ಮಹಾತ್ಮಾ ಗಾಂಧಿ ಹೆಸರಿನ ರಸ್ತೆಯೇ ಅಂದ!!

ಮಹಾತ್ಮಾ ಗಾಂಧಿ ಹೆಸರಿನ ರಸ್ತೆಯೇ ಅಂದ!!

ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಜನರ ಉಪಯೋಗಕ್ಕಾಗಿ ಸ್ಥಳವನ್ನು ಗುರುತಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ರಸ್ತೆಗಳ ಮತ್ತು ಸ್ಥಳಗಳ ಹೆಸರನ್ನು ಸುಂದರವಾಗಿ ಬರೆಯಿಸಿ ಹಾಕಿರುತ್ತಾರೆ. ಇದರಿಂದ ಹೊರ ಊರಿನಿಂದ ಬಂದವರಿಗೆ ತುಂಬಾ ಅನುಕೂಲ. ನಮ್ಮ ಮಂಗಳೂರಿನಲ್ಲಿ ಅನೇಕ ಗಣ್ಯ ವ್ಯಕ್ತಿಗಳ ಹೆಸರನ್ನು ರಸ್ತೆಗೆ ಅಥವಾ ವೃತ್ತಕ್ಕೆ ಇರಿಸಿರುತ್ತಾರೆ. ಇವರಲ್ಲಿ ಮಹಾತ್ಮಾ ಗಾಂಧಿ, ಕಾರ್ನಾಡ್ ಸದಾಶಿವ ರಾವ್, ಪಂಜೆ ಮಂಗೇಶ್ ರಾವ್, ಬಿ.ಆರ್.ಅಂಬೇಡ್ಕರ್, ಮಂಜೇಶ್ವರ ಗೋವಿಂದ ಪೈ ಹೀಗೆ ಹತ್ತು ಹಲವಾರು ಖ್ಯಾತ ನಾಮರ ಸ್ಮಾರಕ ರಸ್ತೆಗಳಿವೆ.
ಮಂಗಳೂರಿನ ಲಾಲ್‌ಭಾಗ್ ಬಳಿ ಇತ್ತೀಚೆಗೆ ಎಂ.ಜಿ.ರಸ್ತೆ ಎಂಬ ಸುಂದರ ನಾಮ ಫಲಕವನ್ನು ಹಾಕಿರುತ್ತಾರೆ. ಬಹುಷಃ ಮುಂದೆ ಒಂದು ದಿನ ಎಂ.ಜಿ.ರಸ್ತೆ ಎಂದರೆ ಮಹಾತ್ಮಾ ಗಾಂಧಿ ರಸ್ತೆ ಎಂಬುದು ಮರೆತೇ ಹೋಗುತ್ತದೆಯೇನೋ ಅನಿಸುತ್ತಿದೆ. ಯಾಕೆಂದರೆ ಆ ಫಲಕದಲ್ಲಿ ಎಲ್ಲೂ ಮಹಾತ್ಮಾ ಗಾಂಧಿಯವರ ಉಲ್ಲೇಖವೇ ಇಲ್ಲ. ಮುಂದಿನ ಪೀಳಿಗೆಯವರಿಗೆ ಮಹಾತ್ಮರ ಸ್ಮರಣೆ ಮಾಡುವ ಅವಕಾಶವೇ ಇಲ್ಲದಂತೆ ಎಂ.ಜಿ.ರಸ್ತೆ ಆಗಿದೆ. ಇಲ್ಲವೂ ಶಾರ್ಟ್ ಆಗಿದೆ. ಕನಿಷ್ಟ ಮಹಾತ್ಮಾ ಗಾಂಧಿ ರಸ್ತೆ ಬರೆದು ಆವರಣದಲ್ಲಿ ಬೇಕಾದಲ್ಲಿ ಎಂ.ಜಿ.ರಸ್ತೆ ಎಂದು ಬರೆಯಬಹುದಿತ್ತೇನೋ. ಪಾಲಿಕೆ ಇದರ ಬಗ್ಗೆ ಗಮನವಹಿಸುವುದು ಒಳಿತು. ಇಲ್ಲವಾದಲ್ಲಿ ಮಂಗಳೂರಿನ ರಸ್ತೆಗಳೆಲ್ಲವೂ ಶಾರ್ಟ್ ಬಟ್ ನಾಟ್ ಸ್ವೀಟ್ ಆಗ ಬಹುದು. ಯಾಕೆಂದರೆ ಈಗಾಗಲೇ ಪಿ.ಎಂ.ರಾವ್ (ಪಂಜೆ ಮಂಗೇಶರಾವ್), ಕೆ.ಎಸ್.ರಾವ್(ಕಾರ್ನಾಡ್ ಸದಾಶಿವ ರಾವ್) ರಸ್ತೆಗಳು ಗಣ್ಯರ ಹೆಸರೇ ಮರೆಸುವಂತೆ ಸಣ್ಣದಾಗಿ ಹೋಗಿದೆ. ಹೀಗಾದರೆ ಮುಂದೆ ಹೇಗೋ?
ಇದು ಕೇವಲ ಮಂಗಳೂರು ನಗರದ ಮಾತ್ರ ವಿಷಯವಲ್ಲ. ಇಡೀ ದೇಶದಾದ್ಯಂತ ನಾಮ ಫಲಕಗಳನ್ನು ಬರೆಯುವಾಗ ಯಾವ ಮಹನೀಯರ ಹೆಸರಿನಲ್ಲಿ ರಸ್ತೆ ಅಥವಾ ವೃತ್ತ ಇದೆಯೋ ಅವರ ಹೆಸರುಗಳು ದೀರ್ಘವಾಗಿದ್ದರೆ ಅದು ತುಂಡಾಗಿಯೇ ಇರುತ್ತದೆ. ಮತ್ತೆ ಅದೇ ರೂಢಿಯಾಗುತ್ತದೆ. ಬೆಂಗಳೂರಿನ ಆರ್.ಟಿ.ನಗರ (ರವೀಂದ್ರನಾಥ ಟಾಗೋರ್), ಜೆ.ಪಿ.ನಗರ (ಜಯಪ್ರಕಾಶ್ ನಾರಾಯಣ) ಹೀಗೆ ಹತ್ತು ಹಲವಾರು ಉದಾಹರಣೆಗಳನ್ನು ಕೊಡುತ್ತಾ ಹೋಗ ಬಹುದು. ಮುಂದೆ ಒಂದು ದಿನ ಯಾರಿಗೂ ಈ ಮಹಾಶಯರ ಹೆಸರುಗಳು ನೆನಪಿಗೆ ಬರಲಾರವು ಅಂದ ಮೇಲೆ ಅವರ ಸಾಧನೆಗಳು ಹೇಗೆ ಗೊತ್ತಾದೀತು ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.