ಮಳೆ ಬಿಸಿಲಿ‌ನ ಇದು ನಾಟಕ

ಮಳೆ ಬಿಸಿಲಿ‌ನ ಇದು ನಾಟಕ

ಕವನ

ಕಡು ದುಗುಡದ ಬಿರು ಬೇಗೆಗೆ

   ಕುದಿಯಿತು ಎದೆಗಡಲು!

‌ಸದ್ದಿಲ್ಲದೆ ಮೇಲೆದ್ದಿತು

   ನಿಟ್ಟುಸಿರಿನ ಮುಗಿಲು

 

ಹನಿ ಗೂಡಿತು ಮಳೆ ಮೂಡಿತು

   ಹೊಮ್ಮಿತು ಜಲಧಾರೆ!

ಬಾಳೊಡಲಲಿ ಪುಟಿದುಕ್ಕಿತು

   ಕಂಬನಿ ತುಂಬು ನೆರೆ

             ೨

ಮುಗಿಲಳಿಯಿತು ಬಾನ್ ತಿಳಿಯಿತು

   ಚಿಮ್ಮಿತು ಹೂ ಬಿಸಿಲು

ನೆರೆಯಿಳಿಯಿತು ಹೊಗರೇರಿತು

   ಬಾಳಿನ ಹೆಬ್ಬಯಲು!

 

ಎಲೆ ಎಲೆಯಲಿ ನೀರುದುರಿತು

   ನಳನಳಿಸಿತು ಬನವು

ಒಳ ಜೀವದ ಹದ ಕುದುರಿತು

   ಥಳಥಳಿಸಿತು ಮನವು!

                ೩

ಮತ್ತಲ್ಲಿಯೆ ನಗೆ ನಲ್ಮೆಯ

   ಕಾಮನ ಬಿಲ್ಲರಳಿ

ನಲಿನಲಿವುದು ನವರಂಗಿನ

   ರಸದೋಕುಳಿ ಚೆಲ್ಲಿ!

 

ಇದು ಬದುಕಿನ ಮಳೆ ಬಿಸಿಲಿನ

   ನಾಟಕ ಬಗೆಯೊಳಗೆ

ನೋಡುತ್ತಿರೆ ಒಳಗಣ್ಣಿಗೆ

   ಮೌನದ ಬಯಲೊಳಗೆ!

 

(ಹೊಗರೇರಿತು =ಕಂಗೊಳಿಸಿತು

ಬಗೆ=ಮನಸ್ಸು)

ಚಿತ್ರ ಕೃಪೆ: ಅಂತರ್ಜಾಲ ತಾಣ

ಚಿತ್ರ್