ಮಳೆ ಕುಡಿವ ನಗರ
ತಮಿಳು ಭಾಷೆಯ ಖ್ಯಾತ ಕವಿ ಸೀನು ರಾಮಸಾಮಿಯವರ ಆಯ್ದ ಕವನಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಮಲರ್ ವಿಳಿ ಕೆ. ಮಧುಮಿತ. ಇವರ ಈ ಕವನ ಸಂಕಲನಕ್ಕೆ ಡಾ. ಶೀಲಾದೇವಿ ಎಸ್ ಮಳೀಮಠ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳು…
“ಸೀನು ರಾಮಸಾಮಿಯವರ ಕವಿತೆಗಳ ಅನುವಾದಿತ ಕವಿತೆಗಳು "ಮಳೆ ಕುಡಿವ ನಗರ" ಅನುವಾದಕಿ, ಡಾ.ಮಲರ್ವಿಳಿ.ಕೆ, ಮಧುಮಿತ ಅವರು ಅತ್ಯಂತ ಸರಳ ಸಜ್ಜನಿಕೆಯ ಕವಯತ್ರಿ. ಅವರ ಅನುವಾದದಲ್ಲಿ ಓದುಗರನ್ನು ಒಮ್ಮೆಲೆ ಸೆಳೆಯುವ ಸಂವೇದನಶೀಲತೆ ಎದ್ದು ಕಾಣುವಂತಹದ್ದು. ಇದಕ್ಕಾಗಿ ಇವರ ಈ ಕೃತಿಯನ್ನು ಓದಿದೆ. "ಪೂರ್ವ ಓದು" ಬರೆಯಬೇಕೆನಿಸಿತು. ಸಮೂಹ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಡಾ.ಮಲರ್ವಿಳಿಯವರು ಚಲನಚಿತ್ರ ನಿರ್ದೇಶಕರಾದ ಶ್ರೀಸೀನು ರಾಮಸಾಮಿಯವರ ಕವಿತೆಗಳಿಗೆ ಕನ್ನಡ ಅನುವಾದ ಮಾಡಿರುವುದಕ್ಕಾಗಿ ಇವರನ್ನು ಅಭಿನಂದಿಸುತ್ತೇನೆ. ಇವರು `ಅನುವಾದಕರ ಮಾತು' ಇಲ್ಲಿ ಅಭಿವ್ಯಕ್ತಿಸಿರುವಂತೆ ಕವಿಯ ಆಳವಾದ ಅನುಭವ ಹಾಗೂ ಧನ್ಯಾರ್ಥದ ಹಲವು ಆಯಾಮಗಳನ್ನು ವಿಭಿನ್ನವಾಗಿ ಗ್ರಹಿಸಿರುತ್ತಾರೆ. `ಕವಿತೆಯ ಪ್ರತ್ಯೇಕತೆ ಏನು' ಎಂಬುದನ್ನು ತಿಳಿಯಲು ಅವರ ಅನುವಾದಿತ `ಮಳೆ ಕುಡಿವ ನಗರ' ಕೃತಿಯನ್ನೊಮ್ಮೆ ಓದಲೇಬೇಕು.
ತಮಿಳಿನ ಜನಪ್ರಿಯ ಚಲನಚಿತ್ರ ನಿರ್ದೇಶಕರೂ, ಕವಿಯೂ, ಲೇಖಕರು ಆದ `ಸೀನು ರಾಮಸಾಮಿ'ಯವರ ಕವಿತೆಗಳ ಕೇಂದ್ರ ವಸ್ತು, ನಗರ ಕೇಂದ್ರಿತ ಬದುಕು, ಸಂಘರ್ಷದಲ್ಲಿ ಉದ್ಭವಿಸಿದ ಪ್ರಶ್ನೆಗಳಿಗೆ ಸರಳ ಉತ್ತರ. ಆಯಾ ಕಾಲಘಟ್ಟದ ಸಾಮಾಜಿಕ ಸಾಧ್ಯತೆಗಳ ನಿಲುವುಗಳನ್ನು ಅಭಿವ್ಯಕ್ತಿಸಿರುವುದನ್ನು ಡಾ. ಮಲರ್ವಿಳಿಯವರು ಅದರ ಗೊತ್ತು ಗುರಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಅನುವಾದಿಸಿರುವುದರಲ್ಲಿ ಯಶಸ್ವಿಯಾಗಿರುತ್ತಾರೆ.
"ಮಳೆ ಕುಡಿವ ನಗರ" ಕವಿತೆಯಲ್ಲಿ `ವಿಳಾಸ ಒದ್ದೆಯಾಗಿಯೇ ಪತ್ರಗಳ ತಲುಪಿಸುವರು ಟಪಾಲುಕಾರರು. ಅದರಲ್ಲಿ ತಂದೆಯ ಕೊನೆಯ ಬಿಂದು ಪ್ರೀತಿಯ ಕಣ್ಣೀರು ಮಿಶ್ರವಾಗಿರುವುದು', ಈ ಅನುವಾದ ಎಂತಹವರನ್ನೂ ಬಾಚಿ ತಬ್ಬಿಕೊಳ್ಳುತ್ತದೆ. ಮುಂದುವರೆದು ಡಾ.ಮಲರ್ವಿಳಿಯವರು `ಹೊಸ ಚಿತ್ರಗಳ ಪೊಸ್ಟರ್ಗಳಲ್ಲಿ ನೆಂದಿರುವರು ಕಲಾವಿದರು' ಎಂದು ಅನುವಾದಿಸಿದ ನಾಡಿನ ಜನಸಾಮಾನ್ಯರ ಬದುಕನ್ನು ಕುರಿತು, ಪ್ರತಿಮೆ ಹಾಗೂ ರೂಪಕದಲ್ಲಿ ಹೇಳುವ ಇವರು, `ತಾಯಿಯೊಬ್ಬಳು' ಕವಿತೆಯಲ್ಲಿನ `ಸ್ಟೆಲ್ಲಾ' ಕವಿತೆಯಲ್ಲಿ, ಪ್ರಾಣಿ ಪಶು ಸಂಕುಲದಲ್ಲಿನ ಭಾವುಕತೆಯನ್ನು `ಪುಪ್ಪಸ ಸಿಡಿದು ಸಾಯುವ ಇಲಿ ಪಾಷಾಣ' ವಾಕ್ಯದಲ್ಲಿ ತನ್ಮಯತೆ ಸಾಧಿಸಿದೆ. ಅನುವಾದದ ತತ್ತ÷್ವಗಳು ಇಲ್ಲಿ ಅನಾವರಣಗೊಂಡಿರುವುದು ಗಮನಾರ್ಹ.
`ಕಲಾವ್ಯಾಪಾರ' ಕವಿತೆಯಲ್ಲಿ ಚಲನಚಿತ್ರದ ವಿಸ್ತಾರತೆಯನ್ನು ಅನುವಾದಕಿ ರಾಮಸಾಮಿಯವರ ಅಭಿವ್ಯಕ್ತಿ ನೆಲೆಯನ್ನು ಗುರ್ತಿಸಿಕೊಂಡು, ಯಾವ ಸಂದರ್ಭದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ತನ್ನ ನಿಲುವನ್ನು ಕಂಡುಕೊಳ್ಳಬೇಕು. ಚಲನಚಿತ್ರದ ರಸಿಕರನ್ನು ಸೆಳೆಯಬೇಕಾದರೆ `ವಿಜಯೋತ್ಸವದ ಅವಸರ ತಡೆಯಬೇಕು' ಎಂಬ ಉತ್ತರ. ಸಕಾರಾತ್ಮಕ ವಿಮರ್ಶಕರು, ನಕಾರಾತ್ಮಕ ವಿಮರ್ಶಕರು ಈ ಇಬ್ಬರೂ ತನ್ನ ಮಕ್ಕಳನ್ನು ಖಂಡಿಸುವಂತೆ ಕೊರತೆಯ ಹೇಳಬೇಕು' ಎಂದು ವಿನಯವಾಗಿ ವಿಮರ್ಶಾ ಪರಿಣಾಮದ ನೆಲೆಗಳನ್ನು ಮಲರ್ವಿಳಿ ಗುರ್ತಿಸಿಕೊಂಡಿದ್ದಾರೆ.
೧೭೨ ಕವಿತೆಗಳಲ್ಲಿ ತಮ್ಮ ಅನುವಾದ ಶ್ರಮವನ್ನು ಹಿಡಿದಿಟ್ಟಿರುವ ಡಾ.ಮಲರ್ವಿಳಿಯವರು ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಗೆಳತಿ, ಅಜ್ಜನ ಬಗ್ಗೆ ಪತ್ನಿಗೆ, ಕಲಾವಿದರಿಗೆ, ನಗರದ ಬದುಕಿನ ಚಿತ್ರಗಳು, ಇತ್ಯಾದಿ ವಿಷಯ ವಸ್ತುಗಳಿಗೆ ತಮಿಳಿನಿಂದ ಕನ್ನಡಕ್ಕೆ ಅನುವಾದಿಸುವಾಗ ಕೇವಲ ಪದಾರ್ಥವಲ್ಲದೇ, ಭಾವನೆಗಳನ್ನೂ ಕವಿತೆಯ ಚೌಕಟ್ಟಿಗೆ ತಂದಿರುವುದು ಅನುವಾದಕಿಯ ಬಹುದೊಡ್ಡ ಚಿಂತನಾಕ್ರಮ ಹಾಗೂ ಸೂಕ್ಷ್ಮ ಪ್ರಜ್ಞೆ ಎದ್ದು ಕಾಣುವಂತಹದ್ದು.
ಡಾ.ಮಲರ್ವಿಳಿಯವರ ಅನುವಾದದ ಶೈಲಿಯ ಗುಣಾತ್ಮಕತೆ ಕಂಡುಕೊಳ್ಳಬೇಕಾದರೆ `ಕಾಶಿ' ಕವಿತೆಯ ಅನುವಾದವನ್ನು ಓದಬೇಕು. `ನಾನು ಜೀವಂತವಾಗಿರುವ ಹೂಗೊಂಚಲ ಹೂಗಳು', ಎಂಬಂತೆ ಅವರ ಆಲೋಚನಾ ಕ್ರಮ, ಅನುವಾದದ ಶಿಸ್ತು, ಕ್ರಮಬದ್ಧವಾದ ಭಾವುಕತೆ, `ಮರಿಹಕ್ಕಿ', `ಗುಣ', `ಮಗು', `ಮಾರ್ಗದ ಕುರುಹು', `ಸಂಗೀತ ನನ್ನ ಬಳಿಯಿಲ್ಲ', `ನೆನಪಿನ ಹೊಳೆ', `ಚಿಕ್ಕತೊರೆಯ ಕಾಲ', `ಮೇರಿಯ ಆಡಿನ ಮರಿ' ಇತ್ಯಾದಿ ಅನುವಾದ ಪದ್ಯಗಳನ್ನು ಓದಿಯೇ ಅದರ ರಸಗ್ರಹಣ ಶಕ್ತಿಯನ್ನು ಅರಿತುಕೊಳ್ಳಬೇಕು. ಡಾ.ಮಲರ್ವಿಳಿಯವರ ಮತ್ತೊಂದು ಅನುವಾದಿತ ಪದ್ಯ `ಪ್ರೀತಿ', `ಗಟ್ಟಿ ಬಂಗಾರದ ಓಲೆ ಇಲ್ಲದ ಬರಿಗಿವಿಯ ಮುದುಕಿಯ ಮೊಳಕೈಯ ಮೇಲೆ...., `ಯಾರಿಗೂ ತಿಳಿಯದೆ ಅವಿತಿರುವ ಒದ್ದೆ ಚೀಲದ ರಂಧ್ರ' ಇಡೀ ಸೆಕ್ಕಾಣಂ ಪ್ರದೇಶದ ಬದುಕು-ಬವಣೆಯನ್ನು ಅನಾವರಣಗೊಳಿಸಿರುವುದು ನನಗೆ ಮೆಚ್ಚುಗೆಯಾದ ಮತ್ತೊಂದು ಕವಿತೆ ಇದು.
ಡಾ.ಮಲರ್ವಿಳಿಯವರು `ಮಳೆ ಕುಡಿವ ನಗರ' ಅನುವಾದಿತ ಕೃತಿಯ ಮೂಲಕ ಭಾಷೆಗಳು ನಿರ್ಮಾಣ ಮಾಡುವ ಅಡ್ಡಾದಿಡ್ಡಿ ಕಂದಕಗಳನ್ನು ಇಲ್ಲವಾಗಿಸಿ, ಭಾವನೆಗಳ ಮೂಲಕ ಜನರನ್ನು ಪರಸ್ಪರ ಹತ್ತಿರ ತರುವಲ್ಲಿ ಈ ಕೃತಿ ಭಾಷಾಂತರದ ಅಥವಾ ಅನುವಾದದ ಕ್ಷೇತ್ರವನ್ನು ಗಟ್ಟಿಗೊಳಿಸಿದೆ. ನನ್ನ ಪ್ರೀತಿಯ ಕಿರಿಯ ಗೆಳತಿ ಡಾ.ಮಲರ್ವಿಳಿಯವರನ್ನು ಮೊದಲಿನಿಂದಲೂ ಗಮನಿಸುತ್ತಾ ಬಂದಿರುವ ನಾನು, ಅನುವಾದ ಸಾಹಿತ್ಯದಲ್ಲಿ ತಮ್ಮದೇ ಆದ ನೂತನ ಛಾಪನ್ನು ಮೂಡಿಸಿ, ಅನ್ಯಭಾಷೆ, ಸಂಸ್ಕೃತಿ, ಪರಂಪರೆ, ರೀತಿ ಪದ್ಧತಿಗಳು, ಜ್ಞಾನವಲಯವನ್ನು ವಿಸ್ತರಿಸುವಲ್ಲಿ `ಆದರ್ಶ' ಅನುವಾದ ಶೈಲಿಯನ್ನು ಬಿತ್ತರಿಸುತ್ತಿರುವ ಇವರು, ಕನ್ನಡ ಸಾಹಿತ್ಯವನ್ನು ಅನುವಾದ ಪ್ರಕ್ರಿಯೆಯಲ್ಲಿ ಪೋಷಿಸುತ್ತಿರುವ `ಮಾತೃಹೃದಯ' ಅನುವಾದಕಿ ಎಂದು ಇವರನ್ನು ಅಭಿನಂದಿಸುತ್ತಾ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಖ್ಯವಾಗಿ ಅಧ್ಯಯನದ ದೃಷ್ಟಿಯಿಂದ ಈ ಕೃತಿ ಬಹುಮುಖ್ಯ ಕೊಡುಗೆಯಾಗಿದೆ ಎಂದು ಇವರನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಅನುವಾದಗಳ ಮೂಲಕ ಅನ್ಯಭಾಷಾ ಸಂಸ್ಕೃತಿಗಳ ಸಂಪರ್ಕವೇ ವಾಹಕವಾಗಿ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಯಾಗುತ್ತದೆ' ಎಂಬುದು ಈ ಕೃತಿಯ ಮುಖ್ಯ ಕೊಡುಗೆ.”