ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೪) - ದುಶ್ಯಲಾ

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೪) - ದುಶ್ಯಲಾ

ನೂರು ಮಂದಿ ಕೌರವರು ಹಾಗೂ ಐದು ಮಂದಿ ಪಾಂಡವರ ಮುದ್ದಿನ ತಂಗಿಯೇ ದುಶ್ಯಲಾ. ಅವಳನ್ನು ದುಶಾಲ ಅಥವಾ ದುಶ್ಯಾಲಾ ಎಂದೂ ಕರೆಯುತ್ತಾರೆ. ಅಪ್ಪ ಹಸ್ತಿನಾಪುರದ ಮಹಾರಾಜ, ನೂರಾ ಐದು ಮಂದಿ ಅಣ್ಣಂದಿರು ಎಲ್ಲವೂ ಇದ್ದು ಕೊನೆಗೆ ಎಲ್ಲವನ್ನೂ ಕಳೆದು ಕೊಂಡು ದೌರ್ಭಾಗ್ಯವನ್ನು ಅಪ್ಪಿಕೊಂಡೇ ಬದುಕಿದ ಯುವ ರಾಣಿ ದುಶ್ಯಲಾ. ಎಲ್ಲಾ ಮಹಾಭಾರತ ಕತೆಗಳಲ್ಲಿ ಇವಳ ಬಗ್ಗೆ ಸ್ವಲ್ಪ ಸ್ವಲ್ಪ ಮಾಹಿತಿಗಳಿವೆ.

ಧೃತರಾಷ್ಟ್ರ ಮತ್ತು ಗಾಂಧಾರಿಯ ವಿವಾಹದ ನಂತರ ಬಹಳ ಸಮಯ ಅವರಿಗೆ ಮಕ್ಕಳಾಗಿರುವುದಿಲ್ಲ. ಧೃತರಾಷ್ಟನ ತಮ್ಮ ಪಾಂಡುವಿಗೆ ಮೊದಲ ಮಗು ಹುಟ್ಟಿದಾಗ ಗಾಂಧಾರಿ ಗರ್ಭ ಧರಿಸಿರುತ್ತಾಳೆ. ಆದರೆ ನವಮಾಸ ಕಳೆದರೂ ಗಾಂಧಾರಿ ಮಗುವಿಗೆ ಜನ್ಮ ನೀಡುವುದಿಲ್ಲ. ಇದರಿಂದ ಗಾಂಧಾರಿ ಸಿಟ್ಟಿನಿಂದ ತನ್ನ ಹೊಟ್ಟೆಯನ್ನು ಹಿಚುಕಿದಾಗ ಹೊಟ್ಟೆಯಲ್ಲಿದ್ದ ಮಾಂಸದ ಮುದ್ದೆಯೊಂದು ಹೊರ ಬರುತ್ತದೆ. ಮಗುವಿನ ಆಕಾರವಿಲ್ಲದ ಈ ಮಾಂಸದ ಮುದ್ದೆಯನ್ನು ಏನು ಮಾಡುವುದು ಎಂದು ಯೋಚಿಸುವಾಗ ಮಹಾಮುನಿ ವೇದವ್ಯಾಸರು ಅರಮನೆಗೆ ಬರುತ್ತಾರೆ. ಅವರಲ್ಲಿ ಈ ವಿಷಯ ಭಿನ್ನವಿಸಿದಾಗ ಅವರು ಆ ಮಾಂಸದ ಮುದ್ದೆಗೆ ಜೀವ ಕೊಡುತ್ತೇನೆ ಎನ್ನುತ್ತಾರೆ. ನೂರು ಆನೆಗಳ ಬಲವನ್ನು ತನ್ನ ತೋಳುಗಳಲ್ಲಿ ಹೊಂದಿದ್ದ ತನ್ನ ಪತಿ ದೃತರಾಷ್ಟ್ರನಂತೆ ನನಗೆ ನೂರು ಮಂದಿ ಮಕ್ಕಳು ಬೇಕು ಎನ್ನುತ್ತಾಳೆ ಗಾಂಧಾರಿ.

ಗಾಂಧಾರಿಯ ಮಾತಿನಂತೆ ವೇದವ್ಯಾಸರು ಆ ಮುದ್ದೆಯನ್ನು ನೂರು ತುಂಡುಗಳನ್ನಾಗಿಸುವಾಗ ಗಾಂಧಾರಿಗೆ ಓರ್ವ ಮಗಳೂ ಬೇಕೆಂಬ ಹಂಬಲ ಉಂಟಾಗುತ್ತದೆ. ಅದನ್ನು ವೇದವ್ಯಾಸರಲ್ಲಿ ಹೇಳಿದಾಗ ಅವರು ಮಾಂಸದ ಮುದ್ದೆಯನ್ನು ನೂರಾ ಒಂದು ತುಂಡುಗಳನ್ನಾಗಿ ಮಾಡಿ ತುಪ್ಪದ ಜಾಡಿಗಳಲ್ಲಿ ಹಾಕಿ ಮುಚ್ಚಿ ಇಡಲು ಹೇಳುತ್ತಾರೆ. ಆ ಜಾಡಿಯಿಂದ ಮೊದಲು ದುರ್ಯೋಧನ, ನಂತರ ದುಶ್ಯಾಸನ ಹೀಗೆ ನೂರು ಮಂದಿ ಗಂಡು ಮಕ್ಕಳು ಜನಿಸಿ ಕೊನೆಗೆ ಒಬ್ಬ ಹೆಣ್ಣು ಮಗು ಹುಟ್ಟುತ್ತಾಳೆ. ಅವಳೇ ದುಶ್ಯಲಾ.

ದುಶ್ಯಲಾಳ ಬಾಲ್ಯ ಅರಮನೆಯ ಸಕಲ ಸುಖ ಸಂಪತ್ತಿನಲ್ಲಿ ಕಳೆದುಹೋಗುತ್ತದೆ. ಅವಳ ಎಲ್ಲಾ ಬಯಕೆಗಳನ್ನು ತೀರಿಸಲು ಆಳು ಕಾಳುಗಳು ಅವಳ ಬಳಿ ಇದ್ದರು. ನೂರು ಮಂದಿ ಅಣ್ಣಂದಿರು ಇದ್ದರು. ಅವಳಿಗೆ ಮದುವೆಗೆ ಯುಕ್ತ ವಯಸ್ಸಾದಾಗ ಸಿಂಧೂ ದೇಶದ ರಾಜ ಜಯದ್ರಥನೊಡನೆ ವಿವಾಹವಾಗುತ್ತದೆ. ಅಲ್ಲಿಂದ ದುಶ್ಯಲಾಳ ಕರುಣಾಜನಕ ಕತೆ ಪ್ರಾರಂಭವಾಗುತ್ತದೆ. ಅವಳನ್ನು ವರಿಸಿದ ಜಯದ್ರಥ ಅತ್ಯಂತ ಕಾಮುಕ ವ್ಯಕ್ತಿ ಆಗಿದ್ದ. ಹಲವಾರು ಹೆಣ್ಣು ಮಕ್ಕಳನ್ನು ಕೆಡಿಸಿದ್ದ, ಹಲವಾರು ಮಂದಿಯಿಂದ ಛೀಮಾರಿಯನ್ನೂ ಹಾಕಿಸಿಕೊಂಡಿದ್ದ. ಈ ವಿಷಯಗಳನ್ನು ತನ್ನ ಪತಿ ಜಯದ್ರಥನಲ್ಲಿ ಪ್ರಸ್ತಾಪಿಸಿದಾಗ ಅವನು ಅವಳನ್ನು ಹೊಡೆಯುವುದಕ್ಕೂ ಹೇಸುತ್ತಿರಲಿಲ್ಲ. ಇಂತಹ ಓರ್ವ ವ್ಯಕ್ತಿ ಜೊತೆ ತಾನು ಜೀವನ ಸಾಗಿಸಬೇಕಲ್ಲ ಎಂದು ದುಶ್ಯಲಾಳಿಗೆ ಅತ್ಯಂತ ಬೇಸರವಾಗುತ್ತಿತ್ತು. ಆದರೆ ದುರ್ಯೋಧನನಿಗೆ ತನ್ನ ಭಾವ ಅತ್ಯಂತ ಪ್ರೀತಿಯ ವ್ಯಕ್ತಿ ಆಗಿದ್ದ ಏಕೆಂದರೆ ಅವನೂ ಪಾಂಡವರನ್ನು ದ್ವೇಷಿಸುತ್ತಿದ್ದ. ಅದಕ್ಕೆ ಕಾರಣವೆಂದರೆ ಒಮ್ಮೆ ಜಯದ್ರಥನು ಪಾಂಡವರ ಪತ್ನಿ ದ್ರೌಪದಿಯನ್ನು ಕೆಡಿಸಲು ಪ್ರಯತ್ನ ಪಟ್ಟು ಪಾಂಡವರಿಂದ ಬಂದಿಯಾಗಿ ಕೊನೆಗೊಮ್ಮೆ ತಮ್ಮ ಸಹೋದರಿಯ ಪತಿ ಎಂಬ ಒಂದೇ ಕಾರಣಕ್ಕೆ ಜೀವದಾನ ಪಡೆದುಕೊಂಡಿದ್ದ. ಆದರೆ ಅಂದು ಭೀಮ ಜಯದ್ರಥನ ತಲೆಯ ಕೂದಲುಗಳನ್ನು ಬೋಳಿಸಿ ಅವಮಾನ ಮಾಡಿದ್ದ. ಈ ಅವಮಾನಕ್ಕೆ ಪ್ರತೀಕಾರ ತೀರಿಸಲು ಜಯದ್ರಥನು ಶಿವನ ತಪಸ್ಸು ಮಾಡಿ ಒಂದು ದಿನ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರನ್ನು ತಡೆಯ ಬಲ್ಲ ವರ ಸಂಪಾದಿಸಿದ್ದ.

ದುಶ್ಯಲಾ ಸುಂದರಿಯೂ, ಯುದ್ಧ ಕಲೆಯ ನಿಪುಣೆಯೂ ಆಗಿದ್ದಳು. ಪಿತಾಮಹ ಭೀಷ್ಮಳಿಂದ ಅವಳು ಸಮರ ಕಲೆಯನ್ನು ಅಭ್ಯಸಿಸಿದ್ದಳು ಎಂದು ಹೇಳುತ್ತಾರೆ. ಅವಳಿಗೆ ಸುರಥ ಎಂಬ ಪುತ್ರನೂ ಇದ್ದ. ಯುದ್ಧದಲ್ಲಿ ತನ್ನ ಗಂಡ ಜಯದ್ರಥ ಹಾಗೂ ಪುತ್ರ ಸುರಥ ಅರ್ಜುನನಿಂದ ಹತರಾದರೆಂದು ತಿಳಿದಾಗ ದುಶ್ಯಲಾ ತುಂಬಾ ವ್ಯಾಕುಲಗೊಳ್ಳುತ್ತಾಳೆ. ಮುಂದೆ ಅವಕಾಶ ಸಿಕ್ಕಾಗ ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳುವ ಕಾತುರ ಅವಳಿಗಿರುತ್ತೆ. ಮಹಾಭಾರತ ಯುದ್ಧ ಮುಗಿದ ಬಳಿಕ ಯುದಿಷ್ಟಿರ ಹಸ್ತಿನಾಪುರದ ಮಹಾರಾಜನಾಗಿ ಪಟ್ಟಾಭಿಷೇಕವಾದ ನಂತರ ದೃತರಾಷ್ಟ್ರ ಹಾಗೂ ಗಾಂಧಾರಿ ವಾನಪ್ರಸ್ತಕ್ಕಾಗಿ ಕಾಡಿಗೆ ಹೋಗುತ್ತಾರೆ. ಇದರಿಂದ ದುಶ್ಯಲಾ ಏಕಾಂಗಿಯಾಗಿ ಬಿಡುತ್ತಾಳೆ. ಅವಳು ತನ್ನ ಮಗನಾದ ಸುರಥನ ಮಗನ ಜೊತೆ ಸಿಂಧೂ ದೇಶಕ್ಕೆ ಹೋಗುತ್ತಾಳೆ. ಅಲ್ಲಿ ಅವಳ ಮೊಮ್ಮಗ ರಾಜನಾಗಿ ರಾಜ್ಯಭಾರ ಮಾಡುತ್ತಾನೆ.

ಮುಂದಿನ ದಿನಗಳಲ್ಲಿ ಯುದಿಷ್ಟಿರ ರಾಜಸೂಯ ಯಜ್ಞ ಮಾಡಿದಾಗ ಸಿಂಧೂ ದೇಶದಲ್ಲಿ ಯಾಗದ ಕುದುರೆಯನ್ನು ದುಶ್ಯಲಾ ತನ್ನ ಮೊಮ್ಮಗನ ಜೊತೆಯಲ್ಲಿ ತಡೆದು ತಮ್ಮ ಜೊತೆ ಯುದ್ಧಕ್ಕೆ ಬರುವಂತೆ ಅರ್ಜುನನಿಗೆ ಹೇಳುತ್ತಾಳೆ. ಆದರೆ ಅರ್ಜುನ ನೀನು ನನ್ನ ಪ್ರೀತಿಯ ತಂಗಿ, ನಿಮ್ಮ ಜೊತೆ ನಾನು ಭಾತೃತ್ವದ ಆಶೆಯಿಂದ ಮಾತ್ರ ಬಂದೆ, ಯುದ್ಧಕ್ಕಲ್ಲ ಎನ್ನುತ್ತಾನೆ. ತನ್ನ ಗಂಡ ಜಯದ್ರಥನನ್ನು, ನನ್ನ ಮಗನನ್ನು ಕೊಂದ ನಿನ್ನನ್ನು ಸುಮ್ಮನೇ ಬಿಡಲಾಗದು ಎಂದ ದುಶ್ಯಲಾಳಿಗೆ ಅರ್ಜುನನು, ಜಯದ್ರಥನು ಹೇಗೆ ಮೋಸದಿಂದ ಅಭಿಮನ್ಯುವನ್ನು ಕೊಲ್ಲಲು ಕೌರವರಿಗೆ ಸಹಾಯ ಮಾಡಿದ ಎನ್ನುವುದರ ನೆನಪು ಮಾಡಿಕೊಡುತ್ತಾನೆ. ಅಧರ್ಮದ ಕಡೆಯಿಂದ ಯಾರು ಯುದ್ಧ ಮಾಡುತ್ತಾರೋ ಅವರನ್ನು ನಾನು ಸಂಹಾರ ಮಾಡಲೇ ಬೇಕಾಗುತ್ತದೆ ಎಂದು ಅರ್ಜುನ ನುಡಿಯುತ್ತಾನೆ. ತನ್ನ ಗಂಡ ಮಾಡಿದ ಪಾಪದ ಕಾರ್ಯಗಳಿಗೆ ತಕ್ಕ ಶಿಕ್ಷೆಯಾಯಿತೆಂದು ತಿಳಿದುಕೊಂಡ ದುಶ್ಯಲಾ ಅರ್ಜುನನಲ್ಲಿ ಕ್ಷಮೆಯಾಚಿಸುತ್ತಾಳೆ ಮತ್ತು ತನ್ನನ್ನು ಅವನ ಪ್ರೀತಿಯ ತಂಗಿಯಾಗಿ ಸ್ವೀಕರಿಸಬೇಕೆಂದು ಕೋರುತ್ತಾಳೆ. ಅರ್ಜುನ ಮಾತ್ರವಲ್ಲ ಎಲ್ಲಾ ಪಾಂಡವರು ದುಶ್ಯಲಾಳನ್ನು ತಮ್ಮ ಸಹೋದರಿ ಎಂದು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.

ಮಹಾರಾಜನ ಮಗಳಾಗಿದ್ದೂ ದುರ್ವಿಧಿಯ ಕಾರಣದಿಂದ ದುಶ್ಯಲಾ ತನ್ನ ಬದುಕಿನಲ್ಲಿ ಗಂಡ, ಮಗನನ್ನು ಕಳೆದುಕೊಳ್ಳುತ್ತಾಳೆ. ನಮ್ಮ ಯಕ್ಷಗಾನದಂತೇ ಇರುವ ಕೇರಳದ ಕಥಕ್ಕಳಿಯ ಒಂದು ಪ್ರಸಂಗವಾದ ‘ಅರ್ಜುನ ವಿಷದ ವೃತ್ತಂ’  ನಲ್ಲಿ ದುಶ್ಯಲಾ ಪ್ರಮುಖ ಪಾತ್ರಧಾರಿಯಾಗಿದ್ದಾಳೆ. ದುಶ್ಯಲಾಳಿಗಾಗಿ ಹಲವಾರು ದೇವಾಲಯಗಳನ್ನೂ ನಿರ್ಮಿಸಲಾಗಿದೆ. ಅವುಗಳಲ್ಲಿ ಒಂದು ಕೇರಳ ರಾಜ್ಯದಲ್ಲಿರುವ ಶ್ರೀ ಕುನ್ನೀರದಾತು ಮಲನಾಡ ದುಶ್ಯಲಾ ದೇವಾಲಯವೂ ಒಂದು.

ಚಿತ್ರ: ಅಂತರ್ಜಾಲ ಕೃಪೆ