ಮಳೆಯ ಮನದ ಮಾತು
ಕವನ
ಮುಂಗಾರಿನ ಮಳೆಯಲ್ಲಿ ತಿಳಿಯಾದ ಮೋಡದಲಿ
ತಂಗಾಳಿ ಸರಿಯುತಿದೆ ಜಗದಗಲಕೆ
ಸಂಗಾತಿ ಬಳಿಯಿರಲು ಸಂಬಂಧ ಬೆಸೆದಿರಲು
ಸಂಗೀತ ಸಾಹಿತ್ಯ ಸುಶ್ರಾವ್ಯಕೆ..
ಇಳೆ ತಂಪು ಮೆಳೆ ತಂಪು ತಲ್ಲಣದಿ ಮನುಜಮನ
ಕೊಳೆಕಂಡ ಬಟ್ಟೆಯನು ತೊಳೆಯುವವರಾರು
ಕೊಲೆಯಾದ ಕ್ಷಣದಿಂದ ದ್ವೇಷವದು ಹರಡುತಲಿ
ಮಳೆನಡುವೆ ದಹಿಸುತಿದೆ ಬಿಸಿರಕ್ತವು..
ಜನಮರುಳೋ ಮನಮರುಳೋ ಅರಿಯುದೆಂತು
ಹಣದೊಳಗೆ ಅಡಗುತಿದೆ ನ್ಯಾಯ ಸ್ಥಳಗಳು
ಹೆಣವನ್ನೂ ಬಿಡದಿರುವ ಮಹನೀಯರ ನಡುವೆ
ಮಣ್ಣನ್ನು ಸೇರಿದರು ಅಮಾಯಕರು..
ಬೆಚ್ಚಗೆಯ ಮನೆಯಲ್ಲಿ ಮೆತ್ತಗೆಯೇ ಬದುಕುತಲಿ
ಮೆಚ್ಚುಗೆಯ ಸುದ್ದಿಗಳ ಕುರುಡಾಗಿ ಒಪ್ಪುತಲಿ
ಹೆಚ್ಚಾದ ದ್ವೇಷಗಳ ಪರವಾಗಿ ನಡೆಯುತಲಿ
ಅಚ್ಚಳಿಸಿ ತತ್ತ್ವಗಳ ಗೆಲ್ಲುತಿದೆ ಮಿಥ್ಯಗಳು..
ಬೆಳ್ಳಗಿರುವುದೆಲ್ಲ ಹಾಲಲ್ಲ ಕೇಳು
ಮೆಲ್ಲಮೆಲ್ಲನೆ ತಿನ್ನೋ ಹದ್ದುಗಳ ಊರು
ಹೆಣದಂತೆ ಬದುಕಿದರೆ ಇದ್ದೇನು ಮಾಡುತಿ
ನೆನೆವಂತೆ ಬದುಕಿ ನೀನಾಗು ಮೂರುತಿ..
-’ಮೌನರಾಗ’ ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
