ಮಳೆಗೆ ಒಂದು ಪತ್ರ

ನೀನೊಬ್ಬನೇ ಬಾ, ಸಾಕು ಮಾರಾಯ. ನಿನ್ನೊಂದಿಗೆ ಚಳಿಯನ್ನೇಕೆ ಕರೆತರುತ್ತೀ ? ನಿನಗೆ ಮಾತ್ರ ಆಮಂತ್ರಣ ಕೊಟ್ಟದ್ದು. ಅದೂ ಬಿಸಿಲ ಬೇಗೆಗೆ ಬೆಂದು. ಕರೆದ ಮಾತ್ರಕ್ಕೆ ಬೇಕೇ ಇಷ್ಟೊಂದು ಆರ್ಭಟ! ನಿನ್ನ ಸಖ್ಯವ ಬಯಸಿದವರಿಗೆ ನೀನು ಸ್ನೇಹ ಹಸ್ತ ಚಾಚದೇ ಬದುಕನ್ನೇ ನುಂಗುವಷ್ಟು, ಹೋಗಲಿ, ಬೀಳಿಸಿದ ಗುಡ್ಡ, ಮನೆ, ಮರಗಳ ಭಾಗಗಳನ್ನು . ತೇಲಿಸಿದ ಪಶು, ಪಕ್ಷಿಗಳನ್ನು ನೀನಾದರೂ ಎಲ್ಲಿಗೆಂದು ಒಯ್ಯುತ್ತೀಯಾ.. ? ಒಂದಷ್ಟು ದೂರ ಹೊತ್ತ ಮೇಲೆ 'ನಿನಗೂ ಅದು ಭಾರ, ಎಲ್ಲಿಯೋ ಒಂದೆಡೆ ಇಳಿಸಿ ನೀನು ಹಾಯಾಗಿ ಧರೆಯೊಳಗೆ ಮರೆಯಾಗುವವನಲ್ಲವೇ...? ಇದ್ದಲ್ಲಿಯೇ ಬಿಟ್ಟಿದ್ದರೆ ಅವುಗಳನ್ನೆಲ್ಲ ಎಂಥಹ ಉಪಕಾರವಾಗುತ್ತಿತ್ತು ನಿನ್ನಿಂದ ಹಾಡಿ ಹೊಗಳುವಷ್ಟು, ಕೊಂಡಾಡುವಷ್ಟು, ಸದಾ ನೆನೆದು ಮನದಲ್ಲಿಡುವಷ್ಟು.
ಹೀಗಂದೆನೆಂದು ಬೇಸರಿಸಿ ಮತ್ತೆ ದೂರ ಓಡಬೇಡ. ನೀನು ಏನೇ ಮಾಡಿದರೂ ನಮ್ಮ ಸಂಗಾತಿಯೆ. ನೀನಿಲ್ಲದೆ ನಾವಿಲ್ಲ, ಜೀವರಾಶಿಗಳಿಲ್ಲ ಎನ್ನುವುದು ನಿನಗೂ ಗೊತ್ತು. ಬುದ್ದಿಯಿಲ್ಲದ ಮಂದಿ ಮಾಡಿದ ಪ್ರಕೃತಿಯ ಮೇಲಿನ ದೌರ್ಜನ್ಯ ನೋಡಿ ನಿನಗೆ ಸುಮ್ಮನಿರಲಾಗುತ್ತಿಲ್ಲವೆಂಬುದು ನನಗೆ ತಿಳಿದಿದೆ. ಆದರೆ ಆ ಮೂಕ ಪ್ರಾಣಿಗಳೇನು ಮಾಡಿದ್ದಾವೆ ನಿನಗೆ? ನಿನ್ನ ಬರುವಿಕೆಗೆ ನೆರವಾಗುವ ಮರ, ಗಿಡಗಳ ಮೇಲಾದರೂ ಕರುಣೆ ಬೇಡವೇ. ಒಮ್ಮೆ ಮುರಿದ ಮೇಲೆ ಬದುಕುಂಟೆ ಅವಕೆ . ಎಷ್ಟೋ ಎತ್ತರ ಬೆಳೆದು ಇನ್ನೆಷ್ಟೋ ವರ್ಷ ಬದುಕುವ ಆಸೆ ಹೊತ್ತವು. ಪರೋಪಕಾರಕ್ಕಾಗಿಯೇ ಜನ್ಮ ತಳೆದವು. ಇದ್ದಕ್ಕಿದ್ದಂತೆ ಬಂದು ನೀನು ಬದುಕು ಕಿತ್ತುಕೊಂಡರೆ ಅವಾದರೂ ಏನು ಮಾಡುತ್ತವೆ ಮೂಕವಾಗುವುದ ಬಿಟ್ಟು.
ಇದೆಲ್ಲ ನಿನಗೇನು ಹೊಸತಲ್ಲ. ಪ್ರತೀ ವರ್ಷ ಇದ್ದದ್ದೆ. ನೀನು ಬರುವುದು, ಅವಾಂತರ ಸೃಷ್ಟಿಸಿ ಜನರಿಂದ ಬೈಸಿಕೊಳ್ಳುವುದು, ಮತ್ತೆ ಮುನಿಸಿಕೊಂಡು ಬಾರದೇ ಗೋಳಾಡಿಸುವುದು. ಬಿಸಿಲ ಧಗೆಗೆ ಬೆಂದ ಮಂದಿ ಮತ್ತೆ ನಿನಗೆ ಗೋಗರೆಯುವುದು. ಒಂದಷ್ಟು ಕಾಡಿಸಿ ಕೊನೆಗೂ ಬಂದೆಯೆಂದು ಖುಷಿಪಟ್ಟರೆ, ನೀ ಸುರಿಸಿದ ಹನಿಗಳಿಗಿಂತ ಎಲ್ಲೆಡೆ ಕಣ್ಣೀರೆ ಕಾಣಿಸುವಷ್ಟು ನಿನ್ನ ಆರ್ಭಟ. ನೀನಾದರೂ ಏನು ಮಾಡುತ್ತಿ. ತಪ್ಪಿತಸ್ಥರನ್ನು ಮಾತ್ರ ಬೇರ್ಪಡಿಸಿ ಶಿಕ್ಷೆ ಕೊಡಲಾಗದ ಅಸಹಾಯಕತೆ ನಿನ್ನದು. ಹೋಗಲಿ, ಸ್ವಲ್ಪ ಮತಿಯನ್ನಾದರೂ ಕೊಡು. ನೀನು ಕಲಿಸುತ್ತಿರುವ ಪಾಠ ಇನ್ನಾದರೂ ಕಣ್ಣೆರೆಸಲಿ.
-ಮಂಗಳ ಎಂ, ಬೆಂಗಳೂರು