ಮಹಾತ್ಮ

ಮಹಾತ್ಮ

ಕವನ
ಮಹಾತ್ಮ ಯಾರು ಮಹಾತ್ಮರೋ! ಅವರಿಗೆಲ್ಲರೂ ಮಹಾತ್ಮರೇ ಮಹಾತ್ಮ ನಾನಲ್ಲವೆಂದ ನಿನ್ನ ಸರಳತೆಯೆ ಸೆಳೆದು ಬಂಧನದಿ ಇರಿಸಿದೆ ಗುರು ಹುಟ್ಟಿ ಬೆಳೆದೆ ಮತ್ತೆಲ್ಲರಂತೆ ಎಲ್ಲವೂ ಅವರಿವರಂತೆಯೆ ಗುರು ನೀ ಮೀರಿ ಬೆಳೆದೆ ಅರಿವಿಲ್ಲದಂತೆ. ಮಗು-ಮಹಾತ್ಮ ನಿನ್ನ ನೋಡಿದಾಗಲೆಲ್ಲ ಕಾಡುತ್ತಿರುತ್ತದೆ ನೀನು ಮಗುವೋ ಇಲ್ಲ ಮಹಾತ್ಮನೋ ಚಿಂತೆಗಳ ಒಳಸುಳಿಯಲಿ ಸಿಲುಕಿದರೂ ನಂಬಿ ಸಾಗುವ ಮುಗ್ಧ ಮಗುವಿನಂತೆ ನಿನ್ನ ಮುಖದಲರಳಿದ ಮಂದಹಾಸದಿಂದ ಮಗುವಿನ ಕೈ ಹಿಡಿದು ಸಾಗುವ ನೀನು ಮಕ್ಕಳಲಿ ಮಗುವಾದ ಮಹಾತ್ಮನೇ ಸರಿ. ಪ್ರತಿನಿಧಿ ಸತ್ಯಕ್ಕೆ ನಿಷ್ಟರಾದ ಮಹಾತ್ಮರ ಮೇಲೆ ಸುಳ್ಳಿನ ಆರೋಪ ಹೊರಿಸಹೊರಟವರೆಲ್ಲ ತಮ್ಮಾಂತರ್ಯದ ಪ್ರತಿನಿಧಿಗಳೂ ಹೌದು. ನೇತಾರರು ಕಾವಿಭಾವದ ತನ್ನ ಮೈ-ಮನಕೆ ಖಾದಿ ತೊಡಿಸಿ ಸತ್ಯಕ್ಕೆ ಪಟ್ಟು ಹಿಡಿದು ಸಾಗಿ ಸ್ವಾತಂತ್ರ್ಯ ಕೊಡಿಸಿ ಗದ್ದುಗೆಯಿರದೆ ನೇತಾರರಾದರು ಗಾಂಧೀಜಿ. ಸುಳ್ಳಿನ ಸರಮಾಲೆ ಹೆಣೆಯುತ್ತಾ ಮೈಗೆ ಖಾದಿ ಮುಚ್ಚಿ, ಕಾವಿ ಕಾಲಿಗೆ ಬೀಳುತ್ತಾ ಗದ್ದುಗೆಗಾಗಿ ಗುದ್ದಾಡುತ್ತಿರುತ್ತಾರೆ ಇಂದಿನ ನಮ್ಮ ನೇತಾರರು.