ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ
ಮಹಾತ್ಮಾ ಗಾಂಧಿಯವರ ಜ್ಞಾಪಕಾರ್ಥ
"ಹೇ ರಾಂ" ಎನ್ನುತ್ತಾ ರಾಮನೆಡೆ ಹೊರಟ "ರಾಮರಾಜ್ಯ"ದ ಕನಸು ಕಂಡ ಬಾಪು
"ನಿಜವಾದ ಅರ್ಥದಲ್ಲಿ ಆತ ಒಬ್ಬ ರಾಷ್ಟ್ರ ಪಿತನಾಗಿದ್ದ. ಒಬ್ಬ ಹುಚ್ಚ ಆತನನ್ನು ಕೊಂದ. ಜ್ಯೋತಿ ನಂದಿದುಕ್ಕಾಗಿ ಲಕ್ಷಾಂತರ ಜನ ದುಃಖಿಸುತ್ತಿದ್ದಾರೆ. ಈ ನಾಡಿನಲ್ಲಿ ಬೆಳಗಿದ ಜ್ಯೋತಿ ಸಾಧಾರಣ ಜ್ಯೋತಿಯಲ್ಲ. ಇನ್ನು ಸಹಸ್ರ ವರ್ಷಕಾಲ ಅದನ್ನು ಈ ನಾಡು, ಈ ವಿಶ್ವ ಕಾಣುತ್ತಿರುತ್ತದೆ "-1948 ರ ಜನವರಿ 30 ರಂದು ಹೊಸ ದಿಲ್ಲಿಯಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆಯಾದ ವೇಳೆಯಲ್ಲಿ ಪ್ರಧಾನಮಂತ್ರಿ ಜವಹರಲಾಲ ನೆಹರೂರವರು ಹೇಳಿದ ಮಾತು.
ಐದು ತಿಂಗಳ ಹಿಂದೆಯಷ್ಟೇ ಭಾರತ ಶಾಂತಿಯುತವಾಗಿ ತನ್ನ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತ್ತು. 78 ವರ್ಷದ ಗಾಂಧೀಜಿಯ ಕಾರ್ಯ ಕೈಗೂಡಿತ್ತು. ತನ್ನ ಕಾಲ ಸಮೀಪಿಸಿತ್ತೆಂದು ಅವರಿಗೆ ತಿಳಿದಿತ್ತು. ಆ ದುರಂತ ನಡೆದ ದಿನ ಬೆಳಿಗ್ಗೆ ಅವರು ತಮ್ಮ ಮೊಮ್ಮಗಳಿಗೆ "ಅಭಾ, ಎಲ್ಲ ಮುಖ್ಯ ಪತ್ರಗಳನ್ನು ತಂದುಕೊಡು. ಎಲ್ಲಕ್ಕೂ ನಾನು ಇಂದೇ ಉತ್ತರ ಬೇರೆಯಬೇಕು. ನಾಳೆ ಸಾಧ್ಯವಾಗದಿರಬಹುದು." ಎಂದರು. ಅವರ ಬರವಣಿಗೆಗಳಲ್ಲಿ ಅನೇಕ ಕಡೆ ತಮ್ಮ ಅಂತಿಮ ವಿಧಿಯ ಬಗ್ಗೆ ಸೂಚನೆಗಳನ್ನು ಕೊಟ್ಟಿದ್ದಾರೆ.
ಉಪವಾಸದಿಂದ ಬಡಕಲಾಗಿ ಸವೆದುಹೋಗಿದ್ದ ಶರೀರಕ್ಕೆ ಮೂರು ಗುಂಡುಗಳು ಹೊಕ್ಕು ಆ ಮಹಾತ್ಮ ನೆಲಕ್ಕೆ ಒರಗುತ್ತಿದ್ದಂತೆ ತಮ್ಮ ಕೈಗಳನ್ನು ಮೇಲೆತ್ತಿ ಎಲ್ಲರಿಂದಲೂ ಬಿಳ್ಕೊಂಡು ಮೌನವಾಗಿ ತಮ್ಮ ಕ್ಷಮೆಯನ್ನು ಸೂಚಿಸಿದರು. ತಮ್ಮ ಬಾಳಿನ ಎಲ್ಲಾ ರೀತಿಗಳಲ್ಲಿಯೂ ಮುಗ್ಧ ಕಲೆಗಾರರಾಗಿದ್ದ ಗಾಂಧೀಜಿ ತಮ್ಮ ಮರಣದ ಸಮಯದಲ್ಲಿ ಮಹಾನ್ ಕಲೆಗಾರರಾಗಿ ಕಂಡರು. ತಮ್ಮ ನಿಸ್ವಾರ್ಥ ಜೀವನದ ಎಲ್ಲಾ ತ್ಯಾಗಗಳೂ ಆ ಅಂತಿಮ ಪ್ರೇಮ ಭಾವನೆಯನ್ನು ಸಾಧ್ಯವಾಗಿಸಿದವು.
"ಮುಂದಿನ ತಲೆಮಾರಿನವರು, ರಕ್ತ ಮಾಂಸಗಳಿಂದ ಕೂಡಿದ ಇಂಥಹ ವ್ಯಕ್ತಿಯೊಬ್ಬ ಈ ಭೂಮಿಯಲ್ಲಿ ಜನಿಸಿದನೆಂದು ನಂಬುವುದೇ ಕಷ್ಟವಾಗಬಹುದು" ಎಂದು ಆಲ್ಬರ್ಟ್ ಐನ್ಸ್ಟೈನ್ ಹೊಗಳಿ ಬರೆದರು.
"ಗಾಂದಿಯವರ ಹತ್ಯೆ ಇಲ್ಲಿ ಎಲ್ಲರಿಗೂ ಶೋಕವನ್ನುಂಟು ಮಾಡಿದೆ. ಸದ್ಗುಣ ಸಂಪನ್ನರಾದ ಕ್ರೈಸ್ತ ಧರ್ಮದೂತರಿಗೆ ನಡೆಸುವಂತೆ ಗಾಂಧಿಯವರಿಗೂ ಸಂತಾಪವನ್ನು ವ್ಯಕ್ತಪಡಿಸಲಾಯಿತು." ಎಂದು ರೋಮಿನ ಪೋಪ್ ಗುರುವಿನ ಪತ್ರ ಹೇಳಿತು.
ಒಂದು ನಿರ್ಧಿಷ್ಟ ಸತ್ಯವನ್ನು ಸಾಧಿಸಲು ಭೂಮಿಗಿಳಿದು ಬರುವ ಮಹಾನ್ ವ್ಯಕ್ತಿಗಳ ಜೀವನ ಸಾಂಕೇತಿಕ ಅರ್ಥದಿಂದ ಕೂಡಿರುತ್ತದೆ. ಭಾರತದ ಐಕ್ಯತೆಯನ್ನು ಸಾಧಿಸುವ ದಿಶೆಯಲ್ಲಿ ಗಾಂಧೀಜಿಯವರ ನಾಟಕ ಸದೃಶ ಮರಣವು ಅನೈಕ್ಯದಿಂದ ಹರಿದು ಹಂಚಿ ಹೋಗುತ್ತಿರುವ ಪ್ರಪಂಚದ ಎಲ್ಲಾ ಭೂಖಂಡಗಳಿಗೆ ಅವರ ಸಂದೇಶವನ್ನು ಪ್ರಮುಖವಾಗಿ ಎತ್ತಿ ತೋರಿಸಿದೆ. ಭವಿಷ್ಯವಾಣಿಯಲ್ಲಿ ಅವರ ಸಂದೇಶ ಹೀಗಿದೆ: "ಅಹಿಂಸೆ ಎಂಬುದು ಮಾನವರಲ್ಲಿ ಆಚರಣೆಗೆ ಬಂದಿದೆ. ಅದು ವಿಶ್ವ ಶಾಂತಿಯ ಅವಿರ್ಭಾವದ ಮುನ್ಸೂಚಕ."
-ಪರಮಹಂಸ ಯೋಗಾನಂದರ "ಯೋಗಿಯ ಆತ್ಮ ಕತೆ (Autobiography of a Yogi) "ಯಿಂದ ಉದ್ಧೃತ