ಮಹನೀಯರಿಬ್ಬರ ಮನದಾಳ…
ಈ ಇಬ್ಬರು ಮಹನೀಯರು ಯಾರು ಎಂಬುವುದನ್ನು ಮೊದಲೇ ಹೇಳಿ ಬಿಡುತ್ತೇನೆ. ಒಬ್ಬರು ನಮ್ಮ ಸೇನೆಯ ಅತ್ಯುನ್ನತ ಸ್ಥಾನವಾದ ಫೀಲ್ಡ್ ಮಾರ್ಶಲ್ ಗೌರವಕ್ಕೆ ಪಾತ್ರರಾದ ಸ್ಯಾಂ ಮಾಣಿಕ್ ಷಾ ಅಥವಾ ಮಾಣಿಕ್ ಶಾ. ಮತ್ತೊಬ್ಬರು ‘ಜನರ ರಾಷ್ಟ್ರಪತಿ' ಎಂದೇ ಖ್ಯಾತರಾದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ. ಇವರಿಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸಿ, ಹಂತ ಹಂತವಾಗಿ ಬೆಳೆಯುತ್ತಾ ಉನ್ನತ ಸ್ಥಾನಕ್ಕೆ ಏರಿದವರು. ಇಬ್ಬರೂ ಉತ್ತಮ ಚಿಂತಕರೂ, ದೇಶಪ್ರೇಮಿಗಳೂ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಉತ್ತಮ ಹೃದಯವಂತರೂ ಆಗಿದ್ದವರು.
ಫೀಲ್ಡ್ ಮಾರ್ಶಲ್ ಸ್ಯಾಂ ಹೊರ್ಮಸ್ ಜಿ ಫ್ರಾಮ್ ಜಿ ಜೆಮ್ಸೆಡ್ಜಿ ಮಾಣಿಕ್ ಶಾ (ಸ್ಯಾಂ ಮಾಣಿಕ್ ಶಾ) ಇವರು ಪಾರ್ಸಿ ಕುಟುಂಬವೊಂದರಲ್ಲಿ ೧೯೧೪ರ ಎಪ್ರಿಲ್ ೩ರಂದು ಹುಟ್ಟಿದರು. ಇವರನ್ನು ಸ್ಯಾಂ ಬಹಾದ್ದೂರ್ ಎಂದೂ ಕರೆಯುತ್ತಿದ್ದರು. ಇವರು ಸೈನ್ಯಕ್ಕೆ ಸೇರಿದ ಬಳಿಕ ಎರಡನೇ ವಿಶ್ವಯುದ್ಧ, ಭಾರತ -ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದರು. ೧೯೭೧ರ ಬಾಂಗ್ಲಾದೇಶದ ವಿಮೋಚನಾ ಯುದ್ಧದ ಸಮಯದಲ್ಲಿ ಇವರು ಭಾರತೀಯ ಸೇನೆಯ ಮಹಾ ದಂಡನಾಯಕರಾಗಿದ್ದರು. ಇವರ ಅಪ್ರತಿಮ ಸಾಹಸದ ಪ್ರಯುಕ್ತ ಭಾರತ ಈ ಯುದ್ಧದಲ್ಲಿ ಜಯಶಾಲಿಯಾಯಿತು. ಇವರು ಭಾರತದ ಮೊದಲ ಫೀಲ್ಡ್ ಮಾರ್ಶಲ್ ಆಗಿದ್ದರು. ಇವರು ೨೦೦೮, ಜೂನ್ ೨೭ರಂದು ವೆಲ್ಲಿಂಗ್ಟನ್ ನಲ್ಲಿ ನಿಧನ ಹೊಂದಿದರು.
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇವರು ತಮಿಳುನಾಡಿನ ರಾಮೇಶ್ವರದ ಬಡ ಕುಟುಂಬವೊಂದರಲ್ಲಿ ೧೯೩೧, ಅಕ್ಟೋಬರ್ ೧೫ರಂದು ಹುಟ್ಟಿದರು. ತಮ್ಮ ಸ್ವಸಾಮರ್ಥ್ಯದಿಂದ ಇವರು ವಿಜ್ಞಾನಿಯಾಗಿ, ಭಾರತದ ಬಾಹ್ಯಾಕಾಶ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ 'ಮಿಸೈಲ್ ಮ್ಯಾನ್' ಎಂಬ ಗೌರವವನ್ನು ಪಡೆದು ಭಾರತದ ರಾಷ್ಟ್ರಪತಿಯಾಗಿ (೨೦೦೨-೨೦೦೭) ಸೇವೆ ಸಲ್ಲಿಸಿದ್ದಾರೆ. ಇವರು ಜನ ಸಾಮಾನ್ಯರ ರಾಷ್ಟ್ರಪತಿ ಎಂದೇ ಖ್ಯಾತರಾಗಿದ್ದರು. ರಾಷ್ಟ್ರಪತಿಯಾಗಿ ನಿವೃತ್ತರಾದ ಬಳಿಕವೂ ತಮ್ಮ ಮೆಚ್ಚಿನ ಉಪನ್ಯಾಸಕ ವೃತ್ತಿಗೆ ಮರಳಿದರು. ಇವರು ೨೦೧೫, ಜುಲೈ ೨೭ರಂದು ಶಿಲ್ಲಾಂಗ್ ನಲ್ಲಿ ನಿಧನರಾದರು.
ಈ ಇಬ್ಬರು ಮಹಾನ್ ವ್ಯಕ್ತಿಗಳ ಭೇಟಿಯೂ ಬಹಳ ಮಹತ್ವದ್ದೇ ಆಗಿರುತ್ತದೆ. ಈ ಭಾವನಾತ್ಮಕ ಪ್ರಸಂಗ ಓದಿದ ಬಳಿಕ ನೀವು ಯಾರಿಗೆ ಗೌರವದಿಂದ ಸೆಲ್ಯೂಟ್ ಮಾಡುತ್ತೀರಿ..? ಇದು ನಿಮಗೆ ಬಿಟ್ಟದ್ದು.
ಭಾಗ ೧
ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ತಮಿಳುನಾಡಿನ ಕೂನೂರು ಎಂಬಲ್ಲಿ ತಮ್ಮ ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ಹೋಗಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕೂನೂರಿನಲ್ಲಿರುವ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಭಾರತದ ಮೊದಲ ಫೀಲ್ಡ್ ಮಾರ್ಶಲ್ ಸ್ಯಾಂ ಮಾಣಿಕ್ ಶಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತದೆ. ಕಲಾಂ ಶಾ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸುವ ಇಂಗಿತ ವ್ಯಕ್ತ ಪಡಿಸುತ್ತಾರೆ. ನಿಮಗೆ ತಿಳಿದಿರಲಿ, ರಾಷ್ಟ್ರಪತಿಗಳ ಪ್ರತಿಯೊಂದು ಕಾರ್ಯಕ್ರಮವೂ ಭಯಂಕರ, ಉಸಿರುಗಟ್ಟಿಸುವ ಶಿಷ್ಟಾಚಾರದ ಪ್ರಕಾರವೇ ನಡೆಯುತ್ತದೆ. ಭಾರತದ ಬಹುತೇಕ ರಾಷ್ಟ್ರಪತಿಗಳು ಈ ಶಿಷ್ಟಾಚಾರಕ್ಕೆ ತಕ್ಕಂತೆಯೇ ನಡೆದಿದ್ದರು. ಆದರೆ ಕಲಾಂ ಮಾತ್ರ ಅದಕ್ಕೆ ಸೊಪ್ಪು ಹಾಕುತ್ತಿರಲಿಲ್ಲ. ಈ ಕಾರಣದಿಂದಲೇ ಅವರು ಜನರ ರಾಷ್ಟ್ರಪತಿ ಎಂಬ ಹೆಸರು ಪಡೆದಿದ್ದರು. ರಾಷ್ಟ್ರಪತಿಗಳ ಇಂಗಿತವು ಒಪ್ಪಿಗೆಯಾದ ಬಳಿಕ ಮಾಣಿಕ್ ಶಾ ಅವರ ಭೇಟಿಯ ಸಮಯ ನಿಗದಿಯಾಯಿತು. ೨೦೦೭, ಫೆಬ್ರವರಿ ೨೪ರಂದು ನಡೆದ ಈ ಭೇಟಿ ಇಬ್ಬರೂ ಮಹಾನ್ ನಾಯಕರ ಹೃದಯವಂತಿಕೆಗೆ ಸಾಕ್ಷಿಯಾಯಿತು.
ಕಲಾಂ ಸುಮಾರು ಹದಿನೈದು ನಿಮಿಷಗಳ ಕಾಲ ಮಾಣಿಕ್ ಶಾ ಅವರ ಜೊತೆ ಸೇನಾ ಆಸ್ಪತ್ರೆಯಲ್ಲಿ ಮಾತನಾಡಿದರು. ಕೈ ಹಿಡಿದುಕೊಂಡು ಆತ್ಮೀಯವಾಗಿ ಮನದಾಳದ ಮಾತುಗಳನ್ನು ಹಂಚಿಕೊಂಡರು. ಮಾತೆಲ್ಲಾ ಮುಗಿದ ಬಳಿಕ ಕೋಣೆಯಿಂದ ಹೊರಗೆ ತೆರಳುವ ಮೊದಲು ಕಲಾಂ ಅವರು ಮಾಣಿಕ್ ಶಾ ಜೊತೆ ‘ನೀವು ಇಲ್ಲಿ ಚೆನ್ನಾಗಿದ್ದೀರಿ ತಾನೇ? ನಿಮಗೆ ಇನ್ನೇನಾದರೂ ಹೆಚ್ಚಿನ ವ್ಯವಸ್ಥೆಯ ಅಗತ್ಯತೆ ಇದೆಯೇ? ಏನಾದರೂ ಕುಂದುಕೊರತೆ, ತೊಂದರೆಗಳು ಇವೆಯೇ? ದಯವಿಟ್ಟು ನನ್ನ ಬಳಿ ಹೇಳಿ" ಎಂದರು.
ಭಾಗ ೨
ಸ್ಯಾಂ ಮಾಣಿಕ್ ಶಾ ಅಂದರು “ಹೌದು ರಾಷ್ಟ್ರಪತಿಗಳೇ, ನನಗೆ ನನ್ನ ಮನದಲ್ಲೊಂದು ಪುಟ್ಟ ಅಸಮಧಾನ ಹಾಗೂ ಬೇಸರವಿದೆ.” ಈ ಮಾತುಗಳನ್ನು ಕೇಳಿದ ರಾಷ್ಟ್ರಪತಿ ಕಲಾಂ ಅವರಿಗೆ ಆಶ್ಚರ್ಯವಾಯಿತು. ಕೂಡಲೇ ಕಲಾಂ ಕೇಳಿದರು ‘ಏನದು? ನನ್ನ ಬಳಿ ಹೇಳಿ’. ಅದಕ್ಕೆ ಮಾಣಿಕ್ ಶಾ ಹೇಳಿದರು "ಸರ್, ನನಗಿರುವ ಬೇಸರ ಒಂದೇ, ನನ್ನ ದೇಶದ, ನಾನು ತುಂಬಾ ಗೌರವಿಸುವ ರಾಷ್ಟ್ರಪತಿಗಳಾದ ತಾವು ನನ್ನನ್ನು ಭೇಟಿಯಾಗಲು ಬಂದಾಗ ಸೈನಿಕನಾದ ನಾನು ಎದ್ದು ನಿಂತು ಸೆಲ್ಯೂಟ್ ಹೊಡೆಯಲು ಆಗಲಿಲ್ಲವಲ್ಲಾ ಎಂಬ ಬೇಸರ ಮಾತ್ರ ನನಗೆ ಇದೆ" ಎಂದರು. ಈ ಮಾತುಗಳನ್ನು ಕೇಳಿದ ಕಲಾಂ ಅವರು ಮಾಣಿಕ್ ಶಾ ಅವರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಇಬ್ಬರ ಕಣ್ಣುಗಳಲ್ಲಿಯೂ ನೀರಿತ್ತು.
ಭಾಗ ೩
ಕಥೆ ಇಲ್ಲಿಗೇ ಮುಗಿಯಲಿಲ್ಲ. ಕಲಾಂ ಅವರ ಭೇಟಿಯ ಸಮಯದಲ್ಲಿ ಮಾಣಿಕ್ ಶಾ ಅವರು ತಮಗೆ ಫೀಲ್ಡ್ ಮಾರ್ಶಲ್ ಆಗಿದ್ದ ಕಾರಣ ಬರಬೇಕಾಗಿದ್ದ ಪಿಂಚಣಿ ಹಣ ಕಳೆದ ೨೦ ವರ್ಷಗಳಿಂದ ಬರುತ್ತಿಲ್ಲ ಎಂಬ ವಿಷಯವನ್ನು ಬೇಸರದಿಂದ ಹೇಳಿದರು. ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿದ ಭಾರತ ಮಾತೆಯ ವೀರ ಪುತ್ರನ ಈ ವಿಷಯ ತಿಳಿದು ಕಲಾಂ ನೊಂದುಕೊಂಡರು.
ಭಾಗ ೪
ದೆಹಲಿ ತಲುಪುತ್ತಲೇ ಕಲಾಂ ಅವರು ಮಾಣಿಕ್ ಶಾ ಅವರ ಕಳೆದ ೨೦ ವರ್ಷಗಳ ಪಿಂಚಣಿಯನ್ನು ಕೂಡಲೇ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಖುದ್ದು ರಾಷ್ಟ್ರಪತಿಗಳೇ ಹೇಳಿದ ಬಳಿಕ ಕೇಳಬೇಕೇ? ಜಡವಾಗಿದ್ದ ಆಡಳಿತ ಯಂತ್ರ ಕೂಡಲೇ ಚುರುಕಾಗಿ ಕಾರ್ಯ ನಿರ್ವಹಿಸಲು ತೊಡಗಿತು. ಮಾಣಿಕ್ ಶಾ ಅವರಿಗೆ ಒಂದು ಕಾಲು ಕೋಟಿ ರೂಪಾಯಿಯ ಚೆಕ್ ಅನ್ನು ರವಾನಿಸಲಾಯಿತು. ಅದೂ ರಕ್ಷಣಾ ಕಾರ್ಯದರ್ಶಿ ಖುದ್ದಾಗಿ ವಿಶೇಷ ವಿಮಾನದಲ್ಲಿ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಗೆ ತೆರಳಿ ಮಾಣಿಕ್ ಶಾ ಅವರಿಗೆ ಕೊಟ್ಟು ಬಂದರು. ಇದು ರಾಷ್ಟ್ರಪತಿ ಹುದ್ದೆಗೆ ಗೌರವ ತಂದುಕೊಟ್ಟ ಕಲಾಂ ಅವರ ದೊಡ್ಡತನ.
ಭಾಗ ೫
ಮಾಣಿಕ್ ಶಾ ತನ್ನ ಕೈಗೆ ಬಂದ ಚೆಕ್ ಅನ್ನು ತಕ್ಷಣವೇ ‘ಸೇನಾ ಪರಿಹಾರ ನಿಧಿ' ಗೆ ಕಾಣಿಕೆಯಾಗಿ ನೀಡಿದರು. ಅಷ್ಟೊಂದು ದೊಡ್ದ ಮೊತ್ತ ತನ್ನ ಕೈಗೆ ಬಂದರೂ ಒಂದು ಚೂರೂ ಹಣಕ್ಕಾಗಿ ಆಸೆ ಪಡದೆ ತಾನು ಸೇವೆ ಸಲ್ಲಿಸಿದ ಸೇನೆಗೆ ದಾನವಾಗಿ ನೀಡಿದರು. ಇದು ಸ್ಯಾಂ ಮಾಣಿಕ್ ಶಾ ಅವರ ದೊಡ್ದತನ.
***
ಈಗ ಹೇಳಿ ನೀವು ಯಾರಿಗೆ ಗೌರವದ ಸೆಲ್ಯೂಟ್ ಮಾಡುತ್ತೀರಿ? ದೊಡ್ಡವರು ತಮ್ಮ ದೊಡ್ಡತನವನ್ನು ಇಂತಹ ಉತ್ತಮ, ಉದಾತ್ತ ವಿಷಯಗಳಲ್ಲಿ ತೋರಿಸಿದರೆ ಖಂಡಿತವಾಗಿಯೂ ಭಾರತ ದೇಶ ಪ್ರಗತಿಯನ್ನು ಕಾಣುವುದರಲ್ಲಿ ಸಂಶಯವಿಲ್ಲ. ತಮಗೆ ಇರುವ ಅಧಿಕಾರವನ್ನು ಉತ್ತಮ ಕಾರ್ಯಗಳಿಗೆ ಬಳಸಬೇಕು. ಜನರ ಸಂಕಷ್ಟಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಫೀಲ್ಡ್ ಮಾರ್ಶಲ್ ಸ್ಯಾಂ ಮಾಣಿಕ್ ಶಾ ಹಾಗೂ ಡಾ. ಅಬ್ದುಲ್ ಕಲಾಂ ಈ ನಿಟ್ಟಿನಲ್ಲಿ ಸದಾ ಸ್ಮರಣೀಯರು.
(ಆಂಗ್ಲ ಮಾಹಿತಿಯೊಂದರ ಭಾವಾನುವಾದ)
ಚಿತ್ರ ಕೃಪೆ: ಅಂತರ್ಜಾಲ ತಾಣ