ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೧೩) ಊರ್ವಶಿ
ಊರ್ವಶಿ ಅಥವಾ ಉರ್ವಶಿಯು ಇಂದ್ರಲೋಕದ ಓರ್ವ ಅಪ್ಸರೆ. ಇಂದ್ರನ ಅಮರಾವತಿಯ ನೃತ್ಯಗಾತಿಯರಾದ ರಂಭೆ, ತಿಲೋತ್ತಮ, ಮೇನಕೆ ಮೊದಲಾದವರ ಜೊತೆಗಾರ್ತಿ. ಇವಳಿಗೂ ಮಹಾಭಾರತಕ್ಕೂ ಏನು ಸಂಬಂಧ ಎಂದು ಯೋಚಿಸುವಿರಾ? ಮಹಾಭಾರತದ ಕಥೆಗಳಲ್ಲಿ ಊರ್ವಶಿಯದ್ದೂ ಒಂದು ಸಣ್ಣದಾದರೂ ಪ್ರಮುಖ ಪಾತ್ರವಿದೆ. ಅದೇನೆಂದು ತಿಳಿದುಕೊಳ್ಳುವ ಮೊದಲು ಊರ್ವಶಿಯ ಹುಟ್ಟಿನ ಬಗ್ಗೆ ಗಮನಿಸುವ.
ಅಪ್ಸರೆಯರು ಅತ್ಯಂತ ಸೌಂದರ್ಯವತಿಯರೂ, ಉತ್ತಮ ನೃತ್ಯಗಾತಿಯರೂ ಆಗಿರುತ್ತಿದ್ದರು. ದೇವಲೋಕದಲ್ಲಿ ಗಂಧರ್ವರು ಸಂಗೀತ ನುಡಿಸುವ ಸಮಯದಲ್ಲಿ ಅಪ್ಸರೆಯರ ನೃತ್ಯ ಅತ್ಯಂತ ಮನೋರಂಜಕವಾಗಿರುತ್ತಿತ್ತು. ಅಪ್ಸರೆಯರಿಗೆ ತಮ್ಮ ರೂಪವನ್ನು ಬದಲಾಯಿಸುವ ಶಕ್ತಿ ಇತ್ತು. ಋಗ್ವೇದದಲ್ಲಿ ಉಲ್ಲೇಖವಿರುವ ಏಕೈಕ ಅಪ್ಸರೆಯೆಂದರೆ ಊರ್ವಶಿ.
ಒಮ್ಮೆ ನರ ಹಾಗೂ ನಾರಾಯಣ ಎಂಬ ಮಹರ್ಷಿ ಕಶ್ಯಪನ ಮಕ್ಕಳು ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ಅವರ ತಪಸ್ಸು ವರ್ಷಾನುಗಟ್ಟಲೆ ಮುಂದುವರೆಯುತ್ತದೆ. ತಪಸ್ಸಿನ ತಾಪಕ್ಕೆ ದೇವಲೋಕ ಸೇರಿದಂತೆ ತ್ರಿಲೋಕವೂ ಕಂಗೆಟ್ಟು ಹೋಗುತ್ತದೆ. ಇವರ ತಪಸ್ಸಿನಿಂದ ತನ್ನ ದೇವ ಪದವಿಗೆ ಸಂಚಕಾರ ಬರಬಹುದೇನೋ ಎಂಬ ದಿಗಿಲು ದೇವರಾಜ ಇಂದ್ರನಿಗೆ ಕಾಡಲು ಪ್ರಾರಂಭವಾಗುತ್ತದೆ. ಅದಕ್ಕಾಗಿ ಅವರ ತಪಸ್ಸನ್ನು ನಿಲ್ಲಿಸಲು ಮುನಿ ಕುಮಾರರ ಆಶ್ರಮಕ್ಕೆ ಬರುತ್ತಾನೆ. ‘ಋಷಿ ಕುಮಾರರೇ, ನಾನು ದೇವರಾಜ ಇಂದ್ರ. ನಿಮ್ಮ ತಪಸ್ಸಿಗೆ ಮೆಚ್ಚಿ ಬಂದಿರುವೆ. ನೀವು ಬಯಸಿದ ವರವನ್ನು ಕೊಡುವೆ’ ಎಂದು ನರ ಹಾಗೂ ನಾರಾಯಣರನ್ನು ಕರೆಯುತ್ತಾನೆ. ಆದರೆ ತಪಸ್ಸಿನ ಧ್ಯಾನದಲ್ಲಿದ್ದ ಮುನಿಗಳಿಗೆ ಇಂದ್ರನ ಧ್ವನಿ ಕೇಳುವುದಿಲ್ಲ. ಹಲವಾರು ಬಾರಿ ಕರೆದರೂ ಏನೂ ಪ್ರತಿಕ್ರಿಯೆ ಬಾರದೇ ಇದ್ದುದರಿಂದ ಇಂದ್ರ ಕೋಪಗೊಳ್ಳುತ್ತಾನೆ. ಅವರ ತಪಸ್ಸನ್ನು ಕೆಡಿಸಲು ಅವನ ಮಾಯಾಜಾಲದಿಂದ ಕ್ರೂರ ಪ್ರಾಣಿಗಳನ್ನು ಕಳಿಸುತ್ತಾನೆ, ಗುಡುಗು ಸಿಡಿಲುಗಳಿಂದ ಹೆದರಿಸುತ್ತಾನೆ. ಆದರೆ ಋಷಿಗಳ ತಪಸ್ಸು ಭಂಗವಾಗುವುದಿಲ್ಲ. ಇದನ್ನು ನೋಡಿ ಇನ್ನಷ್ಟು ಕೋಪಗೊಂಡ ಇಂದ್ರ ದೇವಲೋಕಕ್ಕೆ ಹಿಂದಿರುಗುತ್ತಾನೆ.
ಋಷಿ ಕುಮಾರರ ತಪಸ್ಸು ಕೆಡಿಸಲು ಇಂದ್ರನು ಒಂದು ಉಪಾಯ ಮಾಡುತ್ತಾನೆ. ಅವನು ಕಾಮದೇವನಾದ ಮನ್ಮಥನನ್ನು ಬರಲು ಹೇಳುತ್ತಾನೆ. ಅವನೊಂದಿಗೆ ಅವನ ಪತ್ನಿಯಾದ ರತಿಯನ್ನೂ ಕರೆದುಕೊಂಡು ಬರಲು ಹೇಳುತ್ತಾನೆ. ಕಾಮದೇವನಿಗೆ ಭೂಮಿಗೆ ತೆರಳಿ ತನ್ನ ಅತ್ಯಂತ ಪ್ರಬಲ ಕಾಮಾಸ್ತ್ರದಿಂದ ಆ ಮುನಿಗಳ ತಪಸ್ಸು ಭಂಗ ಮಾಡಿ ಅವರ ಬ್ರಹ್ಮಚರ್ಯವನ್ನು ಕೆಡಿಸಲು ಅಪ್ಪಣೆ ನೀಡುತ್ತಾನೆ. ಅದರಂತೆ ರತಿ-ಮನ್ಮಥರು ಸ್ವರ್ಗಲೋಕದ ಅಪ್ಸರೆಯರಾದ ರಂಭೆ ಹಾಗೂ ತಿಲೋತ್ತಮರನ್ನು ಕರೆದುಕೊಂಡು ಭೂಮಿಗೆ ಬರುತ್ತಾರೆ. ಅಪ್ಸರೆಯರು ತಮ್ಮ ಸಂಗೀತ, ನೃತ್ಯದಿಂದ ಮುನಿಕುಮಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಾರೆ. ಮನ್ಮಥನು ಅವರು ತಪಸ್ಸು ಮಾಡುತ್ತಿದ್ದ ಪ್ರದೇಶದಲ್ಲಿ ಸುಂದರವಾದ ಹೂವುಗಳು ಅರಳುವಂತೆ ಮಾಡುತ್ತಾನೆ. ಇದರಿಂದ ನರನು ಕಣ್ಣು ಬಿಟ್ಟು ನೋಡುವಾಗ ಅಕಾಲದಲ್ಲಿ ಅರಳಿದ ಹೂವುಗಳನ್ನು ಕಂಡು ಆಶ್ಚರ್ಯಚಕಿತನಾಗುತ್ತಾನೆ. ನಾರಾಯಣನ ಬಳಿ ಹೇಳಿದಾಗ ಇದೆಲ್ಲವೂ ನಮ್ಮ ತಪಸ್ಸನ್ನು ಭಂಗ ಮಾಡಲು ದೇವರಾಜ ಇಂದ್ರನು ಮಾಡಿದ ಕುತಂತ್ರ. ಅವನಿಗೆ ಈ ಅಪ್ಸರೆಯರ ಸೌಂದರ್ಯದ ಮೇಲೆ ಭಾರೀ ಗರ್ವ ಇದೆ. ನಾನು ಅವನಿಗೆ ಬುದ್ದಿ ಕಲಿಸುತ್ತೇನೆ ಎಂದು ತನ್ನ ತೊಡೆಯನ್ನು ಗೀರುತ್ತಾನೆ. ಆಗ ಅತ್ಯಂತ ಸೌಂದರ್ಯವತಿಯಾದ ಓರ್ವ ತರುಣಿಯು ಪ್ರತ್ಯಕ್ಷಳಾಗುತ್ತಾಳೆ. ಅವಳೇ ಊರ್ವಶಿ. ಊರ್ವಶಿಯ ಸೌಂದರ್ಯವನ್ನು ನೋಡಿ ದೇವಲೋಕದ ಅಪ್ಸರೆಯರು ನಾಚಿ ನೀರಾಗುತ್ತಾರೆ. ಅವಳ ಸೌಂದರ್ಯದ ಎದುರು ಸೋತು ಮುನಿಗಳಲ್ಲಿ ಕ್ಷಮೆಯನ್ನು ಯಾಚಿಸುತ್ತಾರೆ. ನರ-ನಾರಾಯಣರು ಅವರನ್ನು ಕ್ಷಮಿಸುತ್ತಾರೆ ಮತ್ತು ದೇವರಾಜ ಇಂದ್ರನ ಪದವಿಯನ್ನು ಕಿತ್ತುಕೊಳ್ಳುವ ಯಾವುದೇ ಆಶಯ ತಮಗಿಲ್ಲ ಎಂದು ಸ್ಪಷ್ಟ ಪಡಿಸುತ್ತಾರೆ. ಊರ್ವಶಿಯನ್ನು ರಂಬೆ, ತಿಲೋತ್ತಮರ ಜೊತೆಗೆ ದೇವಲೋಕಕ್ಕೆ ಕಳಿಸುತ್ತಾರೆ. ಹೀಗೆ ಊರ್ವಶಿಯು ದೇವಲೋಕ ಸೇರಿ ಅಲ್ಲಿ ಅಪ್ಸರೆಯಾಗುತ್ತಾಳೆ.
ಮಹಾಭಾರತದ ಕತೆಯತ್ತ ನೋಡುವುದಾದರೆ, ಒಮ್ಮೆ ತನ್ನ ತಂದೆಯಾದ ಇಂದ್ರನ ಆಹ್ವಾನದ ಮೇರೆಗೆ ಅರ್ಜುನ ದೇವಲೋಕಕ್ಕೆ ಹೋಗುತ್ತಾನೆ. ಅಲ್ಲಿ ಇಂದ್ರಲೋಕದ ವೈಭೋಗಗಳನ್ನು ಕಣ್ಣಾರೆ ಕಂಡು ಅರ್ಜುನ ಬೆರಗಾಗುತ್ತಾನೆ. ತನ್ನ ಮಗನಾದ ಅರ್ಜುನನ ಸತ್ಕಾರಕ್ಕಾಗಿ ಇಂದ್ರ ಸ್ವಾದಿಷ್ಟ ಭೋಜನ, ಅಪ್ಸರೆಯರ ನೃತ್ಯ, ಗಂಧರ್ವರ ಸಂಗೀತ ಎಲ್ಲವನ್ನೂ ಏರ್ಪಾಡು ಮಾಡಿರುತ್ತಾನೆ. ಅಪ್ಸರೆಯಲ್ಲಿ ಓರ್ವಳಾದ ಊರ್ವಶಿಯ ಮನಮೋಹಕ ನೃತ್ಯವನ್ನು ನೋಡುತ್ತಾ ಅರ್ಜುನ ಮೈ ಮರೆಯುತ್ತಾನೆ. ಇದನ್ನು ಗಮನಿಸಿದ ಊರ್ವಶಿಯು ಅರ್ಜುನನಿಗೆ ತನ್ನ ಮೇಲೆ ಮೋಹವಾಗಿದೆ ಎಂದು ನಂಬುತ್ತಾಳೆ. ಇಂದ್ರನೂ ಊರ್ವಶಿಗೆ ಅರ್ಜುನನ ಜೊತೆ ಇರಲು ಅನುಮತಿ ನೀಡುತ್ತಾನೆ. ಊರ್ವಶಿಯು ಅರ್ಜುನನ ಕೋಣೆಗೆ ಹೋಗುತ್ತಾಳೆ. ಅವಳು ತನ್ನ ಮನೋಕಾಮನೆಯನ್ನು ತಿಳಿಸಲು ಅರ್ಜುನ ಅವಳನ್ನು ನಿರಾಕರಿಸುತ್ತಾನೆ. ನೀನು ನನಗೆ ತಾಯಿಯ ಸಮಾನ ನಾನು ನಿನ್ನ ನೃತ್ಯವನ್ನು ಆಸ್ವಾದಿಸುತ್ತಿದ್ದೆಯೇ ವಿನಹ ನಿನ್ನ ಸೌಂದರ್ಯವನ್ನಲ್ಲ ಎನ್ನುತ್ತಾನೆ. ಊರ್ವಶಿ ಒಮ್ಮೆ ಪೂರೂರ್ವ ಎಂಬ ರಾಜನನ್ನು ಮದುವೆಯಾಗಿ ಆಯುಷಿ ಎಂಬ ಪುತ್ರನನ್ನು ಪಡೆದಿರುತ್ತಾಳೆ. ವರಸೆಯಲ್ಲಿ ಆ ಪುತ್ರನು ಅರ್ಜುನನಿಗೆ ಸೋದರ ಸಂಬಂಧಿಯಾಗುತ್ತಾನೆ. ಆದುದರಿಂದ ಊರ್ವಶಿಯನ್ನು ಅರ್ಜುನ ಮಾತೆಯ ಸಮಾನ ಎನ್ನುತ್ತಾನೆ.
ಕಾಮದ ದಾಹದಲ್ಲಿದ್ದ ಊರ್ವಶಿಗೆ ಈ ಮಾತುಗಳು ರುಚಿಸುವುದಿಲ್ಲ. ಅವಳು ಅರ್ಜುನನಿಗೆ ಶಾಪ ನೀಡುತ್ತಾಳೆ. ‘ನನ್ನಂಥ ಹೆಣ್ಣನ್ನು ತೃಪ್ತಿ ಪಡಿಸದ ನೀನು ನಪುಂಸಕನಾಗಿ ಹೋಗು. ಯಾವತ್ತೂ ನೀನು ಒಂದು ಹೆಣ್ಣಿಗೆ ಸುಖ ಕೊಡದಂತವನಾಗು’ ಎಂದು ಶಪಿಸುತ್ತಾಳೆ. ಇದರಿಂದ ವ್ಯಾಕುಲಗೊಂಡ ಅರ್ಜುನನು ತನ್ನ ತಂದೆಯಾದ ಇಂದ್ರನ ಬಳಿ ಬರುತ್ತಾನೆ. ವಿಷಯ ತಿಳಿದ ಇಂದ್ರನು ಊರ್ವಶಿಯನ್ನು ಕರೆದು ಸಮಾಧಾನ ಹೇಳಿ ಶಾಪ ವಿಮೋಚನೆ ಮಾಡೆಂದು ಅಪ್ಪಣೆ ಮಾಡುತ್ತಾನೆ. ಊರ್ವಶಿಯು ಕೊಟ್ಟ ಶಾಪವನ್ನು ನಾನು ಹಿಂಪಡೆಯಲು ಆಗದು. ಆದರೆ ಶಾಪದ ಅವಧಿಯನ್ನು ಒಂದು ವರ್ಷಕ್ಕೆ ಇಳಿಸುತ್ತೇನೆ. ಆ ಒಂದು ವರ್ಷದ ಅವಧಿಯನ್ನು ಅರ್ಜುನನೇ ಯಾವಾಗ ಬೇಕೆಂದು ನಿರ್ಧರಿಸಬಹುದು ಎನ್ನುತ್ತಾಳೆ. ಅರ್ಜುನ ಇದನ್ನು ಒಪ್ಪಿಕೊಂಡು ಭೂಲೋಕಕ್ಕೆ ಹಿಂದಿರುಗುತ್ತಾನೆ.
ಅರ್ಜುನನಿಗೆ ಊರ್ವಶಿಯು ನೀಡಿದ ಶಾಪವು ಅವನ ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಅವನು ಅಜ್ಞಾತವಾಸದ ಸಮಯದಲ್ಲಿ ಬ್ರಹನ್ನಳೆಯಾಗಿ ಮತ್ಸ್ಯ ದೇಶದ ವಿರಾಟ ರಾಜನ ಮಗಳಾದ ಉತ್ತರೆಗೆ ನೃತ್ಯಾಭ್ಯಾಸ ಹೇಳಿಕೊಡುತ್ತಾನೆ. ಹೀಗೆ ಅಜ್ಞಾತವಾಸದಲ್ಲಿ ನಪುಂಸಕನಾದ ಅರ್ಜುನ ಒಂದು ವರ್ಷ ಮುಗಿದ ಕೂಡಲೇ ತನ್ನ ಪುರುಷತ್ವವನ್ನು ಮರಳಿ ಪಡೆಯುತ್ತಾನೆ. ಹೀಗೆ ಊರ್ವಶಿಯ ಶಾಪವನ್ನು ಅರ್ಜುನ ವರವಾಗಿ ಮಾರ್ಪಡಿಸಿಕೊಳ್ಳುತ್ತಾನೆ ಎಂದು ಪುರಾಣಗಳು ಹೇಳುತ್ತವೆ.
ಮಾಹಿತಿ: ಊರ್ವಶಿ ಬಗ್ಗೆ ವಿವಿಧ ಪುರಾಣಗಳಲ್ಲಿ ಹಲವಾರು ಕಥೆಗಳು ಇವೆ. ಆದರೆ ಮಹಾಭಾರತದ ಕಥೆಗೆ ಪೂರಕವಾಗುವ ಸನ್ನಿವೇಶವನ್ನು ಮಾತ್ರ ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.
ಚಿತ್ರ ಕೃಪೆ: ಆಜ್ ತಕ್ ಅಂತರ್ಜಾಲ ತಾಣ