ಮಹರ್ಷಿ ವಾಲ್ಮೀಕಿ ಬಗ್ಗೆ ಕಿರು ನೋಟ
ಆಶ್ವೀಜ ಮಾಸದ ಹುಣ್ಣಿಮೆ ಬಂತೆಂದರೆ “ಮಹರ್ಷಿ ವಾಲ್ಮೀಕಿ” ಜಯಂತಿಯ ಸಂಭ್ರಮ. ಭೃಗುವಂಶದ ಮುನಿಯಾಗಿದ್ದ ಪ್ರಾಚೇತಸನಿಗೆ ಹತ್ತನೆಯ ಮಗುವಾಗಿ ರತ್ನಾಕರನ ಜನನ. ಅಚಾನಕ್ಕಾಗಿ ಕಾಡಿನಲ್ಲಿ ಕಳೆದುಹೋದ ರತ್ನಾಕರನಿಗೆ ಬೇಡರ ಸಂಗದಿಂದ ಮೂಲ ಸಂಸ್ಕಾರಗಳೆಲ್ಲವೂ ಮರೆತು ಬೇಟೆಗಾರನಾಗಲು, ವಯಸ್ಕನಾದ ಕೂಡಲೇ ಬೇಡರ ಕನ್ಯೆಯೊ೦ದಿಗೆ ವಿವಾಹ. ತನ್ನ ಸಂಸಾರವನ್ನು ನಡೆಸಲು ಅಸಮರ್ಥನಾಗಿ ಕಳ್ಳನಾಗಿ ಜನರನ್ನು ಪೀಡಿಸುತ್ತಿದ್ದಾಗ ಒಂದೊಮ್ಮೆ ನಾರದ ಮಹರ್ಷಿಗಳ ಬೇಟಿಯಾಗಿ ನಾರದ ಮಹರ್ಷಿಗಳು “ನಿನ್ನ ಪಾಪವನ್ನೆಲ್ಲಾ ನಿನ್ನ ಕುಟುಂಬದವರು ಹಂಚಿಕೊಳ್ಳುತ್ತಾರೋ ? ಹೋಗಿ ವಿಚಾರಿಸು” ಎಂದು ರತ್ನಾಕರನಿಗೆ ಸೂಚಿಸಲಾಗಿ, ಕುಟುಂಬದ ಯಾರೊಬ್ಬರೂ ಅವನ ಪಾಪವನ್ನು ಹಂಚಿಕೊಳ್ಳಲು ತಯಾರಿರಲಿಲ್ಲ. ಇದರಿಂದ ವಿಚಲಿತನಾದ ರತ್ನಾಕರ ನಾರದರಲ್ಲಿ ಪರಿಹಾರ ಯಾಚಿಸಿದಾಗ ನಾರದರು ರಾಮನಾಮವನ್ನು ನಿರಂತರವಾಗಿ ಜಪಿಸುತ್ತಾ ತಪಸ್ಸು ಮಾಡು ಎಂದು ಸೂಚಿಸಿದರಂತೆ. ನಂತರ ರತ್ನಾಕರ ಪ್ರಾರಂಭಿಸಿದ ನಿರಂತರ ತಪಸ್ಸಿನಿಂದ ಅವನ ಸುತ್ತ ಹುತ್ತವೂ ಬೆಳೆಯಿತು. ನಾರದರು ಆ ದಾರಿಯಲ್ಲಿ ಸಾಗುತ್ತಿರಲು ರತ್ನಾಕರನನ್ನು ಆಶೀರ್ವದಿಸಿ ನೀನೀಗ “ಬ್ರಹ್ಮರ್ಷಿ”, ನಿನ್ನ ಸುತ್ತ ಹುತ್ತ (ವಲ್ಮೀಕ) ಬೆಳೆದಿರುವುದರಿಂದ ಮುಂದೆ ನೀನು “ವಾಲ್ಮೀಕಿ” ಎಂದು ಪ್ರಸಿದ್ಧನಾಗು ಎ೦ದು ಅಶೀರ್ವದಿಸಿದರ೦ತೆ. ಇದು ಪ್ರಚಲಿತವಾಗಿರುವ “ವಾಲ್ಮೀಕಿ” ಹೆಸರಿನ ಮೂಲಕಥೆ.
ವನವಾಸಕ್ಕೆ ಹೊರಟ ಶ್ರೀರಾಮಚಂದ್ರನಿಗೆ ಚಿತ್ರಕೂಟ ಪರ್ವತವನ್ನು ತೋರಿಸಿದ್ದು ಮಹರ್ಷಿ ವಾಲ್ಮೀಕಿಯೆ. ಮಗದೊಮ್ಮೆ ನಾರದರಿಂದ ಶ್ರೀರಾಮಚಂದ್ರನ ಕಥೆಯನ್ನೆಲ್ಲಾ ತಿಳಿದು ಸಂತುಷ್ಟನಾದ ವಾಲ್ಮೀಕಿ ಎಂದಿನಂತೆ ತನ್ನ ಶಿಷ್ಯ ಭರದ್ವಾಜನೊಂದಿಗೆ ತಮಸಾ ನದಿಯ ತೀರಕ್ಕೆ ಸ್ನಾನಕ್ಕೆ ತೆರಳಲು, ಅಲ್ಲಿ ಕ್ರೌಂಚ ಪಕ್ಷಿಗಳೆರಡು ಸಂತಸದಿಂದ ಹಾರುತ್ತಿದ್ದುದನ್ನು ನೋಡಿ ಆನಂದತುಲಿತನಾಗಿದ್ದನು. ಅಷ್ಟರಲ್ಲಿ ಒಬ್ಬ ಬೇಡನ ಬಾಣಕ್ಕೆ ತುತ್ತಾಗಿ ಗಂಡು ಪಕ್ಷಿಯು ಕೆಳಗೆಬಿದ್ದು, ಅದನ್ನು ಕಂಡು ದು:ಖ ತಡೆಯಲಾರದೆ ಅದರ ಸಂಗಾತಿ ಹೆಣ್ಣು ಪಕ್ಷಿಯ ರೋದನವನ್ನು ಕೇಳಿಸಿಕೊಂಡ ವಾಲ್ಮೀಕಿಯು ಬಾಣ ಹೊಡೆದ ಬೇಡನಿಗೆ ಶಪಿಸಿದನು. ಆದರೆ “ಛೆ, ಆ ಬೇಡನನ್ನು ನಾನ್ಯಾಕೆ ಶಪಿಸಿದೆನೋ” ಎಂದು ಪಶ್ಚಾತ್ತಾಪವಾಗಿ ಬ್ರಹ್ಮನ ಮೊರೆ ಹೋದಾಗ, ಬ್ರಹ್ಮನು ಮಹರ್ಷಿಯೇ, ನಿನ್ನ ವಿಷಾದದಿ೦ದ ಹುಟ್ಟಿದ ಶ್ಲೋಕದಿಂದ ನಾನು ಸಂತುಷ್ಟನಾಗಿದ್ದೇನೆ. ಈ ಶ್ಲೋಕದಿಂದ ಮೊದಲ್ಗೊಂಡು ನೀನು ಶ್ರೀರಾಮನ ಕಥೆಯನ್ನು ಬರೆ. ಕಥೆಯು ಕಣ್ಣಮುಂದೆ ಬರುವಂತೆ ಅಂತರ್ ದೃಷ್ಟಿ ನಾನು ಕರುಣಿಸುತ್ತೇನೆ. ವಾಗ್ದೇವಿಯು ನಿನಗೆ ಶ್ರೀರಾಮನ ಕಥೆಯನ್ನು ಹಾಡುವಂತೆ ಪ್ರೇರೇಪಿಸುತ್ತಾಳೆ. ಎಲ್ಲಿಯವರೆಗೆ ಪರ್ವತಗಳಿರುತ್ತವೆಯೋ, ನದಿಗಳು ಹರಿಯುತ್ತವೆಯೋ ಅಲ್ಲಿಯವರೆಗೆ ಎಲ್ಲರೂ ಅದನ್ನು ಓದುವಂತಾಗಲಿ. "ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ”- ನಿನಗೆ ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು ರಹಸ್ಯವೇ ಆದರೂ ವೇದ್ಯವಾಗಲೀ ಎಂದು ಅಶೀರ್ವದಿಸಿದನಂತೆ.
ಪುರಾಣಗಳಲ್ಲಿರುವಂತೆ ಇದು ಬ್ರಹ್ಮನ ಆಶೀರ್ವಾದದಿ೦ದ ಸಂಸ್ಕೃತದಲ್ಲಿ ವಾಲ್ಮೀಕಿಯಿಂದ ರಚಿತವಾದ “ವಾಲ್ಮೀಕಿರಾಮಾಯಣ” ದ ಮೂಲಕಥೆ. “ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ಯತ್ಕ್ರೌಂಚಮಿಥುನಾದೇಕಮ್ ಅವಧೀಃ ಕಾಮಮೋಹಿತಮ್” ಇದು ವಾಲ್ಮೀಕಿರಾಮಾಯಣದ ಮೊದಲ ಶ್ಲೋಕವೆಂದು ಪರಿಗಣಿಸಲ್ಪಟ್ಟಿದ್ದರೂ ಇರುವುದು ಬಾಲಕಾಂಡದ ಎರಡನೆ ಸ್ಕಂದದಲ್ಲಿ. ಬ್ರಹ್ಮದೇವರ ಅಶೀರ್ವಾದದಿಂದ 24,000 ಶ್ಲೋಕಗಳ ಶ್ರೀಮದ್ ರಾಮಾಯಣವನ್ನು ವಾಲ್ಮೀಕಿಗಳು ರಚಿಸಿದರು ಮತ್ತು ಮೊದಲಾಗಿ ಲವ-ಕುಶ ರಿಗೆ ಬೋಧಿಸಿದರು. ಎಲ್ಲ ಋಷಿಗಳ ಸಮೂಹದ ಮುಂದೆ ಲವ-ಕುಶರು ಅದನ್ನು ಸುಶ್ರಾವ್ಯವಾಗಿ ಹಾಡಿದಾಗ ತಲೆದೂಗಿದ ಋಷಿ ಸಮೂಹವು ಅವರನ್ನು “ಚಿರಾಯುಗಳಾಗಿ” ಎಂದು ಆಶೀರ್ವದಿಸಿದರು.
ಮತ್ತೊಮ್ಮೆ ನಾಡಿನ ಸಮಸ್ತ ಬಂಧುಗಳಿಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ಧಿಕ ಶುಭಾಶಯಗಳು
-ಹೇಮಂತ್ ಚಿನ್ನು, ಕರ್ನಾಟಕ ಶಿಕ್ಷಕರ ಬಳಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ