ಮಳೆರಾಯ ಬಂದಾನು

ಮಳೆರಾಯ ಬಂದಾನು

ಕವನ

ಮಳೆರಾಯ ಬಂದಾನು

ಇಳೆಯನ್ನು ತೊಳೆದಾನು

ಹೊಳೆ ಹೊಳೆಲಿ ನೀರನ್ನು

ಚೆಲ್ಲುವಂತೆ ಮಾಡ್ಯಾನು

ಹೊಂಗನಸು ಬರಿಸ್ಯಾನು

ರೈತರಾ ಮೊಗದಲ್ಲಿ

ಸಾವಿರದ ಕನಸುಗಳು

ಭೂತಾಯ ಮಡಿಲಲ್ಲಿ

ತಾಯೇ....... ಭೂಮಿ ತಾಯೇ

 

ಗುಡು ಗುಡಿಸಿ ಸಿಡಿದಾನು

ಸಿಡಿಲಾಗಿ ಇಂದು

ಮಿಂಚಾಗಿ ಬೆಳಕಾಗಿ

ಬುವಿಯೊಳಗೆ ಬಂದು

ಮರಗಳನು ಕಾಣುತಲೆ

ಶಬ್ದಗಳ ಜೊತೆಯಲ್ಲಿ 

ಬೆಂಕಿಯನು ಕಾರುತಲಿ

ಅಸುರನಾಗುತ ನಿಂದು

ತಾಯೇ....... ಭೂಮಿ ತಾಯೇ

 

ಗುಡ್ಡಗಳ ಮೇಲ್ಗಡೆಗೆ

ಮಳೆರಾಯ ಇಳಿದು

ತೊರೆಯಾಗಿ ಹರಿಯುತಲಿ

ನದಿಯೊಡನೆ ಸೇರಿ

ಊರೂರು ಕೇರಿಗಳ

ಜಲದಲ್ಲಿ ಮುಳುಗಿಸುತ

ರುದ್ರ ನರ್ತನ ಮಾಡಿ

ಸಾಗುತಿಹ ನೋಡು

ತಾಯೇ....... ಭೂಮಿ ತಾಯೇ

 

ಹೊಲದಲ್ಲಿ ಬೆಳೆದಿರುವ

ಪೈರನ್ನು ಕೊಚ್ಚುತ

ರೈತರಾ ಕಣ್ಣಲ್ಲಿ

ಕಣ್ಣೀರ ತರಿಸುತ

ಹೊಲ ಮನಿಯ ಬಿಡದಾಂಗೆ

ಎಲ್ಲವನು ನುಂಗುತ

ಭೋರ್ಗರೆದು ಮೆರೆಯುತಿಹ

ಜಲದೊಡೆಯನ ನೋಡು

ತಾಯೇ....... ಭೂಮಿ ತಾಯೇ

 

ಜನರೆಲ್ಲ ಶರಣಾಗಿ

ಬೇಡುತಿಹರೂ ಇಂದು

ನಮ್ಮನೆಲ್ಲರ ಉಳಿಸು

ತಂದೆ ನೀ ಬಂದು

ಜೀವನದಿ ಬದುಕುಂಟು

ಬದುಕಲ್ಲಿ ನಿನ್ನ ನಂಟು

ಯಾವತ್ತು ಹರಸುತಿರು

ಹೀಗೆಯೇ ಶಿವನೆ

ತಾಯೇ........ ಭೂಮಿ ತಾಯೇ

 

ಕಷ್ಟಗಳ ಪರಿಹರಿಸು

ಜಗಕೆ ನೀ ಬಂದು

ಪ್ರಕೃತಿಯನು ಕಾಪಾಡು

ಕಾರುಣ್ಯ ಸಿಂಧು

ಬೆಳೆ ಪೈರ ಉಳಿಸುತಲಿ

ನಮ್ಮೊಡಲ ಸಲಹುತಲಿ

ಜೀವನದಿ ಸೊಬಗನ್ನು

ಉಳಿಸಿಂದು ಶಿವನೆ

ತಾಯೇ......... ಭೂಮಿ ತಾಯೇ

-ಹಾ ಮ ಸತೀಶ ಬೆಂಗಳೂರು

ಚಿತ್ರ್