ಮಹಾತಪಸ್ವಿ

ಮಹಾತಪಸ್ವಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ
ಪ್ರಕಾಶಕರು
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಗಾಂಧಿನಗರ, ಕಾವೂರು, ಮಂಗಳೂರು-೫೭೫೦೧೫
ಪುಸ್ತಕದ ಬೆಲೆ
ರೂ.೨೫೦.೦೦, ಮುದ್ರಣ: ೨೦೨೨

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಇದರ ಬೈರವೈಕ್ಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಇವರ ಬಗ್ಗೆ ಅವರ ಶಿಷ್ಯರೂ, ಮಂಗಳೂರಿನ ಶಾಖಾ ಮಠದ ಮುಖ್ಯಸ್ಥರೂ ಆಗಿರುವ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಬರೆದ ಪುಸ್ತಕವೇ “ಮಹಾತಪಸ್ವಿ". ಆದಿಚುಂಚನಗಿರಿ ಮಠ ಹಾಗೂ ಮಠದ ಮುಖಾಂತರ ನಡೆಯುತ್ತಿರುವ ವಿದ್ಯಾದಾನ ಮೊದಲಾದ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗ್ಗೆ ಮತ್ತು ಶ್ರೀ ಗುರುಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪುಸ್ತಕಕ್ಕೆ ತಮ್ಮ ‘ಅನುಗ್ರಹ ಸಂದೇಶ'ವನ್ನು ಬರೆದಿದ್ದಾರೆ ಈಗಿನ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಇವರು. ಇವರು ತಮ್ಮ ಸಂದೇಶದಲ್ಲಿ “ಶ್ರೀಕ್ಷೇತ್ರ ಆದಿಚುಂಚನಗಿರಿಯ ಪುರಾಣೇತಿಹಾಸವನ್ನು ಹೊಂದಿದ್ದರೂ ಅದರ ಖ್ಯಾತಿ ಹಾಗೂ ಸೇವೆ ಲೋಕವಿಸ್ತಾರಗೊಂಡುದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರು ಶ್ರೀ ಮಠದ ಸಿದ್ಧಸಿಂಹಾಸನವನ್ನು ಅಲಂಕರಿಸಿದ ಮೇಲೆಯೇ ಎಂಬುದು ಸರ್ವವಿಧಿತ. ಅನಾಥ ರಕ್ಷಕರಾದ ಶ್ರೀ ಗುರೂಜಿಯವರು ಶ್ರೀ ಮಠದ ಸಿದ್ಧಸಿಂಹಾಸನವನ್ನೇರಿದ ಆ ಅಮೃತ ಘಳಿಗೆ ಶ್ರೀ ಮಠದ ಇತಿಹಾಸದಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಯಿತು. ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಶ್ರೀಕ್ಷೇತ್ರವನ್ನು ಕೇವಲ ಮೂರುವರೆ ದಶಕಗಳಲ್ಲಿ ಮಹಾಕ್ಷೇತ್ರವನ್ನಾಗಿಸಿದ ಮಹಾತಪಸ್ವಿ ಶ್ರೀಮಠವನ್ನು ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ಮನೆಯನ್ನಾಗಿ ಮಾಡಿ ಅಜ್ಞಾನದಿಂದ ಕೂಡಿದ ಜನಮನದ ಅಂಧಕಾರವನ್ನು ತೊಲಗಿಸಿ ಜ್ಞಾನಸೂರ್ಯರೆನಿಸಿದ ಗುರೂಜಿಯವರು ಹಸಿದೊಡಲಿಗೆ ಅನ್ನ ನೀಡಿ ಮಾತೃಹೃದಯಿ ಎಂಬ ಅಭಿದಾನಕ್ಕೆ ಪಾತ್ರರಾದವರು. ಮುನ್ನೂರು ಸಂವತ್ಸರಗಳಲ್ಲಿ ಕ್ರಮಿಸಬಹುದಾದ ಸೇವಾಪಥವನ್ನು ಕೇವಲ ಮೂರು-ಮೂರುವರೆ ದಶಕಗಳಲ್ಲಿ ಕ್ರಮಿಸಿ ಸೇವಾಕ್ಷಿತಿಜವನ್ನು ದೇದೀಪ್ಯಮಾನವಾಗಿ ಬೆಳಗಿದ ಪವಾಡ ಪುರುಷರು. ಸಮಾಜ ಸೇವೆಯನ್ನೇ ಭಗವಂತನ ಪೂಜೆ ಎಂದು ನಂಬಿ ಅದರಂತೆ ನಡೆದು ಜನಮಾನಸದಲ್ಲಿ ಮಂಗಳಮೂರ್ತಿಯಾಗಿ ನೆಲೆನಿಂತವರು.

ಇಂಥ ಮಹಾನ್ ದಯಾಪರರೂ, ಕೃಪಾಳುಗಳೂ ಆದ ಪರಮಪೂಜ್ಯ ಗುರೂಜಿಯವರ ವಾತ್ಸಲ್ಯದ ತೆಕ್ಕೆಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಬಂದ ಶ್ರೀ ಧರ್ಮಪಾಲನಾಥಸ್ವಾಮಿಗಳವರು ಗುರೂಜಿಯ ಅಂತಃಕರಣದ ಸವಿಯನ್ನುಂಡು ಬೆಳೆದವರು. ಗುರೂಜಿಯವರ ಮಮತೆಯ ಮಡಿಲಿನಲ್ಲಿ ಬೆಳೆಯುತ್ತಲೇ ಗುರುದೇವರ ಆದರ್ಶದ ಬದುಕನ್ನು ಮೈಗೂಡಿಸಿಕೊಂಡವರು.ಪರಮಪೂಜ್ಯ ಗುರುವರ್ಯರ ಜೀವಪರ ಕಾಳಜಿಯನ್ನೂ, ಜನಪರ ಧೋರಣೆಯನ್ನೂ, ಪೂಜ್ಯರು ಶ್ರೀಮಠದ ಮೂಲಕ ಸಾಧಿಸಿದ ಪವಾಡ ಸದೃಶ ಸಾಧನೆಗಳನ್ನು ಕಂಡು ಅವುಗಳನ್ನೆಲ್ಲ ತಮ್ಮ ಮನಸ್ಸಿನಲ್ಲಿ ದಾಖಲಿಸಿಕೊಳ್ಳುತ್ತಲೇ ಬಂದಿದ್ದ ಇವರು ಈಗ ಅವುಗಳಿಗೆ ಅಕ್ಷರ ರೂಪವನ್ನು ಕೊಟ್ಟು “ಮಹಾ ತಪಸ್ವಿ" ಕೃತಿ ರೂಪದಲ್ಲಿ ಹೊರತಂದಿರುವುದು ಶ್ಲಾಘನೀಯ.” ಎಂದಿದ್ದಾರೆ.

ಮಹಾತಪಸ್ವಿ ಒಂದು ತಿಲಕಪ್ರಾಯ ಗ್ರಂಥ ಎಂದಿದ್ದಾರೆ ನಾಡೋಜ ಪ್ರೊ. ಹಂ.ಪ.ನಾಗರಾಜಯ್ಯ. ಪುಸ್ತಕಕ್ಕೆ ಶುಭ ಸಂದೇಶ ನೀಡಿ ಹಾರೈಸಿದ್ದಾರೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಹಾಗೂ ಖ್ಯಾತ ಸಾಹಿತಿಗಳಾದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಇವರು. ಈ ಕೃತಿಯನ್ನು ಹೊರ ತರಲು ತಮಗಾದ ಪ್ರೇರಣೆ ಬಗ್ಗೆ ಲೇಖಕರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ತಮ್ಮ ಮಾತುಗಳನ್ನು ‘ಸವಿಯುವ ಮುನ್ನ' ಲೇಖನದಲ್ಲಿ ದಾಖಲಿಸಿದ್ದಾರೆ. ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಡಾ. ಸುಬ್ರಹ್ಮಣ್ಯ ಸಿ.ಕುಂದೂರು, ಕೊಪ್ಪ ಇವರು. ಇವರು ತಮ್ಮ ಬೆನ್ನುಡಿಯಲ್ಲಿ ಕೃತಿಯ ಲೇಖಕರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಇವರ ಚುಟುಕಾದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಲೇಖಕರು ತಮ್ಮ ಗುರುಗಳ ಹೆಸರಿನಲ್ಲೇ ಪ್ರೌಢ ಪ್ರಬಂಧವನ್ನು ಬರೆದು (ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ) ಮಂಗಳೂರು ವಿವಿಯಿಂದ ಪಿ ಎಚ್ ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. 

‘ಮಹಾತಪಸ್ವಿ' ಕೃತಿಯ ಪರಿವಿಡಿಯಲ್ಲಿ ಐದು ಭಾಗಗಳಿವೆ. ಮೊದಲನೇ ಭಾಗದಲಿ ಶ್ರೀ ಆದಿಚುಂಚನಗಿರಿ ಪುಣ್ಯ ಕ್ಷೇತ್ರದ ಪೌರಾಣಿಕ ಹಿನ್ನಲೆ, ಕಾಲಭೈರವನ ಉಗಮ, ಉದ್ಭವ ಲಿಂಗರೂಪಿ ಗಂಗಾಧರೇಶ್ವರ, ಶ್ರೀಮಠದ ಭಕ್ತರಾದ ರಾಜರುಗಳ ಬಗ್ಗೆ ವಿವರಗಳಿವೆ. ಎರಡನೇ ಭಾಗದಲ್ಲಿ ಶ್ರೀ ಮಠದ ಗುರುಪರಂಪರೆ, ಜೀವನ ದರ್ಶನ, ಶ್ರೀಗಳ ಆಗಮನ ಮತ್ತು ವ್ಯಕ್ತಿತ್ವ ದರ್ಶನ, ಪಟ್ಟಾಧಿಕಾರ ಬಗ್ಗೆ ಮಾಹಿತಿಗಳನ್ನು ನೀಡಲಾಗಿದೆ. ಮೂರನೇ ಭಾಗದಲ್ಲಿ ಶ್ರೀಗಳ ಸಂಪೂರ್ಣ ಮಾಹಿತಿಗಳನ್ನು ಸವಿವರವಾಗಿ ನೀಡಲಾಗಿದೆ. ಶ್ರೀಗಳ ಸಾಧನೆಗಳು, ಅವರಿಗೆ ಸಂದ ಪ್ರಶಸ್ತಿಗಳು, ಅವರು ಕಾಲೈಕ್ಯರಾದಾಗ ನಡೆದ ಘಟನೆಗಳು, ಅಂತಿಮ ವಿಧಿವಿಧಾನಗಳು ಈ ಬಗ್ಗೆ ವಿವರಗಳಿವೆ. ನಾಲ್ಕನೇ ಭಾಗದಲ್ಲಿ ಶ್ರೀಗಳ ಅನುಗ್ರಹ ಸಂದೇಶವಿದೆ. ಐದನೇ ಭಾಗದಲ್ಲಿ ಕೃತಿಯ ಲೇಖಕರ ಗುರೂಜಿ ಬಗೆಗಿನ ವೈಯಕ್ತಿಕ ಅಭಿಪ್ರಾಯಗಳು ಇವೆ. 

ಪುಸ್ತಕದ ತುಂಬೆಲ್ಲಾ ಶ್ರೀಗಳ ಬಗ್ಗೆ ಹಾಗೂ ಮಠದ ಬಗ್ಗೆ ಸೊಗಸಾದ ವರ್ಣರಂಜಿತ ಚಿತ್ರಗಳು ಇವೆ. ಶ್ರೀಗಳ ಬಾಲ್ಯದ ಚಿತ್ರಗಳು ಮನಸೂರೆಗೊಳ್ಳುತ್ತವೆ. ಜೀವನ್ ಎ ಸಾಲಿಯಾನ್ ಅವರು ಶ್ರೀಗಳ ಅದ್ಭುತವೆನಿಸುವ ರೇಖಚಿತ್ರಗಳನ್ನು ರಚಿಸಿ ಪುಸ್ತಕದ ಗರಿಮೆಯನ್ನು ಹೆಚ್ಚಿಸಿದ್ದಾರೆ. ಸುಮಾರು ೩೫೦ಕ್ಕೂ ಅಧಿಕ ಪುಟಗಳನ್ನು ಹೊಂದಿರುವ ಈ ಕೃತಿಯನ್ನು ಓದಿದರೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಶ್ರೀಮಠದ ಬಗ್ಗೆ ಸಂಪೂರ್ಣ ವಿವರಗಳು ದೊರೆಯುವುದರಲ್ಲಿ ಸಂದೇಹವಿಲ್ಲ.