ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್

ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್

ಪುಸ್ತಕದ ಲೇಖಕ/ಕವಿಯ ಹೆಸರು
ಬೈಂದೂರು ಚಂದ್ರಶೇಖರ ನಾವಡ
ಪ್ರಕಾಶಕರು
ಅವನಿ ಪ್ರಕಾಶನ, ಮಂಗಳೂರು, ಮೊ: ೯೯೭೨೩೧೨೮೫೫
ಪುಸ್ತಕದ ಬೆಲೆ
ರೂ. ೯೦.೦೦, ಮುದ್ರಣ: ಫೆಬ್ರವರಿ ೨೦೨೨

ಜನರಲ್ ಬಿಪಿನ್ ರಾವತ್ ಅವರು ಭಾರತದ  ಮೊದಲ ಸಿಡಿಎಸ್ (Chief of Defence Staff) ಆಗಿದ್ದರು. ಈ ಹುದ್ದೆಯಲ್ಲಿರುವಾಗಲೇ ಇವರು ಒಂದು ದುರ್ಘಟನೆಯಲ್ಲಿ ಹುತಾತ್ಮರಾದರು. ಇದಕ್ಕೂ ಮುನ್ನ ಇವರು ಭಾರತೀಯ ಸೇನೆಯ ಮುಖ್ಯಸ್ಥರಾಗಿಯೂ ಸೇವೆ (೩೧-೧೨-೨೦೧೬ ರಿಂದ ೩೧-೧೨-೨೦೧೯ರವರೆಗೆ) ಸಲ್ಲಿಸಿದ್ದರು. ಸಿಡಿಎಸ್ ಆಗಿದ್ದ ಸಂದರ್ಭದಲ್ಲಿ ಇವರು ತಮ್ಮ ಪತ್ನಿ ಮಧುಲಿಕ ರಾವತ್ ಹಾಗೂ ೧೨ ಸೇನಾ ಸಿಬ್ಬಂದಿಗಳ ಜತೆ ಹೆಲಿಕಾಪ್ಟರ್ ನಲ್ಲಿ ತಮಿಳುನಾಡಿನ ನೀಲಗಿರಿ ಪರ್ವತದ ಪ್ರದೇಶದಲ್ಲಿ ಸಂಚರಿಸುತ್ತಿರುವಾಗ ದುರ್ಘಟನೆಗೆ ಈಡಾಗಿ ಸಾವನ್ನಪ್ಪುತ್ತಾರೆ. ಸೇನೆಯ ಅತ್ಯುನ್ನತ ಪದವಿಯಲ್ಲಿ ಸೇವೆಯಲ್ಲಿರುವಾಗಲೇ ಹುತಾತ್ಮರಾದ ಧೀರ ಯೋಧ ಜನರಲ್ ಬಿಪಿನ್ ರಾವತ್. ಇವರ ಕುರಿತಾದ ಒಂದು ಮಾಹಿತಿ ಪೂರ್ಣ ಪುಸ್ತಕವನ್ನು ಬರೆದಿದ್ದಾರೆ ಬೈಂದೂರು ಚಂದ್ರಶೇಖರ ನಾವಡ ಇವರು. 

'ಜನರಲ್ ಬಿಪಿನ್ ರಾವತ್' ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಇವರು. ಶರತ್ ಭಂಡಾರಿ ಇವರು ಬಿಪಿನ್ ರಾವತ್ ಅವರನ್ನು ಖುದ್ದಾಗಿ ಒಮ್ಮೆ ಭೇಟಿಯಾಗಿದ್ದರು. ಅವರ ಪ್ರಕಾರ ಜನರಲ್ ರಾವತ್ ಅವರು ಒಬ್ಬ ಮೃದು ಸ್ವಭಾವದ ಮೇಧಾವಿ ಸೈನಿಕ. ಅವರು ತುಂಬಾ ದೂರಗಾಮಿ ಆಲೋಚನಾ ಶಕ್ತಿಯುಳ್ಳ, ವಿನಮ್ರ ಮನಸ್ಸಿನ ಸೇನಾಧಿಕಾರಿಯಾಗಿ ಕಂಡು ಬಂದರಂತೆ. 

ಕರ್ನಲ್ ಶರತ್ ಭಂಡಾರಿ ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ಹೀಗಿವೆ " ಜನರಲ್ ರಾವತ್ ಅವರು ತಮ್ಮ ೪೩ ವರ್ಷಗಳ ಸೇವೆಯಲ್ಲಿ ಮಾಡಿದ ಸಾಧನೆ, ಪಡೆದಂತಹ ಗೌರವ ಎಲ್ಲರಿಗೂ ಪ್ರೇರಣಾದಾಯಕ ಮತ್ತು ಆ ವಿಷಯವನ್ನು ಪ್ರಸ್ತುತ ಪಡಿಸಿರುವ ನಾವಡರ (ಲೇಖಕರು) ಕಾರ್ಯ ಸ್ತುತ್ಯಾರ್ಹ. ಜನರಲ್ ರಾವತ್ ರವರ ನಿರ್ಭೀತಿಯ ಮಾತುಗಳು, ಆತ್ಮವಿಶ್ವಾಸ, ದೇಶದ ರಕ್ಷಣೆಗಾಗಿ ತೆಗೆದುಕೊಂಡ ಕ್ರಮಗಳು ಸೈನಿಕರಿಗೂ ಮತ್ತು ದೇಶವನ್ನು ಪ್ರೀತಿಸುವ ಸರ್ವರಿಗೂ ಸ್ಪೂರ್ತಿ ಕೊಡುವಂತಹುದು. ಜನರಲ್ ರಾವತ್ ರವರ ರಾಷ್ಟ್ರ ಪ್ರೇಮವನ್ನು ಈ ಪುಸ್ತಕದಲ್ಲಿ ಬಹಳ ಸುಂದರವಾಗಿ ಎಳೆ ಎಳೆಯಾಗಿ ಬಿಂಬಿಸಲಾಗಿದೆ. ಜನರಲ್ ರಾವತ್ ಅವರಿಗೆ ಕೊಡಗು ಎಂದರೆ ತುಂಬಾ ಪ್ರೀತಿ. ಅಲ್ಲಿಯ ಇಬ್ಬರು ಮಹಾ ಸೇನಾನಿಗಳ ಬಗ್ಗೆ ಅಪಾರ ಗೌರವ. ಈ ಎಲ್ಲಾ ವಿಷಯಗಳನ್ನು ನಾವಡರು ಹೃದಯಂಗಮವಾಗಿ ವ್ಯಾಖ್ಯಾನಿಸಿರುತ್ತಾರೆ. 

ಜನರಲ್ ರಾವತ್ ಅವರು, ಅತೀ ಮುಖ್ಯವಾಗಿ, ಭಾರತೀಯ ಸಶಸ್ತ್ರ ಪಡೆಗಳ ೧೭ ಕಮಾಂಡ್ ಗಳಿಂದ (ಭೂ ಸೇನೆ-೭, ವಾಯು ಸೇನೆ-೭, ನೌಕಾ ಸೇನೆ -೩) ೦೫ ಏಕೀಕೃತ ಯುದ್ಧ ಕ್ಷೇತ್ರದ ಕಮಾಂಡ್ ನ (Unified Theatre Command) ರಚನೆಗೆ ಬಹಳ ಶ್ರಮ ಪಟ್ಟರು. ಇದಲ್ಲದೇ, ಪೂರ್ವ ಲಡಾಖ್ ನಲ್ಲಿ ಮೊತ್ತಮೊದಲ ಬಾರಿಗೆ ಯುದ್ಧ ಟ್ಯಾಂಕ್ ಮತ್ತು ದೊಡ್ದ ಫಿರಂಗಿ ತೋಪುಗಳನ್ನು ನಿಯೋಜಿಸಿದರು. ಅವರು ಸೇನಾ ಪಡೆಗಳ ಮಾನವ ಸಂಪನ್ಮೂಲದ ಸೂಕ್ತ ಪರಿಷ್ಕರಣೆಯನ್ನು ಕೈಗೊಂಡರು."

ಕುಂದಾಪುರದ ಹಿರಿಯ ಪತ್ರಕರ್ತ ಹಾಗೂ 'ಕುಂದಪ್ರಭ' ಪತ್ರಿಕೆಯ ಸಂಪಾದಕರಾದ ಯು ಎಸ್ ಶೆಣೈ ಅವರು ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ " ಭಾರತದ ರಕ್ಷಣೆಯ ವಿಷಯ ಬಂದಾಗ ಭಾರತೀಯರಲ್ಲಿ ರೋಮಾಂಚನ ಉಂಟಾಗುತ್ತದೆ. ದೇಶದ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ವೈರಿಗಳನ್ನು ಹಿಮ್ಮೆಟ್ಟಿಸಿದಾಗ ಅಪಾರ ಆನಂದವಾಗುತ್ತದೆ. ಸೈನಿಕರು ಯುದ್ಧದಲ್ಲಿ ವೀರ ಮರಣವನ್ನಪ್ಪಿದ್ದಾಗ ಖೇದ ಉಂಟಾಗುತ್ತದೆ. ಉಗ್ರರ ಮೋಸದ ದಾಳಿಯಲ್ಲಿ ಸೈನಿಕರು ಮೃತಪಟ್ಟಾಗ ಇನ್ನಿಲ್ಲದ ಕಳವಳ, ಸಂಕಟ ಉಂಟಾಗಿ ರೋಷವೂ ಉಕ್ಕಿ ಬರುತ್ತದೆ. ಹೀಗಿರುವಾಗ ದೇಶ ರಕ್ಷಣೆಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟ ಮಹಾನ್ ಸೇನಾನಿ ಜನರಲ್ ಬಿಪಿನ್ ರಾವತ್ ರನ್ನು ದೇಶ ಕಳೆದುಕೊಂಡಾಗ ಸಹಜವಾಗಿ ದೇಶಕ್ಕೆ ಅಘಾತವಾಗಿತ್ತು. ಭಾರತೀಯರಲ್ಲಿ ಶೋಕದ ಛಾಯೆ ಆವರಿಸಿತ್ತು." ಎಂದು ಕಂಬನಿ ಮಿಡಿದಿದ್ದಾರೆ. 

ಪುಸ್ತಕದ ಲೇಖಕರು ಹಾಗೂ ಸ್ವತಃ ಮಾಜಿ ಸೈನಿಕರಾದ ಬೈಂದೂರು ಚಂದ್ರಶೇಖರ ನಾವಡರು ಅತ್ಯಂತ ಸಂಕ್ಷಿಪ್ತವಾಗಿ, ಅದರೆ ಎಲ್ಲಾ ಮಾಹಿತಿಗಳನ್ನು ಒಳಗೊಂಡಂತೆ ಜನರಲ್ ಬಿಪಿನ್ ರಾವತ್ ಅವರ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ತಮ್ಮ ನುಡಿಯಲ್ಲಿ ಈ ಪುಸ್ತಕವನ್ನು ಯಾವ ಕಾರಣಕ್ಕಾಗಿ ಬರೆದೆ ಎಂಬ ವಿಚಾರವನ್ನು ಓದುಗರ ಜೊತೆ ಹಂಚಿಕೊಂಡಿದ್ದಾರೆ.

ಅವನಿ ಪ್ರಕಾಶನದ ಪರವಾಗಿ ಶ್ರೀಪತಿ ಆಚಾರ್ಯ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ೨೧ ಅಧ್ಯಾಯಗಳಿವೆ. ಪುಟ್ಟ ಪುಟ್ಟ ಅಧ್ಯಾಯಗಳೊಂದಿಗೆ ಅದಕ್ಕೆ ಸೂಕ್ತವಾದ ಛಾಯಾ ಚಿತ್ರಗಳಿವೆ. ೧೦೦ ಪುಟಗಳ ಪುಟ್ಟ ಪುಸ್ತಕವು ಒಮ್ಮೆ ಕೈಗೆತ್ತಿಕೊಂಡರೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ದೇಶದ ಬಗ್ಗೆ ಅಭಿಮಾನ ಹೊಂದಿರುವ ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕವಿದು. ಪುಸ್ತಕದ ಕೊನೆಯ ಪುಟವನ್ನು ಓದಿ ಮುಗಿಸುವಾಗ ದೇಶವು ಕಳೆದು ಕೊಂಡ ಹೆಮ್ಮೆಯ ಸುಪುತ್ರರಾದ ಜನರಲ್ ಬಿಪಿನ್ ರಾವತ್ ಅವರನ್ನು ನೆನೆದು ಕಣ್ಣಂಚು ಒದ್ದೆಯಾಗುತ್ತದೆ.