ಮಳ್ಳಿ ಮಳ್ಳಿ ಅಂದೀರಾ, ಇದು ಹೆಮ್ಮಿಂಚುಳ್ಳಿ !

ಮಳ್ಳಿ ಮಳ್ಳಿ ಅಂದೀರಾ, ಇದು ಹೆಮ್ಮಿಂಚುಳ್ಳಿ !

ತರಬೇತಿಗೆ ಅಂತ ಬೆಂಗಳೂರಿಗೆ ಹೋಗಿದ್ದೆ. ತರಬೇತಿ ಮುಗಿಸಿ ರೈಲಿನಲ್ಲಿ ಮರಳಿ ಬಂದೆ. ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಇಳಿದೆ. ರೈಲ್ವೇ ನಿಲ್ದಾಣದಿಂದ ಬಸ್ ನಿಲ್ದಾಣ ಒಂದು ಕಿಲೋಮೀಟರ್ ದೂರ. ಬೆಳಗ್ಗಿನ ಹವೆಯೂ ತಂಪಾಗಿ ಹಿತವಾಗಿತ್ತು. ನಡೆದುಕೊಂಡೇ ಬಸ್ ಸ್ಟಾಂಡ್ ಕಡೆಗೆ ಹೊರಟೆ. ಸ್ವಲ್ಪ ದೂರ ಬಂದರೆ ಮಹಾಲಿಂಗೇಶ್ವರ ದೇವರ ದೇವಸ್ಥಾನ ಮತ್ತು ಜಾತ್ರೆ ನಡೆಯುವ ಗದ್ದೆ ಕಾಣಸಿಗುತ್ತದೆ. ರೈಲ್ವೆ ಸ್ಟೇಷನ್ ರಸ್ತೆ ಇಲ್ಲಿಗೆ ಬಂದು ಸೇರುವಲ್ಲಿ ಒಂದು ಸಣ್ಣ‌ ನೀರಿನ ಹರಿವು ಇದೆ. ನಮ್ಮಲ್ಲಿ ಈ ರೀತಿಯ ಸಣ್ಣ ನೀರು ಹರಿಯುವ ಜಾಗವನ್ನು ತೋಡು ಎಂದು ಕರೆಯುತ್ತೇವೆ. ಅದರ ಹತ್ತಿರ ಬರುವಾಗ ಜೋರಾಗಿ ಕಿ-ಕಿ-ಕಿ-ಕಿ-ಕಿ ಎಂದು ಗಹಗಹಿಸಿ ನಕ್ಕ ಹಾಗೆ ಶಬ್ದ ಕೇಳಿತು. ಈ ಬೆಳ್ಳಂಬೆಳಗ್ಗೆ ಚಳಿಯಲ್ಲಿ ಯಾರಪ್ಪಾ ಅಷ್ಟು ಜೋರಾಗಿ ನಗುವವರು ಎಂದು ಸುತ್ತಮುತ್ತ ಕಣ್ಣಾಡಿಸಿದೆ. ಯಾರೂ ಕಾಣಲಿಲ್ಲ. ಅಷ್ಟರಲ್ಲಿ ಮತ್ತೊಮ್ಮೆ ಅದೇ ಕಿ-ಕಿ-ಕಿ-ಕಿ-ಕಿ ಎಂಬ ಶಬ್ದ ಮರುಕಳಿಸಿತು. ನಾನು ಸ್ವಲ್ಪ ಹೊತ್ತು ಹಾಗೇ ನಿಂತೆ. ಮತ್ತೊಮ್ಮೆ ಅರ್ಧ ನಿಮಿಷ ಬಿಟ್ಟು ಅದೇ ಸದ್ದು ಕೇಳಿತು. ತೋಡಿನ ಸಮೀಪದ ಮರದ ಮೇಲಿನಿಂದ ಶಬ್ದ ಬಂದ ಕಡೆ ನಿಧಾನವಾಗಿ ಗಮನಿಸಿದೆ. 

ಪಾರಿವಾಳಕ್ಕಿಂತಲೂ ಸ್ವಲ್ಪ ದೊಡ್ಡ ಹಕ್ಕಿ. ಕಂದು ಬಣ್ಣದ ಟೋಪಿ ಹಾಕಿದಂತಹ ತಲೆ, ಹಳದಿ ಬಣ್ಣದ ಕತ್ತಿನ ಪಟ್ಟಿ ಮತ್ತು ಅದೇ ಹಳದಿ ಬಣ್ಣದ ದೇಹ. ರೆಕ್ಕೆ ಮತ್ತು ಬಾಲಗಳು ಚಂದದ ನೀಲಿ ಬಣ್ಣ. ಉದ್ದವಾದ ಗಾಢ ಕೆಂಪುಬಣ್ಣದ ಕೊಕ್ಕು. ಆ ಕೊಕ್ಕು ನೋಡಿದ ಕೂಡಲೇ ಇದು ಮಿಂಚುಳ್ಳಿ ಎಂದು ಖಚಿತವಾಯಿತು. ಕುತ್ತಿಗೆಯನ್ನು ಎತ್ತಿ ಇಳಿಸುತ್ತಾ, ಬಾಲ ಅಲ್ಲಾಡಿಸುತ್ತಾ ಆ ಕಡೆ ಈ ಕಡೆ ನೋಡುತ್ತಿತ್ತು. ಕೆಳಗೆ ನೀರಿನಲ್ಲಿ ಅದೇನು ಕಾಣಿಸಿತೋ ತಕ್ಷಣ ಮಿಂಚಿನ ವೇಗದಲ್ಲಿ ನೆಗೆದು ತನ್ನ ಕೊಕ್ಕಿನಲ್ಲಿ ಒಂದು ಮೀನನ್ನು ಹಿಡಿಯಿತು. ಪುನಃ ಬಂದು ಕುಳಿತಾಗ ನಾನು ನೋಡುತ್ತಿರುವುದು ತಿಳಿದು ಕಸಿವಿಸಿಯಾದಂತೆ ಅಲ್ಲಿಂದ ಹಾರಿ ಬೇರೆಲ್ಲೋ ಹೋಯಿತು. ಅದರ ಗಾತ್ರವನ್ನು ನೋಡಿ ನಾನಂತೂ ಆಶ್ಚರ್ಯ ಪಟ್ಟಿದ್ದೆ.

ಮನೆಗೆ ಬಂದು ಪುಸ್ತಕ ತೆರೆದು ಅದ್ಯಾವ ಹಕ್ಕಿ ಎಂದು ಹುಡುಕಿದರೆ ಅದು ಭಾರತದಲ್ಲಿ ಕಂಡುಬರುವ ಅತೀ ದೊಡ್ಡ ಮಿಂಚುಳ್ಳಿ ಎಂದು ಖಚಿತವಾಯಿತು. ತುಳುವಿನಲ್ಲಿ ಮೀನಂಕೋಳಿ, ಕೊಡವ ಭಾಷೆಯಲ್ಲಿ ಮೀಂಗೊತ್ತಿ ಎಂದೂ ಕರೆಯಲ್ಪಡುವ ಈ ಹಕ್ಕಿಗಳು ಹೊಳೆಯ ಆಸುಪಾಸಿನಲ್ಲಿ ಮಣ್ಣಿನಲ್ಲಿ ಎರಡರಿಂದ ನಾಲ್ಕು ಅಡಿ ಉದ್ದದ ಸುರಂಗ ತೋಡಿ, ಅದರೊಳಗೆ ಕೋಣೆಯಂತಹ ಜಾಗ ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಜನವರಿ ತಿಂಗಳಿನಿಂದ ಜುಲೈ ನಡುವೆ ಇವುಗಳಿಗೆ ಸಂತಾನಾಭಿವೃದ್ಧಿ ಕಾಲ. ಮೀನು, ಏಡಿ, ಸಣ್ಣ ಹಾವುಗಳು, ಕೆಲವೊಮ್ಮೆ ಸಣ್ಣ ಹಕ್ಕಿಗಳನ್ನೂ ಹಿಡಿದು ತಿನ್ನುತ್ತವೆಯಂತೆ. ದಕ್ಷಿಣ ಭಾರತದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸಣ್ಣ ತೊರೆಗಳ ಸಮೀಪ ಈ ಹಕ್ಕಿಯನ್ನು ನೋಡಬಹುದು. ಗಮನಿಸ್ತೀರಲ್ಲ.

ಕನ್ನಡದ ಹೆಸರು : ಹೆಮ್ಮಿಂಚುಳ್ಳಿ

ಇಂಗ್ಲೀಷ್ ಹೆಸರು : Stork-billed Kingfisher

ವೈಜ್ಞಾನಿಕ ಹೆಸರು : Pelargopsis capensis

ಚಿತ್ರ - ಬರಹ : ಅರವಿಂದ ಕುಡ್ಲ, ಬಂಟ್ವಾಳ