ಮಳೆ ಮತ್ತು ಅವಳು

ಮಳೆ ಮತ್ತು ಅವಳು

ಬರಹ

ಇಂದು ಮಳೆ ಬಂತು. ಋತುವಿನ ಮೊದಲ ಮಳೆ. "ಮೊದಲ ಮಳೆ ಚಂದ, ಬೆಳೆದ ಯೌವನ ಚಂದ", ಎಷ್ಟು ಸತ್ಯ ಆಲ್ವ.
ಬಿಸಿಲ ಬೇಗೆಯಲಿ ಬೆಂದು ಬಸವಳಿದ ಭೂರಮೆಗೆ ಇಂದು ಪನ್ನೀರ ಸಿಂಚನ.
ಒಂದು ವಿಷಯ ಗೊತ್ತಾ?... ಪ್ರತಿಯೊಂದು ಹನಿಯಲ್ಲೂ ನಿನ್ನ ನಗುವಿತ್ತು, ನಿನ್ನ ನಲಿವಿತ್ತು, ನಿನ್ನ ತುಂಟಾಟವಿತ್ತು. ಅದಕ್ಕೆ ಇರಬೇಕು ಮಸಲ ಧಾರೆಗೆ ಮೈ ಚಲ್ಲಿ ನಿಂತಾಗ ಎಂತದ್ದೋ ರೋಮಾಂಚಾನ.
ಪ್ರತಿಯೊಂದು ಹನಿಯಲ್ಲೂ ಚುಂಬಕತೆ ಇತ್ತು, ಅದಕ್ಕೆ ಪೂರ್ತಿಯಾಗಿ ನೆನೆದು ಹೋದೆ.

ನೀ ಬರುವ ದಾರಿಯಲ್ಲಿ ಗುಡುಗ ರೂಪದಲ್ಲಿ ಢಂಗೂರ ಸಾರಿದವರು ಯಾರೇ?. ಮಿಂಚ ರೂಪದಲ್ಲಿ ದೀಪ ಬೆಳಗಿದವರು ಯಾರೇ?.
ಎಷ್ಟು ಅವಸರ ನಿನಗೆ, ತಂಗಾಳಿಗೆ ಒಮ್ಮೆ ಅತ್ತ ಜಾರಿ, ಮತ್ತೆ ಇತ್ತ ಬರುವಾಗ ಅದೆಷ್ಟು ಭಯ ನನಗೆ, ನಿನ್ನ ನಡು ವು ಉಳೂಕಿತೆಂದು.
ಚಲಿಸುತಿದ್ದ ಮೋಡಗಳೆನಗೆ ಅಶ್ವಗಳು ಅನ್ನಿಸಿದ್ದವು. ನವಿರಾಗಿ ಬೀಸುತಿದ್ದ ತಂಗಾಳಿಯಲ್ಲಿ ಎಂತಹದೋ ಆನಂದ.

ಆದರೆ....... ಅಶ್ವಗಳ ವೇಗ ಅಷ್ಟೊಂದು ಇರಬಹುದೆಂದು ಊಹಿಸಿರಲಿಲ್ಲ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ನೀನು ಮರೆಯಾಗಿದ್ದೆ.
ಎಷ್ಟೊಂದು ಕೋಪ ಬಂದಿತ್ತು. ಮತ್ತೆಂದೂ ನಿನ್ನ ನೋಡಬಾರದೆಂದುಕೊಂಡೆ, ಆದರೂ ಕಾಯತೊಡಗಿದೆ...
.... ಮತ್ತೊಂದು ಮಳೆಗಾಗಿ, ಅದು ಹೊತ್ತು ತರುವ ನಿನ್ನ ನುಡಿಗಾಗಿ,
ನಗುವಿಗಾಗಿ, ಚುಂಬನಕ್ಕಾಗಿ.