ಮಳೆ

ಮಳೆ

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರೇಮಶೇಖರ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಪುಸ್ತಕದ ಬೆಲೆ
ರೂ ೧೧೦.೦೦, ಮುದ್ರಣ: ೨೦೨೩

ಕನ್ನಡದ ಖ್ಯಾತ ಅಂಕಣಕಾರ, ಲೇಖಕ ಪ್ರೇಮಶೇಖರ ಇವರು ಬರೆದ ಪುಟ್ಟ ಕಾದಂಬರಿ ‘ಮಳೆ'. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಅನುರಾಧಾ ಪಿ ಎಸ್ ಇವರು. ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...

“ಕಥೆಗಾರ, ಅವನೊಳಗೊಬ್ಬ ಚಿತ್ರಗಾರ. ಅವನ ಕಥೆಗಳ ಅಪೂರ್ವ ಅಭಿಮಾನಿ ಚಾರುಲತಾಳಿಂದ ತನ್ನ ಪೋರ್ಟ್ ರೇಟ್ ಮಾಡಿಕೊಡುವಂತೆ ಬರುವ ಕೋರಿಕೆ. ಅವಳ ವಿಶಿಷ್ಟ ವ್ಯಕ್ತಿತ್ವ ಹಾಗೂ ತನ್ನ ಕಥನಕ್ರಮದ ಮೇಲೆ ಅವಳ ಅಭಿಪ್ರಾಯ, ಸಲಹೆಗಳಿಂದಾದ ಸತ್ಪರಿಣಾಮಗಳ ದೆಸೆಯಿಂದ ಮೋಡಿಗೊಳಗಾದವನಂತೆ ಅವಳನ್ನು ಕಾಣಲು ಅತೀವ ಆತುರದಲ್ಲಿ ಅವಳೂರಿನೆಡೆಗೆ ಹೊರಡುವ ಕಥೆಗಾರ, ಮಳೆ ಕಾಡೀತೆಂದು ಅವಳು ಎಚ್ಚರಿಸಿದರೂ ಲೆಕ್ಕಿಸದೇ ಬೈಕ್ ನಲ್ಲಿ ಹೊರಟು, ಅವಳೆಣಿಕೆಯಂತೇ ಮಳೆಯ ಆರ್ಭಟಕ್ಕೆ ಸಿಕ್ಕಿ ಒಬ್ಬಳು ಅಜ್ಜಿಯ ಹೊಟೇಲಿಗೆ ಬರುವುದು, ಅವಳ ಸೊಸೆ ರತ್ನಾಳ ಕ್ಷಣಕ್ಷಣಕ್ಕೂ ಆಸಕ್ತಿ ಕೆರಳಿಸುವ ವಿಶೇಷ ವ್ಯಕ್ತಿತ್ವ.. ಅಚಾನಕ್ಕಾಗಿ ಅವನಿಗೆ ಒದಗಿಬರುವ ಇವರಿಬ್ಬರ ಮುತುವರ್ಜಿಯೊಳಗೆ ಅವನ ಮುಂದಿನ ಪಯಣವನ್ನು ತಡೆಹಿಡಿಯುವಂಥ ಅವರಿಬ್ಬರ ವರ್ತನೆಗಳು, ಚಾರುಲತಾಳನ್ನು ನೋಡಹೋಗುವುದಕ್ಕೆ ಅಡ್ಡಿಯೊಡ್ಡುತ್ತಿದ್ದಾರೇನೋ ಅನಿಸಿ ಕಾಡುವ ಗೊಂದಲದಲ್ಲೇ ಸಾಗುವ ಆ ತುಂಡು ದಿನ, ಮತ್ತೊಂದು ಪೂರಾ ರಾತ್ರಿ, ಅಷ್ಟರಲ್ಲಿ ಅಜ್ಜಿ ಹೇಳುವ ಮಾಂತ್ರಿಕ ಕಥೆಯೊಳಗೆ ಒಂದೂರಿನ ರಾಜಕುಮಾರ ಅಲೆಯರಸ ಇನ್ನೊಂದೂರಿನ ಹೆಣ್ಣು ಮಲೆಯರಸಿ... ಜೀವ ತಳೆದಂತೆ ಮಾತಾಡುವ ಮಳೆ, ಗಾಳಿ, ನೀರು.
ಕಥೆಗಾರನ ಪಯಣದುದ್ದಕ್ಕೂ ಪದೇಪದೇ ಕೇಳಿಸುವ ನಿಗೂಢ ಆರ್ತನಾದ...! ಚಾರುಲತಾ ಪದೇಪದೇ ಹೇಳುತ್ತಿದ್ದ ಈರತ್ತಯ್ಯನ ಕಟ್ಟೆ, ಅದರಾಚೆಯ ಮಲೆ, ಅದರೀಚೆಯ ಮನೆ... ಕಥೆಗಾರನೊಳಗಿನ ಚಿತ್ರಕಾರನಿಗೆ ಸಿಕ್ಕ ಚಿತ್ರ…”
“ಒಳ್ಳೆಯ ಕಥೆಗಾರಿಕೆ ಅಂದರೆ ನಮ್ಮದಲ್ಲದ ಭಾವನೆಯನ್ನ, ಅನುಭವವನ್ನ, ಒಟ್ಟಾರೆ ಬದುಕನ್ನ ಅದು ನಮ್ಮದು ಅನ್ನುವಷ್ಟೇ ಸಹಜವಾಗಿ ಚಿತ್ರಿಸೋದು!" ಈ ಮಾತನ್ನು ಇದೇ ಕಥೆಯೊಳಗಿನ ಕಥೆಗಾರನಿಗೆ ಅವನ ಅಭಿಮಾನಿಯೊಬ್ಬಳ ಮೂಲಕ ಹೇಳಿಸುವ ನಮ್ಮ ಪ್ರೇಮಶೇಖರ ಅದನ್ನು "ಮಳೆ" ಕಾದಂಬರಿ ಹೆಣೆಯುವಲ್ಲಿ ಅಕ್ಷರಶಃ ಪಾಲಿಸಿದ್ದಾರೆ. ಹಾಗೇ "ಹೆಣ್ಣೆಂದರೆ ಪ್ರಕೃತಿಯ ಹಾಗೆ.. ಮಿಸ್ಟರಿ, ಎನಿಗ್ಯಾ, ರಿಡಲ್.." ಅನ್ನುತ್ತಾ ಅದಕ್ಕೆ ಸಾಕ್ಷಿಯಾಗಿ ಮಾಂತ್ರಿಕ ಕಥೆ ಹೇಳುವ ಸುಮಿತ್ರಜ್ಞೆಯನ್ನೂ, ಕಥೆಗಾರನದೇ ಕೃತಿಗಳನ್ನು ಎದೆಗೊತ್ತಿ ನಿಂತು ಅವನನ್ನೇ ಮಂತ್ರಮುಗ್ಧಗೊಳಿಸುವ ರತ್ನಾಳನ್ನೂ, ನೀರ ಮೇಲೆ ತೇಲುವ ಪ್ರತಿಬಿಂಬದಲ್ಲಿ ಪಾದವೂರಿದಂತೇ ಆಗಸದ ಚಂದ್ರಬಿಂಬವನ್ನು ಮುಡಿಗೇರಿಸಿಕೊಂಡು ನಿಲ್ಲುವ ಮಾಯಾರೂಪವನ್ನೂ ಕಣ್ಣಿಗೆ ಕಟ್ಟುವ ಹಾಗೆ ನಮ್ಮೆದುರು ಕಡೆದು ನಿಲ್ಲಿಸಿಬಿಡುತ್ತಾರೆ ನಮ್ಮ ಕಥೆಗಾರ ಪ್ರೇಮ್ ಸರ್
ಹಲವಾರು ಮಜಲುಗಳಲ್ಲಿ ಆಸಕ್ತಿ ಕೆರಳಿಸುತ್ತಾ ಗಮ್ಯದ ಕಡೆಗೆ ಸಾಗುವ ಈ "ಮಳೆ"ಯ ಪಯಣದಲ್ಲಿ ಬನ್ನಿ, ನೀವೂ ಪಾಲ್ಗೊಳ್ಳಿ” ಎಂದು ಹೇಳುತ್ತಾ ಕಾದಂಬರಿಯನ್ನು ಓದಲು ಆಸಕ್ತಿಯನ್ನು ಕೆರಳಿಸುತ್ತಿದ್ದಾರೆ.

ಈ ಕಾದಂಬರಿಯ ಪ್ರಥಮ ಓದುಗರಾದ ಕಥೆಗಾರ್ತಿ ಮಾಲತಿ ಹೆಗಡೆಯವರು ತಮ್ಮ ಮೊದಲ ಓದುಗಳಾಗಿ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದೆಡೆ ಅವರು ಬರೆಯುತ್ತಾರೆ “ಕಾದಂಬರಿಯಲ್ಲಿ ಊರಿಗೊಂದು ಆಕರ್ಷಕ ಹೆಸರು... ಹೆಸರಿಗೊಂದು ಸ್ವಾರಸ್ಯಕರ ಕಥೆ! ಮೈ ಅರಳಿಸುವ ಬಸಿರಿಗೊಂದು ಮೈ ನವಿರೇಳಿಸುವ ಕಥೆ! ಮತ್ತಿತ್ತಾಳೇಶ್ವರನೆಂಬ ನಿಜ ದೈವ. ಅಷ್ಟೇ ಅಲ್ಲ, ಅದು ಕಣ್ಣನ್ನು ಮಿಣಮಿಣ ತೆರೆದುಕೊಂಡಿರುವ ಪುರಾತನ ಸರ್ಪ! ಅದಕ್ಕೊಂದು ವಿಶೇಷ ಹರಕೆ...! ರುಮ್ಮರುಮ್ಮನೆ ಬಾರಿಸುವ ಮಳೆಯ ತಂಗಿ ಕುಳಿರ್ ದೇವಿ ! ಕಾಫಿ ಎಂಬ ಪುಟ್ಟ ಕರು ... ಹೀಗೆ ಹತ್ತು ಹಲವು ಅಚ್ಚರಿಯನ್ನು ಒಂದು ಕಾದಂಬರಿಯಲ್ಲಿ ಸೇರಿಸುವ ಪ್ರೇಮಶೇಖರ ಸರ್ ಕಲ್ಪನಾ ಶಕ್ತಿಗೆ ಶರಣು. ಮಳೆಯ ದಟ್ಟವಾದ ವಿವರಗಳು ಓದುಗರನ್ನು ತೊಯ್ದು ತೊಪ್ಪಡಿಯಾಗಿಸುತ್ತವೆ. ವಾಸ್ತವದ ನೆಲೆಗಟ್ಟಿನಲ್ಲಿ ಆರಂಭವಾಗುವ ಕಥೆ ಲಲಿತ ಸಂಭಾಷಣೆಗಳಿಂದ ಕಳೆಕಟ್ಟಿದೆ. ಕಲ್ಪನೆಯ ಹಂದರದಲ್ಲಿ ವಿಸ್ತಾರ ಪಡೆದು ದೃಶ್ಯ ಕಾವ್ಯದಂತೆ ಸೊಗಯಿಸಿ ಅಂತ್ಯದಲ್ಲಿ ಮತ್ತೆ ವಾಸ್ತವಿಕತೆಗೆ ಮರಳಿ ಸುರಿದಿದೆ ಮಳೆ.” ಎಂದು ಕಾದಂಬರಿಯನ್ನು ಓದಲೇ ಬೇಕೆನ್ನುವ ಆಸೆಯನ್ನು ದ್ವಿಗುಣಗೊಳಿಸುತ್ತಾರೆ.

ಲೇಖಕರಾದ ಪ್ರೇಮಶೇಖರ ಇವರು ‘ಮಳೆಗೆ ಮುನ್ನ...'ಎನ್ನುವ ತಮ್ಮ ಮಾತಿನಲ್ಲಿ ಈ ಕಾದಂಬರಿಗೆ ಕಾರಣಕರ್ತರಾದ, ಬೆಂಬಲ ನೀಡಿದ ಎಲ್ಲರನ್ನೂ ನೆನಪಿಸಿಕೊಂಡಿದ್ದಾರೆ. ೮೫ ಪುಟಗಳ ಈ ಕಾದಂಬರಿಯನ್ನು ಬಹುಬೇಗನೇ ಓದಿ ಮುಗಿಸಿದರೂ ಬಹಳ ಸಮಯ ನಿಮ್ಮನ್ನು ಕಾಡದೇ ಇರಲಾರದು.