ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ-೬) -ಏಕಲವ್ಯ

ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ-೬) -ಏಕಲವ್ಯ

ಮಹಾಭಾರತದ ಕಥೆಯಲ್ಲಿ ಪಾಂಡು ಪುತ್ರ ಅರ್ಜುನನಿಗೆ ಸರಿಸಾಟಿಯಾಗಿದ್ದ ವ್ಯಕ್ತಿಗಳಲ್ಲಿ ಓರ್ವ ಕರ್ಣ. ಈ ಸಂಗತಿ ಎಲ್ಲರಿಗೂ ಗೊತ್ತು. ಮತ್ತೊರ್ವ ಅತಿರಥನೆಂದರೆ ಏಕಲವ್ಯ. ಈಗಿನಂತೆಯೇ ಅಂದಿನ ಕಾಲದಲ್ಲೂ ಬೇರೂರಿದ್ದ ಜಾತಿಯ ಅಸಮಾನತೆಯು ಓರ್ವ ಅತ್ಯಂತ ಪರಾಕ್ರಮಿ ಯೋಧನನ್ನು ಬಲಹೀನನನ್ನಾಗಿಸಿತು. ಏಕಲವ್ಯನ ಗುರು ಭಕ್ತಿಯ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೂ ಅವನ ಬಗ್ಗೆ, ಅವನ ಅಂತ್ಯದ ಬಗ್ಗೆ ಸ್ವಲ್ಪ ನಾನು ಸಂಗ್ರಹಿಸಿದ ಸ್ವಲ್ಪ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುವೆ.

ಏಕಲವ್ಯನು ನಿಶಾಧ (ಬೇಡ) ಎಂಬ ತೀರಾ ಹಿಂದುಳಿದ ಕಾಡು ಜಾತಿಗೆ ಸೇರಿದ ಹುಡುಗ. ಅವನ ತಂದೆ ಹಿರಣಧನು ಅಥವಾ ಹಿರಣ್ಯಧನಸ್ಸು. ತಾಯಿ ಸುಲೇಖ. ಹಿರಣಧನುವು ಮಗಧ ದೇಶದ ರಾಜನಾದ ಜರಾಸಂಧನ ಅಶ್ವದಳದ ನಾಯಕನಾಗಿದ್ದ. ಅವನಿಗೆ ತನ್ನ ಮಗ ಬಿಲ್ಲುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಆಶೆ ಇತ್ತು. ಅದಕ್ಕಾಗಿ ಏಕಲವ್ಯನಿಗೆ ಬಾಲ್ಯದಿಂದಲೇ ಅವನಿಗೆ ತಿಳಿದಷ್ಟು ಬಿಲ್ಗಾರಿಕೆಯ ಕಲೆಯನ್ನು ಹೇಳಿಕೊಡುತ್ತಾನೆ. ಏಕಲವ್ಯನೂ ಅತ್ಯಂತ ಶ್ರದ್ಧೆಯಿಂದ ತನ್ನ ತಂದೆಯ ಬಳಿ ವಿದ್ಯೆಯನ್ನು ಕಲಿಯುತ್ತಾನೆ.ಆದರೆ ತನ್ನ ತಂದೆಯ ಅಕಾಲ ಮೃತ್ಯುವಿನಿಂದ ಅವನಿಗೆ ವಿದ್ಯೆ ಹೇಳಿ ಕೊಡುವವರು ಯಾರೂ ಇರುವುದಿಲ್ಲ. 

ಅದೇ ಸಮಯ ಪರಶುರಾಮನ ಶಿಷ್ಯನಾದ ದ್ರೋಣಾಚಾರ್ಯರು ಹಸ್ತಿನಾಪುರದ ಯುವರಾಜರಾದ ಕೌರವರಿಗೆ ಮತ್ತು ಪಾಂಡವರಿಗೆ ಶಸ್ತ್ರವಿದ್ಯೆಯನ್ನು ಕಲಿಸಲು ಗುರುವಾಗಿ ನೇಮಕವಾಗುತ್ತಾರೆ. ಈ ವಿಚಾರ ತಿಳಿದ ಏಕಲವ್ಯನು ದ್ರೋಣಾಚಾರ್ಯರಿಂದ ಬಿಲ್ಗಾರಿಕೆಯನ್ನು ಕಲಿಯುವ ಉದ್ದೇಶದಿಂದ ಅವರನ್ನು ಹೋಗಿ ಭೇಟಿಯಾಗಿ ತನ್ನ ಮನದ ಆಸೆಯನ್ನು ಹೇಳುತ್ತಾನೆ. ಏಕಲವ್ಯನ ಇಚ್ಚೆಯನ್ನು, ಅವನ ಪ್ರತಿಭೆಯನ್ನು ಕೇಳಿದ, ದ್ರೋಣಾಚಾರ್ಯರಿಗೆ ಅವನನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಮನಸ್ಸಾಗುತ್ತೆ. ಆದರೆ ಅವನ ಜಾತಿ ಅವರಿಗೆ ಅಡ್ಡ ಬರುತ್ತದೆ. ಕೇವಲ ಕ್ಷತ್ರಿಯರಿಗೆ ಮಾತ್ರ ಶಸ್ತ್ರವಿದ್ಯೆಯನ್ನು ಹೇಳಿಕೊಡುತ್ತೇನೆ ಎಂದು ಅವರು ಪಣತೊಟ್ಟಿದ್ದರು. ಆದುದರಿಂದ ಏಕಲವ್ಯನು ನಿರಾಶೆಯಿಂದ ಹಿಂದಿರುಗುತ್ತಾನೆ. ಆದರೆ ಅವನು ದ್ರೋಣರನ್ನು ಮನಸ್ಸಿನಲ್ಲಿಯೇ ಗುರುವಾಗಿ ಸ್ವೀಕರಿಸುತ್ತಾನೆ. ದ್ರೋಣಾಚಾರ್ಯರು ತಮ್ಮ ಶಿಷ್ಯರಿಗೆ ವಿದ್ಯೆ ಕಲಿಸುವಾಗ ಮರೆಯಲ್ಲಿ ನಿಂತು ಗಮನಿಸಿ, ಕಾಡಿಗೆ ಹೋಗಿ ಅಭ್ಯಾಸ ಮಾಡುತ್ತಾನೆ. 

ಒಮ್ಮೆ ಗುರು ದ್ರೋಣರು ತಮ್ಮ ಶಿಷ್ಯರನ್ನು ಕರೆದುಕೊಂಡು ಕಾಡಿಗೆ ಹೋಗುತ್ತಾರೆ. ಅವರ ಜೊತೆ ಒಂದು ನಾಯಿಯೂ ಇರುತ್ತದೆ. ಅದು ಏನನ್ನೋ ನೋಡಿ ಬೊಗಳಲು ಪ್ರಾರಂಭಿಸುತ್ತದೆ. ಆಗ ಅದರ ಬಾಯಿಗೆ ಅಸಂಖ್ಯಾತ ಬಾಣಗಳು ಬಂದು ಅದರ ಬಾಯಿ ಮುಚ್ಚಿ ಹೋಗುತ್ತದೆ. ಆದರೆ ನಾಯಿಯ ಬಾಯಿಗೆ ಯಾವುದೇ ಗಾಯವಾಗಿರುವುದಿಲ್ಲ. ಇಂತಹ ಅಪ್ರತಿಮ ಬಿಲ್ವಿದ್ಯೆಯನ್ನು ಪ್ರಯೋಗಿಸಿದವರು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಬಾಣಗಳು ಬಂದ ದಿಕ್ಕಿಗೆ ಎಲ್ಲರೂ ಹೋದಾಗ ಅಲ್ಲಿ ದ್ರೋಣರ ಮಣ್ಣಿನ ವಿಗ್ರಹ ಮತ್ತು ಅದರ ಎದುರು ಶ್ರದ್ಧೆಯಿಂದ ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡುವ ಏಕಲವ್ಯನನ್ನು ನೋಡುತ್ತಾರೆ. 

ದ್ರೋಣರು ಅರ್ಜುನನಿಗೆ ಅವನನ್ನು ವಿಶ್ವದ ಶ್ರೇಷ್ಟ ಬಿಲ್ಲು ವಿದ್ಯೆಯ ಪ್ರವೀಣನನ್ನಾಗಿ ಮಾಡುತ್ತೇನೆಂದು ಮಾತು ಕೊಟ್ಟಿರುತ್ತಾರೆ. ಏಕಲವ್ಯನು ದ್ರೋಣರನ್ನೇ ತನ್ನ ಗುರು ಎಂದು ಹೇಳಿದಾಗ ದ್ರೋಣರಿಗೆ ಇರುಸು ಮುರುಸಾಗುತ್ತೆ. ಅರ್ಜುನನಲ್ಲಿ ಮತ್ಸರದ ಭಾವನೆಯುಂಟಾಗುತ್ತೆ. ಅವನು ದ್ರೋಣರತ್ತ ನೋಡಲು ಅವರು ಏಕಲವ್ಯನ ಬಳಿ ‘ನಿನಗೆ ನಾನೇ ಗುರುವಾಗಿದ್ದಲ್ಲಿ ನನಗೆ ನೀನು ಗುರು ದಕ್ಷಿಣೆ ನೀಡಿಲ್ಲವಲ್ಲಾ? ' ಎಂದು ಕೇಳುತ್ತಾರೆ. ಅದಕ್ಕೆ ಏಕಲವ್ಯ ‘ನೀವು ಏನು ಬೇಕಾದರೂ ಕೇಳಿ ಗುರುದೇವಾ, ನಾನು ಕೊಡಲು ತಯಾರಿದ್ದೇನೆ' ಎಂದು ಹೇಳಿದಾಗ, ದ್ರೋಣಾಚಾರ್ಯರು ಬಿಲ್ಗಾರಿಕೆಯಲ್ಲಿ ಅವಶ್ಯಕವಾಗಿ ಬೇಕಿದ್ದ ಅವನ ಬಲಗೈನ ಹೆಬ್ಬೆರಳನ್ನು ಗುರು ದಕ್ಷಿಣೆಯಾಗಿ ಕೇಳುತ್ತಾರೆ. ಗುರುವಿನ ಮಾತಿಗೆ ಒಂದಿಂಚೂ ಅಳುಕದ ಏಕಲವ್ಯನು ಹರಿತವಾದ ಕತ್ತಿಯಿಂದ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿ ದ್ರೋಣರ ಪಾದಗಳಿಗೆ ಅರ್ಪಿಸುತ್ತಾನೆ. ಇದರಿಂದ ಅತ್ಯಂತ ದೊಡ್ಡ ಮಾತಿಗೆ ತಪ್ಪದ ಗುರುಭಕ್ತ ಶಿಷ್ಯ ಎಂಬ ಹಿರಿಮೆಗೆ ಪಾತ್ರನಾಗುತ್ತಾನೆ. ಅರ್ಜುನನಿಗೆ ಈ ಘಟನೆಯಿಂದ ತುಂಬಾ ನಾಚಿಗೆ ಆಗುತ್ತದೆ.

ಭವಿಷ್ಯದಲ್ಲಿ ತನ್ನ ನಾಲ್ಕು ಬೆರಳುಗಳಿಂದಲೇ ಬಿಲ್ಗಾರಿಕೆಯ ಅಭ್ಯಾಸ ಮಾಡಿ, ಜರಾಸಂಧನ ಅಂಗರಕ್ಷಕರ ಪಡೆಯಲ್ಲಿ ಕೆಲಸಕ್ಕೆ ಏಕಲವ್ಯನು ಸೇರಿಕೊಳ್ಳುತ್ತಾನೆ. ಶ್ರೀಕೃಷ್ಣನ ಮೇಲೆ ಸದಾ ಕಾಲ ದ್ವೇಷ ಕಾರುತ್ತಿದ್ದ ಜರಾಸಂಧನು ಪದೇ ಪದೇ ಮಥುರಾ ಮೇಲೆ ಆಕ್ರಮಣ ಮಾಡುತ್ತಿರುತ್ತಾನೆ. ಶಿಶುಪಾಲನನ್ನು ಮದುವೆಯಾಗಬೇಕಿದ್ದ ರುಕ್ಮಿಣಿಯನ್ನು ಕೃಷ್ಣ ಅಪಹರಿಸುವಾಗ ಜರಾಸಂಧ, ರುಕ್ಮಿ (ರುಕ್ಮಿಣಿಯ ಅಣ್ಣ) ಅವನನ್ನು ತಡೆಯಲು ಪ್ರಯತ್ನಿಸುತ್ತಾರೆ. ಆಗ ಏಕಲವ್ಯನೂ ಕೃಷ್ಣನ ವಿರುದ್ಧ ಕಾದಾಡುತ್ತಾನೆ. ಜರಾಸಂಧನನ್ನು ಕೃಷ್ಣನು ಭೀಮನ ಸಹಾಯದಿಂದ ವಧಿಸಿದಾಗ ಏಕಲವ್ಯನು ತನ್ನ ರಾಜನ ಮೃತ್ಯುವಿನ ಪ್ರತೀಕಾರವನ್ನು ಪಡೆದುಕೊಳ್ಳಲು ದ್ವಾರಕೆ ಮೇಲೆ ಆಕ್ರಮಣ ಮಾಡುತ್ತಾನೆ. ಹಲವಾರು ಮಂದಿ ಯಾದವರನ್ನು ಕೊಲ್ಲುತ್ತಾನೆ. ಇದನ್ನು ಗಮನಿಸಿದ ಶ್ರೀಕೃಷ್ಣ ಅವನನ್ನು ಹತ್ಯೆ ಮಾಡುತ್ತಾನೆ. ಏನೇ ಆದರೂ ಏಕಲವ್ಯನು ಅಪ್ರತಿಮ ಯೋಧ ಹಾಗೂ ಗುರುಭಕ್ತ. ಗುರುದಕ್ಷಿಣೆಯನ್ನು ನೀಡಿದ ನಂತರ ಏಕಲವ್ಯನು ಬಹುತೇಕ ಮಹಾಭಾರತದ ಕಥೆಗಳಲ್ಲಿ ಕಳೆದೇ ಹೋಗುತ್ತಾನೆ. ಆದರೂ ಮಹಾಭಾರತದ ಕಥೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಸದಾ ಕಾಲ ಜನಮಾನಸದಲ್ಲಿ ಏಕಲವ್ಯನು ವಿರಾಜಮಾನನಾಗುತ್ತಾನೆ. 

ಪೂರಕ ಮಾಹಿತಿ: ಕೆಲವು ಕತೆಗಳ ಪ್ರಕಾರ ತನ್ನ ಬಲಗೈ ಹೆಬ್ಬೆರಳನ್ನು ಕಳೆದುಕೊಂಡ ಏಕಲವ್ಯನು ಕ್ರಮೇಣ ಎಡ ಕೈ ನಲ್ಲಿ ಬಿಲ್ಲುಗಾರಿಕೆಯನ್ನು ಅಭ್ಯಾಸ ಮಾಡಿ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಪರವಾಗಿ ಯುದ್ಧ ಮಾಡುತ್ತಾನೆ ಎಂದು ಉಲ್ಲೇಖವಾಗಿದೆ. 

ಚಿತ್ರ: ಅಂತರ್ಜಾಲ ಕೃಪೆ