ಮಳೆಗಾಲದ ಕಥೆಗಳು

ಮಳೆಗಾಲದ ಕಥೆಗಳು

ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮಾಜಿ ಸೈನಿಕರೊಬ್ಬರನ್ನು ಆಹ್ವಾನಿಸಲಾಗಿತ್ತು. ತಮ್ಮ ಬದುಕಿನ ಅನುಭವಗಳನ್ನೆಲ್ಲ ಹಂಚಿಕೊಳ್ಳಲು ಅವರೂ ಉತ್ಸುಕರಾಗಿದ್ದರು. ಧ್ವಜಾರೋಹಣ ಮುಗಿದು ಇನ್ನೇನು ಭಾಷಣ ಶುರುವಾಗಬೇಕು ಎನ್ನುವಷ್ಟರಲ್ಲಿ ಸಣ್ಣಗೆ ಮಳೆ ಹನಿಯತೊಡಗಿತು. ಹನಿಹನಿಯ ಮಳೆಗೆ ಮಕ್ಕಳೆಲ್ಲ ಸಂಭ್ರಮಗೊಂಡರು. ಕೆಲವರಂತೂ ಬಾಯಿ ತೆರೆದು ಮಳೆಹನಿಯನ್ನು ಆಸ್ವಾದಿಸಿದರು. ಭಾಷಣ ಮಾಡಲು ಮುಂದೆ ಬಂದ ಅಭ್ಯಾಗತರು ಆ ಕ್ಷಣವನ್ನು ಅನುಭವಿಸುತ್ತಿದ್ದ ಮಕ್ಕಳನ್ನು ನೋಡಿ ಭಾವುಕರಾಗಿ ಇದೇ ಸ್ವಾತಂತ್ರ್ಯ ಎಂದು ಹೇಳಿ ಭಾಷಣ ಮುಗಿಸಿದರು!

***

ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ಸಂದಿನಲ್ಲಿ ಎಲ್ಲರೂ ವಾಹನವನ್ನು ತೂರಿಸಿಕೊಂಡು ಹೋಗುತ್ತಿದ್ದರೆ ಆ ಯುವಕ ಬೈಕನ್ನು ಬದಿಗೆ ನಿಲ್ಲಿಸಿ ಆ ಮರವನ್ನು ರಸ್ತೆಯಿಂದಾಚೆಗೆ ತಳ್ಳುವ ಸಾಹಸ ಮಾಡುತ್ತಿದ್ದ ಎಲ್ಲರೂ ಆತ ಹುಚ್ಚನಿರಬೇಕು ಎಂದು ನಕ್ಕು ಸಾಗಿದರು. ಆತನ ಮನಸ್ಸಿನಲ್ಲಿ ಕಳೆದ ವರ್ಷ ಮಳೆಗಾಲದ ರಾತ್ರಿಯೊಂದು ಇದೇ ರೀತಿ ಬಿದ್ದ ಮರ ಕಾಣದೇ ಬೈಕಿನಲ್ಲಿ ಗುದ್ದಿ ಮೃತನಾದ ತನ್ನ ತಮ್ಮನ ಬಗೆಗಿನ ಹುಚ್ಚು ಪ್ರೀತಿ ಕಡಿಮೆಯೇನಿರಲಿಲ್ಲ!

***

ನಾಳೆ ಮುದ್ದಿನ ಮಡದಿಯ ಹೆರಿಗೆ. ಇವತ್ತು ಒಂದು ಗಡಿಯಿಂದ ಇನ್ನೊಂದರೆಡೆಗೆ ಪಯಣ. ಒಂದು ವಾರ ಕರೆ ಮಾಡಲು ಸಾಧ್ಯವಿಲ್ಲ. ಆ ಸೈನಿಕನ ಮನಸ್ಸಿನಲ್ಲೇನೋ ತಳಮಳ. ಅತ್ತ ಮಡದಿಗೆ ಅಂದೇ ನೋವು ಜೋರಾಗಿ ಗಂಡು ಮಗು ಜನಿಸಿತು. ಎಲ್ಲವೂ ಸುಸೂತ್ರವಾಗಲಿ ಎಂದು ಆತ ಆಗಸದತ್ತ ನೋಡಿದ. ತಕ್ಷಣ ಸಣ್ಣಮಳೆ ಹನಿಯಿತು, ಆತನ ಪ್ರಾರ್ಥನೆ ನೆರವೇರಿದೆ ಎಂಬ ಸೂಚನೆಯಂತೆ..!

***

ಇದೊಂದು ಶನಿ ಮಳೆ, ಇವತ್ತು ಕಾಲೇಜ್ ಡೇಗೆ ಸೀರೆ ಉಡುವ ಆಸೆ ಕಂಡಿದ್ದೆ ಛೇ, ಎಲ್ಲ ಹಾಳಾಗಿ ಹೋಯಿತು, ದರಿದ್ರ ಮಳೆ. ಎಂದು ಆ ಯುವತಿ ಶಪಿಸುತ್ತಿದ್ದಳು. ಆಕೆಯ ತಂದೆ ಹೊಲದಲ್ಲಿ ಆಗಸವನ್ನು ನೋಡುತ್ತ ವರುಣನಿಗೆ ಕೈ ಮುಗಿಯುತ್ತಿದ್ದ. ಆತನ ಕಣ್ಣಂಚಲ್ಲಿ ಭಕ್ತಿಪೂರ್ವಕ ಕಣ್ಣೀರು!

***

ಭಾರಿ ಹಣ ತೆತ್ತು ಇಂಟ‌ರ್ ನ್ಯಾಷನಲ್ ಶಾಲೆಗೆ ಹೋಗುತ್ತಿದ್ದ ಆ ಬಾಲಕ ಕಿಟಕಿಯಲ್ಲಿ ಕೂತು ರಸ್ತೆ ನೋಡುತ್ತಿದ್ದ, ಹೊರಗೆ ಜಡಿಮಳೆ. ಸರ್ಕಾರಿ ಶಾಲೆಯ ಒಂದಿಷ್ಟು ಮಕ್ಕಳು ಆ ಮಳೆಗೆ ಸಂಭ್ರಮದಿಂದ ನೆನೆಯುತ್ತ ಕೇಕೆ ಹಾಕುತ್ತಿದ್ದವು. ಈತನ ಬದುಕಿನ ಚೌಕಟ್ಟು ಕೋಣೆಯೊಂದಕ್ಕೆ ಸಂಕ್ಷಿಪ್ತವಾಗಿದ್ದರೆ, ಹೊರಗೆ ನೆನೆಯುತ್ತಿದ್ದ ಮಕ್ಕಳ ಬದುಕಿನ ವ್ಯಾಪ್ತಿ ಮುಗಿಲೆತ್ತರದಲ್ಲಿತ್ತು.

(ಹಳೆಯ ‘ತುಷಾರ’ ಸಂಗ್ರಹ)