ಮಹಾಭಾರತದಲ್ಲಿ ಕಳೆದುಹೋದ ಪಾತ್ರಗಳು (ಭಾಗ ೯) - ಇರಾವಣ್
ಅರ್ಜುನ ಮತ್ತು ನಾಗ ಕನ್ಯೆ ಉಲೂಪಿಯ ಮಗನೇ ಇರಾವಣ್. ಇವನಿಗೆ ಐರಾವಣ, ಅರಾವಣ ಎಂಬ ಹೆಸರುಗಳೂ ಇವೆ. ನೀವು ಈಗಾಗಲೇ ಅರ್ಜುನ ಮತ್ತು ಉಲೂಪಿಯ ವಿವಾಹದ ಕತೆಯನ್ನು (ಭಾಗ ೭) ಓದಿರುತ್ತೀರಿ. ಅವರ ಮಗನೇ ಇರಾವಣ್. ಇವನು ಅತ್ಯಂತ ಸಮರ್ಥ ವೀರ ಯೋಧ ಹಾಗೂ ಅರ್ಜುನನಂತೆ ಸುಂದರ ಯುವಕನಾಗಿದ್ದ. ತನ್ನ ತಾಯಿಯಾದ ಉಲೂಪಿಯಿಂದ ಸಮರ ಕಲೆಯನ್ನು ಕಲಿತಿದ್ದ. ಪಾಂಡವರ ಹಾಗೂ ಕೌರವರ ನಡುವೆ ಕುರುಕ್ಷೇತ್ರ ಯುದ್ಧ ಪ್ರಾರಂಭವಾದಾಗ ತನ್ನ ತಂದೆಯಾದ ಅರ್ಜುನನಿಗೆ ಸಹಾಯ ಮಾಡಲು ಇರಾವಣ್ ಯುದ್ಧ ಭೂಮಿಗೆ ಹೋಗುತ್ತಾನೆ. ಇರಾವಣ್ ಯುದ್ಧದಲ್ಲಿ ಕೌರವರ ಅಸಂಖ್ಯಾತ ಸೈನಿಕರನ್ನು ಕೊಂದು ಪಾಂಡವರಿಗೆ ಸಹಾಯ ಮಾಡುತ್ತಾನೆ.
ಒಂಬತ್ತನೇ ಶತಮಾನದಲ್ಲಿ ರಚಿತವಾದ ತಮಿಳು ಭಾಷೆಯ ಮಹಾಭಾರತದಲ್ಲಿ ಇರಾವಣ್ ಬಗ್ಗೆ ಉಲ್ಲೇಖವಿದೆ. ಅದರ ಪ್ರಕಾರ ಯುದ್ಧದ ಸಮಯದಲ್ಲಿ ಪಾಂಡವರಿಗೆ ಯುದ್ಧ ಗೆಲ್ಲ ಬೇಕಾದಲ್ಲಿ ಮಹಾಕಾಳಿಯನ್ನು ಪ್ರಸನ್ನ ಪಡಿಸುವ ‘ಕಲಾಪಲ್ಲಿ' ಎಂಬ ಯಾಗ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಯಿತು. ಈ ಯಾಗದ ಪೂರ್ಣಾಹುತಿಯ ಸಮಯ ಮಾನವ ಬಲಿಯನ್ನು ಕಾಳಿಮಾತೆಗೆ ಕೊಡಬೇಕಾಗಿತ್ತು. ಅದಕ್ಕೆ ರಾಜ ಕುಟುಂಬದ, ಸಕಲ ಕಲಾ ಪರಿಣಿತ ಯುವಕರೇ ಆಗಬೇಕಿತ್ತು. ಈ ಯಾಗ ಪೂರ್ಣವಾದಲ್ಲಿ ಪಾಂಡವರ ಗೆಲುವು ನಿಶ್ಚಯವಾಗುತ್ತಿತ್ತು. ಆದರೆ ಬಲಿಯಾಗಲು ರಾಜಕುಮಾರರು ಯಾರೂ ಮುಂದೆ ಬರುವುದಿಲ್ಲ. ಆಗ ಇರಾವಣ್ ಮುಂದೆ ಬಂದು ಮಹಾಕಾಳಿಗೆ ಬಲಿಯಾಗಲು ಒಪ್ಪುತ್ತಾನೆ. ಆದರೆ ಅವನು ಬಲಿ ಕೊಡುವ ಮೊದಲು ತನ್ನ ವಿವಾಹ ಆಗಬೇಕು ಎಂಬ ಶರತ್ತು ವಿಧಿಸುತ್ತಾನೆ.
ಪಾಂಡವರು ಅಲ್ಲಿದ್ದ ರಾಜ ಕುಟುಂಬದವರಲ್ಲಿ ವಿಚಾರಿಸಿದಾಗ ಯಾರೂ ತಮ್ಮ ಹುಡುಗಿಯನ್ನು ಇರಾವಣ್ ಗೆ ಮದುವೆ ಮಾಡಿಕೊಡಲು ಒಪ್ಪುವುದಿಲ್ಲ. ಮದುವೆಯ ಒಂದೇ ದಿನಕ್ಕೆ ವಿಧವೆಯಾಗಲು ಯಾರು ಮುಂದೆ ಬರುತ್ತಾರೆ ಹೇಳಿ? ಆಗ ಶ್ರೀಕೃಷ್ಣನು ತಾನೇ ಮೋಹಿನಿ (ಸ್ತ್ರೀ) ರೂಪ ಧರಿಸಿ ಇರಾವಣ್ ಜೊತೆ ವಿವಾಹವಾಗುತ್ತಾನೆ. ವಿವಾಹದ ರಾತ್ರಿ ಇರಾವಣ್ ಹಾಗೂ ಸ್ತ್ರೀ ವೇಷಧಾರಿ ಕೃಷ್ಣ ಜೊತೆಯಾಗಿಯೇ ಕಳೆಯುತ್ತಾರೆ. ಮರುದಿನ ಮಹಾಕಾಳಿಗೆ ಇರಾವಣ್ ನನ್ನು ಬಲಿಯಾಗಿ ಅರ್ಪಿಸಲಾಗುತ್ತೆ. ಇರಾವಣ್ ನಿಧನದ ನಂತರ ಕೃಷ್ಣ ಸ್ತ್ರೀ ರೂಪದಲ್ಲೇ ಸ್ವಲ್ಪ ಸಮಯ ವಿಧವೆಯಂತೆ ರೋಧಿಸುತ್ತಾನೆ.
ಪುರುಷನಾಗಿದ್ದೂ ಲೋಕ ಕಲ್ಯಾಣಕ್ಕೆ ಶ್ರೀಕೃಷ್ಣನು ಸ್ತ್ರೀ ವೇಷ ಧರಿಸಿದ ವಿಧಿಯನ್ನು ಈಗಲೂ ತಮಿಳುನಾಡಿನ ವೆಲ್ಲುಪುರಂನಲ್ಲಿರುವ ದೇವಸ್ಥಾನವೊಂದರಲ್ಲಿ ಆಚರಿಸುತ್ತಾರೆ. ಈ ದೇವಸ್ಥಾನದಲ್ಲಿ ಇರಾವಣ್ ಅನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ. ವರ್ಷದಲ್ಲಿ ಒಂದು ದಿನ ಎಲ್ಲಾ ಕಿನ್ನರರು ಅಥವಾ ಮಂಗಳಮುಖಿಯರು ಬಣ್ಣ ಬಣ್ಣದ ಸೀರೆಯನ್ನು ತೊಟ್ಟು ಸ್ತ್ರೀವೇಷದಲ್ಲಿ ಇರಾವಣ್ ದೇವರನ್ನು ಒಂದು ದಿನದ ಪತಿಯ ರೂಪದಲ್ಲಿ ಪೂಜಿಸುತ್ತಾರೆ. ಅವರಿಗೆ ಪತ್ನಿಯಂತೆ ಸೇವೆ ಮಾಡುತ್ತಾರೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾದ ವಿಧಿ ವಿಧಾನವಾಗಿರುತ್ತದೆ. ಮರುದಿನ ಅವರೆಲ್ಲಾ ವಿಧವೆಯರಂತೆ ಗೋಳಾಡುತ್ತಾ, ತಮ್ಮ ಪತಿಯ ಮರಣಕ್ಕೆ ದುಃಖ ಪಡುತ್ತಾರೆ.
ಕೆಲವು ಮಹಾಭಾರತದ ಕತೆಗಳಲ್ಲಿ ಇರಾವಣ್ ನನ್ನು ಕಾಳಿದೇವಿಗೆ ಬಲಿ ನೀಡಿದ ಬಳಿಕ, ದೇವಿ ಈ ಬಲಿಯಿಂದ ಪ್ರಸನ್ನಳಾಗಿ ಅವನನ್ನು ಮತ್ತೆ ಜೀವಿತನನ್ನಾಗಿ ಮಾಡುತ್ತಾಳೆ. ನಂತರ ಮಹಾಭಾರತ ಯುದ್ಧದ ಏಳನೇ ದಿನ ಇರಾವಣ್ ಕೌರವರ ಸೈನ್ಯದ ಮೇಲೆ ಆಕ್ರಮಣ ಮಾಡಿ ಅವರಿಗೆ ತುಂಬಾ ನಷ್ಟವನ್ನು ಉಂಟು ಮಾಡುತ್ತಾನೆ. ಇದನ್ನು ಗಮನಿಸಿದ ದುರ್ಯೋಧನ ಇರಾವಣ್ ಹೀಗೆಯೇ ಯುದ್ಧ ಮಾಡಿದರೆ ನಮ್ಮ ಸೇನೆ ಸಂಪೂರ್ಣ ನಾಶವಾಗುತ್ತದೆ ಎಂದು ಭಯ ಪಡುತ್ತಾನೆ. ಅವನು ರಾಕ್ಷಸನಾದ ಅಲಂಭಷ್ ಅನ್ನು ಯುದ್ಧದಲ್ಲಿ ಸಹಾಯ ಮಾಡಲು ಕರೆಯುತ್ತಾನೆ. ಅಲಂಭಷ್ ಮತ್ತು ಇರಾವಣ್ ನಡುವೆ ಭೀಕರ ಯುದ್ಧವಾಗುತ್ತದೆ. ಇರಾವಣ್ ಬೆಂಬಲಕ್ಕೆ ನಾಗಲೋಕದ ನಾಗ ಸ್ವರೂಪಿ ಸೈನಿಕರು ಬರುತ್ತಾರೆ. ಇದನ್ನು ಗಮನಿಸಿದ ಅಲಂಭಷ್ ಗರುಡ ರೂಪ ತಾಳುತ್ತಾನೆ. ಎಲ್ಲಾ ನಾಗಗಳನ್ನು ತಿನ್ನುತ್ತಾ ಸಂಹಾರ ಮಾಡುತ್ತಾನೆ. ತನ್ನ ಸಹಾಯಕ್ಕೆ ಬಂದ ನಾಗ ಸೈನಿಕರೆಲ್ಲರೂ ಅಲಂಭಷ್ ಕೈಯಲ್ಲಿ ಹತರಾದದನ್ನು ಕಂಡ ಇರಾವಣ್ ಅಧೀರನಾಗುತ್ತಾನೆ. ಈ ಸಂದರ್ಭವನ್ನು ನೋಡಿ ಅಲಂಭಷ್ ಇರಾವಣ್ ನನ್ನು ಹತ್ಯೆ ಮಾಡುತ್ತಾನೆ. ಹೀಗೆ ಅರ್ಜುನ-ಉಲೂಪಿಯವರ ಧೀರ ಪುತ್ರ ಇರಾವಣ್ ಮರಣ ಹೊಂದುತ್ತಾನೆ.
ದಕ್ಷಿಣ ಭಾರತದ ಕೆಲವೆಡೆ ಇರಾವಣ್ ಮೂರ್ತಿಯನ್ನು ಮಾಡಿ ಪೂಜಿಸುತ್ತಾರೆ. ವರ್ಷದಲ್ಲಿ ಒಮ್ಮೆ ಜಾತ್ರೆ ಮಹೋತ್ಸವವೂ ನಡೆಯುತ್ತದೆ. ಸಿಂಗಾಪುರದಲ್ಲಿರುವ ಮರಿಯಮ್ಮನ ದೇವಸ್ಥಾನದಲ್ಲೂ ಇರಾವಣ್ ಮೂರ್ತಿ ಇದೆ.
ಚಿತ್ರದಲ್ಲಿ ಇರಾವಣ್ ಮೂರ್ತಿಯನ್ನು ಒಂದು ದಿನದ ಪತಿ ಎಂದು ಪೂಜಿಸುತ್ತಿರುವ ಕಿನ್ನರರು (ಕೃಪೆ: ನಯಿ ದುನಿಯಾ ಅಂತರ್ಜಾಲ ತಾಣ)