ಮಳೆಕೊಯ್ಲಿನ ಸರಳ ಸೂತ್ರ
ಧಾರಾಕಾರವಾಗಿ ಸುರಿಯುವ ಮಳೆ. ರಭಸದಿಂದ ಹರಿದು ಹೋಗುವ ಮಳೆನೀರು. ನಾವೆಲ್ಲ ಇದನ್ನು ನೋಡಿದವರು, ನೋಡುತ್ತ ನೋಡುತ್ತ ಖುಷಿ ಪಟ್ಟವರು. ಆಗೆಂದಾದರೂ ’ಈ ಮಳೆನೀರನ್ನು ಕೊಯ್ಲು ಮಾಡಲು ಸುಲಭದ ದಾರಿ ಯಾವುದು’ ಎಂಬ ಪ್ರಶ್ನೆ ಕಾಡಿದೆಯೇ?
ಈಗ ಬೇಸಗೆ ಮುಗಿಯುತ್ತಿದೆ. ಜೊತೆಗೆ ಮಾವಿನ ಹಂಗಾಮು ಮುಗಿಯುತ್ತಿದೆ. ಇನ್ನಷ್ಟು ಕಾಲ ಮಾವು ತಿನ್ನಲು ಸಿಗಬೇಕಾದರೆ ಏನು ಮಾಡಬೇಕು? ಮಾವಿನ ರಸಪಾಕ ಮಾಡಿಟ್ಟರೆ ಒಂದು ತಿಂಗಳು ಉಳಿದೀತು. ಮಾವಿನ ರಸ ಬಿಸಿಲಿನಲ್ಲಿ ಒಣಗಿಸಿ ಮಾಂಬಳ ಮಾಡಿಟ್ಟರೆ ಒಂದು ವರುಷ ಉಳಿದೀತು. ಮಾವಿನ ಉಪ್ಪಿನಕಾಯಿ ಮಾಡಿಟ್ಟರೆ ಎರಡು ವರುಷ ಉಳಿದೀತು.
ಹಾಗೆಯೇ, ಮಳೆನೀರು ಉಳಿಸಲು ನೂರಾರು ದಾರಿಗಳಿವೆ. ಈ ದಾರಿಗಳ ಗುರಿ - ಮಳೆ ನೀರಿಂಗಿಸುವುದು. ಇಲ್ಲಿದೆ ಅದರ ಸರಳ ಸೂತ್ರ: ಓಡುವ ನೀರನ್ನು ನಡೆಯುವಂತೆ ಮಾಡಿ; ನಡೆಯುವ ನೀರನ್ನು ತೆವಳುವಂತೆ ಮಾಡಿ; ತೆವಳುವ ನೀರನ್ನು ನಿಲ್ಲಿಸಿ; ನಿಂತ ನೀರನ್ನು ಇಂಗಿಸಿ.
ಈ ಸರಳ ಸೂತ್ರ ಬಳಸಿ ಯಶಸ್ವಿಯಾದವರ ಅನುಭವ ತಿಳಿಯೋಣ. ದಕ್ಷಿಣಕನ್ನಡದ ವಿಟ್ಲ ಗುಡ್ಡಗಳ ಊರು. ಅಲ್ಲಿನ ಪೇಟೆಯ ಎತ್ತರದ ಜಾಗದಲ್ಲಿದೆ ಇಗರ್ಜಿ. ಅದರ ಧರ್ಮಗುರು ಫಾ. ಬೆನೆಡಿಕ್ಟ್ ರೇಗೋ ಮಳೆನೀರಿಂಗಿಸಲಿಕ್ಕಾಗಿ ಅನುಸರಿಸಿದ್ದು ಇದೇ ಸೂತ್ರ. ಚರ್ಚಿನ ಕಟ್ಟಡದ ಸುತ್ತಲೂ "u" ಆಕಾರದ ಕಣಿ ತೋಡಿಸಿದರು. ಈ ಕಣಿಯೊಳಗೆ ಅಲ್ಲಲ್ಲಿ ದೊಡ್ಡ ತೊಟ್ಟಿಲಿನಂತಹ ಗುಂಡಿಗಳು. ಚರ್ಚಿನ ಚಾವಣಿ ಮತ್ತು ಅಂಗಳದಲ್ಲಿ ಬಿದ್ದ ಮಳೆನೀರೆಲ್ಲ ಈ ಕಣಿಗೆ ಹರಿದು ಬಂದು ನಿಧಾನವಾಗಿ ಇಂಗುತ್ತದೆ - ಲಕ್ಷಲಕ್ಷ ಲೀಟರ್. (ದಕ್ಷಿಣಕನ್ನಡದಲ್ಲಿ ಸರಾಸರಿ ಮಳೆ ೪,೦೦೦ ಮಿಮೀ. ಅಂದರೆ ಅಲ್ಲಿ ಪ್ರತಿ ಸೆಂಟ್ಸ್ (೪೦ ಚ.ಮೀ.) ಜಾಗದಲ್ಲಿ ವರುಷಕ್ಕೆ ಬೀಳುವ ಮಳೆ ೧.೬ ಲಕ್ಷ ಲೀಟರ್)
ವಿಟ್ಲದ ಹತ್ತಿರದ ವಾರಣಾಶಿ ಫಾರ್ಮಿಗೆ ಹೋಗಿದ್ದಾಗ ಅಲ್ಲಿ ಕಂಡದ್ದು ಮಳೆ ನೀರಿಂಗಿಸಲು ವಾರಣಾಶಿ ಕೃಷ್ಣಮೂರ್ತಿ ಬಳಸಿದ ಹಲವು ರೀತಿಗಳು. ಗುಡ್ಡದ ಮೇಲಿನಿಂದ ಹಾದು ಬರುವ ಒಂದು ತೋಡಿನ ನೀರನ್ನು ತಿರುಗಿಸಿ, ತನ್ನ ಜಮೀನಿನಲ್ಲಿ ಸುತ್ತಾಡಿಸಿದ್ದಾರೆ. ಹೀಗೆ ಸಾಗುವಾಗ ಮಳೆನೀರು ಹೆಚ್ಚು ಇಂಗುತ್ತದೆ. ಮಳೆನೀರಿನ ತೋಡುಗಳಲ್ಲಿ ಅಲ್ಲಲ್ಲಿ ಕಲ್ಲುಗಳನ್ನಿರಿಸಿ, ನೀರಿನ ಹರಿವಿಗೆ ತಡೆಯೊಡ್ಡಿದ್ದಾರೆ. ನೀರು ಹೀಗೆ ರಭಸವಿಲ್ಲದೆ ತೆವಳಿಕೊಂಡು ಸಾಗುವಾಗ ಇನ್ನಷ್ಟು ಇಂಗುತ್ತದೆ. ಅದಲ್ಲದೆ, ಮಳೆನೀರನ್ನು ನಿಲ್ಲಿಸಿ ಇಂಗಿಸಲು ಕೆರೆಯ ಮೇಲ್ಭಾಗದಲ್ಲಿ ಒಂದು ಮದಕ (ಎರಡು ಗುಡ್ಡಗಳ ನಡುವಿನ ತಗ್ಗಿನಲ್ಲಿ ಕಟ್ಟುವ ಪುಟ್ಟ ಅಣೆಕಟ್ಟು) ನಿರ್ಮಿಸಿದ್ದಾರೆ. ಮಾತ್ರವಲ್ಲ, ವಾರಣಾಶಿ ಫಾರ್ಮಿನ ಕಟ್ಟಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. (ಇದು "ಕಟ್ಟಗಳು: ಅನುಶೋಧನೆಗಳು ಮತ್ತು ವಾರಣಾಶಿ ಮಾದರಿ" ಪುಸ್ತಕದಲ್ಲಿ ದಾಖಲಾಗಿದೆ.) ಹಾಗಾಗಿ ಅಲ್ಲೀಗ ನೀರ ನಿಶ್ಚಿಂತೆ.
ಮೇ ೧೨, ೨೦೦೯ರಂದು ಸುಳ್ಯದ ಸ್ನೇಹ ಪ್ರೌಢಶಾಲೆಗೆ ಹೋಗಿದ್ದೆ. ಅದು ಗುಡ್ಡದಲ್ಲಿರುವ ಶಾಲೆ. ಅದರ ಸಂಸ್ಥಾಪಕ ಡಾ. ಚಂದ್ರಶೇಖರ ದಾಮ್ಲೆ ಗುಡ್ಡದ ನೆತ್ತಿಗೆ ಕರೆದೊಯ್ದು, ಮಳೆನೀರನ್ನು ಗುಡ್ಡದಲ್ಲಿ ಸುತ್ತಾಡಿಸಲು ರಚಿಸಿದ ತೋಡನ್ನು ತೋರಿಸಿದರು. ಮಳೆ ನೀರಿಂಗಿಸಲು ನಿರ್ಮಿಸಿದ ಇಂಗುಗುಂಡಿಗಳಿಂದ ತೆಗೆದ ಮಣ್ಣು ಹಸಿಹಸಿಯಾಗಿತ್ತು. ಹತ್ತು ವರುಷಗಳ ಮುಂಚಿನ ಪರಿಸ್ಥಿತಿ ನೆನಪುಮಾಡಿಕೊಂಡರು ದಾಮ್ಲೆ, "ಈ ಗುಡ್ಡದ ಜಾಗ ನಮಗೆ ಮಾರಿದವರು ಒಬ್ಬರು ಅಜ್ಜಿ. ಬೇಸಗೆಯಲ್ಲಿ ಗುಡ್ಡದ ಬುಡದ ಬಾವಿ ತಳ ಕಾಣುತ್ತಿತ್ತು. ಅಜ್ಜಿ ಬಾವಿಯ ತಳಕ್ಕಿಳಿದರೆ ದಿನಕ್ಕೆ ನಾಲ್ಕೈದು ಕೊಡ ನೀರು ಸಿಗುತ್ತಿತ್ತು". ಅಂತಹ ಜಾಗದಲ್ಲೀಗ ನೀರ ನಿಶ್ಚಿಂತೆ. ಬೇಸಗೆಯಲ್ಲಿ ಶಾಲಾವಠಾರದ ನೂರಾರು ಹೂಗಿಡಗಳಿಗೆ, ಅಲಂಕಾರಗಿಡಗಳಿಗೆ ತುಂತುರು ನೀರಾವರಿ.
ನಮ್ಮ ಜಮೀನಿನಲ್ಲಿ ಹರಿದು ಹೋಗುವ ಮಳೆನೀರನ್ನು ನೋಡುತ್ತಿದ್ದರೆ, ಅದನ್ನು ಎಲ್ಲಿ ನಡೆಸಬೇಕು, ಎಲ್ಲಿ ನಿಧಾನಿಸಬೇಕು, ಎಲ್ಲಿ ನಿಲ್ಲಿಸಬೇಕು ಮತ್ತು ಎಲ್ಲಿ ಇಂಗಿಸಬೇಕೆಂದು ನಮಗೇ ತಿಳಿಯುತ್ತದೆ. ಹಾಗೆ ತಲೆಯಲ್ಲಿ ಮಿಂಚಿದ್ದನ್ನು ನೆಲಕ್ಕೆ ಇಳಿಸಿದರೆ ಮಳೆನೀರೂ ಮಣ್ಣಿನಾಳಕ್ಕೆ ಇಳಿಯುತ್ತದೆ, ಅಲ್ಲವೇ?