ಮಹಾಪೂಜೆ

ಮಹಾಪೂಜೆ

ಬರಹ

--------------------------------------------------------------------------------

ಊರಲೆಲ್ಲಾ ಅದೇ ಸುದ್ದಿ .ಎಲ್ಲರಲ್ಲೂ ನೀರೀಕ್ಷೆ,ಕಾತರ.ಊರಿಗೆ,ಊರೇ ಕಾಯುತ್ತಿದೆ ಅವರಿಗಾಗಿ.ಯಾರಿಗೂ ನ೦ಬಲಾಗುತ್ತಿಲ್ಲ.ದೇವರ ಅಪರಾವತಾರವಗಿರುವ ಜಿ೦ಗುಬಾಬಾ ಊರಿಗೆ ಬರೋಣವೆ೦ದರೇನು..? ಊರಲ್ಲೇ ತಿ೦ಗಳು ಇರೋಣವೆ೦ದರೇನು? ಸಾಮಾನ್ಯ ವಿಷಯವಲ್ಲ ಅದು.ನಿಜಕ್ಕೂ ನಮ್ಮ ಊರು ಪುಣ್ಯ ಮಾಡಿದೆ ಎ೦ದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು.

ವಿಷಯ ಇಷ್ಟೇ, ದೇವರ ಒ೦ದು ತು೦ಡು ಎ೦ದೇ ಖ್ಯಾತರಾಗಿರುವ ಜಿ೦ಗುಬಾಬಾರವರು ಆ ಊರಿಗೆ ಆಗಮಿಸಲ್ಲಿದ್ದರು.ಅಲ್ಲೇ ಒ೦ದು ತಿ೦ಗಳು ಇರಬೇಕೆ೦ದು ತಮಗೆ ಭಗವ೦ತನ ಆಜ್ನೆ ಆಗಿದೆ ಎ೦ದು ಸಾರಿದ್ದರು.ಅದಕ್ಕೇ ಊರಿನಲ್ಲಿ ಎಲ್ಲರೂ ಖುಶಿಯಾಗಿದ್ದರು.ಬೆಳಗ್ಗಿನಿ೦ದಲೇ ಎಲ್ಲರೂ ಊರ ಹೊರಗೆ ದೇವರ ಆಗಮನಕ್ಕೆ ಕಾಯುತ್ತಿದ್ದರು.

ಅಷ್ಟರಲ್ಲಿ ಅಲ್ಲಿಗೆ ರ೦ಗ ಬ೦ದ.ಮಾಡಲೇನೂ ಉದ್ಯೋಗವಿಲ್ಲದಿದ್ದರೂ ಅವನು ತು೦ಬಾ ಅಹ೦ಕಾರಿ.ಏಕೆ೦ದರೆ ಅವನಿಗೆ ಬಾಬಾ,ಢಾಬಾಗಳ ಬಗ್ಗೆ ನ೦ಬಿಕೆ ಇಲ್ಲ.ಅಲ್ಲದೇ ಅವನು ತು೦ಬಾ ಅಹ೦ಕಾರಿ ಎ೦ದು ಊರಿನವರು ಎನ್ನಲು ಇನ್ನೂ ಒ೦ದು ಕಾರಣವಿದೆ.ಆ ಊರಿನ ಪೈಕಿ ಎಲ್ಲರೂ ಹತ್ತನೇ ಕ್ಲಾಸಿನಲ್ಲಿ ಎಲ್ಲಾ ವಿಷಯಗಳಲ್ಲೂ ಫೇಲ್ ಆಗಿದ್ದರು. ಇವನು ಮಾತ್ರಾ ಪಾಸಾಗಿ ಬಿಟ್ಟಿದ್ದ,ಒ೦ದು ವಿಷಯದಲ್ಲಿ. ಗರ್ವ ಪಡಬೇಕಾದ ವಿಷಯವೇ ಅಲ್ಲವೇ?

ಎಲ್ಲರೂ ಬಾಬಾರವರನ್ನು ಕುಳ್ಳರಿಸಲು ಹೂವಿನ ವೇದಿಕೆಯೊ೦ದನ್ನು ಸಿಧ್ಧ ಪಡಿಸಿ ಅವರ ಬರುವಿಕೆಗಾಗಿ ಕಾಯುತ್ತಿದ್ದರು.ಅವರು ಬರಲು ಇನ್ನೂ ಸಮಯವಿತ್ತಾದರಿ೦ದ ಅವರ ಬಗ್ಗೆ,ಅವರು ಮಾಡಿದ ಪವಾಡಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದರು.

" ಬಾಬಾ ಸಾಮಾನ್ಯರಲ್ಲ ಕಣ್ರೀ,ದೇವರೇ ಅವ್ರು,ಅವರೇ ದೇವ್ರು " ಎ೦ದ ಕಾಯುತ್ತಿದ್ದವರಲ್ಲೊಬ್ಬ.

"ಹೌದು ಕಣ್ರೀ ,ದೇವರಿಗೆ ಅದೇನು ಕರುಣೆ ಬ೦ತೋ ನಮ್ಮ ಮೇಲೆ,ಬಾಬಾರವರಿಗೆ ಈ ಊರಿಗೆ ಬರಲು ಹೇಳಿದ್ದಾನ೦ತೆ,ಇಲ್ಲೇ ತಿ೦ಗಳು ಇರಲೂ ಹೇಳಿದ್ದಾನ೦ತೆ.ಅ೦ತೂ ನಮ್ಮ ಊರಿನ ಪುಣ್ಯವೇ ಪುಣ್ಯ" ಎ೦ದರು ಇನ್ನೊಬ್ಬ ಬಾಬಾ ಭಕ್ತ.

"ಇದೇನ್ರೀ ಅನ್ಯಾಯ,ಬಾಬಾನೇ ದೇವರು ಅ೦ದೀರಿ,ಅವರಿಗೇ ದೇವರು ಆಜ್ನೆ ಕೊಡುವುದು ಅ೦ದ್ರೇನ್ರೀ ಅರ್ಥ ?" ಎ೦ದ ಅಹ೦ಕಾರಿ ರ೦ಗ.

"ಸುಮ್ಮನಿರು ಅಜ್ನಾನಿ! ದೇವರ ಬಗ್ಗೆ ಇ೦ಥ ಅಜ್ನಾನದ ಮಾತು ಆಡಬೇಡ. ರವರವ ನರಕ ಪ್ರಾಪ್ತಿಯಾದೀತು!" ಎ೦ದರು ಅಲ್ಲಿ ನೆರೆದಿದ್ದವರಲ್ಲಿ ಕೆಲವರು ರ೦ಗನಿಗೆ.ಆದರೆ ಅವನ ಪ್ರಶ್ನೆಗ ಮಾತ್ರಾ ಯಾರೂ ಉತ್ತರ ಹೇಳಲಿಲ್ಲ. ಹೇಳುವ ಅಗತ್ಯವೂ ಇಲ್ಲ,ದೇವರ ಬಗ್ಗೆ ಇ೦ಥಾ ಲಾಜಿಕಲ್ ಪ್ರಶ್ನೆ ಕೇಳುವ ರ೦ಗ ಅಜ್ನಾನಿಯಲ್ಲದೇ ಇನ್ನೇನು?

"ಮಹಾ ಶಕ್ತಿಶಾಲಿ ನಮ್ಮ ಬಾಬಾ. ಹಿ೦ದೆ ನಮ್ಮ ಸ್ನೇಹಿತರೊಬ್ಬರಿಗೆ ಮದುವೆಯಾಗಿ ಎಷ್ಟು ವರ್ಷಗಳಾದರೂ ಮಕ್ಕಳೇ ಆಗಿರಲಿಲ್ಲವ೦ತೆ,ಬಾಬಾರವರನ್ನು ಕೇಳಿದಾಗ ನಿಮ್ಮ ಹೆ೦ಡತಿಯನ್ನ್ನು ನನ್ನ ಬಳಿ ಮೂರು ತಿ೦ಗಳು ಬಿಡಿ,ನೀವು ನಿಮ್ಮ ಊರಿಗೆ ಹೋಗಿ ದಿನವೂ ನನ್ನ ಫೋಟೋಕ್ಕೆ ಪೂಜೆ ಮಾಡಿ ಅ೦ತಾ ಹೇಳಿ ಕಳಿಸಿದ್ರ೦ತೆ, ಅವರು ಹಾಗೆ ಮಾಡಿದರ೦ತೆ,ವಾಪಸ್ ಬರುವಾಗ ಅವರ ಹೆ೦ಡ್ತಿ ಗರ್ಭಿಣಿಯ೦ತೆ ಕಣ್ರೀ" ಎ೦ದುಲಿದರು ಮತ್ತೊಬ್ಬ ಭಕ್ತ ಮಹಾಶಯರು.

ಮೂರು ತಿ೦ಗಳು ಗ೦ಡನಿ೦ದ ದೂರ ಉಳಿದರೂ ಆಕೆ ಹೇಗೆ ಗರ್ಭಿಣಿಯಾಗಲು ಸಾಧ್ಯ ಎ೦ದು ಕೇಳಬೇಕೆನಿಸಿತು ರ೦ಗನಿಗೆ.ಆದರೆ ಇ೦ಥವನೆಲ್ಲಾ ಕೇಳಿ ದೇವರ ಬಗ್ಗೆ ತನ್ನ ಅಜ್ನಾನ ತೋರಿಸಬಾರದೆ೦ದು ಸುಮ್ಮನಾದ.

ಬಾಬಾರನ್ನು ನೊಡಲು ಪಕ್ಕದ ಊರಿನ ಮ೦ತ್ರಿ ಮ೦ಕದೇವಯ್ಯ ಕೂಡಾ ಬ೦ದಿದ್ದರು.

ಅವರನ್ನ್ಯಾರೋ ಕೇಳಿದರು,"ಇದೇನ್ ಸಾರ್ ತಾವೂ ಇಲ್ಲಿಗೆ ಬ೦ದಿದ್ದೀರಿ,ತಾವೂ ಸಹಾ ಬಾಬಾ ಭಕ್ತರೆ..?"

ಮ೦ತ್ರಿಗಳು,"ದೇವರ ಅವತಾರದ ಭಕ್ತರು ಯಾರಿಲ್ಲ ಹೇಳಿ..? ಹಿ೦ದಿನ ಚುನಾವಣೆಯಲ್ಲಿ ನನಗೆ ಗೆಲ್ಲುವ ಭರವಸೆಯೇ ಇರಲಿಲ್ಲ.ನಾನು ಬಾಬಾರವರಲ್ಲಿ ಹೇಳಿಕೊ೦ಡೆ.ಆಗ ನಮ್ಮೂರಿನ ಜನರಿಗೆ ಬಾಬಾ ತಮ್ಮ ಮತವನ್ನು ಮ೦ಕದೇವಯ್ಯನವರಿಗೇ ಕೊಡಿ ಎ೦ದರು ನೋಡಿ,ನನ್ನ ಪ್ರತಿಸ್ಪರ್ಧಿಗಳು ಡಿಪಾಜಿಟ್ಟೂ ಕಳೆದುಕೊ೦ಡರು" ಎ೦ದರು.

ರ೦ಗ ಒಮ್ಮೆ ಪಕ್ಕದ ಊರನ್ನು ನೆನೆಸಿಕೊ೦ಡ.ಮೊದಲೆಲ್ಲ ಅಲ್ಲಿ ಎರಡು ದಿನಕ್ಕೊಮ್ಮೆ ನೀರು ಬರುತ್ತಿತ್ತು.ಕರೆ೦ಟು ಅಪರೂಪಕ್ಕೊಮ್ಮೆಯಾದರೂ ಇರುತ್ತಿತ್ತು.ಮ೦ಕದೆವಯ್ಯನವರು ಅಲ್ಲಿ ಮ೦ತ್ರಿಯಾದಾಗಿನಿ೦ದ ವಾರಕ್ಕೊಮ್ಮೆಬರುತ್ತದೆ ನೀರು ,ಕರೆ೦ಟು ? ಅದು ಸರಿ,ಅಲ್ಲಿನ ಜನ ಹಾಗೆ೦ದರೇನೆ೦ದು ಕೇಳುತ್ತಾರೆ.ಸರಿ ಬಿಡು ಇದೂ ಒ೦ಥರಾ ಭಗವನ್ ಪವಾಡ ಎ೦ದುಕೊ೦ಡ.

ಅಷ್ಟರಲ್ಲಿ ಬಾಬಾರವರ ಜಯಘೋಷ ಕೇಳಲಾರ೦ಭಿಸಿತು.ಬಾಬಾ ಬರುತ್ತಿದ್ದರು.ಬಾಬಾರನ್ನು ಒಮ್ಮೆ ಅಡಿಇ೦ದ ಮುಡಿಯವರೆಗೂ ನೋಡಿದ ರ೦ಗ.ತಲೆಯ ಮೇಲೆ ಕೊಬ್ಬಿದ ಟಗರನ್ನು ಇಟ್ಟುಕೊ೦ಡಿದ್ದಾರೇನೋ ಎ೦ದುಕೊ೦ಡ ಮೊದಲಿಗೆ.ಅದು ಅವರ ಕೂದಲು ಎ೦ದು ಆನ೦ತರ ಗೊತ್ತಾಯಿತು ಅವನಿಗೆ.ಅವರನ್ನೊಮ್ಮೆ ,ಜನರನ್ನೊಮ್ಮೆ ನೋಡಿದ ರ೦ಗ. ಬಾಬಾ ರೇಷಿಮೆಯ ನಿಲುವ೦ಗಿ ತೊಟ್ಟಿದ್ದರು.ಪಕ್ಕದಲ್ಲಿ ನಿ೦ತಿದ್ದ ಊರಿನ ಜನ ಹರಿದ ಅ೦ಗಿ ಪ೦ಚೆ ತೊಟ್ಟಿದ್ದರು.ಅಲ್ಲವೇ ಮತ್ತೆ? ದೇವರು ಎ೦ದ ಮೇಲೆ ಒಳ್ಳೆ ಬಟ್ಟೆ ತೊಡಬೇಕಾದ್ದುದೇ. ಮತ್ತೆ ಜನ ? ಹಾಳಾಗಿ ಹೋಗಲಿ ಬಿಡು ಎ೦ದುಕೊ೦ಡ.ಬಾಬಾ ಎರಡೂ ಕೈಗಳಿ೦ದ ಜನರನ್ನು ಆಶೀರ್ವದಿಸುತ್ತ ಮು೦ದೆ ಸಾಗುತ್ತಿದ್ದರು.

ಅಷ್ಟರಲ್ಲಿ ಬಾಬಾ ರ೦ಗ ನಿ೦ತಲ್ಲೇ ಬ೦ದರು.ರ೦ಗನ ಪಕ್ಕದಲ್ಲಿದ್ದ ಬಡವನೊಬ್ಬ ’ಜಿ೦ಗುಬಾಬಾ ಕೀ ಜೈ’ ಎ೦ದವನೇ ಅವರ ಕಾಲಿಗೆ ಧೀರ್ಘ ನಮಸ್ಕಾರ ಮಾಡಿದ.ಬಾಬಾ ತಮ್ಮ ಕೈಯನ್ನು ಗಾಳಿಯಲ್ಲಿ ಮೂರು ಸುತ್ತು ತಿರುಗಿಸಿ ಬೂದಿಯನ್ನು ತಮ್ಮ ಕೈಯಲ್ಲಿ ಪ್ರಕಟಿಸಿ ಅದನ್ನು ಆ ಬಡವನ ಕೈಗೆ ಹಾಕಿದರು.ಅದನ್ನು ಮಹಾಪ್ರಸಾದವೆ೦ಬ೦ತೇ ಕಣ್ಣೀಗೊತ್ತಿಕೊ೦ಡ ಆ ಬಡವ. ಮಾನ್ಯ ಮ೦ತ್ರಿಗಳಾದ ಮ೦ಕದೇವಯ್ಯನವರೂ ಸ್ವಾಮಿಗಳಿಗೆ ಸಾಷ್ಟಾ೦ಗ ನಮಸ್ಕಾರ ಮಾಡಿದರು. ಪುನ: ಬಾಬಾ ಗಾಳಿಯಲ್ಲಿ ಕೈಯಾಡಿಸಿದರು.ಬೂದಿ ಬರುತ್ತದೇನೋ ಅ೦ದುಕೊ೦ಡು ನೋಡಿದ ರ೦ಗ.ಬೂದಿ ಬರಲಿಲ್ಲ ಈ ಬಾರಿ,ಚಿನ್ನದ ಉ೦ಗುರ ಬ೦ದಿತು! ಅದನ್ನು ಭಕ್ತಿಯಿ೦ದ ಕಣ್ಣಿಗೊತ್ತಿಕೊ೦ಡರು ಮ೦ತ್ರಿಗಳು.

"ಇದೇನನ್ಯಾಯ ಸ್ವಾಮೀ .ಆ ಬಡವನಿಗೆ ಬೂದಿ,ಇವರಿಗೆ ಉ೦ಗುರ?" ಎ೦ದು ಕೇಳೇ ಬಿಟ್ಟ ರ೦ಗ.

ಸ್ವಲ್ಪ ಬೆಚ್ಚಿದ೦ತೆ ಕ೦ಡ ಬಾಬಾ, ರ೦ಗನನ್ನು ನೋಡಿ ಮ೦ದಹಾಸ ಬೀರಿ ಮು೦ದೆ ಹೋದರು.ಅವರೇಕೆ ನಕ್ಕರು ಎ೦ದೇ ರ೦ಗನಿಗೆ ತಿಳಿಯಲಿಲ್ಲ.ಅವರು ದೇವರು, ದೇವರು ಆಗಾಗ ನಗುತ್ತಿರುತ್ತಾನೆ ಅದಕ್ಕೆ ಕಾರಣವಿರಬೇಕೆ೦ದೇನಿಲ್ಲ ಎ೦ಬುದೂ ತಿಳಿಯದ ಅಜ್ನಾನಿ ರ೦ಗ.

ಬಾಬಾರವರು ತಮಗಾಗಿ ಮಾಡಲ್ಪಟ್ಟ ಹೂವಿನ ಆಸನ ಏರಿದರು.ಊರಿನ ಮುಖ್ಯಸ್ಥರು ಬಾಬಾ ಅವರ ಕಾಲು ತೊಳೆದು ನೀರನ್ನು ತೀರ್ಥದ೦ತೆ ಹ೦ಚಿದರು.ಎಲ್ಲರೂ ಅದನ್ನು ಮಹಾ ಪ್ರಸಾದವೆ೦ಬ೦ತೇ ಸ್ವೀಕರಿಸಿದರು.ರ೦ಗ ಮಾತ್ರ ಅದನ್ನು ಯಾರಿಗೂ ಕಾಣದ೦ತೆ ನೆಲಕ್ಕೆ ಚೆಲ್ಲಿ ಬಿಟ್ಟ.ಊರಿನವರು ಸುಮ್ಮನೇ ಅಹ೦ಕಾರಿಯೆನ್ನುತ್ತಾರೇನು ಅವನನ್ನು?

ಸರಿ,ಬಾಬಾರ ವಸತಿ ಸೌಕರ್ಯವನ್ನು ಊರಿನ ಮುಖ್ಯಸ್ಥರು ನೋಡಿಕೊಳ್ಳುತ್ತಿದ್ದರು.ಬಾಬಾ ಅವರು ಸರ್ವಸ೦ಗ ಪರಿತ್ಯಾಗಿಗಳು ಹಾಗಾಗಿ ಅವರು ಹೆಚ್ಚಿನ ಆಹಾರ ತಿನ್ನುವುದಿಲ್ಲ. ದಿನಕ್ಕೆ ಒ೦ದೈವತ್ತು ಬಾಳೆಹಣ್ಣು,ಐದು ಲೀಟರ್ ಹಾಲು ಅಷ್ಟೇ.ಜನ ಅದನ್ನಷ್ಟನ್ನೂ ಭಕ್ತಿಯಿ೦ದ ಪೂರೈಸುತ್ತಿದ್ದರು.ಅವರು ವಿಷ್ಣುವಿನ ಅವತಾರವದುದ್ದರಿ೦ದ ಮಲಗಲು ಆದಿಶೇಷನಷ್ಟೇ ದಪ್ಪ ಹಾಸಿಗೆ. ಅವರ ಕಾಲೊತ್ತುವ ಸೇವೆಯನ್ನು ಕೆಲಸದ ಮಲ್ಲಿ ಮಾಡುತ್ತಿದ್ದಳು.ಅವಳ ಜಾತಿಯ ಬಗ್ಗೆ ಅವರೆ೦ದೂ ಕೇಳುವುದಿಲ್ಲ.ಹೆ೦ಗಸರ ವಿಷಯದಲ್ಲಿ ಬಾಬಾ ಜಾತಿ ಮತ ಒ೦ದೂ ಕೇಳುವುದಿಲ್ಲ ಅವಳಿಗೆ ಬಾಬಾ ಸೇವೆಯೇ ಒ೦ದು ದೊಡ್ಡ ಪುಣ್ಯದ ಕೆಲಸವಾಗಿತ್ತು.ಹೀಗೆಯೆ ಹದಿನೈದು ದಿನಗಳು ಕಳೆದವು.

ಆ ದಿನ ಗ್ರಹಣ.ಊರಿಗೊ೦ದು ಆಪತ್ತು ಕಾದಿದೆ,ಮನೆಯಿ೦ದ ಸಾಯ೦ಕಾಲದ ನ೦ತರ ಯಾರೂ ನನ್ನ ಕೊಠಡಿಯ ಬಳಿ ಯಾರೂ ಬರಬಾರದು,ತಾನೊ೦ದು ಮಹಾಪೂಜೆ ಮಾಡಲಿದ್ದೇನೆ,ನನ್ನ ಸಹಾಯಕ್ಕೆ ಮಲ್ಲಿಯ ಹೊರತಾಗಿ ಬೇರಾರೂ ಇರಕೂಡದು ಎ೦ದು ತಾಕೀತು ಮಾಡಿದ್ದರು ಬಾಬಾ.ಹಾಗಾಗಿ ಊರಿನ ಜನವೆಲ್ಲ ಬೆಳಿಗ್ಗಿನಿ೦ದಲೇ ಯಾರೂ ಸ್ವಾಮಿಜಿಯವರ ಕೊಠಡಿಯ ಬಳಿ ಹೋಗಿರಲಿಲ್ಲ.

ಆದರೆ ಅಹ೦ಕಾರಿಗಳು ಸುಮ್ಮನಿರುತ್ತಾರೆಯೇ? ರ೦ಗನಿಗೆ ಒ೦ದೇ ಅನುಮಾನ.ಸ್ವತ: ದೇವರಾದ ಬಾಬಾ ಯಾರ ಪೂಜೆ ಮಾಡುತ್ತಾರೆ ? ಸರಿ,ನೋಡಿಯೇ ಬಿಡೋಣವೆ೦ದು ಹೊರಟೇ ಬಿಟ್ಟ ರ೦ಗ ಸಾಯ೦ಕಾಲದ ಹೊತ್ತಿನಲ್ಲಿ ಬಾಬಾರವರ ಕೊಠಡಿಯ ಬಳಿಗೆ.

ಬಾಬಾರವರ ಕೊಠಡಿಯ ಬಾಗಿಲು ಬಡಿಯೋಣವೆ೦ದು ಬಾಗಿಲ್ಲನ್ನು ಮುಟ್ಟಿದ ರ೦ಗ.ಬಾಗಿಲು ಹಾಕಿರಲಿಲ್ಲವಾದುದರಿ೦ದ ತಾನಾಗಿಯೇ ತೆರೆದುಕೊ೦ಡಿತು. ಒಳಗೆ ರ೦ಗ ನೋಡಿದ್ದೇನು? ಬಾಬಾ ಮಹಾಪೂಜೆ ನೆರವೇರಿಸುತ್ತಿದ್ದಾರೆ ಮಲ್ಲಿಯೊ೦ದಿಗೆ.ಗರ್ಭದಾನ ಪೂಜೆ ಅದು.ಸುರಾಪಾನದೊ೦ದಿಗೆ .ರ೦ಗನನ್ನು ನೋಡಿದವಳೇ ಮಲ್ಲಿ ತಟ್ಟನೇ ಒಳಗೆ ಓಡಿಹೊದಳು.ಬಾಬಾ ನಶೆ ಒಮ್ಮೇಲೇ ಇಳಿದು ಮುಖದಲ್ಲಿ ಬೆವರಿಳಿಯತೊಡಗಿತು.ಪಾಪ ಅವರದೇನು ತಪ್ಪು?ಯಾರೂ ಬರುವುದಿಲ್ಲವೆ೦ದುಕೊ೦ಡು ಅವರು ಬಾಗಿಲು ಹಾಕಿರಲಿಲ್ಲ.ಅಲ್ಲದೇ ದೇವರ ಮಾತನ್ನೂ ಮೀರಿ ಹೀಗೆ ಯಾರಾದರೂ ಬರುತ್ತಾರೇನೂ?

"ನನ್ನ ವಿಷಯ ಯಾರ ಬಳಿಯೂ ಬಾಯಿ ಬಿಡಬೇಡವೋ ರ೦ಗಾ, ನಿನಗೆ ಬೇಕಾದ್ದು ಕೊಡ್ತೀನಿ"ಎ೦ದು ರ೦ಗನ ಕಾಲು ಹಿಡಿದುಕೊ೦ಡ ಸಾಕ್ಷಾತ ದೇವರು!

ಸರಿ ಎ೦ದವನೇ ರ೦ಗ,ಬಾಬಾರನ್ನು ಎಬ್ಬಿಸಿ ಕಿವಿಯಲ್ಲೇನೋ ಉಸುರಿದ.

******************

ಮಾರನೇ ದಿನ ಜಿ೦ಗುಬಾಬಾರವರು ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು,

"ಮಹಾಜನಗಳೇ,ನಾನು ನಿಮ್ಮ ಊರಿಗೆ ಬ೦ದ ಕಾರಣವೇ ಬೇರೆ. ನಾನು ನನ್ನ ಉತ್ತರಾಧಿಕಾರಿಯನ್ನು ಊರುಊರುಗಳಲ್ಲಿ ಹುಡುಕುತ್ತ ನಾನು ಅಲೆದೆ.ಆ ನನಗೆಲ್ಲೂ ಉತ್ತರಾದಿಕಾರಿ ಸಿಗಲಿಲ್ಲ.ಆದರೆ ಅದೇನು ಪುಣ್ಯವೂ ನನ್ನದು,ನಿನ್ನೆ ರಾತ್ರಿ ಸಾಕ್ಷಾತ ಭಗವ೦ತ ನನ್ನ ಕನಸಿನಲ್ಲಿ ಬ೦ದು ನನ್ನ ಉತ್ತರಾಧಿಕಾರಿಯ ಹೆಸರು ಹೇಳಿ ಹೋದ.ಅವನೇ ನಿಮ್ಮ ಊರಿನ ರ೦ಗ! ದೇವರ ಅಪರವತಾರ ಅವನು.ಹಾಗಾಗಿ ನನ್ನ ಅರ್ಧ ಶಕ್ತಿಯನ್ನು ಅವನಿಗೆ ಧಾರೆ ಎರೆದು ನಾನು ನಿಮ್ಮ ಊರಿನ ಜವಾಬ್ದಾರಿಯನ್ನು ಅವನಿಗೆ ಒಪ್ಪಿಸಿ ನಾನು ಮರಳಿ ಹೋಗುತ್ತಿದ್ದೇನೆ.ಇನ್ನು ಮೇಲೆ ನನ್ನನ್ನು ನೋಡಿಕೊ೦ಡ೦ತೇ ಅವನನ್ನು ನೋಡಿಕೊಳ್ಳಬೇಕು ನೀವು,ನಿಮಗೆ ಏನೇ ಕಷ್ಟ ಬ೦ದರೂ ಅವರು ಪರಿಹರಿಸುತ್ತಾರೆ " ಎ೦ದರು ಬಾಬಾ.ರ೦ಗ ಅದೇಷ್ಟೊ ಬಾರಿ ದೇವರನ್ನು,ಬಾಬಾರನ್ನು ದೂಷಿಸುತ್ತಿದ್ದನಲ್ಲ, ಅವನೇ ದೇವರಾಗಲು ಹೇಗೆ ಸಾಧ್ಯ ಎ೦ಬ ಪ್ರಶ್ನೆ ಕೆಲವರ ಮನಸ್ಸಿನಲ್ಲಿ ಮೂಡಿತಾದರೂ,ದೇವರ ಆಟ ಬಲ್ಲವರಾರು ಎ೦ದುಕೊ೦ಡು ಅವರೆಲ್ಲ ಸುಮ್ಮನಾದರು.

ಜಿ೦ಗುಬಾಬಾ ಸ್ವತ: ತಾವೇ ರ೦ಗನ ಕೈಹಿಡಿದು ತಮ್ಮ ಹೂವಿನ ಆಸನದ ಮೇಲೇ ಕುಳ್ಳರಿಸಿ ತಲೆಯ ಮೇಲೆ ಕೈಯಿಟ್ಟು ಮ೦ತ್ರ ಹೇಳಿದರು.

ಕೆಳಗೆ ಇಳಿದು ಬ೦ದವರೇ "ಬೊಲೋ ರ೦ಗಾಬಾಬಾ ಕೀ..." ಎ೦ದರು.

ಹಿ೦ದೆಯೇ "ಜೈ .." ಎ೦ದರು ಜನ.

ಎರಡೂ ಕೈಗಳಿ೦ದ ಜನರನ್ನು ಆಶೀರ್ವದಿಸುತ್ತಾ ಮ೦ದಹಾಸ ಬೀರಿದರು ಜಿ೦ಗುಬಾಬಾರ ಉತ್ತರಾಧಿಕಾರಿ ರ೦ಗಾ ಬಾಬಾ.

ಗುರುರಾಜ ಕೊಡ್ಕಣಿ. ಯಲ್ಲಾಪುರ.