ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೫) - ಉಲೂಕ
ಮಹಾಭಾರತದಲ್ಲಿ ಉಲೂಕ ಅಥವಾ ಉಲ್ಲೂಕ ಎಂಬ ವ್ಯಕ್ತಿಯ ಬಗ್ಗೆ ಮಾಹಿತಿ ಇರುವುದು ಕಮ್ಮಿ. ಆದರೆ ತಿಳಿದಿರುವ, ನಾನು ಸಂಗ್ರಹಿಸಿರುವ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇನೆ. ದುರ್ಯೋಧನನ ಸೋದರ ಮಾವ ಶಕುನಿಯ ಬಗ್ಗೆ ಯಾರಿಗೆ ತಿಳಿದಿಲ್ಲ? ಒಂದು ರೀತಿಯಲ್ಲಿ ಕುರುಕ್ಷೇತ್ರ ಯುದ್ಧವಾಗಲು ಶಕುನಿ ಮಾಮಾ ಕಾರಣ. ಸದಾ ಕಾಲ ಪಾಂಡವರ ಬಗ್ಗೆ ಇಲ್ಲ ಸಲ್ಲದ್ದನ್ನು ದುರ್ಯೋಧನನಿಗೆ ಹೇಳಿ ಅವನಿಗೆ ನಿರಂತರ ಅವರ ಮೇಲೆ ದ್ವೇಷ ಬೆಳೆಯಲು ಕಾರಣನಾದವನೇ ಶಕುನಿ. ನಾನಿಂದು ಪ್ರಸ್ತಾಪಿಸಿದ ಉಲೂಕನು ಇದೇ ಶಕುನಿಯ ಹಿರಿಯ ಮಗ.
ಗಾಂಧಾರ ದೇಶದ ರಾಜನಾದ ಸುಬಲನ ಮಗನಾದ ಶಕುನಿಯು ತಂದೆಯ ಮರಣಾ ನಂತರವೂ ಹಸ್ತಿನಾಪುರವನ್ನು ಬಿಟ್ಟುಹೋಗಿರುವುದಿಲ್ಲ. ಶಕುನಿಯ ಧರ್ಮಪತ್ನಿ ಆರ್ಶಿ. ಇವರಿಗೆ ಮೂರು ಮಂದಿ ಮಕ್ಕಳು. ಉಲೂಕ ದೊಡ್ಡ ಮಗ. ವೃಕಾಸುರ ಹಾಗೂ ವ್ರಿಪ್ರಚಿಟ್ಟಿ ಉಳಿದ ಮಕ್ಕಳು. ದೊಡ್ಡ ಮಗ ಉಲೂಕನ ಹೊರತು ಪಡಿಸಿದರೆ ಶಕುನಿಯ ಉಳಿದಿಬ್ಬರು ಪುತ್ರರ ಬಗ್ಗೆ ಮಹಾಭಾರತದ ಕತೆಗಳಲ್ಲಿ ಉಲ್ಲೇಖಗಳು ಕಂಡು ಬರುವುದಿಲ್ಲ. ಶಕುನಿಯೂ ಗಾಂಧಾರ ದೇಶದ ರಾಜನಾದ ಸುಬಲನ ನೂರನೇ ಸಂತಾನ ಎಂದು ಹೇಳುತ್ತಾರೆ. ಗಾಂಧಾರಿ ಇವನ ಸಹೋದರಿ.
ತನ್ನ ತಂದೆ ಸದಾ ಕಾಲ ಹಸ್ತಿನಾಪುರದಲ್ಲೇ ಇರುವುದನ್ನು ಕಂಡ ಉಲೂಕ ಅವನ ಬಳಿ ಈ ವಿಚಾರ ಪ್ರಸ್ತಾಪ ಮಾಡುತ್ತಾನೆ. ನಮಗೆ ಕೌರವರೂ, ಪಾಂಡವರೂ ಇಬ್ಬರೂ ಬೇಡ ನೀವು ಗಾಂಧಾರ ದೇಶಕ್ಕೆ ಬನ್ನಿ. ನಾವು ನೆಮ್ಮದಿಯಾಗಿ ರಾಜ್ಯಭಾರ ಮಾಡುವ ಎಂದು ಹೇಳುತ್ತಾನೆ. ಆಗ ಶಕುನಿಯು ತನ್ನ ಮನದಾಳದ ನೋವನ್ನು ತನ್ನ ಮಗನಲ್ಲಿ ಹೇಳಿಕೊಳ್ಳುತ್ತಾನೆ. ನನಗೆ ನನ್ನ ಸಹೋದರಿ ಗಾಂಧಾರಿಯನ್ನು ದೃಷ್ಟಿಹೀನ ದೃತರಾಷ್ಟ್ರನಿಗೆ ಕೊಡಲು ಮನಸ್ಸಿರಲಿಲ್ಲ,. ಆದರೆ ಭೀಷ್ಮ ಬಂದು ಧೃತರಾಷ್ಟ್ರನ ಜೊತೆ ಗಾಂಧಾರಿಯ ವಿವಾಹ ಪ್ರಸ್ತಾಪಿಸಿದಾಗ, ನನ್ನ ತಂದೆಗೆ ಭೀಷ್ಮರ ಮಾತುಗಳನ್ನು ತಿರಸ್ಕರಿಸಲು ಸಾಧ್ಯವಾಗಲಿಲ್ಲ. ತಿರಸ್ಕಾರ ಮಾಡಿದ್ದರೆ ಹಸ್ತಿನಾಪುರದ ವಿಶಾಲ ಸೈನ್ಯದ ಜೊತೆಗೆ, ಅದರಲ್ಲೂ ಭೀಷ್ಮರ ಜೊತೆಗೆ ಯುದ್ಧ ಮಾಡುವುದು ಕನಸಿನ ಮಾತೇ ಆಗಿತ್ತು, ಆ ಕಾರಣಗಳಿಂದ ನನ್ನ ತಂದೆಯು ಈ ವಿವಾಹ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರು. ನನ್ನ ತಂಗಿಯೂ ನನ್ನ ಗಂಡನಿಗೆ ಇಲ್ಲದ ದೃಷ್ಟಿ ಭಾಗ್ಯ ನನಗೂ ಬೇಡವೆಂದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಳು. ನನ್ನ ಪ್ರೀತಿಯ ತಂಗಿಯ ಈ ಬಾಳು ನನಗೆ ತುಂಬಾ ನೋವು ತಂದಿತು ಉಲೂಕ, ಅದಕ್ಕಾಗಿಯೇ ನಾನು ಭೀಷ್ಮನ ಮೇಲೆ ನೇರವಾಗಿ ಸೇಡು ತೀರಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೆಂದು ಕೌರವರ ಹಾಗೂ ಪಾಂಡವರ ನಡುವೆ ಯುದ್ಧವಾಗುವಂತೆ ನೋಡಿಕೊಂಡೆ ಎನ್ನುತ್ತಾನೆ ಶಕುನಿ. ಇದನ್ನು ಕೇಳಿದ ಉಲೂಕನಿಗೆ ಆಶ್ಚರ್ಯವಾಗುತ್ತದೆ.
ಯುದ್ಧಕ್ಕೆ ಸ್ವಲ್ಪವೇ ದಿನಗಳ ಮೊದಲು ಪಾಂಡವರು ಶ್ರೀಕೃಷ್ಣನನ್ನು ತಮ್ಮ ರಾಯಭಾರಿಯಾಗಿ ಹಸ್ತಿನಾಪುರಕ್ಕೆ ಕಳುಹಿಸುತ್ತಾರೆ. ಯುದ್ಧದ ಹಾನಿಗಳ ಬಗ್ಗೆ ಶ್ರೀಕೃಷ್ಣ ಎಷ್ಟು ತಿಳಿಹೇಳಿದರೂ ದುರ್ಯೋಧನ ಶಾಂತಿ ಒಪ್ಪಂದಕ್ಕೆ ಒಪ್ಪುವುದಿಲ್ಲ. ಇದರಿಂದ ಯುದ್ಧ ಶತಃಸಿದ್ಧ ಎಂದು ನಿರ್ಧಾರವಾದರೂ ದುರ್ಯೋಧನ ತಮ್ಮ ಪರವಾಗಿಯೂ ತಮ್ಮ ನಿಲುವುಗಳನ್ನು ಪಾಂಡವರಿಗೆ ತಿಳಿಸಲು ರಾಯಭಾರಿಯನ್ನು ಕಳಿಸಬೇಕು ಎಂದು ಶಕುನಿಯಲ್ಲಿ ಕೇಳಿಕೊಳ್ಳುತ್ತಾನೆ. ಅದಕ್ಕೆ ಶಕುನಿಯು ತನ್ನ ಮಗನಾದ ಉಲೂಕನನ್ನೇ ಕಳಿಸುವ ಎನ್ನುತ್ತಾನೆ. ಏಕೆಂದರೆ ದುರ್ಯೋಧನ ಹೇಳಿ ಕಳಿಸುವ ಸಂದೇಶವನ್ನು ಬೇರೆ ಯಾರಿಗೂ ಪಾಂಡವರ ಬಳಿ ಹೇಳಲು ಸಾಧ್ಯವಾಗಲಾರದು ಎಂದು ಶಕುನಿಗೆ ಚೆನ್ನಾಗಿ ತಿಳಿದಿರುತ್ತದೆ.
ಉಲೂಕನು ದುರ್ಯೋಧನನ ಕಡೆಯಿಂದ ರಾಯಭಾರಿಯಾಗಿ ಪಾಂಡವರ ಬಳಿ ತೆರಳುತ್ತಾನೆ. ಸಂದೇಶವನ್ನು ತಿಳಿಸುವ ಮೊದಲೇ ಯುದಿಷ್ಟಿರನಲ್ಲಿ ತಾನು ಕೇವಲ ರಾಯಭಾರಿಯ ಕಾರ್ಯ ಮಾಡುತ್ತಿದ್ದೇನೆ, ನನ್ನ ನುಡಿಗಳು ನನ್ನವಲ್ಲ. ದುರ್ಯೋಧನನದ್ದು. ಆದುದರಿಂದ ನಿಮಗೆ ಇದರಿಂದ ಕೋಪ ಬಂದರೆ ನನ್ನನ್ನು ಕ್ಷಮಿಸಬೇಕು ಎಂದು ದಯೆಯ ಯಾಚನೆ ಮಾಡುತ್ತಾನೆ. ಉಲೂಕನ ಮಾತಿಗೆ ಯುದಿಷ್ಟಿರ ಒಪ್ಪುತ್ತಾನೆ. ದುರ್ಯೋಧನನ ಸಂದೇಶಗಳಲ್ಲಿ ಅಧರ್ಮ ಹಾಗೂ ಕುಟಿಲತೆಯ ವ್ಯಂಗ್ಯಗಳ ಹೊರತಾಗಿ ಏನೂ ಇರುವುದಿಲ್ಲ.
ಯುದ್ಧದ ಸಮಯದಲ್ಲಿ ಉಲೂಕನು ಕೌರವರ ಪರವಾಗಿ ಯುದ್ಧ ಮಾಡುತ್ತಾನೆ. ಧೃತರಾಷ್ಟ್ರನ ಮಗನಾದರೂ ಪಾಂಡವರ ಕಡೆಯಿಂದ ಯುದ್ಧ ಮಾಡುತ್ತಿದ್ದ ಯುಯುತ್ಸುವನ್ನು ಎದುರಿಸುತ್ತಾನೆ. ಉಲೂಕ ಯುಯುತ್ಸುವನ್ನು ಸೋಲಿಸಿದರೂ ಅವನ ಪ್ರಾಣ ತೆಗೆಯುವುದಿಲ್ಲ. ಯುದ್ಧದ ಕೊನೆಯ ಅಂದರೆ ಹದಿನೆಂಟನೇ ದಿನ ಸಹದೇವ ತನ್ನ ತಂದೆ ಶಕುನಿಯನ್ನು ಸಂಹರಿಸಲು ಬಂದಾಗ ಉಲೂಕನು ತಡೆಯುತ್ತಾನೆ. ಆದರೆ ಸಹದೇವನು ಉಲೂಕನನ್ನು ಹತ್ಯೆ ಮಾಡುತ್ತಾನೆ. ನಂತರ ಶಕುನಿಯನ್ನೂ ಕೊಲ್ಲುತ್ತಾನೆ. ಹೀಗೆ ಶಕುನಿಯ ಪುತ್ರ ಉಲೂಕನ ಅಂತ್ಯವಾಗುತ್ತೆ.