ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೮) - ಚಿತ್ರಾಂಗದ
ಉಲೂಪಿ ಜೊತೆ ಜೊತೆಯಲ್ಲೇ ಸಾಗಿ ಬರುವ ಇನ್ನೊಂದು ಮಹಾಭಾರತದ ಪಾತ್ರವೆಂದರೆ ಚಿತ್ರಾಂಗದ. ಅರ್ಜುನನ ಮೂರನೇ ಪತ್ನಿ. ಇವಳನ್ನೂ ಅರ್ಜುನ ಅವನ ದೇಶಾಂತರದ ತೀರ್ಥಯಾತ್ರೆಯ ಸಮಯದಲ್ಲೇ ಮದುವೆಯಾಗುತ್ತಾನೆ. ಇವಳಿಂದ ಭಬ್ರುವಾಹನ ಎಂಬ ಮಗನನ್ನೂ ಪಡೆಯುತ್ತಾನೆ. ಇವೆಲ್ಲದರ ವೃತ್ತಾಂತವನ್ನು ಓದೋಣ ಬನ್ನಿ,
ಯುದಿಷ್ಟಿರ-ದ್ರೌಪದಿಯರು ಏಕಾಂತದಲ್ಲಿರುವಾಗ ಅಂತಃಪುರ ಪ್ರವೇಶಿಸಿದ ಅರ್ಜುನನಿಗೆ ೧೨ ವರ್ಷಗಳ ತೀರ್ಥಯಾತ್ರೆಯ ಶಿಕ್ಷೆ ದೊರೆತು ಅವನು ದೇಶಾಂತರ ತೆರಳಿದಾಗ ಅವನಿಗೆ ನಾಗ ಕನ್ಯೆ ಉಲೂಪಿ ಭೇಟಿಯಾಗಿ ಅವಳನ್ನು ವಿವಾಹವಾಗಿ ಇರಾವಾನ್ ಎಂಬ ಮಗನನ್ನು ಪಡೆದ ಸಂಗತಿಯನ್ನು ಈಗಾಗಲೇ (ಭಾಗ ೭) ಓದಿರುತ್ತೀರಿ. ನಂತರ ನಾಗಲೋಕವನ್ನು ಬಿಟ್ಟು ಅರ್ಜುನ ಮಣಿಪುರ ದೇಶಕ್ಕೆ ತಲುಪುತ್ತಾನೆ. ಆಗ ಮಣಿಪುರ ದೇಶವನ್ನು ಚಿತ್ರವಾಹನ ಎಂಬ ರಾಜನು ಆಳುತ್ತಿದ್ದ. ಅವನ ಮಗಳೇ ಚಿತ್ರಾಂಗದ. ರಾಜಕುಮಾರಿ ಚಿತ್ರಾಂಗದಳ ಸೌಂದರ್ಯಕ್ಕೆ ಅರ್ಜುನ ಅವಳಲ್ಲಿ ಮೋಹಗೊಂಡು ಅವಳನ್ನು ಮದುವೆಯಾಗುವ ಇಚ್ಚೆ ವ್ಯಕ್ತ ಪಡಿಸುತ್ತಾನೆ. ಚಿತ್ರಾಂಗದ ಅದಕ್ಕೆ ಸಮ್ಮತಿಸಿದರೂ, ತನ್ನ ತಂದೆಯ ಬಳಿ ಅನುಮತಿಯನ್ನು ಪಡೆದುಕೋ ಎಂದು ಅರ್ಜುನನಿಗೆ ಹೇಳುತ್ತಾಳೆ. ಅದರಂತೆ ಅರ್ಜುನ ರಾಜಾ ಚಿತ್ರವಾಹನನಲ್ಲಿ ಹೋಗಿ ಅವನ ಮಗಳನ್ನು ಮದುವೆಯಾಗಲು ಬಯಸಿದ್ದೇನೆ, ಅನುಮತಿ ನೀಡಿ ಎನ್ನುತ್ತಾನೆ. ಅರ್ಜುನನು ತೀರ್ಥಯಾತ್ರೆಯಲ್ಲಿ ಇದ್ದುದರಿಂದ ಅವನು ಋಷಿ ಕುಮಾರನಂತೆ ಕಾಣಿಸುತ್ತಿದ್ದ. ಅವನಲ್ಲಿ ರಾಜಕುಮಾರನ ಯಾವುದೇ ಲಕ್ಷಣಗಳು ತೋರುತ್ತಿರಲಿಲ್ಲ. ಚಿತ್ರವಾಹನನು ನಿನ್ನ ಪರಿಚಯವೇನು? ಎಂದು ಕೇಳಲಾಗಿ ಅರ್ಜುನ ಹೇಳುತ್ತಾನೆ, ‘ ನಾನು ಹಸ್ತಿನಾಪುರದ ಮಹಾರಾಜನಾಗಿದ್ದ ಪಾಂಡುವಿನ ಐವರು ಪುತ್ರರಲ್ಲಿ ಓರ್ವ. ಈಗ ಇಂದ್ರಪ್ರಸ್ತದ ಯುವರಾಜ’ ಎನ್ನುತ್ತಾನೆ. ಅರ್ಜುನನ ಪರಿಚಯ ಕೇಳಿ ಚಿತ್ರವಾಹನ ಪ್ರಸನ್ನನಾಗುತ್ತಾನೆ. ಅವನಿಗೆ ಅರ್ಜುನನ ಸಾಹಸ ಕತೆಗಳ ಮತ್ತು ಅವನ ಸಾಮರ್ಥ್ಯದ ಅರಿವಿತ್ತು. ‘ನಾನು ಮದುವೆ ಮಾಡಿಕೊಡಲು ಸಿದ್ಧ. ಆದರೆ ನನ್ನದೊಂದು ಶರತ್ತಿದೆ’ ಎನ್ನುತ್ತಾನೆ. ಅರ್ಜುನ ಅದೇನು ಎಂದು ಕೇಳಿದಾಗ ಚಿತ್ರವಾಹನನು ಅವರ ಪೂರ್ಜಜರ ಕತೆಯನ್ನು ಹೇಳುತ್ತಾರೆ.
ಚಿತ್ರವಾಹನನ ಪೂರ್ವಜರಾದ ಪ್ರಭಾಂಜನ ಮಹಾರಾಜರಿಗೆ ಸಂತಾನ ಭಾಗ್ಯವಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಅವನು ಶಿವನಲ್ಲಿ ಪ್ರಾರ್ಥಿಸಿದಾಗ ಅವನು ಪ್ರಭಾಂಜನನಿಗೆ ವರವೊಂದನ್ನು ನೀಡುತ್ತಾನೆ. ನಿನ್ನ ನಂತರದ ಎಲ್ಲಾ ವಂಶಾವಳಿಗಳಲ್ಲಿ ಕನಿಷ್ಟ ಒಂದು ಮಗುವಾದರೂ ಹುಟ್ಟುತ್ತದೆ. ನೀನು ಅಧೀರನಾಗಬೇಡ ಎಂದು ಆಶೀರ್ವಾದ ಮಾಡುತ್ತಾನೆ. ಶಿವನ ವರದ ಫಲವಾಗಿ ಪ್ರಭಾಂಜನನಿಗೆ ಗಂಡು ಮಗುವಾಗುತ್ತೆ. ಅಲ್ಲಿಂದ ಚಿತ್ರವಾಹನನವರೆಗೆ ಎಲ್ಲರಿಗೂ ಗಂಡು ಸಂತಾನ ಭಾಗ್ಯ ಇರುತ್ತದೆ. ಅದರೆ ಚಿತ್ರವಾಹನನಿಗೆ ಮಾತ್ರ ಹೆಣ್ಣು ಮಗು ಆಗುತ್ತದೆ. ತನಗೆ ಗಂಡು ಸಂತಾನವಿಲ್ಲ ಎಂಬ ಕೊರಗಿದ್ದರೂ ಚಿತ್ರವಾಹನ ತನ್ನ ಮಗಳಾದ ಚಿತ್ರಾಂಗದಳನ್ನು ಪುತ್ರನಂತೆಯೇ ಬೆಳೆಸುತ್ತಾನೆ. ಪುರುಷರಂತೆಯೇ ವೇಷಭೂಷಣವನ್ನು ಧರಿಸಿ ಕೊಳ್ಳುವ ಚಿತ್ರಾಂಗದ ಸಮರ ಕಲೆಯಲ್ಲೂ ಅತ್ಯಂತ ಪರಿಣತಿಯನ್ನು ಪಡೆಯುತ್ತಾಳೆ.
‘ನನಗೆ ಪುತ್ರ ಸಂತಾನ ಇಲ್ಲದೇ ಇರುವುದರಿಂದ ನೀನು ನನ್ನ ಮಗಳನ್ನು ಮದುವೆಯಾಗಿ ನಿನಗೆ ಪುತ್ರ ಸಂತಾನವಾದರೆ ನೀನು ಅದರ ಮೇಲೆ ನಿನ್ನ ಹಕ್ಕನ್ನು ಸ್ಥಾಪಿಸುವಂತಿಲ್ಲ. ತಾಯಿ ಮತ್ತು ಮಗನನ್ನು ಇಲ್ಲಿಯೇ ಬಿಟ್ಟು ಹೋಗಬೇಕು’ ಎನ್ನುತ್ತಾನೆ. ಅರ್ಜುನ ಈ ಶರತ್ತಿಗೆ ಒಪ್ಪುತ್ತಾನೆ. ಅರ್ಜುನ ಹಾಗೂ ಚಿತ್ರಾಂಗದರ ವಿವಾಹ ಅದ್ದೂರಿಯಾಗಿ ಮಣಿಪುರ ದೇಶದಲ್ಲಿ ನಡೆಯುತ್ತದೆ. ಅರ್ಜುನ ತನ್ನ ವೈವಾಹಿಕ ಜೀವನದ ಸುಖವನ್ನು ಅನುಭವಿಸುತ್ತಾನೆ. ಕಾಲಕ್ರಮೇಣ ಅವನಿಗೆ ಪುತ್ರ ಸಂತಾನವಾಗುತ್ತದೆ. ನಂತರ ಅರ್ಜುನ ತಾನು ಕೊಟ್ಟ ಮಾತಿನಂತೆ ಚಿತ್ರಾಂಗದ ಮತ್ತು ತನ್ನ ಮಗನಾದ ಭಬ್ರುವಾಹನನನ್ನು ಮಣಿಪುರದಲ್ಲೇ ಬಿಟ್ಟು ತೆರಳುತ್ತಾನೆ. ಮುಂದಿನ ದಿನಗಳಲ್ಲಿ ಇಂದ್ರಪ್ರಸ್ತಕ್ಕೆ ಬರುವಂತೆ ಚಿತ್ರಾಂಗದಳಿಗೆ ಅರ್ಜುನ ಆಹ್ವಾನ ನೀಡುತ್ತಾನೆ.
ಅರ್ಜುನ ಮಣಿಪುರವನ್ನು ಬಿಟ್ಟು ಹೋದ ನಂತರ ಉಲೂಪಿಯು ಚಿತ್ರಾಂಗದಳನ್ನು ಭೇಟಿಯಾಗುತ್ತಾಳೆ. ಉಲೂಪಿಯೂ ಅರ್ಜುನನ ಪತ್ನಿ ಎಂದು ತಿಳಿದ ಚಿತ್ರಾಂಗದಳು ಅವಳನ್ನು ಪ್ರೀತಿಯಿಂದ ಆದರಿಸುತ್ತಾಳೆ. ಅವರಿಬ್ಬರೂ ಸ್ವಂತ ಅಕ್ಕ ತಂಗಿಯರಂತೆ ಸಹಬಾಳ್ವೆ ನಡೆಸುತ್ತಾರೆ. ಚಿತ್ರಾಂಗದಳ ಮಗನಾದ ಭಬ್ರುವಾಹನನಿಗೆ ಉಲೂಪಿಯು ತನಗೆ ತಿಳಿದ ಬಿಲ್ಲು ವಿದ್ಯೆಯನ್ನು ಹೇಳಿಕೊಟ್ಟು ಅರ್ಜುನನಂತೆ ಪರಿಣಿತನನ್ನಾಗಿಸುತ್ತಾಳೆ. ಕುರುಕ್ಷೇತ್ರ ಯುದ್ಧ ನಡೆದಾಗ ಮಾತ್ರ ಚಿತ್ರಾಂಗದ ತನ್ನ ಮಗನಾದ ಭಬ್ರುವಾಹನನ್ನು ಪಾಂಡವರ ಸಹಾಯಕ್ಕೆ ಕಳಿಸುವುದೇ ಇಲ್ಲ. ಯಾಕೆ ಎಂದು ಮಹಾಭಾರತದ ಎಲ್ಲಿಯೂ ಉಲ್ಲೇಖಿತವಾಗಿಲ್ಲ, ಬಹುಷಃ ಅವಳ ತಂದೆಗೆ ಗಂಡು ಸಂತಾನವಿಲ್ಲದ ಕಾರಣ, ಯುದ್ಧದಲ್ಲಿ ತನ್ನ ಮಗ ಮರಣಹೊಂದಿದರೆ ತಮ್ಮ ದೇಶಕ್ಕೆ ಉತ್ತರಾಧಿಕಾರಿಯೇ ಇಲ್ಲವಾಗುತ್ತೆ ಎಂಬ ಭಯ ಕಾಡುತ್ತಿರಬಹುದು. ಆದರೆ ಉಲೂಪಿಯು ತನ್ನ ಮಗನಾದ ಇರಾವಾನ್ ನನ್ನು ಯುದ್ಧಕ್ಕೆ ಕಳಿಸುತ್ತಾಳೆ.
ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಗೆಲುವಿನ ನಂತರ ಯುದಿಷ್ಟಿರನು ಹಸ್ತಿನಾಪುರದ ಮಹಾರಾಜನಾಗುತ್ತಾನೆ. ಅವನು ರಾಜಸೂಯ ಯಾಗ ಮಾಡಲು ನಿರ್ಧರಿಸಿ ಯಾಗದ ಕುದುರೆಯನ್ನು ಬಿಡುತ್ತಾರೆ. ಅದು ಮಣಿಪುರ ದೇಶ ತಲುಪಿದಾಗ ಭಬ್ರುವಾಹನನು ಕುದುರೆಯನ್ನು ಬಂಧಿಸುತ್ತಾನೆ. ಕುದುರೆಯ ರಕ್ಷಣೆಗೆ ಹೋಗಿದ್ದ ಅರ್ಜುನನು ಹಲವಾರು ವರ್ಷಗಳ ನಂತರ ತನ್ನ ಮಗನನ್ನು ಭೇಟಿಯಾಗುತ್ತಾನೆ. ಆದರೆ ಅವನಿಗೆ ತನ್ನ ಮಗನ ಪರಿಚಯವಾಗುವುದಿಲ್ಲ. ಯುದ್ಧ ನಡೆದಾಗ ವಾಸುಗಳ ಶಾಪದ (ಭಾಗ ೭ ಓದಿ) ಪರಿಣಾಮವಾಗಿ ತನ್ನ ಮಗನಾದ ಭಬ್ರುವಾಹನನಿಂದಲೇ ಅರ್ಜುನ ಹತನಾಗುತ್ತಾನೆ. ಇದರಿಂದ ಚಿತ್ರಾಂಗದ ತುಂಬಾ ನೊಂದುಕೊಳ್ಳುತ್ತಾಳೆ. ಆದರೆ ಉಲೂಪಿಯು ಗಂಗಾ ಮಾತೆಯ ಆಶೀರ್ವಾದದ ಫಲವಾಗಿ ಪಡೆದಿದ್ದ ನಾಗಮಣಿಯನ್ನು ಅರ್ಜುನನ ಎದೆಯ ಮೇಲೆ ಇರಿಸಿ ಪ್ರಾರ್ಥಿಸಿದಾಗ ಅವನು ಜೀವಿತನಾಗುತ್ತಾನೆ. ನಂತರದ ದಿನಗಳಲ್ಲಿ ಚಿತ್ರಾಂಗದ, ಉಲೂಪಿ ಎಲ್ಲರೂ ಅರ್ಜುನನ ಜೊತೆ ಹಸ್ತಿನಾಪುರಕ್ಕೆ ಹೋಗಿ ರಾಜಸೂಯ ಯಾಗದಲ್ಲಿ ಭಾಗವಹಿಸುವರು ಎಂದು ಮಹಾಭಾರತ ಕತೆ ಹೇಳುತ್ತದೆ.
ಪೂರಕ ಮಾಹಿತಿ: ನೋಬೆಲ್ ಪುರಸ್ಕೃತ ಖ್ಯಾತ ಕವಿ ರವೀಂದ್ರನಾಥ ಠಾಗೋರ್ ಅವರ ‘ಚಿತ್ರ' ಎಂಬ ಹೆಸರಿನ ನಾಟಕವು ಚಿತ್ರಾಂಗದ ಬಗ್ಗೆ ಪ್ರಸ್ತಾಪಿಸುತ್ತದೆ. ಅದರ ಪ್ರಕಾರ ಚಿತ್ರವಾಹನನಿಗೆ ಗಂಡು ಮಗು ಆಗದೇ ಇದ್ದುದಕ್ಕೆ ಅವನು ಚಿತ್ರಾಂಗದಳನ್ನು ಗಂಡು ಮಗುವಿನಂತೆಯೇ ಯುದ್ಧ ಕಲೆಯ ಶಿಕ್ಷಣ ನೀಡಿ, ಪುರುಷ ವೇಷ ತೊಡಿಸಿ ಬೆಳೆಸಿರುತ್ತಾನೆ. ಇದೇ ವೇಷದಲ್ಲಿ ಚಿತ್ರಾಂಗದ ಅರ್ಜುನನನ್ನು ಎದುರಿಸುತ್ತಾಳೆ. ಅವಳ ಯುದ್ಧ ಕೌಶಲ್ಯ ಕಂಡು ಅರ್ಜುನ ಬೆರಗಾಗುತ್ತಾನೆ. ಚಿತ್ರಾಂಗದಳಿಗೆ ಅರ್ಜುನನ ಮೇಲೆ ಪ್ರೇಮಾಂಕುರವಾದರೂ ತನ್ನ ಪುರುಷ ವೇಷದ ಕಾರಣ ಹೇಳಲು ಅಸಮರ್ಥಳಾಗುತ್ತಾಳೆ. ಅದಕ್ಕಾಗಿ ಅವಳು ಕಾಮದೇವ ಮನ್ಮಥನನ್ನು ಪ್ರಾರ್ಥಿಸಿ ತನಗೆ ಅರ್ಜುನನ ಮನವೊಲಿಸುವ ಶಕ್ತಿ ನೀಡು ಎಂದು ಬೇಡುತ್ತಾಳೆ. ಅದರ ಪರಿಣಾಮವಾಗಿ ಅರ್ಜುನನ ಕಣ್ಣಿಗೆ ಅವಳು ಸುರಸುಂದರಾಂಗಿಯಾದ ಸ್ತ್ರೀ ಆಗಿ ಗೋಚರಿಸುತ್ತಾಳೆ. ಅರ್ಜುನ ಅವಳು ಚಿತ್ರಾಂಗದ ಎಂದು ತಿಳಿಯದೇ ಸುಮಾರು ದಿನಗಳನ್ನು ಅವಳ ಜೊತೆ ಕಳೆಯುತ್ತಾನೆ. ಸ್ವಲ್ಪ ದಿನಗಳ ನಂತರ ಅರ್ಜುನನಿಗೆ ಚಿತ್ರಾಂಗದಳ ಬಗ್ಗೆ ಮಾಹಿತಿ ಸಿಗುತ್ತದೆ. ಚಿತ್ರಾಂಗದಳ ಬಗ್ಗೆ ಅವನು ಚಿತ್ರಾಂಗದಳ ಬಳಿಯೇ ಹೇಳುತ್ತಾನೆ. ಅದಕ್ಕೆ ಅವಳು ‘ನಿಮಗೆ ಸರಿಯಾಗುವ ಸೌಂದರ್ಯ ಚಿತ್ರಾಂಗದಳ ಬಳಿ ಇಲ್ಲ’ ಎನ್ನುತ್ತಾಳೆ. ಆದರೆ ಅರ್ಜುನ ಅವಳಿಗೆ ಚಿತ್ರಾಂಗದಳ ನಿಜ ರೂಪ ತೋರಿಸಲು ಹೇಳಿದಾಗ ಅವಳು ತನ್ನ ನೈಜ ಸ್ವರೂಪದಲ್ಲಿ ಯೋಧನ ರೂಪದಲ್ಲಿಕುದುರೆಯ ಮೇಲೆ ಕುಳಿತು ಅರ್ಜುನನ ಬರುತ್ತಾಳೆ. ಅರ್ಜುನನಿಗೆ ಅವಳ ಈ ನಿಜ ರೂಪವೂ ಮೆಚ್ಚುಗೆಯಾಗುತ್ತದೆ. ಅವಳನ್ನು ಚಿತ್ರವಾಹನನ ಅನುಮತಿ ಪಡೆದು ಮದುವೆಯಾಗುತ್ತಾನೆ.
----
ಚಿತ್ರದಲ್ಲಿ ಚಿತ್ರಾಂಗದ ಹಾಗೂ ಸಣ್ಣ ಮಗುವಾದ ಭಬ್ರುವಾಹನನನ್ನು ಬಿಟ್ಟು ತೆರಳುತ್ತಿರುವ ಅರ್ಜುನ (ಚಿತ್ರ ಕೃಪೆ: ಅಂತರ್ಜಾಲ ತಾಣ ಪ್ರಿಂಟ್ರೆಸ್ಟ್)