ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೧೦) - ಅಜಮಿಳ
ಅಜಮಿಳ ಎಂಬ ಪಾತ್ರವು ನೇರವಾಗಿ ಮಹಾಭಾರತದ ಕತೆಗೆ ಸಂಬಂಧಿಸಿದಲ್ಲದೇ ಇದ್ದರೂ ವೇದವ್ಯಾಸರು ರಚಿಸಿದ ಭಾಗವತ ಪುರಾಣಗಳಲ್ಲಿ ಅದರ ಉಲ್ಲೇಖವಿದೆ. ಅಜಮಿಳ ಎಂಬ ಪಾತ್ರವು ನಮಗೆ ನಮ್ಮ ಜೀವನದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು, ಸತ್ಕರ್ಮಗಳನ್ನು ಮಾಡಬೇಕು, ಭಗವಂತನ ನಾಮಸ್ಮರಣೆಯ ಪುಣ್ಯ ಫಲದ ಬಗ್ಗೆ ಹೇಳಿಕೊಡುತ್ತದೆ.
ಅಜಮಿಳ ಎಂಬ ಬ್ರಾಹ್ಮಣನು ಕನ್ಯಾ ಕುಬ್ಜಾ ಎಂಬ ಊರಿನಲ್ಲಿ ವಾಸವಾಗಿದ್ದ. ಸದಾಕಾಲ ದೇವರ ನಾಮಸ್ಮರಣೆ ಮಾಡುತ್ತಾ, ಊರಿನವರಿಗೆಲ್ಲಾ ದೇವರ ಕತೆಗಳನ್ನು ಪ್ರವಚನದ ಮೂಲಕ ಹೇಳುತ್ತಾ ಪ್ರೀತಿ ಪಾತ್ರನಾಗಿದ್ದ. ವೇದ ಪುರಾಣಗಳ ಪಾರಂಗತನಾಗಿದ್ದ. ಅವನು ಓರ್ವ ಬ್ರಾಹ್ಮಣ ಕನ್ಯೆಯನ್ನು ವಿವಾಹವಾಗಿದ್ದ. ಹೀಗೆ ದಿನಗಳು ಸಾಗುತ್ತಿರಲು ಒಮ್ಮೆ ಅಜಮಿಳನು ದೇವರ ಪೂಜೆಗಾಗಿ ಹೂವು ಮತ್ತು ಹಣ್ಣುಗಳನ್ನು ಅರಸುತ್ತಾ ಕಾಡಿನತ್ತ ತೆರಳುತ್ತಾನೆ. ಅಲ್ಲಿ ಓರ್ವ ವೇಶ್ಯೆ ಹಾಗೂ ಓರ್ವ ಪುರುಷ ಸರಸ ಸಲ್ಲಾಪದಲ್ಲಿ ತೊಡಗಿದನ್ನು ಕಂಡು ವಿಚಲಿತನಾಗುತ್ತಾನೆ. ಅವನ ಮನಸ್ಸು ಚಂಚಲವಾಗುತ್ತದೆ. ಆ ವೇಶ್ಯೆಯ ಮೇಲೆ ಅವನಿಗೆ ಪ್ರೇಮಾಂಕುರವಾಗುತ್ತದೆ. ಅವಳ ಜೊತೆ ಜೀವನ ಸಾಗಿಸಬೇಕೆಂಬ ಮನಸ್ಸಾಗುತ್ತದೆ.
ಕಾಡಿನಿಂದ ಮನೆಗೆ ಮರಳುವಾಗ ವೇಶ್ಯಾ ಸ್ತ್ರೀಯನ್ನು ತನ್ನ ಮನೆಯ ಕೆಲಸಕ್ಕೆ ಬಾ ಎಂದು ಮನವೊಲಿಸಿ ಕರೆದುಕೊಂಡು ಬರುತ್ತಾನೆ. ಮನೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಇದ್ದ ಆ ಸ್ತ್ರೀ ಮೇಲಿನ ಮೋಹದಿಂದ ಅಜಮಿಳ ತಾನು ದಿನಾಲೂ ಮಾಡುತ್ತಿದ್ದ ಜಪ ತಪ, ದೇವರ ಪೂಜಾ ಕಾರ್ಯಗಳನ್ನು ಮರೆತು ಬಿಡುತ್ತಾನೆ. ಆ ವೇಶ್ಯಾ ಸ್ತ್ರೀ ಜೊತೆಯೇ ಕಾಲ ಕಳೆಯುತ್ತಾನೆ. ತನ್ನ ಹೆಂಡತಿ, ಕುಟುಂಬವನ್ನೂ ಮರೆತು ಬಿಡುತ್ತಾನೆ. ಕಾಲಕ್ರಮೇಣ ಆ ವೇಶ್ಯೆಯ ಮೋಹ ಜಾಲದಲ್ಲಿ ಸಿಲುಕಿ ಅವಳಲ್ಲಿ ಸಂಪೂರ್ಣ ಮೈಮರೆತು ಬಿಡುತ್ತಾನೆ. ತನ್ನ ಎಲ್ಲಾ ಸಂಪತ್ತನ್ನು ಅವಳಿಗೆ ಧಾರೆಯೆರೆಯುತ್ತಾನೆ. ಕ್ರಮೇಣ ಜನರಿಗೆ ಮೋಸ ಮಾಡುವುದು, ಜೂಜಾಡುವುದು, ಹೆಂಡ ಕುಡಿಯುವುದು ಎಲ್ಲವನ್ನೂ ಕಲಿಯುತ್ತಾನೆ. ಆ ಸ್ತ್ರೀಯಿಂದ ಅವನಿಗೆ ಹತ್ತು ಮಂದಿ ಮಕ್ಕಳಾಗುತ್ತಾರೆ. ಅವರಲ್ಲಿ ಕೊನೆಯ ಮಗನ ಹೆಸರು ನಾರಾಯಣ ಎಂದಾಗಿರುತ್ತದೆ. ಅವನೆಂದರೆ ಅಜಮಿಳನಿಗೆ ಅತ್ಯಂತ ಪ್ರೀತಿ. ಸದಾ ಕಾಲ ಅವನ ಹೆಸರಾದ ನಾರಾಯಣ ಎಂದು ಕರೆಯುತ್ತಾ ಇರುತ್ತಾನೆ.
ಕಾಲಕ್ರಮೇಣ ಅಜಮಿಳನಿಗೆ ವಯಸ್ಸಾಗುತ್ತದೆ. ಸಾವು ಸಮೀಪಿಸುತ್ತಿದೆ ಎಂದು ಅವನಿಗೆ ಭಾಸವಾಗುತ್ತದೆ. ಯಮದೂತರು ಅವನ ಜೀವವನ್ನು ಕೊಂಡೊಯ್ಯಲು ಬಂದಾಗ ಅವನಿಗೆ ಅದು ಗೋಚರಿಸುತ್ತದೆ. ಅವನು ತುಂಬಾ ಹಿಂದೆ ಮಾಡಿದ ಪುಣ್ಯ ಕಾರ್ಯಗಳ ಫಲವಾಗಿ ಅವನಿಗೆ ಯಮದೂತರು ಕಣ್ಣಿಗೆ ಕಾಣಿಸುತ್ತಾರೆ. ಅವರು ಯಮಪಾಶ ಹಾಕಿ ಜೀವ ಕೊಂಡೊಯ್ಯಬೇಕೆನ್ನುವಾಗ ಅವನಿಗೆ ಕೊನೆಯ ಮಗ ನಾರಾಯಣನ ನೆನಪಾಗುತ್ತದೆ. ‘ನಾರಾಯಣ, ನಾರಾಯಣ' ಎಂದು ಕರೆಯಲು ಪ್ರಾರಂಭಿಸಿದಾಗ ಚಿಸಿದಾಗ ಅಲ್ಲಿ ವಿಷ್ಣು ದೂತರು ಪ್ರತ್ಯಕ್ಷರಾಗುತ್ತಾರೆ. ಇದನ್ನು ಕಂಡ ಯಮದೂತರಿಗೆ ಆಶ್ಚರ್ಯವಾಗುತ್ತದೆ. 'ಇಂತಹ ಅಧರ್ಮಿ, ಪಾಪಕಾರ್ಯ ಮಾಡಿದವರನ್ನು ರಕ್ಷಿಸಲು ನೀವು ಹೇಗೆ ಬಂದಿರಿ?’ ಎಂದು ವಿಷ್ಣುದೂತರಿಗೆ ಯಮದೂತರು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ವಿಷ್ಣು ದೂತರು ಅವನು ನಾರಾಯಣ ಎಂದು ಕರೆದದ್ದೇ ನಾವು ಬರಲು ಕಾರಣ. ಅವನು ಕರೆದದ್ದು ಅವನ ಮಗನಾದ ನಾರಾಯಣನನ್ನೇ ಇರಬಹುದು. ಆದರೆ ನಾರಾಯಣ ಎಂದರೆ ಮಹಾವಿಷ್ಣುವಿನ ಮತ್ತೊಂದು ಹೆಸರು. ನಾರಾಯಣ ನಾಮ ಸ್ಮರಣೆಯಿಂದ ಇವನ ಪಾಪಗಳು ಕಮ್ಮಿ ಆಗಿವೆ. ನಾರಾಯಣ ಎಂದು ಇವನು ಕರೆದಷ್ಟು ಆ ಪುಣ್ಯ ಇವನಿಗೆ ದೊರೆತಿದೆ. ಆದುದರಿಂದ ವಿಷ್ಣುವಿನ ನಾಮ ಸ್ಮರಣೆಯಿಂದಾಗಿ ಅವನ ಆಯಸ್ಸು ವೃದ್ಧಿಯಾಗಿದೆ. ನೀವು ಇನ್ನು ಯಮಲೋಕಕ್ಕೆ ತೆರಳ ಬಹುದು ಎಂದು ಯಮದೂತರಿಗೆ ಹೇಳುತ್ತಾರೆ. ಅರೆ ಪ್ರಜ್ಞಾವಸ್ಥೆಯಲ್ಲೇ ಈ ಮಾತುಗಳನ್ನು ಕೇಳಿದ ಅಜಮಿಳನಿಗೆ ಜ್ಞಾನೋದಯವಾಗುತ್ತದೆ. ತಾನು ಜೀವನದಲ್ಲಿ ಎಷ್ಟು ತಪ್ಪುಗಳನ್ನು ಮಾಡಿದೆ, ಪಾಪ ಕಾರ್ಯಗಳನ್ನು ಮಾಡಿದೆ. ನನ್ನ ಧರ್ಮ ಪತ್ನಿಗೆ, ಕುಟುಂಬದವರಿಗೆ ಎಷ್ಟು ಅನ್ಯಾಯ ಮಾಡಿದೆ. ಆದರೆ ನಾನು ನನ್ನ ಮಗನ ಹೆಸರಾದ ನಾರಾಯಣ ಎಂದು ಕರೆದಾಗ ಸಾಕ್ಷಾತ್ ಮಹಾ ವಿಷ್ಣುವೇ ನನ್ನ ಜೀವ ರಕ್ಷಣೆಗೆ ಅವನ ದೂತರನ್ನು ಕಳಿಸುತ್ತಾನೆಂದರೆ ಆ ನಾಮ ಸ್ಮರಣೆಯಲ್ಲಿ ಎಷ್ಟು ಶಕ್ತಿ ಇದೆ ಎಂದು ತಿಳಿದು ಮರುಗುತ್ತಾನೆ.
ಅಜಮಿಳನು ನಂತರದ ದಿನಗಳಲ್ಲಿ ಮೊದಲಿನಂತೆಯೇ ದೇವರ ಸ್ಮರಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಇದರಿಂದ ಅವನಿಗೆ ನಂತರದ ದಿನಗಳಲ್ಲಿ ಮರಣ ಬಂದಾಗ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.
ಅಜಮಿಳನ ಕತೆಯು ನಮ್ಮ ಜೀವನಕ್ಕೂ ಅನ್ವಯವಾಗುತ್ತದೆ. ನಾವೂ ನಮಗೆ ದೊರೆತ ಜೀವನದ ಕ್ಷಣಗಳನ್ನು ಕೆಟ್ಟ ಕೆಲಸಗಳನ್ನು ಮಾಡಿ, ದೇವರನ್ನು ಮರೆತು ಅನ್ಯಾಯವಾಗಿ ಹಾಳು ಮಾಡುತ್ತಿರುತ್ತೇವೆ. ಕೇವಲ ನಾರಾಯಣ ಎಂಬ ದೇವರ ಹೆಸರನ್ನು ಮಾತ್ರ ಕರೆದಾಗ ಪಾಪಿ ಅಜಮಿಳನಿಗೆ ಜೀವದಾನ ಸಿಗುವುದಾದರೆ ನಾವು ಯಾಕೆ ದೇವರನ್ನು ಸ್ಮರಿಸುತ್ತಾ ಪುಣ್ಯ ಸಂಪಾದಿಸಬಾರದು? ಯೋಚಿಸಬೇಕಾದ ವಿಚಾರವಲ್ಲವೇ?
(ಚಿತ್ರ ಕೃಪೆ: ಭಾಗವತಮ್ ಕಥಾ. ಕಾಂ ಅಂತರ್ಜಾಲ ತಾಣದಿಂದ)