ಮಳೆಗಾಲದ ಈ ನೆರೆಯ ಅನಾಹುತಕ್ಕೆ ಕಾರಣ ಏನು?

ಮಳೆಗಾಲದ ಈ ನೆರೆಯ ಅನಾಹುತಕ್ಕೆ ಕಾರಣ ಏನು?

ಕರ್ನಾಟಕ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಬಹುತೇಕ ಜಲಾಶಯಗಳು ತುಂಬಲು ತೊಡಗಿವೆ. ತುಂಬಿದ ನಂತರ ಅಧಿಕವಾದ ನೀರನ್ನು ಹೊರಗಡೆ ಬಿಡಲಾಗುತ್ತದೆ. ಅದರಿಂದ ಜಲಾನಯನ ಪ್ರದೇಶದ ಸಮೀಪ ಇರುವ ಮನೆಮಂದಿಗಳು ತಮ್ಮ ನೆಲೆಯನ್ನು ಬಿಟ್ಟು ಬೇರೆಡೆಗೆ ಹೋಗಬೇಕಾಗುತ್ತದೆ ಇಲ್ಲವೇ ಸರಕಾರವೇ ಅವರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸುತ್ತದೆ. ಇದು ಪ್ರತೀ ವರ್ಷ ನಾವು ನೋಡುತ್ತಿರುವ ವಿದ್ಯಮಾನ. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ರಾಜ್ಯದ ಹಲವೆಡೆ ನೆರೆ ಎಂಬುವುದು ಮಾಮೂಲೀ ಸಂಗತಿಯಾಗಿದೆ. ಸ್ವಲ್ಪವೇ ನೀರು ಬಂದರೂ ಹಳ್ಳಕೊಳ್ಳಗಳು ತುಂಬುತ್ತವೆ. ರಸ್ತೆ ಕುಸಿಯುತ್ತದೆ. ಮನೆಗೆ ನೀರು ನುಗ್ಗುತ್ತದೆ. ಕಾರಣವೇನಿರಬಹುದು ಯೋಚಿಸಿರುವಿರಾ?

ನನ್ನ ಅನುಭವದ ಪ್ರಕಾರ ಸುಮಾರು ಎರಡು ದಶಕಗಳ ಹಿಂದೆ ಈಗ ಬರುವುದಕ್ಕಿಂತಲೂ ಬಿರುಸಾದ, ಎಡೆಬಿಡದ ಮಳೆ ಸುರಿಯುತ್ತಿತ್ತು. ನಾವು ಶಾಲೆಗೆ ಹೋಗುತ್ತಿದ್ದ ಎಂಬತ್ತರ ದಶಕದಲ್ಲಿ ಮಳೆಗಾಲದಲ್ಲಿ ಒಮ್ಮೆ ಮಳೆ ಪ್ರಾರಂಭವಾದರೆ ಒಂದಿಡೀ ವಾರ ಮಳೆ 'ಧೋ’ ಎಂದು ಸುರಿಯುತ್ತಲೇ ಇರುತ್ತಿತ್ತು. ನಾವು ಮಳೆಗೆ ಕೊಡೆ ಹಿಡಿದು ಸ್ವಲ್ಪ ಒದ್ದೆಯಾಗಿಯಾದರೂ ಶಾಲೆ ಹೋಗುತ್ತಿದ್ದೆವು. ಸ್ವಲ್ಪ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತಿದ್ದುದೇನೋ ಹೌದು. ಅದರೆ ಈಗಿನಂತೆ ರಸ್ತೆಯ ಬದಿಗಳಲ್ಲಿ. ಕಟ್ಟಡಗಳ ನೆಲ ಮಹಡಿಗಳಲ್ಲಿ, ಮನೆಯ ಒಳಗಡೆ ನೀರಿನ ಪ್ರವೇಶ ಕಮ್ಮಿ ಇತ್ತು. ಕೆಲವೊಂದು ನೆರೆ ಪೀಡಿತ ಪ್ರದೇಶಗಳು ಇದ್ದುವು. ಉದಾಹರಣೆಗೆ ದಕ್ಷಿಣ ಕನ್ನಡದ ಬಂಟ್ವಾಳದ ಕೆಲವು ಪ್ರದೇಶಗಳು, ಕೊಡಗು ಜಿಲ್ಲೆಯ ಭಾಗಮಂಡಲದ ತ್ರಿವೇಣಿ ಸಂಗಮ ಇತ್ಯಾದಿ. ಇವುಗಳು ಪ್ರತೀ ವರ್ಷ ತುಂಬಿ ತುಳುಕುತ್ತಿದ್ದುವು. ಜನರೂ ಅವುಗಳಿಗೆ ಹೊಂದಿಕೊಂಡಿದ್ದರು. ಆದರೆ ಇತ್ತೀಚೆಗೆ ರಾಜ್ಯದ ಬಹುತೇಕ ಎಲ್ಲಾ ಸ್ಥಳಗಳೂ ಮಳೆ ಬಂದಾಗ ನೆರೆಪೀಡಿತ ಪ್ರದೇಶಗಳೇ ಆಗಿಹೋಗಿವೆ. ಹಾಗೆಂದು ಅಲ್ಲಿ ತುಂಬಾನೇ ನೀರು ಬಂದು ಬೇಸಿಗೆಕಾಲದಲ್ಲಿ ನೀರಿನ ಸಮಸ್ಯೆಯಾಗಲಾರದು ಎಂದು ನೀವು ಅಂದುಕೊಂಡರೆ ತಪ್ಪು. ಬೇಸಿಗೆ ಕಾಲದಲ್ಲಿ ಅದು ಬರಪೀಡಿತ ಪ್ರದೇಶವಾಗುತ್ತದೆ. ಆದರೆ ಆ ನೆರೆಯ ನೀರು ಹೋಯಿತೆಲ್ಲಿಗೆ? ಇದೆಲ್ಲವೂ ಕೃತಕ ನೆರೆಯ ಪರಿಣಾಮ. ನಮ್ಮದೇ ಆದ ಸ್ವಯಂಕೃತ ಅಪರಾಧದ ಫಲ ಎಂದು ಬೇಸರದಿಂದಲೇ ಹೇಳ ಬೇಕಾಗುತ್ತದೆ.

ನಾನು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಮಯ (೧೯೯೩-೯೮) ದಲ್ಲಿ ನನ್ನ ಗೆಳತಿಯ ಮನೆಯು ಮಡಿಕೇರಿಯ ಭಾಗಮಂಡಲದಲ್ಲಿ ಇತ್ತು. ನಮಗೆ ರಜೆ ಸಿಗುತ್ತಲೇ ನಾವು ಕೆಲವು ಗೆಳೆಯರು ಅಲ್ಲಿಗೆ ಧಾವಿಸುತ್ತಿದ್ದೆವು. ಅಲ್ಲಿಯ ಭಗಂಡೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮ, ತಲಕಾವೇರಿ, ಬ್ರಹ್ಮಗಿರಿ ಬೆಟ್ಟ ಎಲ್ಲವೂ ನಮಗೆ ಅತ್ಯಂತ ಪ್ರಿಯವಾದ ಸ್ಥಳಗಳಾಗಿದ್ದುವು. ಅವುಗಳಲ್ಲದೇ ಅಲ್ಲಿಯ ಸುಂದರ ತಂಪಾದ ಪರಿಸರ ಮನಕ್ಕೆ ಆಹ್ಲಾದ ನೀಡುತ್ತಿತ್ತು. ಎಪ್ರಿಲ್-ಮೇ ತಿಂಗಳ ಬೇಸಗೆಯಲ್ಲೂ ಭಾಗಮಂಡಲ ತಂಪಾಗಿರುತ್ತಿತ್ತು. ಮಂಗಳೂರಿನ ಸೆಖೆಗೆ ಫ್ಯಾನ್ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬಂತೆ ಇದ್ದ ನಾವುಗಳು ಭಾಗಮಂಡಲದಲ್ಲಿ ಫ್ಯಾನ್ ಗೊಡವೆಯಿಲ್ಲದೇ ಸುಖಕರವಾದ ನಿದ್ರೆಗೆ ಜಾರುತ್ತಿದ್ದೆವು. ನನ್ನ ಗೆಳತಿಯ ಮನೆಯ ಛಾವಣಿ ತುಂಬಾ ಕೆಳಗಡೆ ಇತ್ತು. ಅಲ್ಲಿ ಮೇಲೆ ಫ್ಯಾನ್ ಸಿಕ್ಕಿಸುವ ಅವಕಾಶವೇ ಇರಲಿಲ್ಲ. ಮಡಿಕೇರಿಯಿಂದ ಭಾಗಮಂಡಲಕ್ಕೆ ತ್ರಿವೇಣಿ ಸಂಗಮದ ಬಳಿ ಸಂಪರ್ಕಿಸುವ ಒಂದು ಕೆಳಮಟ್ಟದ ಸೇತುವೆ ಇತ್ತು. ಅದರ ಮೇಲೆ ಪ್ರತೀ ಮಳೆಗಾಲದಲ್ಲಿ ನೀರು ಹರಿದು ಸೇತುವೆ ಮೇಲಿನ ಪ್ರಯಾಣ ಅಸಾಧ್ಯವಾಗಿ ಬಿಡುತ್ತಿತ್ತು. ನೆರೆಯ ನೀರು ಇಳಿಯುವವರೆಗೆ ಭಾಗಮಂಡಲದ ಜನರು ಒಂದು ರೀತಿ ದ್ವೀಪವಾಸಿಗಳೇ ಆಗಿ ಬಿಡುತ್ತಿದ್ದರು. ನಂತರದ ದಿನಗಳಲ್ಲಿ ಎತ್ತರದ ಸೇತುವೆ ನಿರ್ಮಾಣವಾಯಿತು. ಆದರೂ ನೀರು ಬಂದೇ ಬರುತ್ತಿತ್ತು. ಇದಕ್ಕೆಲ್ಲಾ ಕಾರಣ ಮಡಿಕೇರಿಯ ಪರಿಸರದ ಮೇಲೆ ನಿರಂತರವಾಗಿ ಆಗುತ್ತಿದ್ದ ಆಕ್ರಮಣಗಳು. ಕಾಡನ್ನು ಅಭಿವೃದ್ಧಿಯ ನೆಪದಲ್ಲಿ ಕಡಿಯಲಾಯಿತು. ರೆಸಾರ್ಟ್, ಹೋಮ್ ಸ್ಟೇ ಎಂದು ಗುಡ್ಡಗಳನ್ನು ಅಗೆದು ದಾರಿ ಮಾಡಿಕೊಡಲಾಯಿತು. ಕ್ರಮೇಣ ಮಡಿಕೇರಿಯ ವಾತಾವರಣ ಬಿಸಿಯಾಗ ತೊಡಗಿತು. 

ನಾನು ಎರಡು ವರ್ಷಗಳ ಹಿಂದೆ ಭಾಗಮಂಡಲಕ್ಕೆ ಹೋದಾಗ ನನ್ನ ಗೆಳತಿಯ ಮನೆಗೆ ಫ್ಯಾನ್ ಬಂದಿತ್ತು. ನಾನು ಅವಳ ಅಮ್ಮನಲ್ಲಿ ಕೇಳಿದಾಗ ಈಗ ನಮಗೂ ಬೇಸಿಗೆ ಕಾಲದಲ್ಲಿ ಸೆಖೆಯ ಅನುಭವವಾಗುತ್ತಿದೆ. ಎಂದರು. ಇದಕ್ಕೆ ಕಾರಣ ಮಾನವರಾದ ನಮ್ಮ ದುರಾಸೆಯೇ ಅಲ್ಲವೇ? ಅಭಿವೃದ್ಧಿ ಎಂದು ನಾವು ಮರಗಳನ್ನು ಕಡಿದೆವು. ತಂಪಾಗಿದ್ದ ಪ್ರದೇಶ ಬಿಸಿಯಾಗ ತೊಡಗಿತು. ಗುಡ್ಡ ಕಡಿದುದರಿಂದ ಮಳೆಗಾಲದಲ್ಲಿ ಅದು ಇನ್ನಷ್ಟು ಕುಸಿದು ನೆರೆ ಬರಲು ಪ್ರಾರಂಭವಾಯಿತು. ಈ ವರ್ಷ ಬ್ರಹ್ಮಗಿರಿ ಬೆಟ್ಟ ಕುಸಿದ ಕಾರಣವೂ ಅದೇ ಇರಬಹುದೇನೋ? ಏಕೆಂದರೆ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಅಭಿವೃದ್ಧಿ ಮಾಡುವ ಕಾರಣಗಳಿಗಾಗಿ ಕೆಲಸಗಳು ನಡೆಯುತ್ತಿವೆ ಎಂದು ಓದಿದ ನೆನಪು. 

ನೀವೇ ಗಮನಿಸಿ. ಈಗ ನಾವೊಂದು ಕಟ್ಟಡ ಮಾಡಬೇಕಾದರೆ ಗುಡ್ಡವನ್ನು ಕಡಿಯುತ್ತೇವೆ. ಸರಿಯಾದ ತಡೆಗೋಡೆ, ಮೊದಲಿನಂತೆ ನೀರು ಹರಿಯಲು ದಾರಿ ಎಲ್ಲವನ್ನೂ ನಿರ್ಮಿಸಲು ಹೋಗುವುದಿಲ್ಲ, ಪ್ರಕೃತಿ ನಮ್ಮ ಬದಲಾವಣೆಗಳಿಗೆ ಹೊಂದಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದು ತನ್ನದೇ ಆದ ದಾರಿಯನ್ನು ತಾನೇ ಕಂಡುಕೊಳ್ಳುತ್ತದೆ. ಇದರಿಂದ ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದುಹೋಗುವುದಿಲ್ಲ. ಕೃತಕ ನೆರೆ ಬರುತ್ತದೆ. ಮಳೆಗಾಲದ ಮೊದಲು ಕೆರೆ, ತೋಡುಗಳ ಹೂಳನ್ನು ಎತ್ತುವ ಕಾಮಗಾರಿಗಳು ನಡೆಯುವುದೇ ಇಲ್ಲ. ಮಳೆಗಾಲದಲ್ಲಿ ಹರಿಯುವ ನೀರು ಕೆರೆಯಲ್ಲಿ ತುಂಬಲು ಜಾಗವೇ ಇಲ್ಲದಿದ್ದರೆ ಅದು ಎಲ್ಲಿಗೆ ಹೋಗಬೇಕು? ನಮ್ಮ ಮನೆಗಳ ಒಳಗೇ ಬರಬೇಕಲ್ಲವೇ? ಹಾಗೇ ಆಗಿದೆ. ಅವೈಜ್ಞಾನಿಕ ಕಾಮಗಾರಿಗಳೇ ಇದಕ್ಕೆ ಕಾರಣ. ಮೊದಲು ಸಹಜವಾಗಿ ಹರಿಯುತ್ತಿದ್ದ ಮಳೆಯ ನೀರಿಗೆ ಈಗ ನಾವು ತಡೆಯೊಡ್ಡಿದ್ದೇವೆ. ಉದಾಹರಣೆಗೆ ಒಂದು ತೋಟದ ಬದಿಯಲ್ಲಿ ಮಳೆ ನೀರು ಹರಿಯಲು ೬ ಅಡಿಯ ಹಳ್ಳ ಇತ್ತೆಂದು ಭಾವಿಸಿದರೆ ಅದು ಕ್ರಮೇಣ ನಾವು ಮಾಡಿದ ಅಭಿವೃದ್ಧಿ (?) ಕಾರ್ಯಗಳಿಂದ ೨ ಅಡಿಗೂ ಕಮ್ಮಿಯ ಹಳ್ಳವಾಗಿರುತ್ತದೆ. ಮೊದಲು ಸರಾಗವಾಗಿ ಹರಿಯುತ್ತಿದ್ದ ನೀರು ಈ ಕೆಸರು, ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೊಂದಿರುವ ಹಳ್ಳದಿಂದ ಹೇಗೆ ಸರಾಗವಾಗಿ ಹರಿಯಲು ಸಾಧ್ಯ. ಇದರಿಂದ ಹಳ್ಳಗಳು ಈಗ ಪ್ರತೀ ಮಳೆಗಾಲದಲ್ಲಿ ಉಕ್ಕಿ ಹರಿಯುತ್ತವೆ. ಮನೆಯೊಳಗೆ ನೀರು ನುಗ್ಗುತ್ತದೆ. ನಾವು ಸರಕಾರಕ್ಕೆ, ರಾಜಕಾರಣಿಗಳಿಗೆ ದೂರುತ್ತೇವೆ. ಅವರಿಗಾದರೂ ಜಾಣ ಕಿವುಡು. ಕಾಟಾಚಾರಕ್ಕೆ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಸತ್ತವರಿಗೆ ಪರಿಹಾರ ಘೋಷಿಸುತ್ತಾರೆ ಮತ್ತು ಮರೆತು ಬಿಡುತ್ತಾರೆ. ಮರು ವರ್ಷ ಮತ್ತೆ ಅದೇ ಮಳೆ, ಅದೇ ನೆರೆ ಮತ್ತು ಅದೇ ಕಥೆ-ವ್ಯಥೆ.

ಇನ್ನು ಮುಂದಾದರೂ ನಾವು ಎಚ್ಚೆತ್ತು ಕೊಳ್ಳಬೇಕು. ಅಭಿವೃದ್ಧಿಯ ನೆಪದಲ್ಲಿ ಪರಿಸರಕ್ಕೆ ಮಾರಕವಾಗುವ ಕಾಮಗಾರಿಗಳನ್ನು ಮಾಡಬಾರದು. ಕೆಲಸ ಮಾಡುವ ಮೊದಲು ಸ್ಥಳ ಪರಿಶೀಲನೆ ಮಾಡಬೇಕು. ಮಳೆ ಬರುವಾಗ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡಬೇಕು. ಸಮಾಜದ ಪ್ರತಿಯೊಬ್ಬ ನಾಗರಿಕ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ನಾವು ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಬಿಟ್ಟುಹೋಗಬೇಕಾಗಿದೆ. ಅದು ನಮ್ಮ ಆದ್ಯ ಕರ್ತವ್ಯವೂ ಹೌದು.      

ಚಿತ್ರ: ಅಂತರ್ಜಾಲ ತಾಣದ ಕೃಪೆ