ಮಹಾಕುಂಭವೆಂಬ ಅದ್ಭುತ !

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಒಂದೂವರೆ ತಿಂಗಳ ಹಿಂದೆ ಪ್ರಾರಂಭವಾದ ಮಹಾ ಕುಂಭಮೆಳವು ಸಂಪನ್ನಗೊಂಡಿದೆ. ಕೋಟ್ಯಾಂತರ ಜನರು ಪುಣ್ಯ ಸ್ನಾನ ಮಾಡಿ ಧನ್ಯತೆ ಅನುಭವಿಸಿದ್ದಾರೆ. ವಿಶೇಷ ಗ್ರಹಗತಿಯಿಂದಾಗಿ ಈ ಬಾರಿಯ ಕುಂಭಮೇಳವು ೧೪೪ ವರ್ಷಗಳಿಗೊಮ್ಮೆ ಬರುವ ಅಪರೂಪದ ಮಹಾಕುಂಭವಾದ ಕಾರಣ ಹೆಚ್ಚು ಮಹತ್ವದ್ದೆನಿಸಿತು. ಶ್ರೀಸಾಮಾನ್ಯನಿಂದ ಹಿಡಿದು ಗಣ್ಯ ವ್ಯಕ್ತಿಗಳ ತನಕ, ಭಾರತದ ಮೂಲೆಯೊಂದರಿಂದ ಹಿಡಿದು ದೂರದ ವಿದೇಶಗಳಿಂದ ಸೇರಿದಂತೆ ಜನರು ಮಹಾಕುಂಭ ಮೇಳಕ್ಕೆ ಆಗಮಿಸಿ ಸಾರ್ಥಕತೆ ಪಡೆದರು. ಮಹಾ ಕುಂಭಮೇಳಕ್ಕೆ ಬಂದ ಒಬ್ಬೊಬ್ಬರದ್ದು ಒಂದೊಂದು ಅನುಭವ. ಕೆಲವರಿಗೆ ಸಾರ್ಥಕ ಭಾವ, ಕೆಲವರಿಗೆ ಧನ್ಯತೆಯ ಭಾವ, ಇನ್ನು ಕೆಲವರಿಗೆ ಮಾನಸಿಕ ನೆಮ್ಮದಿ ದೊರಕಿದ ಭಾವ, ಇನ್ನೊಂದಿಷ್ಟು ಮಂದಿಗೆ ವಿಶೇಷ ಅನುಭೂತಿ ಪಡೆದ ಭಾವ. ಇಡೀ ಭಾರತವೇ ಪ್ರಯಾಗ್ ರಾಜ್ ನಲ್ಲಿ ಒಂದಾಗಿ ನೆರೆದಿತ್ತು ಎನ್ನುವುದು ವಾಸ್ತವ. ದೇಶದ ಪ್ರಾದೇಶಿಕ, ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯಗಳೆಲ್ಲ ಅಲ್ಲಿ ಒಂದಾಗಿ ಮೇಳೈಸಿ ಏಕತ್ರಗೊಂಡಿದ್ದವು. ಪುಟ್ಟ ಭಾರತದ ದರ್ಶನವೇ ಅಲ್ಲಿ ಆಗಿತ್ತು.
ಮಹಾಕುಂಭವು ಕೇವಲ ಭಕ್ತರನ್ನು ಮತ್ತು ಆಸ್ತಿಕರನ್ನಷ್ಟೇ ಆಕರ್ಷಿಸಿದ್ದಲ್ಲ. ಸಮಾಜ ಶಾಸ್ತ್ರಜ್ಞರೂ ಸೇರಿದಂತೆ ವಿವಿಧ ಕ್ಷೇತ್ರಗಳ ಅಧ್ಯಯನಶೀಲರನ್ನೂ ಆಕರ್ಷಿಸಿತು. ಅವರೆಲ್ಲರನ್ನು ಬೆರಗುಗೊಳಿಸಿತು. ವಿಶೇಷವೆಂದರೆ ಈಗಿನ ಯುವಪೀಳಿಗೆಯು ಆಸ್ತಿಕ ಭಾವನೆ ಕಳಚಿಕೊಳ್ಳುತ್ತಿದೆ ಎಂಬ ಆರೋಪಗಳ ಮಧ್ಯೆಯೇ ದೊಡ್ದ ಪ್ರಮಾಣದಲ್ಲಿ ಯುವಜನಾಂಗ ಕೂಡಾ ಕುಂಭಮೇಳದಲ್ಲಿ ಭಾಗವಹಿಸಿದ್ದು ಕಂಡು ಬಂತು. ಹೊಸ ಅನುಭವದಲ್ಲಿ ಮಿಂದೆದ್ದ ಕುರಿತಂತೆ ‘ಜನರೇಶನ್ ಝಡ್’ ಸಂಭ್ರಮಿಸಿತು. ಪುಳಕಗೊಂಡಿತು.
ಇಷ್ಟು ಭೃಹತ್ ಪ್ರಮಾಣದ ಮತ್ತು ಸುದೀರ್ಘ ಅವಧಿಯ ಸಮಾರಂಭವನ್ನು ಅತ್ಯಂತ ಸುಸಜ್ಜಿತವಾಗಿ ನಿಭಾಯಿಸಿದ ಖ್ಯಾತಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರಕ್ಕೆ ಸಲ್ಲಬೇಕು. ಅಲ್ಲಿನ ವ್ಯವಸ್ಥೆಗಳ ಕುರಿತಂತೆ ಸರ್ವತ್ರ ವ್ಯಕ್ತವಾಗಿರುವ ಪ್ರಶಂಸೆಯೇ ಇದಕ್ಕೆ ಸಾಕ್ಷಿ. ಒಂದೆರಡು ಅವಘಡಗಳು ಸಂಭವಿಸಿದವಾದರೂ ಅದನ್ನು ತಕ್ಷಣವೇ ಹತೋಟಿಗೆ ತಂದು ನಿಭಾಯಿಸಿದ್ದು ಸ್ತುತ್ಯರ್ಹವಾಗಿತ್ತು. ಇದರ ಮಧ್ಯೆಯೇ ಒಂದಿಷ್ಟು ಮಂದಿ ಮಹಾ ಕುಂಭಮೇಳವನ್ನು ಟೀಕಿಸಿ ತಮ್ಮ ನಾಲಗೆಯ ತೀಟೆಯನ್ನು ತೀರಿಸಿಕೊಂಡರೇನೋ ನಿಜ. ಆದರೆ ಯೋಗಿಯವರು ಹೇಳಿದಂತೆ ‘ಕುಂಭಮೇಳದಲ್ಲಿ ಅವರವರ ಗುಣಕ್ಕೆ ತಕ್ಕಂತೆ ಸಿಕ್ಕಿತು. ಭಕ್ತರಿಗೆ ದೇವರು ಸಿಕ್ಕಿದ, ಬಡವರಿಗೆ ಉದ್ಯೋಗ ದೊರಕಿತು… ಹಂದಿಗಳಿಗೆ ಕೊಳಚೆ ಸಿಕ್ಕಿತು, ರಣಹದ್ದುಗಳಿಗೆ ಹೆಣ ಸಿಕ್ಕಿತು…’
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೭-೦೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ