ಮಳೆ

ಮಳೆ

ಬರಹ

 

ಮೊದಲ ಮಳೆ, ಮುಂಗಾರಿನ ಮೊದಲ ಮಳೆ
ಅಲ್ಲಲ್ಲಿ ಹನಿಮಳೆ ಕೆಲವೆಡೆ ಜಡಿಮಳೆ
ಹಲವೆಡೆ ಸುರಿದ ಸುರಿಮಳೆ
ಧೋ ಎಂದೊದರಿದ ಧಾರಾಕಾರ ಮಳೆ

ಸಿಡಿಲ ಒಡಳೊಳಗಿಂದ ಗುಡುಗುಮಳೆ
ಮಾರುತದೊಡಗೂಡಿ ಬಡಿದ ಭಾರೀಮಳೆ
ಇಳೆಯ ಕೊಳೆತೊಳೆದ ಪಾವನ ಮಳೆ
ಹಸಿರ ಹರಸಿದ ಮಾತೃಮಳೆ

ಯುವಪ್ರೇಮಿಗಳಿಗೆ ಪ್ರೀತಿಮಳೆ
ನವದಂಪತಿಗೆ ಮಧುಮಳೆ
ಮಣ್ಣಮಕ್ಕಳಿಗೆ ಅನ್ನಮಳೆ
ಸರಕಾರಿ ಬಾಬೂಗೆ ರಗಳೆಮಳೆ

ನರೆಯ ಹಿರಿಯರಿಗೆ ದೇವಿಮಳೆ
ಹಳ್ಳಿಮಂದಿಗೆ ಉಸಿರುಮಳೆ
ನಗರವಾಸಿಗರಿಗೆ ಬೇಜಾರು ಮಳೆ
ಕುರುಕು ತಿನ್ನಲು ಬೇಕು ಮಳೆ

ಪುಂಡರ ಕಾಲ್ಚೆಂಡಾಟಕೆ ಮಳೆ
ಹೆಂಗಳೆಯರ ಚನ್ನೆಮಣೆ ಕೂಟಕೆ ಮಳೆ
ಸೋಮಾರಿಯ ಹಗಲ ನಿದ್ದೆಗೆ ಮಳೆ
ಮೊದಲ ಮಳೆ, ಮುಂಗಾರಿನ ಮೊದಲಮಳೆ