ಲಿ ಸಮಾಜವು ಮುಳುಗಿರುವ ಬಗೆಯನ್ನು ಎತ್ತಿ ತೋರಿಸುತ್ತಿದೆ. ಈ ಗಜಲ್ ನ ಪ್ರತಿ ಮಿಸ್ರಾವು ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.
ನಾಡೋಜ ಡಾ.ಗೀತಾ ನಾಗಭೂಷಣ ರವರಿಗೆ ಬರೆದ ಗಜಲ್ ನ ಪ್ರತಿ ಮಿಸ್ರಾಗಳು ಎದೆಗೆ ನಾಟುವಂತಿದೆ.
"ಅಸಹಾಯಕತೆಯನ್ನು ಸದೆ ಬಡಿದು ನಿಂತವರು ನೀವು
ಶೋಷಣೆಯ ವಿರುದ್ಧವಾಗಿ ಸಟೆದು ನಿಂತವರು ನೀವು"
ಗಜಲ್ ೮ ರ ಈ ಮಿಸ್ರಾವು ಪ್ರತಿಯೊಬ್ಬ ಅಸಹಾಯಕ ಹೆಣ್ಣಿನ ಮನಸಿನ ಕನ್ನಡಿಯಂತಿದೆ. ಡಾ.ಗೀತಾ ನಾಗಭೂಷಣರಿಗೆ ಸಲ್ಲಿಸಿದ ನುಡಿ ನಮನವಾದರೂ ಪ್ರತಿಯೊಬ್ಬ ಹೆಣ್ಣು ಕೂಡ ಸಮಾಜದ ಕರಾಳತೆಯನ್ನು ಮೆಟ್ಟಿ ನಿಲ್ಲಿರೆಂಬ ಸಂದೇಶವನ್ನು ಅವರ ಮೂಲಕ ಸಾರುತ್ತಿದೆ.
ಪ್ರಕೃತಿ ಮಾತೆಯ ಆರಾಧನೆ ಡಾ.ತಳವಾರರು ಈ ಗಜಲ್ ನಲ್ಲಿ ಅದ್ಭುತವಾಗಿ ಮಾಡಿದ್ದಾರೆಂದರೆ ತಪ್ಪಾಗಲಾರದು.
"ಕಾದ ಇಳೆಗೆ ತಂಪಾದ ಅಪ್ಪುಗೆ ನೀಡುತಿರುವನು ಮಳೆರಾಯ
'ಮಲ್ಲಿ' ಪ್ರೀತಿಯ ತಂಗಾಳಿ ಸೇವಿಸಲು ಬೇಕು ನಮಗೆ ಹಸಿರು"
ಗಜಲ್ ೧೪ ರ ಈ ಮಿಸ್ರಾದಲ್ಲಿ ಪ್ರಕೃತಿಯ ಹಸಿರನ್ನು ಮೈದುಂಬಿ ಆಸ್ವಾದಿಸುತ್ತಾ ಸಾಮಾಜಿಕ ಕಳಕಳಿಯನ್ನು ಜೊತೆಗೂಡಿಸಿರುವುದು ಮತ್ತೊಂದು ವಿಶೇಷ. ನಿಜಕ್ಕೂ ಹೇಳಬೇಕೆಂದರೆ ಈ ಗಜಲ್ ನಲ್ಲಿ ಧ್ಯಾನಸ್ಥ ಡಾ.ತಳವಾರರನ್ನು ನೋಡಬಹುದು.
ನಮ್ಮೆಲ್ಲರ ಜನ್ಮದಾತೆ ತಾಯಿ. ಮಮತೆಗೆ ಪರ್ಯಾಯ ಪದವೇ ಮಾತೆ. ಮಾತೆಯ ಮುಂದೆ ಮಗುವಿನ ರೋದನದಂತೆ ಮೂಡಿ ಬಂದಿದೆ ಈ ಗಜಲ್.
"ಹಸಿ ಮಾಂಸದ ಮುದ್ದೆಯನ್ನು ಕಂಡು ಖುಷಿ ಪಟ್ಟವಳು ನೀನು
ನಿನ್ನ ಋಣ ತೀರಿಸಲಾಗದೆ 'ಮಲ್ಲಿ'ಯ ಮನವು ಗೋರಿಯನ್ನು ಅಗೆಯುತಿದೆ ಮಾ"
ಗಜಲ್ ೧೬ ರ ಈ ಮಿಸ್ರಾದಲ್ಲಿ ಅದೆಷ್ಟೋ ಒಳಾರ್ಥವನ್ನು ಅಡಗಿಸಿದ ಡಾ.ಮಲ್ಲಿನಾಥರ ಹೃದಯ ವೈಶಾಲ್ಯತೆ ನೋಡಬಹುದು. ಈ ಗಜಲ್ ನ ಪ್ರತಿ ಪದಗಳೂ ಮೌನವಾಗಿ ರೋಧಿಸಿದಂತಿದೆ. ತಾಯಿ ಎಂಬ ಪದವೇ ಗೌರವ ಸೂಚಕ. ಅಂಥ ಮಾತೆಗೆ ನುಡಿನಮನ ಸಲ್ಲಿಸಿದಂತಿದೆ ಈ ಗಜಲ್.
ಎಲ್ಲಾ ಕಾರ್ಮಿಕರಿಗೂ ಗಜಲ್ ನ ಮೂಲಕ ಗೌರವ ಸಮರ್ಪಣೆ ಮಾಡಿರುವುದು ಡಾ.ಮಲ್ಲಿನಾಥರ ವೈಶಿಷ್ಟ್ಯತೆಗಳಲ್ಲೊಂದು. ದೇಶದ ಬೆನ್ನೆಲುಬು ನಮ್ಮೆಲ್ಲ ದುಡಿಯುವ ಕೈಗಳು. ಯಂತ್ರಗಳು ಎಷ್ಟೇ ಬಂದರೂ ಬೆವರಿಲ್ಲದೆ ಬದುಕು ಸಾಗಿದೆ ಎಂಬ ಮಾತಿಗೆ ಇವರ ಗಜಲ್ ಸಾಕ್ಷಿಯಾಗಿ ನಿಂತಿದೆ.
"ಯಂತ್ರಗಳ ನಾಡಿ ಮಿಡಿತ ಅರಿತ ಹೃದಯವಂತರು
ಕತ್ತೆಯ ರೂಪದಲ್ಲಿ ದುಡಿಸಿಕೊಳ್ಳುವವರು ಮನುಷ್ಯರೇ ಅಲ್ಲ"
ಗಜಲ್ ೨೫ ರ ಈ ಮಿಸ್ರಾದಲ್ಲಿ ಕಾರ್ಮಿಕರ ಹೃದಯವಂತಿಕೆಯನ್ನು ಎತ್ತಿ ಹಿಡಿದಿದ್ದಾರೆ. ಹಾಗೆಯೇ ದುಡಿಸಿಕೊಳ್ಳುವವನ ಮನುಷ್ಯತ್ವಕ್ಕೆ ಕನ್ನಡಿಯನ್ನಿರಿಸಿದ್ದಾರೆ.
ಒಬ್ಬ ತಾಯಿಯ ಮನದ ಆಕ್ರಂದನವು ಈ ಗಜಲ್ ನಲ್ಲಿ ಮುಗಿಲು ಮುಟ್ಟಿದಂತೆ ಅನಿಸುತ್ತಿದೆ. ಅದೆಷ್ಟೋ ನೋವುಗಳಿಗೆ ಆಸರೆಯಾದವಳು ಹೆಣ್ಣು ಎಂಬುದನ್ನು ನಿರೂಪಿಸುವಂತೆ ಹೆಣ್ಣಿನ ಮನವನ್ನು ಬಿಚ್ಚಿಟ್ಟಿದ್ದಾರೆ ಈ ಗಜಲ್ ನಲ್ಲಿ.
"ನಿನ್ನ ಜನನವು ನನಗೆ ಸಾವಿನ ಸವಿರುಚಿ ತೋರಿಸಿತು ಕಂದ.
ಬಂಜೆಯ ಭಾರವಾದ ಪಟ್ಟ ಬಿಸಿ ಒಡಲಿನಿಂದ ಕಳಚಿತು ಕಂದ"
ಗಜಲ್ ೩೪ ರ ಈ ಮಿಸ್ರಾದಲ್ಲಿ ಹೆಣ್ಣಿನ ಒಡಲನ್ನು ಬಗೆದಿಟ್ಟಂತೆ ನಮ್ಮ ಕಣ್ಣೆದುರಿಗಿರಿಸಿದವರು ಡಾ.ಮಲ್ಲಿನಾಥರು. ನಿಜಕ್ಕೂ ಹೇಳಬೇಕೆಂದರೆ ಹೆರಿಗೆ ಎನ್ನುವುದು ಹೆಣ್ಣಿಗೆ ಪುನರ್ಜನ್ಮ. ತಾಯ್ತನವೆಂಬುದು ಬಂಜೆಯ ಪಟ್ಟಕ್ಕೆ ಮುಕ್ತಿಯಿದೆ ಎಂಬುದನ್ನು ಮನಮುಟ್ಟುವಂತೆ ಬಿಂಬಿಸಿದ್ದಾರೆ.
ಇಂಥ ಮನಮುಟ್ಟುವ ಅನೇಕ ಗಜಲ್ ಗಳು ಗಜಲ್ ಹೂದೋಟದಲ್ಲಿ ತಾರೆಗಳಂತೆ ಮಿನುಗುತ್ತಿವೆ. ಸಹೃದಯ ಓದುಗ ಮಿತ್ರರು ಮಲ್ಲಿಗೆ ಸಿಂಚನದ ಸವಿಯನ್ನು ಆಸ್ವಾದಿಸಿ, ಆನಂದಿಸಿ ಎಂಬುದು ನನ್ನ ವಿನಂತಿ. ಇನ್ನೂ ಹೆಚ್ಚು ಹೆಚ್ಚು ಗಜಲ್ ಗಳು ಡಾ.ತಳವಾರರ ಲೇಖನಿಯಿಂದ ಮೂಡಿ ಬರಲಿ.
-ಅರ್ಚನಾ ಯಳಬೇರು, ಕಮಲಶಿಲೆ.