ಮಳೆ ನಿಂತಾಗ…
ಕವನ
ಮಳೆ ನಿಂತಾಗ
ಅವಳ ಪ್ರತೀಕಾರವಿತ್ತು;
ಮನಸಿನಲಿ ಮೂಡಿದ
ನೂರೆಂಟು ಪ್ರಶ್ನೆಗಳ
ಹನಿಗಳು
ಇನ್ನೂ ಮೋಡದಲ್ಲೇ
ಉಳಿದಿತ್ತು..
ಊಹೆಗೆ ನಿಲುಕದ
ಮೂರ್ಕಾಸಿನ ಬದುಕು
ಬದುಕಿದ್ದಷ್ಟೂ ವನವಾಸ;
ನಗುವೆಂದರೆ
ಎಂದೋ ಮೂಡುವ
ಕಾಮನ ಬಿಲ್ಲು..
ಕಡೆ ಪಕ್ಷ ಕೊಚ್ಚಿಹೋದರೂ
ಅಡ್ಡಿಯಿರಲಿಲ್ಲ
ಸೋನೆಯೇ ಸಂಕಟ
ದೂರಮಾಡಿದರೆ
ಅದಕಿಂತ ಮಿಗಿಲಾದ
ಅತ್ಯಾಪ್ತರಿಲ್ಲ..
ಸಿಕ್ಕು ಹಿಡಿದ ಕೂದಲಿಗೂ
ಮಲ್ಲಿಗೆಯ ಪರಿಚಯವಿತ್ತು;
ಎಂದೋ ನೇಪಥ್ಯಕೆ ಸೇರಿದ
ಅವನ ಚಿತ್ರಪಟ
ಹಳೇ ಊದು ಕಡ್ಡಿಯ
ಉಪಸ್ಥಿಯ ಹಂಗಿಸುತ್ತಿತ್ತು..
ಮಳೆ ಮತ್ತು ಬದುಕಿನ
ಜುಗಲ್ಬಂಧಿಗೆ
ವಿಧಿಯೇ ತೀರ್ಪುಗಾರ;
ನಗು ಮತ್ತು ಅಳುವಿನಲ್ಲಿ
ಅರಳಿದ್ದು
ಮಲ್ಲಿಗೆ ಮಾತ್ರ..
-ಸನಂ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
