ಮಹಾನ್ ಲೇಖಕ ಮಹಾತ್ಮಾ ಗಾಂಧಿ

ಮಹಾನ್ ಲೇಖಕ ಮಹಾತ್ಮಾ ಗಾಂಧಿ

ಮೊನ್ನೆ, ೨ ಅಕ್ಟೋಬರ್ ೨೦೨೦ರಂದು, ಮಹಾತ್ಮಾ ಗಾಂಧಿಯವರ ೧೫೧ನೇ ಜನ್ಮದಿನದಂದು ಅವರಿಗೆ ನಮ್ಮ ದೇಶವಾಸಿಗಳಿಂದ ಗೌರವಾರ್ಪಣೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಮಹಾನ್ ಲೇಖಕರೂ ಆಗಿದ್ದರು. ಅವರು ಬರೆದದ್ದು ಸುಮಾರು ೧೦೦ ಸಂಪುಟಗಳ “ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮಾ ಗಾಂಧಿ” ಎಂಬ ಪುಸ್ತಕ ಸರಣಿಗೆ ಸಾಕಾಗುವಷ್ಟಿತ್ತು!

ತಮ್ಮ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಇಷ್ಟೊಂದು ಬರೆಯಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದೊಂದು ವಿಸ್ಮಯ. ಅವರು ಯಾಕೆ ಇಷ್ಟೆಲ್ಲ ಬರೆದರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ.

ಅವರ ಈ ಎರಡು ಪುಸ್ತಕಗಳನ್ನು ಪರಿಶೀಲಿಸಿದರೆ, ಆ ಪ್ರಶ್ನೆಗೆ ಉತ್ತರ ಸಿಗಬಹುದು: “ಹಿಂದ್ ಸ್ವರಾಜ್” (ಇಂಗ್ಲಿಷಿನಲ್ಲಿ “ಇಂಡಿಯನ್ ಹೋಮ್ ರೂಲ್”) ಮತ್ತು ಅವರ “ಆತ್ಮಕತೆ”. ತನ್ನ “ಆತ್ಮಕತೆ"ಗೆ ಅವರು “ಆತ್ಮಕತೆ ಅಥವಾ ಸತ್ಯದೊಂದಿಗೆ ನನ್ನ ಪ್ರಯೋಗಗಳು” ಎಂದು ಶೀರ್ಷಿಕೆ ನೀಡಿರುವುದು ಗಮನಾರ್ಹ.

ಮಹಾತ್ಮಾ ಗಾಂಧಿಯವರ ಸರಳ ಮತ್ತು ನೇರ ಬರವಣಿಗೆ ಮನಸ್ಸಿಗೆ ನಾಟುತ್ತದೆ. ಯಾಕೆಂದರೆ ಅದರಲ್ಲಿ ಎಳ್ಳಷ್ಟೂ ಕೃತಕತೆ ಇಲ್ಲ; ಶಬ್ದಾಡಂಬರವಿಲ್ಲ. ಅವರ ದಶಕಗಳ ಓದು ಮತ್ತು ಅಧ್ಯಯನ ಇದಕ್ಕೆ ಕಾರಣವೆನ್ನಬಹುದು. ಜೊತೆಗೆ, ಅವರೊಬ್ಬ ಅಪ್ರತಿಮ ಪತ್ರಬರಹಗಾರ. ತಾವು ಸ್ವೀಕರಿಸಿದ ಪ್ರತಿಯೊಂದು ಪತ್ರಕ್ಕೆ ಅತ್ಯಂತ ಗೌರವದಿಂದ ಉತ್ತರ ಬರೆಯುತ್ತಿದ್ದ ಮಹಾತ್ಮಾ ಗಾಂಧಿಯವರು, ತಮ್ಮ ಜೀವಿತಕಾಲದಲ್ಲಿ ಬರೆದ ಪತ್ರಗಳ ಸಂಖ್ಯೆ ಸಾವಿರಾರು.

ಅವರು “ಹಿಂದ್ ಸ್ವರಾಜ್” ಪುಸ್ತಕವನ್ನು ಬರೆದದ್ದು ೧೯೦೯ರಲ್ಲಿ. ಇಂಗ್ಲೆಂಡಿನಿಂದ ದಕ್ಷಿಣ ಆಫ್ರಿಕಾಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಇದನ್ನು ಬರೆದರು. ಸಾಗರ ಪ್ರಯಾಣದ ಅವಧಿಯಲ್ಲಿ ಅದನ್ನು ಬರೆದು ಮುಗಿಸಲೇ ಬೇಕೆಂಬ ತುಡಿತ ಅವರಲ್ಲಿ ಎಷ್ಟು ತೀವ್ರವಾಗಿತ್ತು ಎಂದರೆ, ಬರೆದೂ ಬರೆದೂ ಬಲಗೈ ದಣಿದಾಗ ಅವರು ಎಡಗೈಯಲ್ಲಿ ಬರವಣಿಗೆ ಮುಂದುವರಿಸಿದ್ದರು! ಇಂಗ್ಲೆಂಡಿನಲ್ಲಿದ್ದಾಗ, ಆ ಪುಸ್ತಕದ ಹೂರಣದ ಬಗ್ಗೆ ಗಾಢವಾಗಿ ಅಧ್ಯಯನ, ಚಿಂತನೆ ಮತ್ತು ಸಮಾನ ಮನಸ್ಕರೊಂದಿಗೆ ಸಂವಾದ ನಡೆಸಿದ್ದ ಮಹಾತ್ಮಾ ಗಾಂಧಿ, ಹಡಗಿನಲ್ಲಿ ಪ್ರಯಾಣಿಸುತ್ತಾ ಅವನ್ನೆಲ್ಲ ಬರಹಕ್ಕೆ ಇಳಿಸಿದರು.

ಪುಸ್ತಕದ ಹೂರಣದ ಬಗ್ಗೆ ಬಹಳಷ್ಟು ಓದು, ಅಧ್ಯಯನ ಹಾಗೂ ಚಿಂತನೆ ನಡೆಸಿದ ನಂತರ ತನಗೆ ಅವನ್ನೆಲ್ಲ ಬರೆಯದಿರಲು ಸಾಧ್ಯವೇ ಇರಲಿಲ್ಲ ಎಂದು “ಹಿಂದ್ ಸ್ವರಾಜ್” ಪುಸ್ತಕದ ಮುನ್ನುಡಿಯಲ್ಲಿ ಮಹಾತ್ಮಾ ಗಾಂಧಿ ದಾಖಲಿಸಿದ್ದಾರೆ. ಈ ಪುಸ್ತಕದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ತನ್ನವಲ್ಲ; ಯಾಕೆಂದರೆ ತಾನು ಹಲವಾರು ಪುಸ್ತಕಗಳನ್ನು ಓದಿದ ನಂತರ ಮೂಡಿಬಂದ ಅಭಿಪ್ರಾಯಗಳು ಅವು ಎಂದವರು ಬರೆದಿದ್ದಾರೆ. ಪುಸ್ತಕದ ಕೊನೆಯಲ್ಲಿ ತನ್ನ ಮೇಲೆ ಪ್ರಭಾವ ಬೀರಿದ ಪುಸ್ತಕಗಳ ಪಟ್ಟಿಯನ್ನು ಅವರು ನೀಡಿದ್ದಾರೆ.

ಈ ಪುಸ್ತಕದಲ್ಲಿ ತನ್ನ ಬರವಣಿಗೆಯನ್ನು ಅವರು ವಿವಿಧ ಚಿಂತನೆಗಳ ಸಂಗ್ರಹ ಎಂದು ಯೋಜಿಸಿದ್ದರು. ತಾನೇ ಈ ಪುಸ್ತಕದ ಲೇಖಕ ಎಂಬು ಹಮ್ಮುಬಿಮ್ಮು ಅವರಿಗೆ ಇರಲಿಲ್ಲ. “ಹಿಂದ್ ಸ್ವರಾಜ್” ಪುಸ್ತಕದ ಮೊದಲ ಇಂಗ್ಲಿಷ್ ಆವೃತ್ತಿಯ ಶೀರ್ಷಿಕೆ ಪುಟದಲ್ಲಿ ಅವರು "ಹಕ್ಕುಗಳನ್ನು ಕಾದಿರಿಸಲಾಗಿಲ್ಲ” ಎಂದು ಪ್ರಕಟಿಸಿದ್ದರು. ಆ ಮೂಲಕ ಪುಸ್ತಕದ ಪಠ್ಯದ ಮೇಲೆ ತನಗಿರುವ ಹಕ್ಕನ್ನು ತೊರೆದಿದ್ದರು! (ಬಳಕೆದಾರರಿಗೆ ಮಾರ್ಗದರ್ಶನ ಮತ್ತು ರಕ್ಷಣೆ ಬಗ್ಗೆ “ಜನಜಾಗೃತಿಯ ಸಾಧನ: ಮಾಹಿತಿ ಮಂಥನ” ಮತ್ತು “ಬಳಕೆದಾರರ ಸಂಗಾತಿ” ಎಂಬ ನನ್ನ ಎರಡು ಪುಸ್ತಕಗಳಲ್ಲಿಯೂ ಪರಿವಿಡಿ ಪುಟದಲ್ಲಿ "ಹಕ್ಕುಗಳನ್ನು ಕಾದಿರಿಸಲಾಗಿಲ್ಲ” ಎಂದು ಪ್ರಕಟಿಸಲು ನನಗೆ ಇದುವೇ ಪ್ರೇರಣೆ.)

ಮಹಾತ್ಮಾ ಗಾಂಧಿಯವರ “ಆತ್ಮಕತೆ”, ಅದರ ಶೀರ್ಷಿಕೆಯೇ ಸೂಚಿಸುವಂತೆ ಅವರ ಸತ್ಯಾನ್ವೇಷಣೆಯ ಕಥನ. ತಮ್ಮ ಬದುಕಿನಲ್ಲಿ, ಆಹಾರ, ಉಡುಪು, ತಮ್ಮ ಶರೀರ - ಹೀಗೆ ಹಲವಾರು ಸಂಗತಿಗಳಲ್ಲಿ ಪ್ರಯೋಗಗಳನ್ನು ನಡೆಸಿದ್ದ ಮಹಾತ್ಮಾ ಗಾಂಧಿ ಅವುಗಳ ವಿವರಗಳನ್ನೂ ಫಲಿತಾಂಶಗಳನ್ನೂ ಯಾವುದೇ ಮುಚ್ಚುಮರೆಯಿಲ್ಲದೆ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.
“ಹಿಂದ್ ಸ್ವರಾಜ್” ಪುಸ್ತಕವನ್ನು ಸಾಗರದಲ್ಲಿ ಚಲಿಸುತ್ತಿದ್ದ ಹಡಗಿನ ಏಕಾಂತದಲ್ಲಿ ಬರೆದಿದ್ದರೆ, “ಆತ್ಮಕತೆ"ಯನ್ನು ಆಶ್ರಮದ ಸಾಮಾಜಿಕ ಪರಿಸರದಲ್ಲಿ, ತನ್ನ ತಾಯ್ನುಡಿ ಗುಜರಾತಿಯಲ್ಲಿ ಮಹಾತ್ಮಾ ಗಾಂಧಿ ಬರೆದರು. ಇದು ಅವರ ನಿಯತಕಾಲಿಕ “ನವಜೀವನ"ದಲ್ಲಿ ೧೯೨೫ರಿಂದ ೧೯೨೯ರ ಅವಧಿಯಲ್ಲಿ ೧೬೬ ಕಂತುಗಳಲ್ಲಿ ಪ್ರಕಟವಾಯಿತು. ಅವರು ಇದನ್ನು ಬರೆಯಲು ತೊಡಗಿದಾಗ, ಇದಕ್ಕೆ ಆಧಾರವಾಗಿ ಅವರ ಬಳಿ ಯಾವುದೇ ದಿನಚರಿ ಅಥವಾ ದಾಖಲೆಗಳು ಇರಲಿಲ್ಲ. "ನಾನು ಬರೆಯುವ ಸಮಯದಲ್ಲಿ ನನ್ನ ಅಂತರಾತ್ಮ ಏನನ್ನು ಪ್ರೇರೇಪಿಸುತ್ತದೆಯೋ ಅದನ್ನೇ ಬರೆಯುತ್ತೇನೆ” ಎಂದವರು ಹೇಳಿಕೊಂಡಿದ್ದಾರೆ.

“ಆತ್ಮಕತೆ" ಬರೆಯುವಾಗ, ಆಗಿನ ಕೆಲವು ಪಾಶ್ಚಾತ್ಯ ಲೇಖಕರಂತೆ, “ಇದೊಂದು ಜನಪ್ರಿಯ ಬರವಣಿಗೆ ಆಗಬೇಕು” ಎಂಬ ಬಯಕೆ ಮಹಾತ್ಮಾ ಗಾಂಧಿಯವರಿಗೆ ಇರಲಿಲ್ಲ. ತನ್ನ ಬದುಕು ಸತ್ಯದೊಂದಿಗೆ ನಡೆಸಿದ ಹಲವು ಪ್ರಯೋಗಗಳ ಸಂಕಲನವಾಗಿದ್ದು, ಅವರಿಗೆ ಅದರ ಸತ್ಯಕತೆಯನ್ನು “ಇದ್ದದ್ದು ಇದ್ದಂತೆ” ಹೇಳಬೇಕಾಗಿತ್ತು. ಆ ಬರವಣಿಗೆ ಮಹಾತ್ಮಾ ಗಾಂಧಿಯವರಿಗೆ ಜೀವನವೃತ್ತಾಂತ ಆಗಿರಲಿಲ್ಲ; ಬದಲಾಗಿ ಅದು ಅವರ ಸತ್ಯಶೋಧನೆಯ ವೃತ್ತಾಂತವಾಗಿತ್ತು. ಆದ್ದರಿಂದಲೇ ಅವರ ಬದುಕು ಒಂದು "ತೆರೆದ ಪುಸ್ತಕ”ವಾಯಿತು.

ಅವರು ಆತ್ಮಕತೆಯನ್ನು ಗುಜರಾತಿ ಭಾಷೆಯಲ್ಲಿ ಮಾತ್ರ ಬರೆಯಲು ಸಾಧ್ಯವಿತ್ತು; ಯಾಕೆಂದರೆ ಅದುವೇ ಅವರು ತನ್ನ ಅಂತರಾತ್ಮದೊಂದಿಗೆ ಮಾತನಾಡುತ್ತಿದ್ದ ಭಾಷೆ.

ಈ ರೀತಿಯಲ್ಲಿ ಬರವಣಿಗೆ ಎಂಬುದು ಮಹಾತ್ಮಾ ಗಾಂಧಿಯವರಿಗೆ ತನ್ನ ಅಂತರಾತ್ಮದೊಂದಿಗೆ ಸಂಭಾಷಣೆ ಹಾಗೂ ಜನಸಮುದಾಯದೊಂದಿಗಿನ ಸಂಭಾಷಣೆಯೂ ಆಗಿತ್ತು. "ನುಡಿದಂತೆ ನಡೆದವರು” ಮಹಾತ್ಮಾ ಗಾಂಧಿ. ತಾನು ಬದುಕಿನಲ್ಲಿ ಸತ್ಯವೇ ದೇವರೆಂದು ನಂಬಿ ಬಾಳಿದ್ದನ್ನು ಯಥಾವತ್ತಾಗಿ ದಾಖಲಿಸಿದ್ದರಿಂದಲೇ ಅವರು ಮಹಾತ್ಮಾ ಆದರು, ಅಲ್ಲವೇ?

ಫೋಟೋ ಕೃಪೆ: ಇಂಟರ್-ನೆಟ್