ಮಳೆಗಾಲದ ದಿನದಿನವೂ ಕಪ್ಪೆ ಯಾಕೆ ಕೂಗುತ್ತದೆ?
ಒಂದಾನೊಂದು ಕಾಲದಲ್ಲಿ ಮರಿಗಪ್ಪೆಯೊಂದು ತಾಯಿಕಪ್ಪೆಯೊಂದಿಗೆ ವಾಸಿಸುತ್ತಿತ್ತು. ಈ ಮರಿಗಪ್ಪೆ ತನ್ನ ತಾಯಿಯ ಯಾವ ಮಾತನ್ನೂ ಕೇಳುತ್ತಿರಲಿಲ್ಲ. ತನಗೆ ಖುಷಿ ಬಂದಂತೆ ಮಾಡುತ್ತಿತ್ತು.
“ಮಗೂ, ಹೊರಗೆ ಹೋಗಿ ಆಟವಾಡು. ಯಾಕೆಂದರೆ ನಾನು ಮನೆ ಶುಚಿ ಮಾಡಬೇಕಾಗಿದೆ” ಎಂದು ತಾಯಿ ಕಪ್ಪೆ ಹೇಳಿದರೆ, ಮರಿಗಪ್ಪೆ ಮನೆಯೊಳಗೇ ಅತ್ತಿತ್ತ ಓಡಾಡುತ್ತಿತ್ತು ವಿನಃ ಹೊರಗೆ ಹೋಗುತ್ತಿರಲಿಲ್ಲ. ಬೆಟ್ಟಕ್ಕೆ ಹೋಗಿ ಬಾ ಎಂದು ತಾಯಿಕಪ್ಪೆ ಹೇಳಿದರೆ, ಮರಿಗಪ್ಪೆ ನದಿಗೆ ಹೋಗುತ್ತಿತ್ತು. ಮರದ ಬುಡಕ್ಕೆ ಹೋಗೆಂದರೆ ಬಾವಿಯ ಹತ್ತಿರ ಹೋಗುತ್ತಿತ್ತು.
ಇದರಿಂದಾಗಿ ತಾಯಿಕಪ್ಪೆಗೆ ಬಹಳ ಬೇಸರವಾಗುತ್ತಿತ್ತು. "ಅವನ್ಯಾಕೆ ನಾನು ಹೇಳಿದ್ದಕ್ಕೆ ವಿರುದ್ಧವಾದದ್ದನ್ನೇ ಮಾಡುತ್ತಾನೆ? ಅವನ ಈ ಕೆಟ್ಟ ಅಭ್ಯಾಸವನ್ನು ಹೋಗಲಾಡಿಸುವುದು ಹೇಗೆ? ಎಂಬುದೇ ತಾಯಿಕಪ್ಪೆಯ ಚಿಂತೆ.
ತನ್ನ ವರ್ತನೆಯಿಂದ ತಾಯಿಗೆ ಬೇಸರವಾಗುತ್ತದೆ ಎಂಬುದು ಮರಿಗಪ್ಪೆಗೆ ತಿಳಿದಿತ್ತು. ಆದರೆ ಅದಕ್ಕಾಗಿ ಪಶ್ಚಾತ್ತಾಪ ಪಡುವ ಬದಲಾಗಿ ಮರಿಗಪ್ಪೆ ಇನ್ನಷ್ಟು ಉಪಟಳ ಮಾಡುತ್ತಿತ್ತು. ತನಗೆ ಹೇಳಿದ್ದಕ್ಕೆ ವಿರುದ್ಧವಾದದ್ದನ್ನು ಮಾಡುವುದು ಹೇಗೆಂಬುದೇ ಮರಿಗಪ್ಪೆಯ ಯೋಚನೆ. ವಟಗುಟ್ಟುವುದನ್ನು ಸಹಿತ ಮರಿಗಪ್ಪೆ ವಿರುದ್ಧ ರೀತಿಯಲ್ಲಿ ಮಾಡುತ್ತಿತ್ತು. ಬೇರೆ ಕಪ್ಪೆಗಳೆಲ್ಲವೂ "ವಟರ್ ವಟರ್" ಎಂದು ವಟಗುಟ್ಟಿದರೆ ಇದು "ರಟ್ವ ರಟ್ವ" ಎಂದು ಸದ್ದು ಮಾಡುತ್ತಿತ್ತು.
ಮರಿಗಪ್ಪೆಯ ವರ್ತನೆಯಿಂದಾಗಿ ತಾಯಿಗಪ್ಪೆಗೆ ತಲೆಕೆಟ್ಟು ಹೋಗುತ್ತಿತ್ತು. "ನನ್ನ ಮುದ್ದಿನ ಮಗುವೇ, ನೀನು ಒಳ್ಳೆಯ ಮಗುವಾಗಬೇಕು. ಯಾವಾಗ ನೀನು ಜಾಣನಾಗುತ್ತೀ?” ಎಂದವಳು ಮಮತೆಯಿಂದ ಕೇಳುತ್ತಿದ್ದಳು. “ನನಗೆ ಹುಷಾರಿಲ್ಲದಿದ್ದರೆ ಏನು ಮಾಡುತ್ತೀ?” ಎಂದು ತಾಯಿಕಪ್ಪೆ ಆತಂಕದಿಂದ ಪ್ರಶ್ನಿಸುತ್ತಿದ್ದಳು. ಆದರೆ ತಾಯಿಕಪ್ಪೆ ಹೇಳಿದ್ದಕ್ಕೆ ವಿರುದ್ಧವಾದದ್ದನ್ನೇ ಮಾಡುವ ಅಭ್ಯಾಸವನ್ನು ಮರಿಗಪ್ಪೆ ಮುಂದುವರಿಸಿತು.
ದಿನಗಳು, ತಿಂಗಳುಗಳು ಉರುಳಿದವು. ಆದರ ಮರಿಗಪ್ಪೆಯ ವರ್ತನೆಯಲ್ಲಿ ಸುಧಾರಣೆ ಕಂಡು ಬರಲಿಲ್ಲ. ಅದೊಂದು ದಿನ ತಾಯಿಕಪ್ಪೆ ಅನಾರೋಗ್ಯದಿಂದ ಮಲಗಿದಳು. ಮರಿಗಪ್ಪೆ ಹಲವಾರು ದಿನ ತಾಯಿಕಪ್ಪೆಯ ಅನಾರೋಗ್ಯದ ಬಗ್ಗೆ ಚಿಂತಿಸಲೇ ಇಲ್ಲ. ದಿನಗಳೆದಂತೆ ತಾಯಿಕಪ್ಪೆಯ ಆರೋಗ್ಯ ಹದಗೆಟ್ಟಿತು. ಕೆಲವೇ ದಿನಗಳಲ್ಲಿ ಆಕೆ ಸಾಯುವ ಸ್ಥಿತಿಗೆ ಬಂದಳು.
ಆಗ ತಾಯಿಕಪ್ಪೆ ತನ್ನ ಮಗನನ್ನು ಹತ್ತಿರ ಕರೆಯಿತು. “ಮಗನೇ, ನಾನಿನ್ನು ಹೆಚ್ಚು ಸಮಯ ಬದುಕುವುದಿಲ್ಲ. ನಾನು ಸತ್ತಾಗ ನನ್ನ ದೇಹವನ್ನು ಬೆಟ್ಟದಲ್ಲಿ ಹೂಳಬೇಡ. ನದಿಬದಿಯಲ್ಲಿ ಹೂಳು” ಎಂದಳು ತಾಯಿಕಪ್ಪೆ. ಆದರೆ ಅವಳ ಉದ್ದೇಶ ಬೇರೆಯಾಗಿತ್ತು. ಅವಳನ್ನು ಬೆಟ್ಟದಲ್ಲಿ ಹೂಳಬೇಕೆಂಬುದೇ ಅವಳ ಆಶಯ. ಆದರೆ, ಹಾಗೆ ಹೇಳಿದರೆ ಮರಿಗಪ್ಪೆ ನದಿಬದಿಯಲ್ಲಿ ತನ್ನ ದೇಹ ಹೂಳುತ್ತಾನೆಂಬುದು ಅವಳ ಭಯ.
ಹಾಗೆ ಹೇಳುತ್ತಲೇ ತಾಯಿಕಪ್ಪೆಯ ಪ್ರಾಣ ಹೋಗಿತ್ತು. ಆಕೆ ಸತ್ತ ನಂತರವೇ ತನ್ನ ತಾಯಿಗೆ ದೊಡ್ಡ ಅನ್ಯಾಯ ಮಾಡಿದೆನೆಂದು ಮರಿಗಪ್ಪೆಗೆ ಅರ್ಥವಾಯಿತು. ಅದು ಬಿಕ್ಕಿಬಿಕ್ಕಿ ಅತ್ತಿತು.“ಅಮ್ಮ, ನಿನಗೆ ನಾನು ಅನ್ಯಾಯ ಮಾಡಿದೆ. ನನ್ನ ತಪ್ಪಿನಿಂದಾಗಿಯೇ ನಿನ್ನ ಪ್ರಾಣ ಹೋಯಿತು. ಎದ್ದೇಳು ಅಮ್ಮ, ಎದ್ದೇಳು! ನಾನು ಒಳ್ಳೆಯ ಹುಡುಗನಾಗುತ್ತೇನೆ!" ಎಂದು ಪಶ್ಚಾತ್ತಾಪ ಪಟ್ಟಿತು ಮರಿಗಪ್ಪೆ. ಆದರೆ ಕಾಲ ಮೀರಿತ್ತು.
ಅಮ್ಮನ ಸಾವಿನ ನೋವಿನಿಂದಾಗಿ ಕಣ್ಣೀರು ಸುರಿಸುತ್ತಾ, ಇನ್ನು ಮುಂದೆ ಹೇಳಿದಂತೆಯೇ ಕೆಲಸ ಮಾಡಬೇಕೆಂದು ಮರಿಗಪ್ಪೆ ನಿರ್ಧರಿಸಿತು. “ಈ ವರೆಗೆ ನಾನು ಅಮ್ಮನ ಮಾತು ಕೇಳಲೇ ಇಲ್ಲ. ಅವಳಿಗೆ ಬಹಳ ದುಃಖ ಕೊಟ್ಟೆ. ಅವಳ ಕೊನೆಯಾಸೆಯನ್ನು ಖಂಡಿತ ಪೂರೈಸುತ್ತೇನೆ” ಎಂದು ಯೋಚಿಸಿತು.
ಅದರಂತೆ, ಅಮ್ಮನ ದೇಹಕ್ಕೆ ನದಿಬದಿಯಲ್ಲಿ ಸಮಾಧಿ ಕಟ್ಟಿತು. ಅನಂತರ ಮಳೆಗಾಲದ ದಿನದಿನವೂ ಮರಿಗಪ್ಪೆಗೆ ಆತಂಕ - ಅಮ್ಮನ ಸಮಾಧಿ ನದಿಯಲ್ಲಿ ಕೊಚ್ಚಿ ಹೋದರೇನು ಮಾಡುವುದೆಂದು. ಆತಂಕ ತಡೆಯಲಾಗದೆ ಅದು ಗಂಟಲು ಒಣಗುವ ವರೆಗೆ ಕೂಗುತ್ತದೆ, "ವಟರ್ ವಟರ್". ಮಳೆಗಾಲದಲ್ಲಿ ಪ್ರತಿದಿನ ಕಪ್ಪೆ ವಟಗುಟ್ಟಲು ಇದೇ ಕಾರಣ.
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಕಿಮ್ ಯಂಗ್ ಜು