ಮಳ್ಳಿ ಮಳ್ಳಿ ಇದು ‘ನೀಲಿ’ ಮಿಂಚುಳ್ಳಿ!

ಮಳ್ಳಿ ಮಳ್ಳಿ ಇದು ‘ನೀಲಿ’ ಮಿಂಚುಳ್ಳಿ!

ಉದ್ದದ ಕೊಕ್ಕು, ಪುಟಾಣಿ ಬಾಲ

ನೀರಿನ ಬದಿಯಲೆ ಎನ್ನಯ ವಾಸ

ಬಾಣದಂತೆ ನೀರಿಗೆ ಧುಮುಕಿ

ಪುಟಾಣಿ ಮೀನನು ಹಿಡಿದು ತಿನ್ನುವೆ

ನೀಲಿ ಬಣ್ಣದಲಿ ಮಿಂಚುವ ಹಕ್ಕಿ

ಮೋಟು ಬಾಲದಾ ಪುಟಾಣಿ ಹಕ್ಕಿ

ಹೇಳಬಲ್ಲಿರಾ ಎನ್ನಯ ಹೆಸರು?

ಒಂದು ದಿನ ನನ್ನ ಗೆಳೆಯನೊಬ್ಬನ ಮನೆಗೆ ಹೋಗಿದ್ದೆ. ಆತನ ಮನೆಯ ತೋಟದ ಪಕ್ಕದಲ್ಲಿ ಪುಟಾಣಿ ನೀರಿನ ಹರಿವು ಇತ್ತು. ನಮ್ಮೂರಿನಲ್ಲಿ ಇದನ್ನು ತೋಡು ಎಂದು ಕರೆಯುತ್ತಾರೆ. ಬೇಸಗೆಯಲ್ಲಿ ತೋಡಿಗೆ ಕಟ್ಟ ಎಂಬ ಪುಟಾಣಿ ಅಣೆಕಟ್ಟು ಕಟ್ಟುತ್ತಾರೆ. ಇದರಿಂದ ತೋಟಕ್ಕೆ ನೀರು ಬಿಡಲು ಅನುಕೂಲ ಮತ್ತು ಅಂತರ್ಜಲ ವೃದ್ಧಿ ಎರಡೂ ಆಗುತ್ತದೆ. ಅದನ್ನು ನೋಡಲಿಕ್ಕೆ ಅಂತ ನಾವು ಹೋಗಿದ್ವಿ. ನಾವು ಆ ನೀರನ್ನು ನೋಡುತ್ತಿರುವಾಗ ನಮ್ಮ ಬದಿಯಲ್ಲಿ ಚಿ ಚಿ ಚಿ ಚಿ ಎಂದು ಕೂಗುತ್ತಾ ವೇಗವಾಗಿ ಯಾವುದೋ ಪುಟಾಣಿ ಹಕ್ಕಿ ಹಾರಿದ್ದು ಕಂಡಿತು. 

ಹಾರಿ ಹೋದ ಹಕ್ಕಿ ಒಂದಿಷ್ಟು ದೂರದಲ್ಲಿ ನೀರಿನ ಬದಿಯ ಒಂದು ಪುಟಾಣಿ ಕೊಂಬೆಯ ಮೇಲೆ ಕುಳಿತುಕೊಂಡಿತು. ರೆಕ್ಕೆ ತಲೆ ಎಲ್ಲಾ ಚಂದದ ನೀಲಿ ಬಣ್ಣ, ಹೊಟ್ಟೆಯ ಭಾಗ ಮಣ್ಣಿನ ಹಾಗೆ ಕಾಣುವ ಕಂದು ಮಿಶ್ರಿತ ಕೇಸರಿ ಬಣ್ಣ, ಕಪ್ಪು ಬಣ್ಣದ ಉದ್ದ ಕೊಕ್ಕು, ಪುಟಾಣಿ ಬಾಲ. ಕೊಂಬೆಯ ತುದಿಯಲ್ಲಿ ಕೂತು ಈ ಗುಬ್ಬಚ್ಚಿ ಗಾತ್ರದ ಹಕ್ಕಿ ಟಿಕ್ ಟಿಕ್ ಪೆನ್ನಿನಂತೆ ತನ್ನ ಕತ್ತನ್ನು ಒತ್ತಿ ಎತ್ತಿ ಆ ಕಡೆ ಈ ಕಡೆ ನೋಡುತ್ತಿತ್ತು. ಹೀಗೆ ನೋಡುವಾಗ ಅದರ ಬಾಲವನ್ನು ಅದೇ ತಾಳಕ್ಕೆ ಕಾಣಿಸುತ್ತಿತ್ತು. ಅಲ್ಲಿ ಕೂತು ಸುತ್ತಲಿನ ನೀರನ್ನೆಲ್ಲ ಗಮನಿಸಿದ ಹಕ್ಕಿ ಬುಳುಕ್ ಅಂತ ನೀರಿಗೆ ಬಾಣ ಬಿಟ್ಟಂತೆ ಧುಮುಕಿತು. ಕೆಲವೇ ಕ್ಷಣದಲ್ಲಿ ಮೇಲೆ ಬಂದು ಮತ್ತೆ ಅದೇ ಕೊಂಬೆ ಮೇಲೆ ಕೂತ್ಕೊಂಡಿತು. ಈಗ ಅದರ ಬಾಯಲ್ಲಿ ಒಂದು ಪುಟಾಣಿ‌ ಮೀನು ಇತ್ತು. ಆ ಮೀನನ್ನು ಒಂದೆರಡು ಬಾರಿ ಕೊಂಬೆಗೆ ಬಡಿದು ನುಂಗಿಬಿಟ್ಟಿತು. ಮೀನು ಹಿಡಿಯುವ ಈ ಹಕ್ಕಿಯನ್ನು ತುಳುವಿನಲ್ಲಿ ಮೀನಂಕೋಳಿ ಎಂದು ಸಹ ಕರೆಯುತ್ತಾರೆ. ಮೀನು ಹಿಡಿಯುವಲ್ಲಿ ಅತ್ಯಂತ ಚಾಣಾಕ್ಷನಾದ ಇದನ್ನು ಕಿಂಗ್ ಫಿಷರ್ ಅಂತ ಕರೀತಾರೆ. ಮಿಂಚಿನ ವೇಗದಲ್ಲಿ ಹಾರಿ ಮೀನು ಹಿಡಿಯುವುದರಿಂದ ಮಿಂಚುಳ್ಳಿ ಎನ್ನುತ್ತಾರೆ. ಮೀನು ಮಾತ್ರವಲ್ಲದೆ, ಕಪ್ಪೆ, ಗೊದಮೊಟ್ಟೆಯಂತಹ ಜಲಚರಗಳು ಇದರ ಮುಖ್ಯ ಆಹಾರ. 

ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ನಡುವೆ ನೀರಿನ ಹರಿವುಗಳ ಆಸು ಪಾಸಿನಲ್ಲಿ ಮಣ್ಣಿನಲ್ಲಿ ಎರಡರಿಂದ ನಾಲ್ಕು ಅಡಿ ಉದ್ದನೆಯ ತೂತು ಕೊರೆದು ಅದರೊಳಗೆ ಜಾಗ ಮಾಡಿ ಅದರಲ್ಲಿ ಮೊಟ್ಟೆಗಳನ್ನು ಇಟ್ಟು ಮರಿಗಳನ್ನು ಮಾಡುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ನೋಡಲು ಒಂದೇ ಸಮಾನವಾಗಿರುತ್ತವೆ. ನೀರು ಇರುವ ಪ್ರದೇಶಗಳ ಆಸುಪಾಸಿನಲ್ಲಿ ಖಂಡಿತ ನೋಡಲು ಸಿಗುತ್ತದೆ. ಸಮುದ್ರದ ಬದಿಯಲ್ಲೂ ನೋಡಲು ಸಿಗುತ್ತದೆ. ಭಾರತದಾದ್ಯಂತ ನೋಡಲು ಸಿಗುವ ಗುಬ್ಬಚ್ಚಿ ಗಾತ್ರದ ಮಿಂಚುಳ್ಳಿ ಹಕ್ಕಿ ನಿಮ್ಮ ಆಸು ಪಾಸಿನಲ್ಲೂ ಇರಬಹುದು.

ಕನ್ನಡದ ಹೆಸರು: ನೀಲಿ ಮಿಂಚುಳ್ಳಿ

ಇಂಗ್ಲೀಷ್ ಹೆಸರು: Common Kingfisher

ವೈಜ್ಞಾನಿಕ ಹೆಸರು: Alcedo atthis

ಚಿತ್ರ - ಬರಹ : ಅರವಿಂದ ಕುಡ್ಲ, ಬಂಟ್ವಾಳ