ಮಳೆಗಾಲದಲ್ಲಿ ಒದ್ದೆ ಬಟ್ಟೆಯ ಸಮಸ್ಯೆ
ಮಳೆಗಾಲ ಪ್ರಾರಂಭವಾದೊಡನೆಯೇ ಮಹಿಳೆಯರಿಗೆ ಕಾಡುವ ಸಮಸ್ಯೆ ಬಟ್ಟೆ ಒಣಗಿಸುವುದು ಹೇಗೆ? ಎಂಬುದು. ಎಷ್ಟೇ ವಾಷಿಂಗ್ ಮೆಷೀನ್ ಡ್ರೈಯರ್ ನಲ್ಲಿ ಒಣಗಿಸಿದರೂ ಅದು ಪೂರ್ತಿಯಾಗಿ ಒಣಗುವುದಿಲ್ಲ. ಇಡೀ ದಿನ ಸುರಿಯುವ ಮಳೆಯಿಂದ ಮನೆಯ ಒಳಗಡೆ ಒಣಗಲು ಹಾಕಿದ ಬಟ್ಟೆಗಳೂ ಒಣಗುವುದಿಲ್ಲ. ಫ್ಯಾನ್ ವೇಗವಾಗಿ ಹಾಕಿ ಒಣಗಿಸುವ ಎಂದರೆ ಜೋರಾದ ಗಾಳಿಗೆ ಚಳಿಯೂ ಜೋರಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಬಟ್ಟೆ ಒಣಗಿಸುವ ಸಮಸ್ಯೆ ಒಂದೆಡೆಯಾದರೆ ಒದ್ದೆ ಅಥವಾ ಅರೆ ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ನಾನಾ ಸಮಸ್ಯೆಗಳು ತಲೆದೋರುತ್ತವೆ.
ಒದ್ದೆಯಾಗಿರುವ ಬಟ್ಟೆಗಳನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ಪ್ರಾರಂಭವಾಗಬಹುದು. ಈಗಿನ ಕಾಲಕ್ಕೆ ಆರೋಗ್ಯಕರ ಜೀವನ ಶೈಲಿ ಬಹು ಅಗತ್ಯ. ಮಳೆಗಾಲ ಪ್ರಾರಂಭವಾದ ಕೂಡಲೇ ಹಲವಾರು ರೋಗಗಳು ಮನುಷ್ಯನನ್ನು ಕಾಡಲು ಶುರುವಾಗುತ್ತದೆ. ಶೀತ, ವೈರಲ್ ಜ್ವರ, ತಲೆನೋವು ಇವೆಲ್ಲಾ ಸಾಮಾನ್ಯ. ಆದರೆ ಈಗ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯಾ, ಎಚ್ ೧ ಎನ್ ೧, ಹಕ್ಕಿ ಜ್ವರ, ಹಂದಿ ಜ್ವರ ಮೊದಲಾದುವುಗಳು ಕಾಡತೊಡಗಿವೆ. ಈ ಕಾರಣಗಳಿಂದ ನಾವು ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಬೇಕು. ಸಾಲು ಸಾಲು ರೋಗಗಳು ಬರುವಾಗ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ.
ಮಳೆಗಾಲದಲ್ಲಿ ನಾವು ಮನೆಯಿಂದ ಹೊರಗಡೆ ಹೋಗುವಾಗ ನಮ್ಮ ಬಟ್ಟೆಗಳು ಒದ್ದೆಯಾಗುವುದು, ಕೆಸರಾಗುವುದು ಸಾಮಾನ್ಯ ಸಂಗತಿ. ಒಗೆದ ಬಟ್ಟೆಗಳೂ ಒಣಗುವುದಿಲ್ಲ. ೨-೩ ದಿನಗಳಲ್ಲಿ ಒಣಗಿದರೂ ಒಂದು ರೀತಿಯ ವಾಸನೆ. ಈ ಬಟ್ಟೆಗಳನ್ನು ಅದರಲ್ಲೂ ಸರಿಯಾಗಿ ಒಣಗದ ಒಳ ಉಡುಪುಗಳನ್ನು ಧರಿಸುವುದರಿಂದ ಸೋಂಕುಗಳು ತಗುಲಿ ರೋಗ ಬರುವ ಸಾಧ್ಯತೆ ಅಧಿಕ. ಈ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಅತ್ಯಂತ ಅಗತ್ಯ. ಕೆಲವರು ಬಟ್ಟೆ ಸರಿಯಾಗಿ ಒಣಗಿಲ್ಲವಾದರೂ ಅದನ್ನೇ ಧರಿಸುತ್ತಾರೆ. ಇದರಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಎಂದು ನೋಡುವ.
ಒದ್ದೆ ಬಟ್ಟೆಗಳಲ್ಲಿ ಹಲವಾರು ಸೂಕ್ಷ್ಮ ಜೀವಿಗಳು ವಾಸವಾಗಿರುತ್ತವೆ. ಇವು ಸೂರ್ಯನ ಬಿಸಿಲಿಗೆ ಒಣಗಿದಾಗ ಅವುಗಳು ನಿರ್ನಾಮವಾಗುತ್ತವೆ. ಸರಿಯಾಗಿ ಒಣಗದ ಬಟ್ಟೆಗಳನ್ನು ಮಕ್ಕಳು ಧರಿಸುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಶಾಲೆಗೆ ಹೋಗುವ ಮಕ್ಕಳಿಗೆ ಆಗುವ ಸಮಸ್ಯೆ ಎಂದರೆ ಅವರು ಧರಿಸುವ ಸಮವಸ್ತ್ರಗಳದ್ದು. ಸಾಮಾನ್ಯವಾಗಿ ಎಲ್ಲರ ಬಳಿ ಎರಡು ಜೊತೆ ಸಮವಸ್ತ್ರಗಳಿರುತ್ತವೆ. ಆದರೆ ಮಳೆಗಾಲದಲ್ಲಿ ಈ ಬಟ್ಟೆಗಳು ಒಂದು ದಿನಕ್ಕೆ ಒಣಗುವುದಿಲ್ಲ. ಇದರಿಂದ ಅರೆ ಒದ್ದೆ ಬಟ್ಟೆಗಳನ್ನು ಧರಿಸಿಯೇ ಮಕ್ಕಳು ಶಾಲೆಗೆ ಹೋಗುತ್ತಾರೆ. ಈ ಬಟ್ಟೆಯಲ್ಲಿರುವ ನೀರಿನ ಅಂಶಗಳನ್ನು ಅವರ ಚರ್ಮ ಎಳೆದುಕೊಳ್ಳುವುದರಿಂದ ಚರ್ಮದ ಅಲರ್ಜಿಯ ಸಮಸ್ಯೆಗಳು, ಜ್ವರ, ಶೀತ ಮುಂತಾದ ತೊಂದರೆಗಳು ತಲೆದೋರಬಹುದು. ಇಂತಹ ಬಟ್ಟೆಗಳನ್ನು ಧರಿಸುವುದರಿಂದ ರಿಂಗ್ ವರ್ಮ್ ಅಥವಾ ಹುಳುಕಡ್ಡಿಯ ಸಮಸ್ಯೆ ಪ್ರಾರಂಭವಾಗಬಹುದು. ಇದರ ಜೊತೆಗೆ ಕೆಲವು ಚರ್ಮದ ಸೋಂಕುಗಳೂ ತಗುಲಬಹುದು. ಇದರಿಂದ ಕೆಂಪು ಗುಳ್ಳೆಗಳು ಕಾಣಿಸಿಕೊಂಡು ತುರಿಕೆ ಉಂಟಾಗಬಹುದು.
ಒದ್ದೆ ಬಟ್ಟೆಗಳನ್ನು ಧರಿಸಿ ನಿಮಗೆ ವೈರಸ್ ಅಥವಾ ಫಂಗಸ್ ಸೋಂಕು ಉಂಟಾದರೆ, ಮಕ್ಕಳಿಗೆ ಈ ಸಮಸ್ಯೆ ಕಾಡಿದರೆ ಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗಿ ಅವರು ಹೇಳಿದ ಔಷಧೋಪಚಾರಗಳನ್ನು ಮಾಡಬೇಕು. ಮಕ್ಕಳ ಬಟ್ಟೆಗಳ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಬಟ್ಟೆಗಳು ಸಂಪೂರ್ಣವಾಗಿ ಒಣಗದೆ ಸ್ವಲ್ಪ ಒದ್ದೆ ಇದ್ದರೆ, ಆ ಬಟ್ಟೆಗಳನ್ನು ಧರಿಸಲೇ ಬೇಕಾದ ಅನಿವಾರ್ಯತೆ ಇದ್ದರೆ ಇಸ್ತ್ರಿ ಮಾಡಿ ಅವುಗಳನ್ನು ಧರಿಸಿ. ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ಸೋಂಕುಗಳು ತಗುಲದೇ ಇರಲು ವಿಶೇಷ ಮುತುವರ್ಜಿಯನ್ನು ವಹಿಸಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ