ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೩)- ಬಾರ್ಬರಿಕ
ನಾನು ಬಾರ್ಬರಿಕ. ಮಹಾಭಾರತ ಯುದ್ಧದಲ್ಲಿ ನಾನು ಭಾಗವಹಿಸಿದ್ದರೆ, ಯುದ್ಧ ಒಂದೇ ದಿನದಲ್ಲಿ ಮುಗಿದು ಹೋಗುತ್ತಿತ್ತು ಎಂಬ ನಂಬಿಕೆ ನನಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಏಕೆ? ಎಂದು ತಿಳಿಯಬೇಕಾದರೆ ನೀವು ನನ್ನ ಕತೆಯನ್ನು ಓದಲೇ ಬೇಕು. ನಾನು ಹಿಡಿಂಬೆ ಹಾಗೂ ಪಾಂಡು ಪುತ್ರನಾದ ಭೀಮನ ಮೊಮ್ಮಗ. ಭೀಮನ ಮಗ ಘಟೋತ್ಖಜನ ಮಗ. ನನ್ನ ಅಮ್ಮ ನಾಗಕನ್ಯೆ ಅಹಿಲಾವತಿ ಅಥವಾ ಮಾರ್ವಿ. ನನ್ನ ಅಮ್ಮ ನನ್ನನ್ನು ಉತ್ತಮ ಯೋಧನನ್ನಾಗಿ ಮಾಡಿದಳು. ಅವಳು ನನಗೆ ಎಲ್ಲಾ ರೀತಿಯ ಯುದ್ಧ ಕಲೆಗಳನ್ನು ತಿಳಿಸಿಕೊಟ್ಟಳು. ಅವಳು ಈಶ್ವರ ದೇವರ ಭಕ್ತೆಯಾಗಿದ್ದಳು. ಇದು ನನ್ನನ್ನೂ ಈಶ್ವರ ದೇವರನ್ನು ಪೂಜಿಸಲು ಪ್ರೇರೇಪಿಸಿತು. ನನ್ನ ಪೂಜೆಯ ಫಲದಿಂದ ಈಶ್ವರ ಪ್ರಸನ್ನನಾದ. ನನಗೆ ಮೂರು ಬಾಣಗಳನ್ನು ನೀಡಿ, ನೀನು ಈ ಬಾಣಗಳನ್ನು ಪ್ರಯೋಗಿಸಿ ಯಾವುದೇ ಯುದ್ಧವನ್ನು ಕ್ಷಣ ಮಾತ್ರದಲ್ಲಿ ಜಯಿಸಬಹುದು ಎಂದು ವರವನ್ನು ನೀಡಿದ.
ಕೌರವರು ಹಾಗೂ ಪಾಂಡವರ ನಡುವೆ ಕುರುಕ್ಷೇತ್ರದಲ್ಲಿ ಯುದ್ಧ ಪ್ರಾರಂಭವಾಗುತ್ತೆ ಎಂದು ತಿಳಿದಾಗ ನಾನು ಅಲ್ಲಿಗೆ ಹೋದೆ. ಮಹಾ ವಿಷ್ಣುವಿನ ಅವತಾರವಾದ ಶ್ರೀಕೃಷ್ಣನು ಪಾಂಡವರ ಕಡೆಯಲ್ಲಿದ್ದ. ಶ್ರೀ ಕೃಷ್ಣನು ನಾನು ಬರುವುದಕ್ಕೆ ಮೊದಲೇ ಯುದ್ಧದಲ್ಲಿ ಭಾಗವಹಿಸಲಿದ್ದ ಎರಡೂ ಬದಿಯ ಅತಿರಥ ಮಹಾರಥರನ್ನು ಸಾಮರ್ಥ್ಯವನ್ನು ಪರಾಮರ್ಶಿಸಿದ್ದ. ಅವನ ಪ್ರಕಾರ ಭೀಷ್ಮ ಒಬ್ಬರೇ ೨೦ ದಿನಗಳಲ್ಲಿ, ಕರ್ಣ ೨೪ ದಿನಗಳಲ್ಲಿ, ದ್ರೋಣಾಚಾರ್ಯ ೨೫ ದಿನಗಳಲ್ಲಿ, ಅರ್ಜುನ ೨೮ ದಿನಗಳಲ್ಲಿ ಯುದ್ಧವನ್ನು ಗೆಲ್ಲಬಲ್ಲ ಸಾಮರ್ಥ್ಯ ಹೊಂದಿದ್ದರೆಂದು ತಿಳಿದುಕೊಂಡಿದ್ದ. ಶ್ರೀಕೃಷ್ಣ ನನ್ನ ಸಾಮರ್ಥ್ಯವನ್ನು ಪರಿಗಣಿಸಿದ್ದನೇ ಎಂಬುದು ನನಗೆ ಆಗ ತಿಳಿಯಲಿಲ್ಲ. ಆದರೆ ಯುದ್ಧಕ್ಕೆ ಕೆಲವು ದಿನಗಳ ಮೊದಲು ನಾನೊರ್ವ ಬ್ರಾಹ್ಮಣನನ್ನು ಭೇಟಿಯಾದೆ. ಅವನು ನನ್ನ ಸಾಮರ್ಥ್ಯದ ಬಗ್ಗೆ ಪರೀಕ್ಷಿಸಲು ಬಯಸಿ ಬಂದಿದ್ದ. ನಾನು ಹೇಳಿದೆ ನನ್ನ ಮೂರು ಬಾಣಗಳು ಯಾವುದೇ ಯುದ್ಧವನ್ನು ಕ್ಷಣ ಮಾತ್ರದಲ್ಲಿ ಮುಗಿಸಿಬಿಡುವ ಸಾಮರ್ಥ್ಯ ಹೊಂದಿದೆ ಎಂದು. ನನ್ನ ಮೂರು ಬಾಣಗಳಲ್ಲಿ ಒಂದು ಬಾಣ ಶತ್ರುವನ್ನು ಗುರುತಿಸುತ್ತೆ, ಎರಡನೇ ಬಾಣ ಮಿತ್ರರನ್ನು ಗುರುತಿಸುತ್ತೆ. ಮೂರನೇ ಬಾಣ ಗುರುತಿಸಿದ ಶತ್ರುಗಳನ್ನು ನಾಶ ಮಾಡುತ್ತದೆ ಎಂದು ಹೇಳಿದೆ. ಅದಕ್ಕೆ ಅವರು ಈ ಆಲದ ಮರದ ಎಲೆಗಳನ್ನು ನಿನ್ನ ಬಾಣಗಳಿಂದ ಗುರುತಿಸಿ ನಾಶ ಮಾಡಿ ನನ್ನ ಮಾತನ್ನು ನಿಜವೆಂದು ನಿರೂಪಿಸಲು ಹೇಳಿದರು. ಅವರ ಮಾತಿನಂತೆ ನಾನು ನನ್ನ ಬಾಣಗಳಿಂದ ಆಲದ ಮರದ ಎಲೆಯನ್ನು ಗುರುತಿಸತೊಡಗಿದೆ. ಆ ಬ್ರಾಹ್ಮಣ ಒಂದು ಎಲೆಯನ್ನು ತನ್ನ ಕಾಲಿನ ಕೆಳಗೆ ಅಡಗಿಸಿ ನಿಂತಿದ್ದ. ಆದರೆ ನನ್ನ ಬಾಣ ಅದನ್ನೂ ಗುರುತಿಸಿ ಕಾಲನ್ನು ಎಲೆಯ ಮೇಲಿನಿಂದ ಸರಿಸಲು ಹೇಳಿತು. ನನ್ನ ಮಾತಿನ ಮೇಲೆ ನಂಬಿಕೆ ಹುಟ್ಟಿದಂತೆ ಕಂಡ ಬ್ರಾಹ್ಮಣನು ನೀನು ಯಾರ ಕಡೆಯಿಂದ ಯುದ್ಧ ಮಾಡುವೆ ಎಂದು ಕೇಳಿದಾಗ ನಾನು ನನ್ನ ಅಮ್ಮನಿಗೆ ಕೊಟ್ಟ ಮಾತನ್ನು ಬ್ರಾಹ್ಮಣನಿಗೆ ಹೇಳಿದೆ. ನನ್ನ ಅಮ್ಮ ನನ್ನ ಬಳಿ ಒಂದು ವಚನವನ್ನು ತೆಗೆದುಕೊಂಡಿದ್ದಳು. ಅದು ಏನೆಂದರೆ ನಾನು ಯುದ್ಧದಲ್ಲಿ ಯಾವ ಪಕ್ಷ ಸೋಲುವ ಸಂಭವವಿರುತ್ತದೆಯೋ ಆ ಕಡೆಯಿಂದ ಯುದ್ಧ ಮಾಡ ಬೇಕಾಗುತ್ತದೆ. ಇದನ್ನು ಕೇಳಿದ ಬ್ರಾಹ್ಮಣ ವಿಚಲಿತನಾದಂತೆ ಕಂಡು ಬಂದ. ಅವನು ನನಗೆ ಅವನ ನಿಜ ರೂಪ ತೋರಿಸಿದ. ಅವನು ಶ್ರೀಕೃಷ್ಣನಾಗಿದ್ದ. ಶ್ರೀ ಕೃಷ್ಣ ನನಗೆ ನನ್ನ ವಚನ ಪಾಲನೆಯ ಕಷ್ಟವನ್ನು ತಿಳಿಹೇಳಿದ. ಅದೇನೆಂದರೆ ಒಂದೊಮ್ಮೆ ನಾನು ಪಾಂಡವರ ಪಕ್ಷದಲ್ಲಿ ಯುದ್ಧ ಮಾಡಲು ಪ್ರಾರಂಭಿಸಿದರೆ ಕೌರವರು ಸೋಲಿನ ಕಡೆ ಮುಖ ಮಾಡುತ್ತಾರೆ. ಆಗ ನಾನು ಕೌರವರ ಕಡೆಯಿಂದ ಯುದ್ಧ ಮಾಡ ಬೇಕಾಗುತ್ತದೆ. ಆಗ ಪಾಂಡವರು ಸೋಲಿನತ್ತ ಮುಖ ಮಾಡುತ್ತಾರೆ. ಆಗ ಮತ್ತೆ ನಾನು ಪಾಂಡವರ ಕಡೆ ಹೋಗ ಬೇಕಾಗುತ್ತೆ. ಇದು ಪುನರಾವರ್ತಿತವಾಗುತ್ತಲೇ ಇರುತ್ತದೆ. ಇದರಿಂದ ಇತ್ತಂಡಗಳ ಬಹುಪಾಲು ಯೋಧರು ಮರಣ ಹೊಂದುತ್ತಾರೆ. ಕೊನೆಗೆ ನಾನು ಮಾತ್ರ ಉಳಿಯುವ ಸಾಧ್ಯತೆ ಇರುತ್ತದೆ ಎಂದು ಶ್ರೀಕೃಷ್ಣ ನನಗೆ ಮನದಟ್ಟು ಮಾಡಿದ.
ಆಗ ನನ್ನ ಪೂರ್ವ ಜನ್ಮದ ಕತೆಯನ್ನು ಕೃಷ್ಣ ನನಗೆ ಹೇಳಿದ. ನಾನು ಪೂರ್ವ ಜನ್ಮದಲ್ಲಿ ಓರ್ವ ಯಕ್ಷನಾಗಿದ್ದೆ. ಧರ್ಮದ ಸ್ಥಾಪನೆಗಾಗಿ ಭೂಮಿಯಲ್ಲಿ ಜನ್ಮ ತಾಳುವಂತೆ ಬ್ರಹ್ಮಾದಿ ದೇವತೆಗಳು ಮಹಾವಿಷ್ಟುವನ್ನು ಕೇಳಿಕೊಂಡಾಗ ನಾನು ಅಹಂಕಾರದಿಂದ ನನಗೆ ಅವಕಾಶಕೊಟ್ಟರೆ ನಾನು ಒಂದೇ ದಿನದಲ್ಲಿ ಅಧರ್ಮವನ್ನು ನಾಶ ಪಡಿಸುವೆ ಎಂದು ಹೇಳಿದೆನಂತೆ. ಇದರಿಂದ ಕುಪಿತನಾದ ಬ್ರಹ್ಮ ನನಗೆ ಭೂಮಿಯಲ್ಲಿ ಮಹಾರಥಿಯಾಗಿ ಹುಟ್ಟಿ ಯುದ್ಧದ ಮೊದಲ ದಿನವೇ ಬಲಿದಾನ ನೀಡುವಂತೆ ಶಾಪ ನೀಡಿದನಂತೆ.
ನಾನು ನನ್ನ ವಚನದ ಹಾಗೂ ನನ್ನ ಶಾಪದ ಪರಿಣಾಮದ ಬಗ್ಗೆ ಗಾಬರಿಗೊಳಗಾದೆ. ಶ್ರೀ ಕೃಷ್ಣ ಹೇಳಿದ ನಿನ್ನ ಅಮ್ಮ ನನ್ನನ್ನು ಭಯ ಭಕ್ತಿಯಿಂದ ಪೂಜಿಸುತ್ತಾಳೆ. ನೀನೂ ನನ್ನನ್ನು ಪೂಜಿಸುವೆಯಾದರೆ ನಿನ್ನಿಂದ ನಾನೊಂದು ಕಾಣಿಕೆಯನ್ನು ಬಯಸುವೆ. ನನಗೆ ಶ್ರೀಕೃಷ್ಣನಲ್ಲಿ ಪೂಜನೀಯ ಭಾವನೆ ಇತ್ತು. ಅದನ್ನೇ ನಾನು ಕೃಷ್ಣನಲ್ಲಿ ಹೇಳಿದೆ. ಕೃಷ್ಣ ನನ್ನ ತಲೆಯನ್ನೇ ಕೇಳಿದ. ನಾನು ತಲೆಯನ್ನು ಕತ್ತರಿಸಿಕೊಡಲು ತಯಾರಾದೆ. ಆದರೆ ನನ್ನ ಮನದ ಒಂದು ಇಚ್ಛೆಯನ್ನು ಹೇಳಿದೆ. ಪ್ರಭೂ,’ ನಾನು ನನ್ನ ತಲೆಯನ್ನು ನಿಮ್ಮ ಪಾದಕ್ಕೆ ಅರ್ಪಿಸಲು ತಯಾರಿದ್ದೇನೆ. ಆದರೆ ನನಗೆ ಕುರುಕ್ಷೇತ್ರ ಯುದ್ಧ ನೋಡುವ ಆಶೆ ಇದೆ. ಅದನ್ನು ನೆರವೇರಿಸಿಕೊಡುವಿರಾ?’ ಶ್ರೀ ಕೃಷ್ಣ ನನ್ನ ಮಾತನ್ನು ಮನ್ನಿಸಿದ. ನಾನು ಮರುಕ್ಷಣವೇ ನನ್ನ ತಲೆಯನ್ನು ಕತ್ತರಿಸಿ ಕೃಷ್ಣನಿಗೆ ಒಪ್ಪಿಸಿದೆ. ಕೃಷ್ಣ ಅದನ್ನು ಯುದ್ಧಭೂಮಿಯ ಬಳಿಯಿರುವ ಎತ್ತರದ ಬೆಟ್ಟದಲ್ಲಿ ಇರಿಸುವ ವ್ಯವಸ್ಥೆ ಮಾಡಿದ. ಇದರಿಂದ ನಾನು ನಿರಂತರ ೧೮ ದಿನಗಳ ಕಾಲ ಯುದ್ಧವನ್ನು ಕಣ್ಣಾರೆ ನೋಡಿದೆ.
ಯುದ್ಧ ಮುಗಿದು ಪಾಂಡವರು ಗೆದ್ದ ಬಳಿಕ ಕೃಷ್ಣನಲ್ಲಿ ಕೇಳಿದರಂತೆ ಯಾರು ಚೆನ್ನಾಗಿ ಯುದ್ಧ ಮಾಡಿದರೆಂದು? ಅದಕ್ಕೆ ಕೃಷ್ಣ ನನ್ನಷ್ಟು ಉತ್ತಮ ರೀತಿಯಲ್ಲಿ ಯುದ್ಧದ ವಿಶ್ಲೇಷಣೆ ಮಾಡುವವರು ಯಾರೂ ಇಲ್ಲ, ಬಾರ್ಬರಿಕನನ್ನೇ ಕೇಳಿ ಎಂದು ನನ್ನ ಬಳಿ ಕಳುಹಿಸಿದ. ನನ್ನ ಬಳಿ ಬಂದ ಪಾಂಡವರು ಈ ವಿಷಯ ಕೇಳಿದಾಗ ನಾನಂದೆ ‘ ಇಡೀ ಯುದ್ಧವನ್ನು ನೀವು ಗೆದ್ದಿರುವಿರಾದರೂ ನಿಮ್ಮಲ್ಲಿ ಯಾರೂ ಚೆನ್ನಾಗಿ ಯುದ್ಧ ಮಾಡಿದವರಿಲ್ಲ, ನಾನಿಲ್ಲಿ ಮೇಲಿನಿಂದ ನೋಡಿದಾಗ ಶ್ರೀಕೃಷ್ಣನ ಸುದರ್ಶನ ಚಕ್ರ ಮಾತ್ರವೇ ವೈರಿಗಳ ರುಂಡವನ್ನು ಚೆಂಡಾಡುತ್ತಿತ್ತು. ಕೃಷ್ಣನು ಆಯುಧವನ್ನು ಹಿಡಿಯದೇ ಇದ್ದರೂ ಅವನ ಪ್ರಭಾವದಿಂದಲೇ ನೀವು ಜಯಶಾಲಿಗಳಾಗಿರುವಿರಿ ಎಂದೆ. ನಂತರ ಕೃಷ್ಣನು ನನ್ನ ತಲೆಯನ್ನು ರೂಪಮತಿ ನದಿಯಲ್ಲಿ ವಿಸರ್ಜಿಸಲು ಪಾಂಡವರಿಗೆ ತಿಳಿಸಲು ಅವರು ಹಾಗೇ ಮಾಡಿದರು. ಹೀಗೆ ನನ್ನ ಅಂತ್ಯವಾಯಿತು.
ಕುರುಕ್ಷೇತ್ರ ಯುದ್ಧದಲ್ಲಿ ನನಗೆ ಭಾಗವಹಿಸಲು ಆಶೆ ಇದ್ದರೂ ನಾನು ನನ್ನ ತಾಯಿಗೆ ನೀಡಿದ ವಚನದಿಂದ ವ್ಯತಿರಿಕ್ತ ಪರಿಣಾಮವಾಗುತ್ತೆ ಎಂದು ಮನಗಂಡ ಕೃಷ್ಣನು ನನ್ನ ತಲೆಗೆ ಯುದ್ಧ ನೋಡಲು ಅವಕಾಶ ನೀಡಿ ನನ್ನ ಬದುಕನ್ನು ಕೃತಾರ್ಥನನ್ನಾಗಿಸಿದ. ವ್ಯಾಸ ಮುನಿಗಳು ಯಾಕೋ ನನ್ನನ್ನು ತಮ್ಮ ಮಹಾಭಾರತ ಕತೆಯಲ್ಲಿ ಕಡೆಗಣಿಸಿಯೇ ಬಿಟ್ಟರು ಎಂಬ ನೋವು ನನ್ನಲ್ಲಿ ಸದಾ ಕಾಲ ಇರುತ್ತದೆ.
ನನ್ನನ್ನು ಈಗಲೂ ರಾಜಸ್ಥಾನದಲ್ಲಿ ಖಾತುಶ್ಯಾಮ ದೇವರಾಗಿಯೂ, ಗುಜರಾತದಲ್ಲಿ ಬಲಿಯ ದೇವ ಎಂದೂ ಜನರು ಪೂಜಿಸುತ್ತಾರೆ. ನೇಪಾಳ ದೇಶದಲ್ಲೂ ನನ್ನ ದೇವಾಲಯಗಳಿವೆ. ಇದು ನನ್ನ ಬಲಿದಾನಕ್ಕಾಗಿ ಶ್ರೀಕೃಷ್ಣ ಪರಮಾತ್ಮನು ನೀಡಿದ ವರವೆಂದೇ ನಾನು ತಿಳಿದುಕೊಂಡಿದ್ದೇನೆ.
ಪೂರಕ ಮಾಹಿತಿ: ಕೆಲವೊಂದು ಮಾಹಿತಿ ಪ್ರಕಾರ ಬಾರ್ಬರಿಕನಿಗೆ ಮೂರು ಬಾಣಗಳನ್ನು ವಾಲ್ಮೀಕಿಯು ನೀಡಿರುವರೆಂದೂ, ಕೆಲವು ಕಡೆ ಅಷ್ಟ ದೇವತೆ (ಅಷ್ಟ ದಿಕ್ಪಾಲಕರು) ನೀಡಿದರೆಂದೂ ಉಲ್ಲೇಖವಿದೆ.
ಚಿತ್ರ: ರಾಜಸ್ಥಾನದಲ್ಲಿ ಖಾತುಶ್ಯಾಮ ಹೆಸರಿನಲ್ಲಿ ಪೂಜಿತವಾಗುತ್ತಿರುವ ಬಾರ್ಬರಿಕ (ಕೃಪೆ: ಅಂತರ್ಜಾಲ)