ಮಹಾತ್ಮಾ ಗಾಂಧಿಯವರ ಬರಹಗಳಿಗೆ ಕಾಪಿರೈಟಿನಿಂದ ಮುಕ್ತಿ

ಮಹಾತ್ಮಾ ಗಾಂಧಿಯವರ ಬರಹಗಳಿಗೆ ಕಾಪಿರೈಟಿನಿಂದ ಮುಕ್ತಿ

ಮಹಾತ್ಮಾ ಗಾಂಧಿಯವರ ಬರಹಗಳಿಗೆ ಅವರ ನಿಧನವಾಗಿ ೬೦ ವರುಷಗಳ ನಂತರ, ೨೦೦೯ರ ಜನವರಿಯಲ್ಲಿ ಕಾಪಿರೈಟಿನಿಂದ ಮುಕ್ತಿ ಸಿಕ್ಕಿತು. ಯಾಕೆಂದರೆ, ಅವರ ಬರಹಗಳ ಕಾಪಿರೈಟ್ ಹೊಂದಿದ್ದ ಅಹ್ಮದಾಬಾದಿನ ನವಜೀವನ ಟ್ರಸ್ಟಿನ ಆ ಹಕ್ಕು ಅಂದಿಗೆ ಮುಕ್ತಾಯವಾಯಿತು. ಇದರಿಂದಾಗಿ, ಯಾವುದೇ ಪ್ರಕಾಶಕರು ಗಾಂಧೀಜಿಯವರ ಬರಹಗಳನ್ನೂ ಭಾಷಣಗಳನ್ನೂ ಮುಕ್ತವಾಗಿ ಪ್ರಕಟಿಸಬಹುದು. ಅವರ ಜನ್ಮದಿನವಾದ ಇವತ್ತು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

"ಮಹಾತ್ಮಾ ಗಾಂಧಿಯವರಿಗೆ ಕಾಪಿರೈಟಿನಲ್ಲಿ ನಂಬಿಕೆ ಇರಲಿಲ್ಲ. ಅವರ ಬರಹಗಳೂ ಭಾಷಣಗಳೂ ಅಧಿಕಾರಷಾಹಿಯ ಜಂಜಡಗಳಿಂದ ಮುಕ್ತವಾಗಿರಬೇಕು” ಎನ್ನುತ್ತಾರೆ ಗಾಂಧಿ ಸ್ಮೃತಿ ಮತ್ತು ದರ್ಶನದ ನಿರ್ದೇಶಕರಾದ ಸವಿತಾ ಸಿಂಗ್. ಮಹಾತ್ಮಾ ಗಾಂಧಿಯವರು ಕೊಲೆಯಾದ ಢೆಲ್ಲಿಯ  ಬಿರ್ಲಾ ಭವನದಲ್ಲಿ ಅಲ್ಲಲ್ಲಿ “ಫೋಟೋಗ್ರಫಿ ನಿಷೇಧಿಸಲಾಗಿದೆ” ಎಂಬ ಫಲಕಗಳನ್ನು ತೂಗು ಹಾಕಲಾಗಿತ್ತು. ಸವಿತಾ ಸಿಂಗ್ ಅವೆಲ್ಲವನ್ನೂ ತೆಗೆಸಿದರು. ಅಲ್ಲಿಗೆ ಭೇಟಿ ನೀಡುವವರು ಬೇಕಾದರೆ ಫೋಟೋ ತೆಗೆದು, ನೆನಪುಗಳನ್ನು ತಮ್ಮೊಂದಿಗೆ ಒಯ್ಯಲಿ ಎಂಬುದವರ ಅಭಿಪ್ರಾಯ. “ಇಲ್ಲಿಗೆ ಬರುವವರು ಇಲ್ಲಿಂದ ಬೇರೇನನ್ನು ತಾನೇ ಒಯ್ಯಲು ಸಾಧ್ಯ?” ಎಂದು ಪ್ರಶ್ನಿಸುತ್ತಾರೆ ಅವರು.

ಮಹಾತ್ಮಾ ಗಾಂಧಿ ಯಾವುದೇ ವ್ಯಕ್ತಿ ಅಥವಾ ಗುಂಪಿನ ಸೊತ್ತಾಗಿ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ ಅವರು ಇಡೀ ವಿಶ್ವಕ್ಕೆ ಸೇರಿದವರು. ನವಜೀವನ ಟ್ರಸ್ಟ್ ಗಾಂಧೀಜಿಯವರ ಬರಹಗಳು ಮತ್ತು ಭಾಷಣಗಳ ಮೇಲಣ ತನ್ನ ಹಕ್ಕನ್ನು ಕಳೆದುಕೊಂಡಿದೆ. ಆದರೆ ಅದು ಅವರ ಪುಸ್ತಕಗಳನ್ನು ರಿಯಾಯಿತಿ ಬೆಲೆಯಲ್ಲಿ ಇನ್ನು ಮುಂದೆಯೂ ಮಾರಾಟ ಮಾಡುತ್ತದೆ. ಒಟ್ಟಾರೆಯಾಗಿ, ಕಾಪಿರೈಟ್ ಇಲ್ಲವಾದ ಕಾರಣ ನವಜೀವನ ಟ್ರಸ್ಟ್ ವರುಷಕ್ಕೆ ಹತ್ತು ಲಕ್ಷ ರೂಪಾಯಿ ರಾಯಧನವನ್ನು ಕಳೆದುಕೊಳ್ಳುತ್ತದೆ.

ಮಹಾತ್ಮಾ ಗಾಂಧಿಯವರು ಮಹಾನ್ ಬರಹಗಾರರು ಹಾಗೂ ಸಂವಹನಕಾರರು. ಅವರ ಬರಹಗಳು, ಭಾಷಣಗಳು, ಪತ್ರಗಳು ಮತ್ತು ಸಂದರ್ಶನಗಳು “ಕಲೆಕ್ಟೆಡ್ ವರ್ಕ್ಸ್ ಆಫ್ ಗಾಂಧಿ”ಯ ೯೦ ಸಂಪುಟಗಳಲ್ಲಿ ಪ್ರಕಟವಾಗಿವೆ. ಇದರ ಪ್ರತಿಯೊಂದು ಸಂಪುಟದ ಪುಟಗಳ ಸಂಖ್ಯೆ ಸುಮಾರು ೫೦೦. ಈ ಬೃಹತ್ ಸಂಕಲನವನ್ನು ಪ್ರಕಟಿಸಿದ್ದು ಭಾರತ ಸರಕಾರದ ಪ್ರಕಟಣಾ ವಿಭಾಗ.

ಇದರ ದಾಖಲಾತಿ ಮತ್ತು ಪ್ರಕಟಣೆಗೆ ಹಲವು ವರುಷಗಳು ತಗಲಿದವು. ಯಾಕೆಂದರೆ ಗಾಂಧೀಜಿಯವರ ಬರಹಗಳೂ ದಾಖಲೆಗಳೂ ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಖಂಡಗಳಲ್ಲಿ ಹಾಗೂ ಹಿಂದಿ, ಇಂಗ್ಲಿಷ್, ಗುಜರಾತಿ - ಈ ಮೂರು ಭಾಷೆಗಳಲ್ಲಿ ವ್ಯಾಪಿಸಿದ್ದವು. ಆದ್ದರಿಂದ ಪತ್ರಿಕಾ ಜಾಹೀರಾತುಗಳನ್ನು ನೀಡಲಾಗಿತ್ತು - ಗಾಂಧೀಜಿಯವರಿಗೆ ಸಂಬಂಧಿಸಿದ ಯಾವುದೇ ದಾಖಲೆಗಳಿರುವ ವ್ಯಕ್ತಿಗಳು ಅವನ್ನು ಸಂಪಾಕಕ ಮಂಡಲಿಗೆ ನೀಡಬೇಕೆಂಬ ವಿನಂತಿ ಸಹಿತ. ಪರಿಣತರ ತಂಡವು ಆ ದಾಖಲೆಗಳ ಯಥಾಪ್ರತಿ ತೆಗೆದು, ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ, ಅನಂತರ ಆ ಬೃಹತ್ ಸಂಕಲನದಲ್ಲಿ ಅವನ್ನು ಸೇರ್ಪಡೆಗೊಳಿಸಿತು. “ಇದು ಒಬ್ಬ ವ್ಯಕ್ತಿಯ ಬರಹ ಮತ್ತು ಭಾಷಣಗಳ ಸಂಗ್ರಹಗಳಲ್ಲಿ ಜಗತ್ತಿನಲ್ಲೇ ಅತ್ಯಂತ ದೊಡ್ಡದು” ಎನ್ನುತ್ತಾರೆ ರಾಷ್ಟ್ರೀಯ ಗಾಂಧಿ ವಸ್ತುಸಂಗ್ರಹಾಲಯದ ಮಾಜಿ ನಿರ್ದೇಶಕ ವೈ. ಪಿ. ಆನಂದ್.

ರವೀಂದ್ರನಾಥ ಟಾಗೋರ್ ಅವರ ಬರಹಗಳ ಬಗ್ಗೆ ವಿಶ್ವಭಾರತಿ ವಿಶ್ವವಿದ್ಯಾಲಯ ಹೊಂದಿದ್ದ ಕಾಪಿರೈಟ್ ೨೦೦೧ರಲ್ಲಿ ಅಂತ್ಯವಾಯಿತು. ಬಂಗಾಳಿ ಭಾಷೆಯಲ್ಲಿ ಟಾಗೋರ್ ಅವರ ಬರಹಗಳ ಪ್ರಕಟಣೆಯ (ಅವರ ಕವಿತೆಗಳ ಸಂಗೀತದ ಮಾರಾಟದ ಹೊರತಾಗಿ) ಮೌಲ್ಯ ವಾರ್ಷಿಕ ರೂಪಾಯಿ ಮೂರು ದಶಲಕ್ಷ. ಮಹಾತ್ಮಾ ಗಾಂಧಿಯವರ ಬರಹಗಳು ಮತ್ತು ಭಾಷಣಗಳು ಜನಪ್ರಿಯವಾದ್ದರಿಂದ ಇವುಗಳ ಪ್ರಕಟಣೆ ಖಾಸಗಿ ಪ್ರಕಾಶಕರಿಗೆ ದೊಡ್ದ ವ್ಯವಹಾರ ಆದೀತು.

ಭಯೋತ್ಪಾದನೆಯ ಆತಂಕ ವ್ಯಾಪಕವಾಗಿರುವ ಇಂದಿನ ಕಾಲಘಟ್ಟದಲ್ಲಿ, ಹಿಂಸೆಗೆ ಬದಲಿಯೊಂದನ್ನು ಕಂಡುಕೊಳ್ಳುವುದು ತೀರಾ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಮಹಾತ್ಮಾ ಗಾಂಧಿಯವರು ಚಿಂತನೆಗಳಲ್ಲಿ ಆಸಕ್ತಿ ಹೆಚ್ಚುತ್ತಿದೆ. ಹಾಗಾಗಿ, ಅವರ ಬರಹಗಳ ಮೇಲಣ ಕಾಪಿರೈಟಿನ ಅಂತ್ಯ, ಅವರ ಚಿಂತನೆಗಳ ಅಧ್ಯಯನಕ್ಕೆ ದೊಡ್ಡ ಅವಕಾಶ ಒದಗಿಸಿದೆ, ಅಲ್ಲವೇ?

ಫೋಟೋ: ಬರವಣಿಗೆಯಲ್ಲಿ ಮಗ್ನರಾಗಿರುವ ಮಹಾತ್ಮಾ ಗಾಂಧಿ ..... ಕೃಪೆ: ನ್ಯಾಷನಲ್ ಹೆರಾಲ್ಡ್ ಇಂಡಿಯಾ.ಕೋಮ್

Comments

Submitted by Ashwin Rao K P Tue, 10/05/2021 - 07:48

ಗಾಂಧೀಜಿಯವರ ಬರಹಗಳ ಕಾಪಿರೈಟ್ ರದ್ದು ಸ್ವಾಗತಾರ್ಹ

ಗಾಂಧೀಜಿಯವರು ಬರೆದ ಸಾವಿರಾರು ಬರಹಗಳು ಕಾಪಿರೈಟ್ ರದ್ದಾದುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ಸುಲಭವಾಗಿ ಲಭ್ಯವಾಗಬಹುದು. ಇನ್ನಷ್ಟು ಮಹನೀಯರ ಬರಹಗಳು ಇದೇ ರೀತಿ ಕಾಪಿರೈಟ್ ನಿಂದ ಮುಕ್ತವಾಗಿ ಸರ್ವರಿಗೂ ಲಭ್ಯವಾದರೆ ಅವರ ಚಿಂತನೆಗಳು ಹಾಗೂ ಬದುಕಿನ ಬಗ್ಗೆ ಇನ್ನಷ್ಟು ಸುಲಭವಾಗಿ ತಿಳಿಯಬಹುದು. ಶ್ರೀಯುತ ಅಡ್ಡೂರು ಅವರ ಈ ಲೇಖನ ಬಹಳ ಔಚಿತ್ಯಪೂರ್ಣ ಎಂದು ನನ್ನ ನಂಬಿಕೆ. ಈ ಬಗೆಯ ಮಾಹಿತಿ ಪೂರ್ಣ ಲೇಖನಗಳು ಇನ್ನಷ್ಟು ಬರಲಿ...

Submitted by shreekant.mishrikoti Tue, 11/16/2021 - 03:03

ಮನುಕುಲದ ಆಸ್ತಿಯಾದ ಮಹಾತ್ಮ ಗಾಂಧೀಯವರ ಬರಹಗಳ ಕಾಪಿರೈಟ್ ರದ್ದು ಸ್ವಾಗತಾರ್ಹ. ಈ ಸಂಗತಿಯನ್ನು ಸಂಪದದ ಓದುಗರ ಗಮನಕ್ಕೆ ತಂದ ನಿಮಗೆ ನಮೋನಮಃ.